ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ, ಮಗಳು ಮನೆ ಬಿಟ್ಟು ಹೋದ ವಿಚಾರಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಪತಿಯನ್ನು ಪತ್ನಿಯೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ. ಕೌಟುಂಬಿಕ ಕಲಹ ತಾರಕಕ್ಕೇರಿದಾಗ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು (ಜ.21): ಸಿಲಿಕಾನ್ ಸಿಟಿಯ ಬೊಮ್ಮನಹಳ್ಳಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಎರಡನೇ ಮಗಳು ಮನೆ ಬಿಟ್ಟು ಹೋಗಿದ್ದಕ್ಕೆ ಪತ್ನಿಗೆ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ ಪತಿಯನ್ನು ಪತ್ನಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹೊಂಗಸಂದ್ರದಲ್ಲಿ ನಡೆದಿದೆ.
ನಿರಂತರ ಕೌಟುಂಬಿಕ ಕಲಹ
ಬೊಮ್ಮನಹಳ್ಳಿಯ ಹೊಂಗಸಂದ್ರ ನಿವಾಸಿ ಮುರುಗೇಶ್ (50) ಹತ್ಯೆಯಾದ ಪತಿ. ಇವರ ಪತ್ನಿ ಲಕ್ಷ್ಮೀ (45) ಸದ್ಯ ಪೊಲೀಸರ ವಶದಲ್ಲಿರುವ ಆರೋಪಿ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಮೊದಲನೇ ಮಗಳಿಗೆ ಈಗಾಗಲೇ ಮದುವೆಯಾಗಿದ್ದು, ತನ್ನ ಪತಿಯ ಮನೆಯಲ್ಲಿದ್ದಾಳೆ. ಆದರೆ, ಎರಡನೇ ಮಗಳು ಕೆಲವು ದಿನಗಳ ಹಿಂದೆ ಯಾರಿಗೂ ಹೇಳದೆ ಮನ ಬಿಟ್ಟು ಹೋಗಿದ್ದಳು. ಈ ವಿಷಯವೇ ದಂಪತಿಗಳ ನಡುವೆ ದೊಡ್ಡ ವಿಷಾದಕ್ಕೆ ಕಾರಣವಾಗಿತ್ತು.
ಗಂಡನ ಕಿರುಕುಳಕ್ಕೆ ಬೇಸತ್ತು ಹತ್ಯೆ
ಎರಡನೇ ಮಗಳು ಮನೆ ಬಿಟ್ಟು ಹೋಗಲು ಪತ್ನಿಯೇ ಕಾರಣ ಎಂದು ಮುರುಗೇಶ್ ಪ್ರತಿ ನಿತ್ಯ ಪತ್ನಿ ಲಕ್ಷ್ಮೀ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ.. ಇದೇ ವಿಚಾರಕ್ಕೆ ಲಕ್ಷ್ಮೀಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ. ನಿನ್ನೆ ರಾತ್ರಿಯೂ ಕೂಡ ಇದೇ ವಿಷಯವಾಗಿ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮುರುಗೇಶ್ ಪತ್ನಿಗೆ ಅತಿಯಾಗಿ ಕಿರುಕುಳ ನೀಡಿದ್ದು, ತಾಳ್ಮೆ ಕಳೆದುಕೊಂಡ ಲಕ್ಷ್ಮೀ ಮನೆಯಲ್ಲಿದ್ದ ಚಾಕುವಿನಿಂದ ಪತಿಗೆ ಇರಿದಿದ್ದಾಳೆ.
ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ಮುರುಗೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಿಷಯ ತಿಳಿದ ತಕ್ಷಣ ಬೊಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಲಕ್ಷ್ಮೀಯನ್ನು ಬಂಧಿಸಲಾಗಿದೆ.
ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು
ಪತಿಯ ಅತಿಯಾದ ಕಿರುಕುಳದಿಂದ ಬೇಸತ್ತು ಈ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.


