Narcotics consumption in India: ಕೇಂದ್ರ ಗೃಹ ಇಲಾಖೆಯ ಮಾಹಿತಿ ಪ್ರಕಾರ ಕಳೆದೊಂದು ವರ್ಷದಲ್ಲಿ ದೇಶಾದ್ಯಂತ ವಶಕ್ಕೆ ಪಡೆದಿರುವ ಹೆರಾಯಿನ್‌ ಮೌಲ್ಯ ಬರೋಬ್ಬರಿ 40 ಸಾವಿರ ಕೋಟಿ. ಅಂದರೆ ನಮ್ಮ ದೇಶದ ಹತ್ತಕ್ಕೂ ಹೆಚ್ಚು ರಾಜ್ಯಗಳ ವಾರ್ಷಿಕ ಬಜೆಟ್‌ಗಿಂತ ಹೆಚ್ಚು!

ನವದೆಹಲಿ: ದೇಶದ ಗೃಹ ಸಚಿವಾಲಯ ನೀಡಿರುವ ಮಾಹಿತಿ ಅನ್ವಯ ಕಳೆದ ವರ್ಷವೊಂದರಲ್ಲೇ 5,600 ಕೆಜಿ ಹೆರಾಯಿನ್‌ ಮಾದಕ ವಸ್ತುವನ್ನು ತನಿಖಾ ಸಂಸ್ಥೆಗಳು ವಶಪಡಿಸಿಕೊಂಡಿವೆ. ಇದರ ಮೌಲ್ಯ ಕೇಳಿದರೆ ತಲೆ ತಿರುಗೋದು ಗ್ಯಾರಂಟಿ. ಯಾಕೆಂದರೆ ಇದರ ಮೌಲ್ಯ ಹಲವು ರಾಜ್ಯಗಳ ವಾರ್ಷಿಕ ಬಜೆಟ್‌ಗಿಂತ ದುಪ್ಪಟ್ಟಾಗಿದೆ. ಹಾಗಾದರೆ ಭಾರತದಲ್ಲಿ ಮಾದಕ ವಸ್ತುಗಳ ವ್ಯಸನಿಗಳ ಸಂಖ್ಯೆ ಎಷ್ಟಿರಬಹುದು ಮತ್ತು ಇದೆಷ್ಟು ದೊಡ್ಡ ಜಾಲವಾಗಿರಬಹುದು? ಭಾರತ ಎಲೆಕ್ಟ್ರಾನಿಕ್ಸ್‌ ಉಪಕರಣಗಳು, ಬ್ಯೂಟಿ ಪ್ರಾಡಕ್ಟ್ಸ್‌, ಹೆಲ್ತ್‌ ಪ್ರಾಡಕ್ಟ್ಸ್‌ ಸೇರಿದಂತೆ ನೂರೆಂಟು ವಸ್ತುಗಳಿಗೆ ಇಡೀ ಜಗತ್ತಿನಲ್ಲೇ ದೊಡ್ಡ ಮಾರುಕಟ್ಟೆ ಎಂಬುದರಲ್ಲಿ ಸಂಶಯವೇ ಇಲ್ಲ. ಚೀನಾದ ಎಷ್ಟೋ ಕಂಪೆನಿಗಳು ಬದುಕಿರುವುದೇ ಭಾರತದ ಮಾರುಕಟ್ಟೆಯಿಂದ. ಆದರೆ ಇದನ್ನೂ ಮೀರಿದ ಕರಾಳ ಲೋಕವೊಂದು ನಮ್ಮ ದೇಶದಲ್ಲಿದೆ. ಅದೇ ಮಾರಕ ವಸ್ತುಗಳ ಮಾರುಕಟ್ಟೆ. ಪ್ರತಿನಿತ್ಯ ನೂರಾರು ಕೋಟಿಗೂ ಅಧಿಕ ಹಣ ಭಾರತೀಯ ಮಾದಕ ವ್ಯಸನಿಗಳು ಇವುಗಳ ಮೇಲೆ ಖರ್ಚು ಮಾಡುತ್ತಾರೆ. ಭಾರತದೊಳಗೆ ಉತ್ಪಾದನೆಯಾಗುವ ಗಾಂಜಾ, ಅಫೀಮು, ಹಶಿಶ್‌ ಮುಂತಾದ ನೈಸರ್ಗಿಕ ಮಾದಕ ವಸ್ತುಗಳು ಒಂದು ಕಡೆಗಾದರೆ, ಕೆಮಿಕಲ್‌ಗಳಿಂದ ತಯಾರಿಸಲ್ಪಡುವ ಹೆರಾಯಿನ್‌, ಕೊಕೇನ್‌, ಮೆಥ್‌, ಆಂಫೆಟಮೀನ್‌, ಮೆಟಮಾರ್ಫಿನ್‌, ಹೈಡ್ರಾ, ಎಲ್‌ಎಸ್‌ಡಿ, ಆಸಿಡ್‌, ಮುಂತಾದ ಮಾದಕ ವಸ್ತುಗಳು ಆಮದಾಗುತ್ತವೆ. ಭಾರತದಲ್ಲಿ ಕಳೆದ ವರ್ಷ ವಶಕ್ಕೆ ಸಿಕ್ಕ ಮಾದಕ ವಸ್ತುಗಳ್ಯಾವುವು ಮತ್ತು ಯಾವ ರಾಜ್ಯದ ಬಜೆಟ್‌ಗಿಂತ ಇದರ ಮೌಲ್ಯ ಹೆಚ್ಚಿದೆ ಎಂಬುದರ ಮಾಹಿತಿ ಈ ಕೆಳಗಿದೆ. 

ಗೃಹ ಸಚಿವಾಲಯ ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಈ ಮಹತ್ವದ ಮಾಹಿತಿ ಬಹಿರಂಗವಾಗಿದೆ. 40,000 ಕೋಟಿ ರೂಪಾಯಿ ಮೌಲ್ಯದ 5,600 ಕೆಜಿ ಹೆರಾಯಿನ್‌ ಕಳೆದ ವರ್ಷ ವಶಕ್ಕೆ ಪಡೆಯಲಾಗಿದೆ ಎನ್ನುತ್ತದೆ ಈ ಮಾಹಿತಿ. ಮುಂದ್ರಾ ಪೋರ್ಟ್‌ ಒಂದರಲ್ಲೇ 3,000 ಕೆಜಿ ಹೆರಾಯಿನ್‌ ಕಳೆದ ವರ್ಷ ಸಿಕ್ಕಿತ್ತು. ಇಡೀ ಜಗತ್ತಲ್ಲೇ ಇದು ಅತ್ಯಂತ ದೊಡ್ಡ ಕನ್‌ಸೈನ್‌ಮೆಂಟ್‌ ಎಂಬ ಅಪಖ್ಯಾತಿಗೂ ಒಳಗಾಗಿತ್ತು. ನಲವತ್ತು ಸಾವಿರ ಕೋಟಿ ಮೌಲ್ಯದ ಹೆರಾಯಿನ್‌ ತನಿಖಾ ಸಂಸ್ಥೆಗಳು ಭಾರತ ಮತ್ತು ನೆರೆಹೊರೆಯ ದೇಶಗಳ ಗಡಿಭಾಗದಲ್ಲಿ. ಇದನ್ನು ಹೊರತುಪಡಿಸಿ ನೂರಾರು ದಾಳಿಗಳು ಇಡೀ ದೇಶಾದ್ಯಂತ ನಡೆದಿವೆ. ಅದರ ಮಾಹಿತಿಯನ್ನು ಗೃಹ ಸಚಿವಾಲಯ ನೀಡಿಲ್ಲ. ಅದನ್ನೂ ಸೇರಿಸಿದರೆ ಇನ್ನೆಷ್ಟು ಸಾವಿರ ಕೋಟಿ ಹೆಚ್ಚುತ್ತದೆಯೋ ಗೊತ್ತಿಲ್ಲ. 

ಇದನ್ನೂ ಓದಿ: Bengaluru: 28 ಟನ್‌ ತೂಕದ 60 ಕೋಟಿ ಡ್ರಗ್ಸ್‌ ನಾಶ ಮಾಡಿದ ಪೊಲೀಸರು!

2020ರ ವರ್ಷಕ್ಕೆ ಹೋಲಿಸಿದರೆ 2021ರಲ್ಲಿ ಶೇಕಡ 72ರಷ್ಟು ಹೆಚ್ಚು ಮಾದಕ ವಸ್ತುಗಳು ಜಪ್ತಿಯಾಗಿವೆ. 2020ರಲ್ಲಿ ಕೇವಲ ಗುಜರಾತ್‌ ರಾಜ್ಯವೊಂದರಲ್ಲೇ 3,265.14 ಕೆಜಿ ಹೆರಾಯಿನ್‌ ಜಪ್ತಿಯಾಗಿತ್ತು. ಗುಜರಾತ್‌ ನಂತರದ ಸ್ಥಾನದಲ್ಲಿ ಪಂಜಾಬ್ - 819.18 ಕೆಜಿ, ಮೇಘಾಲಯ - 501.99 ಕೆಜಿ ಇದ್ದವು. ಕಂದಾಯ ನಿರ್ದೇಶನಾಲಯದ ಗುಪ್ತಚರ ವಿಭಾಗ ಮುಂದ್ರಾ ಪೋರ್ಟ್‌ನಲ್ಲಿ 2,988.22 ಕೆಜಿಯಷ್ಟು ಹೆರಾಯಿನ್‌ ಜಪ್ತಿ ಮಾಡಿತ್ತು. ಇಬ್ಬರು ವ್ಯಕ್ತಿಗಳು ಕಂಟೇನರ್‌ನಲ್ಲಿ ಹೆರಾಯಿನ್‌ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿತ್ತು. ನಂತರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ಹಸ್ತಾಂತರಿಸಿತ್ತು. ತನಿಖೆ ವೇಳೆ ಎನ್‌ಐಎಗೆ ಸಿಕ್ಕ ಮಾಹಿತಿ ಪ್ರಕಾರ, ಜಪ್ತಿಯಾದಷ್ಟೇ ಹೆರಾಯಿನ್‌ ಇದ್ದ ಇನ್ನೊಂದು ಕಂಟೇನರ್‌ ತನಿಖಾ ಸಂಸ್ಥೆಗಳ ಕಣ್ತಪ್ಪಿಸಿ 2021ರ ಜೂನ್‌ ತಿಂಗಳಲ್ಲಿ ಸಾಗಿಸಲಾಗಿತ್ತು. 

ಕೇಂದ್ರ ಗೃಹ ಸಚಿವಾಲಯ ಮಾದಕ ವಸ್ತುಗಳ ನಿಗ್ರಹಕ್ಕೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ರಾಜ್ಯ ಮತ್ತು ಕೇಂದ್ರದ ತನಿಖಾ ಸಂಸ್ಥೆಗಳ ನಡುವೆ ಉತ್ತಮ ಸಂವಹನ ಪ್ರಕ್ರಿಯೆಗಾಗಿ ನಾರ್ಕೊ ಕೋಆರ್ಡಿನೇಷನ್‌ ಸೆಂಟರ್‌ನ್ನು ಕೇಂದ್ರ ಸ್ಥಾಪಿಸಿದೆ. ಗೃಹ ಇಲಾಖೆಯ ಕಾರ್ಯದರ್ಶಿ ಮತ್ತು ಆಂತರಿಕ ಭದ್ರತಾ ಇಲಾಖೆ ಕಾರ್ಯದರ್ಶಿ ಈ ಸಮಿತಿಯ ನೇತೃತ್ವ ವಹಿಸಿದ್ದಾರೆ. ಆದಾಗ್ಯೂ, ಡ್ರಗ್ಸ್‌ ದೇಶದ ವಿವಿಧ ಭಾಗಗಳಿಗೆ ಪೂರೈಕೆಯಾಗುತ್ತಿದೆ. 

ಇದನ್ನೂ ಓದಿ: ಕಿಸ್ಸಿಂಗ್ ವೀಡಿಯೋ ಜಾಡು ಹಿಡಿದ ಪೊಲೀಸರಿಗೆ ವಿದ್ಯಾರ್ಥಿಗಳ ಬೆತ್ತಲು ವೀಡಿಯೋ ಲಭ್ಯ!

ಮೇಘಾಲಯ, ತ್ರಿಪುರ, ಮಣಿಪುರ, ಅಸ್ಸಾಂ, ನಾಗಾಲ್ಯಾಂಡ್‌, ಗೋವಾ, ಪಾಂಡಿಚೆರಿ ಸೇರಿದಂತೆ ಹಲವು ರಾಜ್ಯಗಳ ವಾರ್ಷಿಕ ಬಜೆಟ್‌ಗಿಂತ ಹೆಚ್ಚಿನ ಡ್ರಗ್ಸ್‌ ದೇಶದಲ್ಲಿ ಜಪ್ತಿಯಾಗುತ್ತಿದೆ. ಇನ್ನು ಜಪ್ತಿಯಾಗದ ಡ್ರಗ್ಸ್‌ ಮೌಲ್ಯಗಳ ಅಂದಾಜು ಸಿಕ್ಕರೆ, ದೊಡ್ಡ ದೊಡ್ಡ ರಾಜ್ಯಗಳ ಬಜೆಟ್‌ ಕೂಡ ಮೀರಿಸುವ ಸಾಧ್ಯತೆಯಿದೆ.