Hassan News: ಪ್ರೇಮ ವಿವಾಹಕ್ಕೆ ಬೆಂಬಲ ನೀಡಿದ ಆರೋಪದ ಹಿನ್ನೆಲೆ ಯುವಕನ ಮೇಲೆ ಹಲ್ಲೆ ನಡೆದಿದ್ದು, ಬಳಿಕ ಎರಡು ಗುಂಪುಗಳ ನಡುವೆ ಭಾರೀ ಮಾರಾಮಾರಿ ನಡೆದ ಘಟನೆ ಆತಂಕಕ್ಕೆ ಕಾರಣವಾಗಿದೆ.
ಹಾಸನ (ಜು.15): ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಜೆಪಿ ನಗರದಲ್ಲಿ ಪ್ರೇಮ ವಿವಾಹಕ್ಕೆ ಬೆಂಬಲ ನೀಡಿದ ಆರೋಪದ ಹಿನ್ನೆಲೆ ಯುವಕನ ಮೇಲೆ ಹಲ್ಲೆ ನಡೆದಿದ್ದು, ಬಳಿಕ ಎರಡು ಗುಂಪುಗಳ ನಡುವೆ ಭಾರೀ ಮಾರಾಮಾರಿ ನಡೆದ ಘಟನೆ ಆತಂಕಕ್ಕೆ ಕಾರಣವಾಗಿದೆ. ಘರ್ಷಣೆ ವೇಳೆ ಮೂರು ಕಾರುಗಳು ಜಖಂಗೊಂಡಿದ್ದು, ಜಗಳ ಬಿಡಿಸಲು ಮುಂದಾದ ಪೊಲೀಸರ ಮೇಲೂ ಹಲ್ಲೆ ನಡೆದ ಪರಿಣಾಮ ಸಿಪಿಐ ಹಾಗೂ ಎಎಸ್‌ಐ ಗಾಯಗೊಂಡಿದ್ದಾರೆ.
ಹಲ್ಲೆಗೊಳಗಾದ ಯುವಕನನ್ನು ರೋಷನ್ ಎಂದು ಗುರುತಿಸಲಾಗಿದೆ. ಜುಲೈ 1ರಂದು ಬಂಟೇನಹಳ್ಳಿ ಗ್ರಾಮದ ಸಾನಿಯಾ ಹಾಗೂ ಮುದಿಗೆರೆ ಗ್ರಾಮದ ಆಸೀಫ್ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಈ ವಿವಾಹಕ್ಕೆ ರೋಷನ್ ಬೆಂಬಲ ನೀಡಿದ್ದಾನೆ ಎಂಬ ಆರೋಪದ ಜೊತೆಗೆ, ಜೆಪಿ ನಗರದಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಶಾಹೀಂ ಜೊತೆಗಿನ ಹಳೆಯ ವೈಷಮ್ಯವೂ ಘಟನೆಯ ಹಿನ್ನೆಲೆಯಾಗಿದೆ ಎಂದು ಹೇಳಲಾಗುತ್ತಿದೆ.
ಘಟನೆಯ ದಿನ ರೆಫ್ರಿಜರೇಟರ್ ರಿಪೇರಿ ಕೆಲಸ ಮಾಡುತ್ತಿದ್ದ ರೋಷನ್ ಅವರನ್ನು "ಮಾತನಾಡಬೇಕಿದೆ" ಎಂದು ಹೇಳಿ ಇನ್ನೋವಾ ಕಾರಿನಲ್ಲಿ ಕರೆದೊಯ್ದ ಶಾಹೀಂ ಹಾಗೂ ಶಿವಮೊಗ್ಗ ಮತ್ತು ಮಂಗಳೂರು ಮೂಲದ ಕೆಲ ಯುವಕರು, ನಾಗೇನಹಳ್ಳಿ ಗ್ರಾಮದ ಸಮೀಪ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಹಲ್ಲೆಗೊಳಗಾದ ರೋಷನ್ ಅವರನ್ನು ಅದೇ ಕಾರಿನಲ್ಲಿ ಮತ್ತೆ ಜೆಪಿ ನಗರಕ್ಕೆ ಕರೆತಂದು ಬಿಟ್ಟು ಹೋಗಲು ಯತ್ನಿಸಿದ್ದಾರೆ.
ಇದನ್ನು ಗಮನಿಸಿದ ರೋಷನ್ ಸ್ನೇಹಿತರು ಹಾಗೂ ಸ್ಥಳೀಯರು ಆಕ್ರೋಶಗೊಂಡು ಕಾರನ್ನು ಅಡ್ಡಗಟ್ಟಿದ್ದಾರೆ. ಕಾರಿನಲ್ಲಿದ್ದ ಶಾಹೀಂ, ಮಹಮದ್ ಆಸೀಂ, ಮಹಮದ್ ಆಸೀಫ್, ಶಹಬಾಸ್ ಸೇರಿದಂತೆ ಹಲವರನ್ನು ಕೆಳಗಿಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂರು ಕಾರುಗಳು ಜಖಂಗೊಂಡಿದ್ದು, ಕೆಲಕಾಲ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬೇಲೂರು ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಮುಂದಾದರೂ, ಜಗಳ ಬಿಡಿಸಲು ಯತ್ನಿಸಿದ ವೇಳೆ ಪುಂಡರು ಪೊಲೀಸರನ್ನೇ ತಳ್ಳಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಸಿಪಿಐ ರೇವಣ್ಣ ಹಾಗೂ ಎಎಸ್‌ಐ ಸೋಮಶೇಖರ್ ಗಾಯಗೊಂಡಿದ್ದು, ಅವರ ಮೊಬೈಲ್ ಫೋನ್‌ಗಳೂ ಜಖಂಗೊಂಡಿವೆ.
ಘರ್ಷಣೆಯಲ್ಲಿ ಗಾಯಗೊಂಡಿರುವ ರೋಷನ್, ಶಾಹೀಂ, ಮಹಮದ್ ಆಸೀಂ, ಮಹಮದ್ ಆಸೀಫ್, ಶಹಬಾಸ್ ಸೇರಿದಂತೆ ಹಲವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರೇಮ ವಿವಾಹದ ವಿಚಾರವಾಗಿ ಆರಂಭವಾದ ವಿವಾದ ಎರಡು ಗುಂಪುಗಳ ಹಿಂಸಾತ್ಮಕ ಘರ್ಷಣೆಗೆ ತಿರುಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.


