ಚಾಮರಾಜನಗರ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಬಸ್ಸಿನ ಚಾಲಕನಿಗೆ ಹಠಾತ್ ಮೂರ್ಛೆ ಬಂದ ಪರಿಣಾಮ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಐವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ ಹನೂರಿನಿಂದ ಮೈಸೂರಿಗೆ ತೆರಳುತ್ತಿತ್ತು.
ಚಾಮರಾಜನಗರ (ಫೆ.9): ಬಸ್‌ನಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಊರಿಗೆ ಹೋಗುತ್ತಿರುವಾಗ, ಬಸ್ ಗಂಟೆಗೆ 60ಕಿಮೀ ವೇಗದಲ್ಲಿ ಚಲಿಸುತ್ತಿರುತ್ತದೆ ಈ ವೇಳೆ ಇದ್ದಕ್ಕಿದ್ದಂತೆ ಬಸ್ ಚಾಲಕನಿಗೆ ಹೃದಯಾಘಾತವೋ, ಅಪಸ್ಮಾರ ಬಂದರೆ ಹೇಗೆ? ಅಬ್ಬಾ ನೆನಸಿಕೊಂಡರೇನೆ ಅರ್ಧ ಜೀವ ಹೋದಂತಾಗುತ್ತಲ್ಲವೇ? ಅಂಥ ದುರ್ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಹೌದು ಬಸ್ ಚಾಲಯಿಸುತ್ತಿರುವಾಗಲೇ ಚಾಲಕನಿಗೆ ಮೂರ್ಚೆ ಬಂದ ಪರಿಣಾಮ ವೇಗದಲ್ಲಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಹನೂರು ತಾಲೂಕಿನ ಚಿಕ್ಕರಂಗಶೆಟ್ಟಿದೊಡ್ಡಿ ಗ್ರಾಮದಲ್ಲಿ ನಡೆದಿದ್ದು, ದುರ್ಘಟನೆಯಲ್ಲಿ ಐವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿಯಾಗಿಲ್ಲ.
ಇದನ್ನೂ ಓದಿ: ಮಂಡ್ಯದಲ್ಲಿ KSRTC ಬಸ್ ಪಲ್ಟಿ: 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಕೆಎಸ್‌ಆರ್‌ಟಿಸಿ ಬಸ್ ಹನೂರು ತಾಲೂಕಿನ ಒಡೆಯರಪಾಳ್ಯ ಗ್ರಾಮದಿಂದ ಮೈಸೂರಿಗೆ ತೆರಳುತ್ತಿತ್ತು. ಬಸ್‌ನಲ್ಲಿ ಸುಮಾರು 40 ಪ್ರಯಾಣಿಕರಿದ್ದರು ಎನ್ನಲಾಗಿದೆ. ವೇಗವಾಗಿ ಚಲಿಸುತ್ತಿದ್ದ ಬಸ್ ಚಿಕ್ಕರಂಗಶೆಟ್ಟಿದೊಡ್ಡಿ ಗ್ರಾಮದ ಬಳಿ ಬರುತ್ತಲೇ ಬಸ್ ಚಾಲಕನಿಗೆ ಹಠಾತ್ ಮೂರ್ಚೆ ಬಂದಿದೆ. ಈ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ವೇಗದಲ್ಲೇ ಅಡ್ಡಾದಿಡ್ಡಿ ಚಲಿಸಿ ಕೊನೆಗೆ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ ನುಜ್ಜುಗುಜ್ಜು ಆಗಿದೆ. ಮುಂಭಾಗದಲ್ಲಿ ಕುಳಿತಿದ್ದ ಐವರು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನ ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದಾರೆ.
