ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಅಂಡುವಾನೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಸುಬ್ರಾಯಗೌಡ ಬಲಿ. ನಾಲ್ಕು ದಿನಗಳ ಅಂತರದಲ್ಲಿ ಎರಡನೇ ಬಲಿ. ಕಾಡಾನೆ ಹಾವಳಿಗೆ ಆತಂಕಿತರಾಗಿರುವ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿ, ನಾಳೆ ಬಾಳೆಹೊನ್ನೂರು ಬಂದ್‌ಗೆ ಕರೆ ನೀಡಿದ್ದಾರೆ.
ಚಿಕ್ಕಮಗಳೂರು,(ಜುಲೈ 27): ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಂಡುವಾನೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ವ್ಯಕ್ತಿ ದುರ್ಮರಣಕ್ಕೀಡಾದ ಘಟನೆ ನಡೆದಿದೆ.
65 ವರ್ಷದ ಸುಬ್ರಾಯಗೌಡ, ಕಾಡಾನೆ ದಾಳಿ ಬಲಿಯಾದ ಮೃತ ದುರ್ದೈವಿ. ಕಳೆದ ಗುರುವಾರ (ಜುಲೈ 24, 2025) 25 ವರ್ಷದ ಯುವತಿ ಕವಿತಾ ಆನೆ ದಾಳಿಗೆ ಬಲಿಯಾಗಿದ್ದಳು. ನಾಲ್ಕು ದಿನಗಳ ಅಂತರದಲ್ಲಿ ಎರಡನೇ ಬಲಿಯಾಗಿದ್ದು, ಮಲೆನಾಡಿನಲ್ಲಿ ಕಾಡಾನೆ ಹಾವಳಿ ಮಿತಿಮೀರಿರುವುದಕ್ಕೆ ಸಾಕ್ಷಿಯಾಗಿದೆ.
ಆತಂಕದಲ್ಲಿ ಮಲೆನಾಡು ಜನರು:
ಇಂದು ಮೂಡಿಗೆರೆ-ಬೇಲೂರು ಗಡಿಯಲ್ಲಿ 25 ಕಾಡಾನೆಗಳ ಗುಂಪು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಭಯ ಮತ್ತು ಆತಂಕ ಮನೆಮಾಡಿದೆ. ಆಗಾಗ್ಗೆ ಸಂಭವಿಸುತ್ತಿರುವ ಆನೆ ದಾಳಿಗಳಿಂದ ಕಂಗಾಲಾಗಿರುವ ಮಲೆನಾಡಿಗರು, ಅರಣ್ಯ ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ. ಪ್ರಕರಣ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ, ನಾಳೆ ಬಾಳೆಹೊನ್ನೂರು ಬಂದ್:
ಸುಬ್ರಾಯಗೌಡರ ಸಾವಿನ ಬಳಿಕ ಸ್ಥಳೀಯರು ಬಾಳೆಹೊನ್ನೂರು ಅರಣ್ಯ ಇಲಾಖೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, 'ನಿಮ್ಮ ಪರಿಹಾರ ಬೇಡ, ಜೀವ ಉಳಿಸಿ' ಎಂದು ಧಿಕ್ಕಾರ ಕೂಗಿದ್ದಾರೆ. ಅರಣ್ಯ ಇಲಾಖೆಯ ವಿರುದ್ಧ ಕೆಂಡಾಮಂಡಲರಾದ ಮಲೆನಾಡಿಗರು, ಕಾಡಾನೆಗಳನ್ನು ಕಾಡಿಗೆ ಓಡಿಸುವ ಅಥವಾ ಸ್ಥಳಾಂತರಿಸುವ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ಘಟನೆಯನ್ನು ಖಂಡಿಸಿ ನಾಳೆ (ಜುಲೈ 28, 2025) ಬಾಳೆಹೊನ್ನೂರು ಬಂದ್‌ಗೆ ಕರೆ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ-ಮಾನವ ಸಂಘರ್ಷ ತೀವ್ರಗೊಂಡಿದ್ದು, ಸ್ಥಳೀಯರು ಶಾಶ್ವತ ಪರಿಹಾರಕ್ಕಾಗಿ ಒತ್ತಡ ಹೇರಿದ್ದಾರೆ. ಅರಣ್ಯ ಇಲಾಖೆ ಕಾಡಾನೆಗಳ ಚಲನವಲನದ ಬಗ್ಗೆ ಮಾಹಿತಿ ಇದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಸ್ಥಳೀಯರು, ತಕ್ಷಣದ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸೂಕ್ತ ಕ್ರಮಕ್ಕಾಗಿ ಒತ್ತಾಯಿಸುತ್ತಿರುವ ಮಲೆನಾಡಿಗರ ಕೂಗು ರಾಜ್ಯ ಸರ್ಕಾರಕ್ಕೆ ತಲುಪುವುದೇ?
