Asianet Suvarna News Asianet Suvarna News

Bengaluru: ಜೋಡಿ ಕೊಲೆ ಮಾಡಿದ್ದು ಉದ್ಯಮಿಯ ಮಾಜಿ ಕಾರು ಚಾಲಕ!

ಎರಡು ದಿನಗಳ ಹಿಂದೆ ಉದ್ಯಮಿ ರಾಜಗೋಪಾಲ ರೆಡ್ಡಿ ಮನೆಯಲ್ಲಿ ನಡೆದಿದ್ದ ಅವಳಿ ಕೊಲೆ ಪ್ರಕರಣ ಸಂಬಂಧ ರೆಡ್ಡಿ ಅವರ ಮಾಜಿ ಕಾರು ಚಾಲಕ ಸೇರಿದಂತೆ ಮೂವರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

Kormangala Police Arrested 3 Accused For Double Murder At Bengaluru gvd
Author
First Published Dec 21, 2022, 7:26 AM IST

ಬೆಂಗಳೂರು (ಡಿ.21): ಎರಡು ದಿನಗಳ ಹಿಂದೆ ಉದ್ಯಮಿ ರಾಜಗೋಪಾಲ ರೆಡ್ಡಿ ಮನೆಯಲ್ಲಿ ನಡೆದಿದ್ದ ಅವಳಿ ಕೊಲೆ ಪ್ರಕರಣ ಸಂಬಂಧ ರೆಡ್ಡಿ ಅವರ ಮಾಜಿ ಕಾರು ಚಾಲಕ ಸೇರಿದಂತೆ ಮೂವರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ರೆಡ್ಡಿ ಅವರ ಕಾರು ಚಾಲಕ ಹೆಗ್ಗನಹಳ್ಳಿ ನಿವಾಸಿ ಜಗದೀಶ್‌ ಹಾಗೂ ಆತನ ಸಹಚರರಾದ ಅಭಿಷೇಕ್‌ ಮತ್ತು ಕಿರಣ್‌ ಬಂಧಿತರು. 

ಕೆಲ ದಿನಗಳ ಹಿಂದೆ ದುರ್ನಡತೆ ಕಾರಣಕ್ಕೆ ಜಗದೀಶ್‌ನನ್ನು ಕೆಲಸದಿಂದ ರೆಡ್ಡಿ ತೆಗೆದಿದ್ದರು. ಕಳ್ಳತನ ಮಾಡುವ ಉದ್ದೇಶದಿಂದ ಕೋರಮಂಗಲದ 6ನೇ ಹಂತದಲ್ಲಿರುವ ರೆಡ್ಡಿ ಅವರ ಮನೆಗೆ ಭಾನುವಾರ ರಾತ್ರಿ ತನ್ನ ಇಬ್ಬರು ಸಹಚರರ ಜತೆ ಜಗದೀಶ್‌ ಬಂದಿದ್ದಾನೆ. ಆ ವೇಳೆ ಅವರ ಮನೆಯ ಕೆಲಸಗಾರ ಕರಿಯಪ್ಪ (50) ಹಾಗೂ ಸೆಕ್ಯೂರಿಟಿ ಗಾರ್ಡ್‌ ದಿಲ್‌ ಬಹದ್ದೂರ್‌ (55)ನನ್ನು ಹತ್ಯೆ ಮಾಡಿ ನಗ-ನಾಣ್ಯ ದೋಚಿದ್ದರು. ತನಿಖೆ ನಡೆಸಿದ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ನಟರಾಜ್‌ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿದೆ ಎಂದು ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ತಿಳಿಸಿದ್ದಾರೆ.

ಕೂಲ್‌ ಡ್ರಿಂಕ್ಸ್‌ ಕದ್ದ ಆರೋಪದ ಮೇಲೆ ಬಾಲಕನ ಬಟ್ಟೆ ಬಿಚ್ಚಿ, ಮೆಣಸಿನ ಪುಡಿ ಎರಚಿದ ಅಂಗಡಿ ಮಾಲೀಕ ಅರೆಸ್ಟ್‌

ಹಣದಾಸೆಗೆ ಕೃತ್ಯ: ಹೆಗ್ಗನಹಳ್ಳಿಯ ಜಗದೀಶ್‌ ಕ್ರಿಮಿನಲ್‌ ಹಿನ್ನಲೆಯುವಳ್ಳನಾಗಿದ್ದು, ಆತನ ಮೇಲೆ ಮಾದನಾಯಕನಹಳ್ಳಿ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ತಮ್ಮ ಸ್ನೇಹಿತನ ಶಿಫಾರಸು ಮೇರೆಗೆ ಜಗದೀಶ್‌ನನ್ನು ಕಾರು ಚಾಲಕನಾಗಿ ರೆಡ್ಡಿ ನೇಮಿಸಿಕೊಂಡಿದ್ದರು. ಇತ್ತೀಚೆಗೆ ದುರ್ನಡತೆ ಕಾರಣಕ್ಕೆ ಕೆಲಸದಿಂದ ರೆಡ್ಡಿ ವಜಾಗೊಳಿಸಿದ್ದರು. ಇದರಿಂದ ಕೆರಳಿದ್ದ ಜಗದೀಶ್‌, ಕಳ್ಳತನಕ್ಕೆ ಹಾಕಲು ಯೋಜಿಸಿದ್ದ. ಈ ಕೃತ್ಯಕ್ಕೆ ಹಣದಾಸೆ ತೋರಿಸಿ ತನ್ನ ನೆರೆಮನೆಯಲ್ಲಿ ನೆಲೆಸಿದ್ದ ಅಭಿಷೇಕ್‌ ಹಾಗೂ ಕಿರಣ್‌ ಸೋದರರನ್ನು ಆತ ಬಳಸಿಕೊಂಡಿದ್ದ.

ಕಾರು ಚಾಲಕನಾಗಿದ್ದಾಗ ರೆಡ್ಡಿ ಅವರ ಹಣಕಾಸಿನ ವ್ಯವಹಾರದ ಬಗ್ಗೆ ಜಗದೀಶ್‌ ಮಾಹಿತಿ ಕಲೆ ಹಾಕಿದ್ದ. ಹೀಗಾಗಿ ಹಳೇ ಮಾಲಿಕನ ಮನೆಗೆ ಕನ್ನ ಹಾಕಿದರೆ ಅಪಾರ ಚಿನ್ನಾಭರಣ ಹಾಗೂ ಹಣ ಸಿಗುತ್ತದೆ ಎಂದು ಭಾವಿಸಿದ್ದ ಆತ, ಕಳ್ಳತನಕ್ಕೆ ಸಂಚು ರೂಪಿಸಿದ್ದ. ಆಗಾಗ್ಗೆ ಹಳೇ ಮಾಲಿಕರ ಮನೆಗೆ ಕುಶಲೋಪರಿ ವಿಚಾರಿಸುವ ನೆಪದಲ್ಲಿ ಬಂದು ವಿಶ್ವಾಸದಿಂದ ಮಾತನಾಡಿ ರೆಡ್ಡಿ ಚಲನವನದ ಮೇಲೆ ಆತ ನಿಗಾವಹಿಸಿದ್ದ. ಹೀಗಾಗಿರುವಾಗ ಡಿ.18 ಸಂಬಂಧಿಕರ ಮದುವೆ ಸಲುವಾಗಿ ಆಂಧ್ರಪ್ರದೇಶ ರಾಜ್ಯದ ಆನಂತಪುರಕ್ಕೆ ತಮ್ಮ ಪರಿವಾರ ಸಮೇತ ರೆಡ್ಡಿ ತೆರಳುವ ಮಾಹಿತಿ ಜಗದೀಶ್‌ಗೆ ಸಿಕ್ಕಿತು. 

ಕೂಡಲೇ ಆತ, ಭಾನುವಾರ ರಾತ್ರಿ ಅವರ ಮನೆಗೆ ಆರೋಪಿಗಳು ನುಗ್ಗಿದ್ದಾರೆ. ರಾತ್ರಿ 10ಕ್ಕೆ ಕಾಂಪೌಂಡ್‌ ಜಿಗಿದು ಸೆಕ್ಯೂರಿಟಿ ಗಾರ್ಡ್‌ ರೂಮ್‌ನಲ್ಲಿ ಮಲಗಿದ್ದ ಕಾವಲುಗಾರ ದಿಲ್‌ ಬಹದ್ದೂರ್‌ನನ್ನು ಉಸಿರುಗಟ್ಟಿಸಿ ಕೊಂದು ನೀರಿನ ಸಂಪ್‌ಗೆ ಎಸೆದಿದ್ದರು. ಆನಂತರ ಮುಖ್ಯದ್ವಾರದ ಬಳಿಗೆ ಹೋಗಿ ಕಾದು ಕುಳಿತಿದ್ದರು. ಆ ವೇಳೆ ಮನೆ ಬಾಗಿಲು ತೆಗೆದು ಹೊರ ಬಂದ ಕರಿಯಪ್ಪನ ಮೇಲೆ ಹಲ್ಲೆ ನಡೆಸಿ ಕೊಂದಿದ್ದರು. ಬಳಿಕ ಮನೆಯಲ್ಲಿ ಜಾಲಾಡಿ .5 ಲಕ್ಷ ನಗದು ಹಾಗೂ 100 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಮರುದಿನ ಬೆಳಗ್ಗೆ ಮನೆಗೆ ಇತರೆ ಕೆಲಸಗಾರರು ಬಂದಾಗ ಕೃತ್ಯ ಬೆಳಕಿಗೆ ಬಂದಿತ್ತು ಎಂದು ಆಯುಕ್ತ ಪ್ರತಾಪ್‌ ರೆಡ್ಡಿ ತಿಳಿಸಿದ್ದಾರೆ.

ಚಿಕ್ಕಮಗಳೂರು: ಒಂದೇ ಕುಣಿಕೆಗೆ ಕೊರಳೊಡ್ಡಿದ ಪ್ರೇಮಿಗಳು

ಹಂತಕರ ಸುಳಿವು ಕೊಟ್ಟ ನೆಟ್‌ವರ್ಕ್: ಅವಳಿ ಕೊಲೆ ಪ್ರಕರಣದ ತನಿಖೆ ಪತ್ತೆಗೆ ಐದು ವಿಶೇಷ ತಂಡಗಳನ್ನು ಡಿಸಿಪಿ ಸಿ.ಕೆ.ಬಾಬಾ ರಚಿಸಿದ್ದರು. ಕೃತ್ಯದಲ್ಲಿ ಪರಿಚಿತರ ಕೈವಾಡದ ಶಂಕಿಸಿದ ಪೊಲೀಸರು, ರೆಡ್ಡಿ ಅವರ ಸ್ನೇಹಿತರು, ಕೆಲಸಗಾರರು ಹಾಗೂ ಕುಟುಂಬ ಸದಸ್ಯರ ಬಗ್ಗೆ ಮಾಹಿತಿ ಕಲೆ ಹಾಕಿದರು. ಆಗ ಎರಡು ತಿಂಗಳ ಹಿಂದೆ ಕೆಲಸ ಕಳೆದುಕೊಂಡಿದ್ದ ಮಾಜಿ ಕಾರು ಚಾಲಕ ಜಗದೀಶ್‌ ಸುಳಿವು ಸಿಕ್ಕಿತು. ಆತನ ಮೊಬೈಲ್‌ ಕರೆಗಳನ್ನು ಪರಿಶೀಲಿಸಿದಾಗ ಕೃತ್ಯ ನಡೆದ ಸಮಯದಲ್ಲೇ ಆತ ಕೋರಮಂಗಲ ಸರಹದ್ದಿನಲ್ಲಿದ್ದ ಸಂಗತಿ ಗೊತ್ತಾಯಿತು. ಈ ಮಾಹಿತಿ ಆಧರಿಸಿ ಜಗದೀಶ್‌ನನ್ನು ಪೊಲೀಸರು ಬೆನ್ನಹತ್ತಿದ್ದಾರೆ. ಅಷ್ಟರಲ್ಲಿ ಕೃತ್ಯ ಎಸಗಿದ ಬಳಿಕ ಕುಣಿಗಲ್‌ ಹಾಗೂ ಮಾಗಡಿ ತಾಲೂಕುಗಳಲ್ಲಿ ಸುತ್ತಾಡಿ ಆರೋಪಿಗಳು ನಗರಕ್ಕೆ ಮರಳಿದ್ದರು. ಕೊನೆಗೆ ಮಾಗಡಿ ರಸ್ತೆಯ ಸುಮನಹಳ್ಳಿ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ.

Follow Us:
Download App:
  • android
  • ios