ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಜಮೀನು ವಿವಾದವೊಂದು ಕೊಲೆಯಲ್ಲಿ ಅಂತ್ಯವಾಗಿದೆ. ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ದ್ವೇಷಕ್ಕೆ ನಾಗಪ್ಪ ಗೌಡ ಎಂಬಾತ, ಮಾರುತಿ ಹೆಗಡೆ ಎಂಬುವವರನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಈ ಸಂಬಂಧ ಮೃತರ ಪುತ್ರಿ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಕಾರವಾರ (ಜ.21): ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಜಮೀನು ವಿವಾದವೊಂದು ಕೊಲೆಯಲ್ಲಿ ಅಂತ್ಯವಾಗಿದೆ. ಸಣ್ಣ ಜಗಳ ವಿಕೋಪಕ್ಕೆ ಹೋಗಿ ವ್ಯಕ್ತಿಯೊಬ್ಬನನ್ನು ಕಾಲಿನಿಂದ ತುಳಿದು ಹಾಗೂ ಕಟ್ಟಿಗೆಯಿಂದ ಮನಬಂದಂತೆ ಹೊಡೆದು ಹತ್ಯೆ ಮಾಡಿದ ಘಟನೆ ಮೆಣಸಿನಕೇರಿ ಕೂಜಳ್ಳಿ ಗ್ರಾಮದಲ್ಲಿ ನಡೆದಿದೆ.

ಜಮೀನು ವ್ಯಾಜ್ಯದ ದ್ವೇಷ

ಮೆಣಸಿನಕೇರಿ ಕೂಜಳ್ಳಿ ನಿವಾಸಿ ಮಾರುತಿ ಹೆಗಡೆ (58) ಕೊಲೆಯಾದ ದುರ್ದೈವಿ. ಇದೇ ಗ್ರಾಮದ ನಾಗಪ್ಪ ಗೌಡ (40) ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಕೆಲವು ವರ್ಷಗಳ ಹಿಂದೆ ಅನಂತ ಈಶ್ವರ ಹೆಗಡೆ ಎಂಬುವವರು ಒಂದು ಎಕರೆ ಜಮೀನನ್ನು ನಾಗಪ್ಪ ಗೌಡನಿಗೆ ಮಾರಾಟ ಮಾಡಿದ್ದರು. ಆದರೆ, ಈ ವ್ಯವಹಾರದ ಬಗ್ಗೆ ಮಾರುತಿ ಹೆಗಡೆ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಕೋರ್ಟ್ ಕೇಸಿನ ವಿಚಾರವೇ ನಾಗಪ್ಪ ಗೌಡನ ಆಕ್ರೋಶಕ್ಕೆ ಕಾರಣವಾಗಿದೆ.

ಮಾರಣಾಂತಿಕ ಹಲ್ಲೆಯಿಂದ ಸಾವು

ಕಳೆದ ಜನವರಿ 17ರಂದು ಜಮೀನು ವಿಚಾರವಾಗಿ ನಾಗಪ್ಪ ಗೌಡ ಹಾಗೂ ಮಾರುತಿ ಹೆಗಡೆ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕಾಲು ಕೆರೆದು ಜಗಳಕ್ಕೆ ಬಂದ ನಾಗಪ್ಪ ಗೌಡ, ಮಾರುತಿ ಅವರ ಹೊಟ್ಟೆಗೆ ಬಲವಾಗಿ ಹೊಡೆದು, ಅವರು ಕೆಳಗೆ ಬಿದ್ದಾಗ ಕಾಲಿನಿಂದ ತುಳಿದಿದ್ದಾನೆ. ಅಷ್ಟಕ್ಕೇ ನಿಲ್ಲಿಸದೆ ಪಕ್ಕದಲ್ಲಿದ್ದ ಕಟ್ಟಿಗೆಯಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮಾರುತಿ ಅವರನ್ನು ತಕ್ಷಣ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ.

ಕುಮಟಾ ಠಾಣೆಯಲ್ಲಿ ದೂರು ದಾಖಲು

ತಂದೆಯ ಸಾವಿನಿಂದ ಆಘಾತಕ್ಕೊಳಗಾಗಿರುವ ಮೃತರ ಪುತ್ರಿ ಚೇತನಾ ಹೆಗಡೆ ಅವರು ನಾಗಪ್ಪ ಗೌಡನ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನ್ನ ತಂದೆಯನ್ನು ಉದ್ದೇಶಪೂರ್ವಕವಾಗಿಯೇ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ಆರೋಪಿ ನಾಗಪ್ಪ ಗೌಡನ ಕ್ರಮಕ್ಕೆ ಮುಂದಾಗಿದ್ದಾರೆ.