ಡ್ರಗ್ಸ್ ಮಾರಾಟ ಕೇಸ್‌ನಲ್ಲಿ ಸೆರೆ ಸಿಕ್ಕಿದ್ದ ಡಿಜೆ ಹ್ಯಾರಿಸ್‌ ನೀಡಿದ ಸುಳಿವು ಆಧರಿಸಿ ಆಂಧ್ರದ ಕಾಡಲ್ಲಿ ತಯಾರಾಗುತ್ತಿದ್ದ ಗಾಂಜಾ ಆಯಿಲ್‌ ಅನ್ನು ತಂದು  ಬಸ್‌ ನಿಲ್ದಾಣದಲ್ಲಿ ಅಲೆಮಾರಿಗಳಂತೆ ಬಂದು ಪೆಡ್ಲರ್‌ಗಳಿಗೆ ಪೂರೈಕೆ ಮಾಡುತ್ತಿದ್ದ ಇಬ್ಬರು ಮಹಿಳೆರು ಸೇರಿ ನಾಲ್ವರನ್ನು ಬಂಧಿಸಲಾಗಿದೆ.

ಬೆಂಗಳೂರು (ಜು.14): ದಶಕಗಳಿಂದ ಆಂಧ್ರಪ್ರದೇಶದ ದಟ್ಟಕಾನನ ಮಧ್ಯೆ ಗಾಂಜಾ ಎಣ್ಣೆ (ಹಾಶೀಶ್‌ ಆಯಿಲ್‌) ತಯಾರಿಸಿ ಬಳಿಕ ಅಲೆಮಾರಿಗಳ ಸೋಗಿನಲ್ಲಿ ಬೆಂಗಳೂರು ಸೇರಿ ದೇಶದ ಪ್ರಮುಖ ಮಹಾನಗರಗಳಿಗೆ ಪೂರೈಸುತ್ತಿದ್ದ ಡ್ರಗ್ಸ್ ಜಾಲದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಭರ್ಜರಿ ಕಾರ್ಯಾಚರಣೆ ನಡೆಸಿ ಸಿಸಿಬಿ ಬಂಧಿಸಿದೆ. ಇದುವರೆಗೆ ಡ್ರಗ್ಸ್ ಮಾರಾಟ ದಂಧೆಯಲ್ಲಿ ಪೆಡ್ಲರ್‌ಗಳನ್ನು ಮಾತ್ರ ಬೇಟೆಯಾಡಿದ್ದ ಸಿಸಿಬಿ, ಈ ಬಾರಿ ರಾಜಧಾನಿಗೆ ನೆರೆ ರಾಜ್ಯದಿಂದ ಡ್ರಗ್ಸ್ ಪೂರೈಸುತ್ತಿದ್ದ ಜಾಲವನ್ನೇ ಭೇದಿಸಿ ಗಮನ ಸೆಳೆದಿದೆ. ಆಂಧ್ರಪ್ರದೇಶದ ಶ್ರೀನಿವಾಸ ಅಲಿಯಾಸ್‌ ಸೀನು, ಸತ್ಯವತಿ, ಪ್ರಹ್ಲಾದ ಹಾಗೂ ಮಲ್ಲೇಶ್ವರಿ ಬಂಧಿತರಾಗಿದ್ದು, ಆರೋಪಿಗಳಿಂದ .4 ಕೋಟಿ ಮೌಲ್ಯದ ಹಾಶೀಶ್‌ ಆಯಿಲ್‌ ಹಾಗೂ 6 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ವಿವೇಕ ನಗರದಲ್ಲಿ ಡ್ರಗ್ಸ್ ಮಾರಾಟ ಯತ್ನಿಸಿದ್ದಾಗ ಡಿಜೆ ಜಿತಿನ್‌ ಜೂಡ ಹ್ಯಾರಿಸ್‌ನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಡ್ರಗ್ಸ್ ಪೂರೈಕೆ ಬಗ್ಗೆ ಆತ ನೀಡಿದ ಮಾಹಿತಿ ಮೇರೆಗೆ ಆಂಧ್ರ ಪ್ರದೇಶದಲ್ಲಿ ಸಿಸಿಬಿ ಡಿಸಿಪಿ ಬಿ.ಎಸ್‌.ಅಂಗಡಿ ಮಾರ್ಗದರ್ಶನದಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಎಸಿಪಿ ರಾಮಚಂದ್ರ ಹಾಗೂ ಅಶೋಕ್‌ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಜಂಟಿ ಆಯುಕ್ತ ರಮಣ ಗುಪ್ತಾ ತಿಳಿಸಿದ್ದಾರೆ.

ಅರಣ್ಯದಲ್ಲಿ ಗಾಂಜಾ ಬೇಸಾಯ! : ಆಂಧ್ರ ಪ್ರದೇಶದ ವಿಶಾಖಪಟ್ಟಣ ಜಿಲ್ಲೆ ಅರಕು ಹಾಗೂ ಸೆಂಥಿಪಲ್ಲಿ ಅರಣ್ಯ ಪ್ರದೇಶದ ಕುಗ್ರಾಮಗಳಲ್ಲಿ ಆರೋಪಿಗಳು ನೆಲೆಸಿದ್ದಾರೆ. ಎರಡು ದಶಕಗಳಿಂದ ಶ್ರೀನಿವಾಸ್‌ ವೃತ್ತಿಪರ ಡ್ರಗ್ಸ್ ಪೂರೈಕೆದಾರನಾಗಿದ್ದು, ಅರಣ್ಯದಲ್ಲಿ ಗಾಂಜಾ ಬೇಸಾಯ ನಡೆಸಿ ಗಾಂಜಾ ಹಾಗೂ ಹಾಶೀಶ್‌ ಆಯಿಲ್‌ ಸರಬರಾಜಿಗೆ ಆತ ಕುಖ್ಯಾತಿ ಪಡೆದಿದ್ದಾನೆ.

ಈ ದಂಧೆಗೆ ಪ್ರಹ್ಲಾದ್‌, ಸತ್ಯವತಿ ಹಾಗೂ ಮಲ್ಲೇಶ್ವರಿ ಸೇರಿದಂತೆ 10ಕ್ಕೂ ಹೆಚ್ಚಿನ ಜನರಿಗೆ ಹಣದಾಸೆ ತೋರಿಸಿ ಶ್ರೀನಿವಾಸ್‌ ಬಳಸಿಕೊಂಡಿದ್ದಾನೆ. ಬೆಂಗಳೂರು, ಕೊಚ್ಚಿನ್‌, ಚೆನ್ನೈ, ಹೈದರಾಬಾದ್‌ ಹಾಗೂ ಮುಂಬೈ ಸೇರಿದಂತೆ ದೇಶದ ಪ್ರಮುಖ ಮಹಾನಗರಗಳ ಡ್ರಗ್ಸ್ ಪೆಡ್ಲರ್‌ಗಳೊಂದಿಗೆ ಈ ತಂಡ ಸಂಪರ್ಕದಲ್ಲಿದೆ ಎಂದು ಜಂಟಿ ಆಯುಕ್ತ ರಮಣ ಗುಪ್ತ ವಿವರಿಸಿದ್ದಾರೆ.

 ಡ್ರಗ್ಸ್ ಖರೀದಿ ಸೋಗಲ್ಲಿ ಸಿಸಿಬಿ ಕಾರ್ಯಾಚರಣೆ: ಬೆಂಗಳೂರಿನ ಪಬ್‌ಗಳಲ್ಲಿ ಡಿಜೆ ಆಗಿದ್ದ ಜಿತಿನ್‌, ಹಣದಾಸೆಗೆ ಡ್ರಗ್ಸ್ ದಂಧೆ ಶುರು ಮಾಡಿದ್ದ. ಮೂರು ವರ್ಷಗಳ ಹಿಂದೆ ಆತನಿಗೆ ಶ್ರೀನಿವಾಸ್‌ ಗ್ಯಾಂಗ್‌ನ ಸಂಪರ್ಕ ಬೆಳೆದಿತ್ತು. ವಿಚಾರಣೆ ವೇಳೆ ತಾನು ಆಂಧ್ರ ಪ್ರದೇಶದ ನೆಲ್ಲೂರು ರೈಲ್ವೆ ನಿಲ್ದಾಣಕ್ಕೆ ತೆರಳಿ ಹಾಶೀಶ್‌ ಆಯಿಲ್‌ ಖರೀದಿಸುವುದಾಗಿ ಜಿತಿನ್‌ ಬಾಯ್ಬಿಟ್ಟ.

ಒಡಿಶಾದ ಮೂವರು ಸೇರಿ 8 ಮಂದಿ ಡ್ರಗ್ ಪೆಡ್ಲರ್‌ಗಳ ಬಂಧನ

ಈ ಮಾಹಿತಿ ತಿಳಿದ ಕೂಡಲೇ ಚುರುಕಾದ ಸಿಸಿಬಿ ಇನ್‌ಸ್ಪೆಕ್ಟರ್‌ ಬಿ.ಎಸ್‌.ಅಶೋಕ್‌ ಅವರು, ಕೊನೆಗೆ ಜಿತಿನ್‌ ಜತೆ ಡ್ರಗ್ಸ್ ಖರೀದಿದಾರರ ಸೋಗಿನಲ್ಲಿ ತೆರಳಿ ಪೂರೈಕೆದಾರರ ಸೆರೆ ಹಿಡಿಯಲು ಯೋಜಿಸಿದ್ದರು. ಅಂತೆಯೇ ನೆಲ್ಲೂರಿಗೆ ತೆರಳಿದ ಸಿಸಿಬಿ ತಂಡವು, ಎರಡು ದಿನ ಕಾದು ಜಿತಿನ್‌ ಭೇಟಿಗೆ ಬಂದಾಗ ಆರೋಪಿಗಳನ್ನು ಬಂಧಿಸಿ ಕರೆ ತಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾಡಿನ ಮಧ್ಯದಲ್ಲಿ ಡ್ರಗ್ಸ್ ತಯಾರಿ: ಆಂಧ್ರ ಪ್ರದೇಶದ ಅರಕು ಮತ್ತು ಸೆಂಥಿಪಲ್ಲಿ ಅರಣ್ಯ ಪ್ರದೇಶದಲ್ಲಿ ಪೊಲೀಸರು, ನಕ್ಸಲ್‌ ನಿಗ್ರಹ ಪಡೆ, ಅಬಕಾರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಕಣ್ತಪ್ಪಿಸಿ ರಹಸ್ಯವಾಗಿ ಹತ್ತಾರು ಎಕರೆ ಪ್ರದೇಶದಲ್ಲಿ ಶ್ರೀನಿವಾಸ್‌ ತಂಡ ಗಾಂಜಾ ಕೃಷಿ ನಡೆಸುತ್ತಿತ್ತು. ಕಾಡಿನೊಳಗೆ 20-30 ಕಿ.ಮೀ. ಕಾಲ್ನಡಿಗೆಯಲ್ಲಿ ಬೆಟ್ಟಹತ್ತಿ ಅಲ್ಲಿ ಗಾಂಜಾವನ್ನು ಕುದಿಸಿ ಆರೋಪಿಗಳು ಹಾಶೀಶ್‌ ಆಯಿಲ್‌ ತಯಾರಿಸುತ್ತಿದ್ದರು. ಬಳಿಕ ಅದನ್ನು ಡಬ್ಬಿಗಳಲ್ಲಿ ತುಂಬಿ ಬಳಿಕ ಮತ್ತೆ ಅರಣ್ಯ ಮಾರ್ಗವಾಗಿಯೇ ಚೆಕ್‌ ಪೋಸ್ಟ್‌ಗಳನ್ನು ದಾಟಿ ನಲ್ಲೂರು ರೈಲ್ವೆ ನಿಲ್ದಾಣಕ್ಕೆ ಸಾಗಿಸುತ್ತಿದ್ದರು. ಅಲ್ಲಿಂದ ಬೇರೆಡೆ ಸಾಗಿಸಲು ಮಹಿಳೆಯರನ್ನು ಬಳಸಿಕೊಂಡು ಪೆಡ್ಲರ್‌ಗಳಿಗೆ ತಲುಪಿಸುತ್ತಿದ್ದರು. ಆಂಧ್ರದ ನೆಲ್ಲೂರು, ಗುಂಟೂರು, ವಿಜಯವಾಡ ಮತ್ತು ಪುಟ್ಟವರ್ತಿ ರೈಲ್ವೆ ನಿಲ್ದಾಣಗಳು ಹಾಗೂ ಹೈದರಾಬಾದ್‌ ಬಸ್‌ ನಿಲ್ದಾಣ ಬಳಿಗೆ ಪೆಡ್ಲರ್‌ಗಳನ್ನು ಕರೆಸಿಕೊಂಡು ಹಣ ಪಡೆದು ಡ್ರಗ್ಸ್ ಪೂರೈಸುತ್ತಿದ್ದರು ಎಂದು ಸಿಸಿಬಿ ಹೇಳಿದೆ.

ದಿನಸಿ, ಹಣ್ಣು ಬ್ಯಾಗಲ್ಲಿ ಗಾಂಜಾ ಸಾಗಿಸಿ ಪೂರೈಕೆ: ತಮ್ಮ ಪೆಡ್ಲರ್‌ಗಳಿಗೆ ಗಾಂಜಾ ಪೂರೈಸಲು ಮಹಿಳೆಯನ್ನು ಶ್ರೀನಿವಾಸ್‌ ಬಳಸುತ್ತಿದ್ದ. ಪೆಡ್ಲರ್‌ಗಳಿಗೆ ಹಣ್ಣು-ತರಕಾರಿ, ದಿನಸಿ ಬ್ಯಾಗ್‌ಗಳಲ್ಲಿ ಡ್ರಗ್ಸ್ ಅಡಗಿಸಿ ಮಹಿಳೆಯರ ಮೂಲಕ ಆತ ತಲುಪಿಸುತ್ತಿದ್ದ. ಕಾಡಿನಲ್ಲಿ ತಯಾರಿಸಿದ ಗಾಂಜಾ ಆಯಿಲ್‌ಅನ್ನು ನೆಲ್ಲೂರು ರೈಲ್ವೆ ನಿಲ್ದಾಣ ಸಮೀಪ ಜೋಪಡಿಯಲ್ಲಿ ಸಂಗ್ರಹಿಸಿದ್ದರು. ತಮ್ಮ ಇರುವಿಕೆ ಪತ್ತೆಯಾಗುತ್ತದೆ ಎಂಬ ಆತಂಕದಿಂದ ಮೊಬೈಲ್‌ ಹಾಗೂ ಗುರುತಿನ ಚೀಟಿಯನ್ನು ಆರೋಪಿಗಳು ಬಳಸುತ್ತಿರಲಿಲ್ಲ. ನಿರ್ದಿಷ್ಟಪ್ರದೇಶಗಳಲ್ಲಿ ನೆಲೆ ನಿಲ್ಲದೆ ಅಲೆಮಾರಿಗಳಂತೆ ಜೀವನ ಸಾಗಿಸುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಅಮಾವಸ್ಯೆ, ಪೌರ್ಣಮಿ ಡೀಲ್‌ : ಪೆಡ್ಲರ್‌ಗಳಿಗೆ ಅಮಾವಸ್ಯೆ ಮತ್ತು ಪೌರ್ಣಮಿ ದಿನ ನೆಲ್ಲೂರು ರೈಲ್ವೆ ನಿಲ್ದಾಣ ಸೇರಿ ಕೆಲ ನಿರ್ದಿಷ್ಟಸ್ಥಳಗಳಿಗೆ ಬರುವಂತೆ ಶ್ರೀನಿವಾಸ್‌ ಹೇಳುತ್ತಿದ್ದ. ಈ ದಿನ ಹೊರತಾಗಿ ಆತ ಡ್ರಗ್ಸ್ ನೀಡುತ್ತಿರಲಿಲ್ಲ. ಮೊಬೈಲ್‌ ಆದಿಯಾಗಿ ಯಾವುದೇ ಸಂವಹನ ಕೂಡ ಆತ ಮಾಡುತ್ತಿರಲಿಲ್ಲ. ನಗದು ರೂಪದಲ್ಲೇ ವ್ಯವಹಾರ ನಡೆಯುತ್ತಿತು ಎಂದು ಸಿಸಿಬಿ ತಿಳಿಸಿದೆ.