ಅದೊಂದು ಘೋರ ಅಪರಾಧ ಕೃತ್ಯ. ಪತ್ನಿಯನ್ನ ಉಸಿರುಗಟ್ಟಿಸಿ ಕ್ರೂರವಾಗಿ ಸಾಯಿಸಿದ್ದ ಪಾಪಿ ಪತಿ. ಬಳಿಕ ವಿಷಕಾರಿ ಹಾವು ಕಚ್ಚಿದ ಕತೆ ಕಟ್ಟಿದ್ದ. ಇದೀಗ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಏನಿದು ಸ್ಟೋರಿ ಅನ್ನೋ ವಿವರ ಇಲ್ಲಿದೆ.

ನವದೆಹಲಿ: ಪತ್ನಿಯನ್ನ ಉಸಿರುಗಟ್ಟಿಸಿ ಅಂತ್ಯಂತ ಕ್ರೂರವಾಗಿ ಹತ್ಯೆ ಮಾಡಿದ ಬಳಿಕ ಸಾಕ್ಷ್ಯ ನಾಶಕ್ಕೆ ಹಾವು ಕಚ್ಚಿಸಿ ಸಿನಿಮೀಯ ರೀತಿಯಲ್ಲಿ ನಾಟಕವಾಡಿದ್ದ ಆರೋಪಿಗೆ ಕೋರ್ಟ್ ನಿಂದ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. 2019ರಲ್ಲಿ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಪ್ರಕರಣ ಇದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಪ್ರಕರಣ?

ಪೊಲೀಸರ ಮಾಹಿತಿ ಪ್ರಕಾರ, ಇಂದೋರ್‌ನ ಸಂಚಾರ್ ನಗರದ ನಿವಾಸಿ ಅಮಿತೇಶ್‌ಗೆ ಶಿವಾನಿ ಎಂಬಾಕೆಯ ಜೊತೆ ಮದುವೆ ಆಗಿತ್ತು. ಆರಂಭದಲ್ಲಿ ಚೆನ್ನಾಗಿದ್ದ ಸಂಸಾರ, ನಂತರದ ದಿನಗಳಲ್ಲಿ ಹೆಚ್ಚಿನ ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಕೌಟುಂಬಿಕ ಕಲಹ ಮಿತಿಮೀರಿದಾಗ ಅವಳನ್ನು ಮುಗಿಸಲು ಸಂಚು ರೂಪಿಸಿದ್ದ. ಈ ಹಿನ್ನೆಲೆಯಲ್ಲಿ 2019ರ ಡಿಸೆಂಬರ್ 1ರಂದು ತನ್ನ ಸಹಚರರೊಂದಿಗೆ ಸೇರಿ ಶಿವಾನಿಯ ಮುಖದ ಮೇಲೆ ದಿಂಬು ಒತ್ತಿ ಉಸಿರುಗಟ್ಟಿಸಿ ದಾರುಣವಾಗಿ ಹತ್ಯೆ ಮಾಡಿದ್ದ.

ಸಿನಿಮೀಯ ಮಾದರಿಯಲ್ಲಿ ಸ್ಕೆಚ್!

ಕೊಲೆ ಮಾಡಿದ ಬಳಿಕ ಪ್ರಕರಣದಿಂದ ಪಾರಾಗಲು ಕಿರಾತಕ ಬುದ್ಧಿ ಪ್ರಯೋಗಿಸಿದ್ದ.ಒಂದು ವಿಷಪೂರಿತ ಹಾವನ್ನು ತಂದು ಆಕೆಯ ಮೃತದೇಹದ ಮೇಲೆ ಬಿಟ್ಟು ಕಚ್ಚಿಸಿದ್ದ. ಬಳಿಕ ಆ ಹಾವನ್ನು ಕೋಲಿನಿಂದ ಬಡಿದು ಸಾಯಿಸಿ ಮನೆಯ ಒಂದು ಮೂಲೆಯಲ್ಲಿ ಇಟ್ಟಿದ್ದ. ನಂತರ ಪತ್ನಿ ಹಾವು ಕಡಿತದಿಂದ ಮೃತಪಟ್ಟಿದ್ದಾಳೆ ಎಂದು ಸ್ವತಃ ಪೊಲೀಸರಿಗೆ ದೂರು ನೀಡಿದ್ದ.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಅಮಿತೇಶ್ ವರ್ತನೆ ಮೇಲೆ ಅನುಮಾನ ಬಂದಿತ್ತು. ತನಿಖೆ ಆರಂಭಿಸಿದ ವಿಧಿವಿಜ್ಞಾನ (Forensic) ತಜ್ಞರು ಮತ್ತು ಪೋಸ್ಟ್‌ಮಾರ್ಟಂ ವರದಿಯು ಅಸಲಿ ಸತ್ಯವನ್ನು ಹೊರಹಾಕಿದ್ದರು. ಶಿವಾನಿ ಹಾವಿನ ವಿಷದಿಂದ ಸತ್ತಿಲ್ಲ, ಬದಲಾಗಿ ಉಸಿರುಗಟ್ಟುವಿಕೆಯಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದರು. ಇದರಿಂದ ಪೊಲೀಸರು ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಕೋರ್ಟ್ ತೀರ್ಪು

ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ 28ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಹೇಮಂತ್ ಕುಮಾರ್ ರಘುವಂಶಿ ಅವರು, ಪ್ರಾಸಿಕ್ಯೂಷನ್ ಸಲ್ಲಿಸಿದ ಪಕ್ಕಾ ಸಾಕ್ಷ್ಯಗಳನ್ನು ಪರಿಗಣಿಸಿದ್ದಾರೆ. ಆರೋಪಿಯು ಯಾವುದೇ ಸಂಶಯವಿಲ್ಲದೆ ಅಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ, ಹೆಂಡತಿಯನ್ನು ಕೊಂದ ಕಿರಾತಕ ಪತಿ ಅಮಿತೇಶ್ ಮತ್ತು ಆತನಿಗೆ ಸಹಕರಿಸಿದ ಇತರ ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.