ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಹೊಸ ವರ್ಷದ ಮುನ್ನಾದಿನದಂದು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮಯೂರ ಬೇಕರಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯು ಪಕ್ಕದ ಅಂಗಡಿಗಳಿಗೂ ವ್ಯಾಪಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಾಶವಾಗಿದೆ.
ಚಾಮರಾಜನಗರ (ಡಿ.31): ಹೊಸ ವರ್ಷದ ಸಂಭ್ರಮಕ್ಕೆ ಇಡೀ ರಾಜ್ಯ ಸಜ್ಜಾಗುತ್ತಿರುವಾಗಲೇ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ದುರಂತವೊಂದು ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಭೀಕರ ಬೆಂಕಿ ಕಾಣಿಸಿಕೊಂಡು ವ್ಯಾಪಾರಸ್ಥರ ಬದುಕನ್ನೇ ಬೀದಿಗೆ ತಂದಿದೆ.
ಮಯೂರ ಬೇಕರಿಯಲ್ಲಿ ಅಗ್ನಿ ಅವಘಡ:
ಕೊಳ್ಳೇಗಾಲ ಪಟ್ಟಣದ ಮಯೂರ ಬೇಕರಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ಪಕ್ಕದ ಇತರ ಎರಡು ಅಂಗಡಿಗಳಿಗೂ ಆವರಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಬೇಕರಿಯಲ್ಲಿದ್ದ ಎಲ್ಲಾ ತಿಂಡಿ ತಿನಿಸುಗಳು, ಪೀಠೋಪಕರಣಗಳು ಸೇರಿದಂತೆ ಮಾರಾಟಕ್ಕೆ ಇಟ್ಟಿದ್ದ ಅಪಾರ ಪ್ರಮಾಣದ ಕಾಫಿ ಪುಡಿ ಮತ್ತು ಕಾಫಿ ಬೀಜಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಹೊಸ ವರ್ಷದ ಸಂಭ್ರಮ ಕಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್
ವರ್ಷದ ಕೊನೆಯ ದಿನವಾದ ಇಂದು ವ್ಯಾಪಾರ ಮುಗಿಸಿ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದ ಅಂಗಡಿ ಮಾಲೀಕರಿಗೆ ಈ ಅವಘಡ ದೊಡ್ಡ ಆಘಾತ ನೀಡಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಈ ಅಗ್ನಿ ಅವಘಡವು ಮಾಲೀಕರ ಕನಸುಗಳನ್ನು ಸುಟ್ಟು ಹಾಕಿದ್ದು, ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ.
ತಪ್ಪಿದ ಪ್ರಾಣಾಪಾಯ: ಸ್ಥಳಕ್ಕೆ ಅಗ್ನಿಶಾಮಕ ದಳ ದೌಡು
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿದ್ದಾರೆ. ಇದರಿಂದಾಗಿ ಬೆಂಕಿ ಮತ್ತಷ್ಟು ಅಕ್ಕಪಕ್ಕದ ಕಟ್ಟಡಗಳಿಗೆ ಹರಡುವುದು ತಪ್ಪಿದೆ. ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


