ಗೋ ಸಾಗಾಟಗಾರನ ಕೊಲೆ ಆರೋಪ, ತಲೆ ಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಮತ್ತು ಸಹಚರರು ರಾಜಸ್ಥಾನದಲ್ಲಿ ಅರೆಸ್ಟ್
ಜಾನುವಾರುಗಳನ್ನು ಸಾಗಿಸುವ ವೇಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾತನೂರು ಠಾಣೆ ಪೊಲೀಸರಿಂದ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಸೇರಿ ಐವರನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ.
ರಾಮನಗರ (ಏ.5): ಜಾನುವಾರುಗಳನ್ನು ಸಾಗಿಸುವ ವೇಳೆ ಇದ್ರೀಸ್ ಪಾಷ ಎಂಬ ವ್ಯಕ್ತಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪದಲ್ಲಿ ಸಾತನೂರು ಠಾಣೆ ಪೊಲೀಸರಿಂದ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಸೇರಿ ಐವರನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ. ಮಾರ್ಚ್ 31 ರಂದು ಕ್ಯಾಂಟರ್ ತಡೆದು ಜಾನುವಾರು ರಕ್ಷಣೆ ಮಾಡಿದ್ದ ಪುನೀತ್ ಮತ್ತು ತಂಡದವರು. ಆದರೆ ಕ್ಯಾಂಟರ್ ನಲ್ಲಿ ಇದ್ದ ವ್ಯಕ್ತಿ ಅನುಮಾನಸ್ಪದವಾಗಿ ಸಾವನ್ನಪ್ಪಿದ. ಏಪ್ರಿಲ್ 1 ರಂದು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರಿನಲ್ಲಿ ಮೃತದೇಹ ಪತ್ತೆಯಾಗಿತ್ತು. ಮಂಡ್ಯದ ಗುತ್ತಲು ನಿವಾಸಿ ಇದ್ರಿಸ್ ಪಾಷ(35) ಮೃತದೇಹವಾಗಿತ್ತು. ಈ ಸಂಬಂಧ ಮೃತನ ಸಹೋದರ ಸಾತನೂರು ಠಾಣೆಗೆ ದೂರು ನೀಡಿದ್ದ. ಐಪಿಸಿ ಸೆಕ್ಷನ್ 341, 504, 506, 324, 302, 34 ರ ಅಡಿ ಕೇಸ್ ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆಯೇ ಕಳೆದ ಐದು ದಿನದಿಂದ ಪುನೀತ್ ಮತ್ತು ಆತನ ತಂಡ ತಲೆ ಮರೆಸಿಕೊಂಡಿತ್ತು. ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿತ್ತು. ಇದೀಗ ರಾಜಸ್ಥಾನದಲ್ಲಿ ಕೊನೆಗೂ ಲಾಕ್ ಆಗಿದ್ದಾರೆ.
ಪುನೀತ್ ಕೆರೆಹಳ್ಳಿ ವಿರುದ್ಧ ಈಗಾಗಲೇ 11ಕ್ಕೂ ಹೆಚ್ಚು ಪ್ರಕರಣ: ಗೋ ಸಾಗಾಣೆ ವೇಳೆ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಮಾ.31ರಂದು ಈ ಪ್ರಕರಣ ನಡೆದಿತ್ತು. ಪ್ರಕರಣ ಸಂಬಂಧ ಮೂರು ಎಫ್ಐಆರ್ ದಾಖಲಾಗಿದೆ. ಪುನೀತ್ ಕೆರೆಹಳ್ಳಿ ಹಾಗೂ ನಾಲ್ಕು ಸಹಚರರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿತ್ತು. ರಾಜಸ್ಥಾನದ ಬಾರ್ಡರ್ ಜಿಲ್ಲೆಯಾದ ಬನಸ್ವಾರದಲ್ಲಿ ಐವರನ್ನ ಬಂಧಿಸಲಾಗಿದೆ. ಗುಜರಾತ್ ಹಾಗೂ ರಾಜಸ್ಥಾನ ಪೊಲೀಸರ ಸಹಾಯದಿಂದ ಬಂಧನವಾಗಿದೆ. ಪುನೀತ್ ಕೆರೆಹಳ್ಳಿ(A1), ಗೋಪಿ(A2), ಪವನ್ ಕುಮಾರ್(A3),ಪಿಲ್ಲಿಂಗ್ ಅಂಬಿಗಾರ್(A4), ಸುರೇಶ್ ಕುಮಾರ್(A5) ಬಂಧಿತ ಆರೋಪಿಗಳು. ಇಂದು ಮಧ್ಯಾಹ್ನ ವೇಳೆಗೆ ಬಂಧನವಾಗಿದೆ. ನಾಳೆ ರಾಜಸ್ಥಾನ ಕೋರ್ಟ್ ನಿಂದ ಅನುಮತಿ ಪಡೆದು ರಾಮನಗರಕ್ಕೆ ಕರೆತರುತ್ತೇವೆ. ಪುನೀತ್ ಕೆರೆಹಳ್ಳಿ ವಿರುದ್ಧ ಈಗಾಗಲೇ 11ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಎಲ್ಲಾ ಪ್ರಕರಣಗಖ ಕುರಿತು ತನಿಖೆ ನಡೆಯುತ್ತಿದೆ. ಕಳೆದ 5ದಿನಗಳಿಂದ ಪೋನ್ ಸ್ವೀಚ್ ಆಫ್ ಮಾಡಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ಮೊಬೈಲ್ ಲೊಕೇಷನ್ ಆಧರಿಸಿ ಆರೋಪಿಗಳ ಬಂಧನವಾಗಿದೆ ಎಂದಿದ್ದಾರೆ.
2 ಲಕ್ಷ ಹಣಕ್ಕೆ ಬೇಡಿಕೆ ಆರೋಪ: ಪುನೀತ್ ಕೆರೆಹಳ್ಳಿ, ಆತನ ಸಹಚರರ ವಿರುದ್ಧ ಎಫ್‌ಐಆರ್
ಕುಟುಂಬಸ್ಥರಿಂದ ಕೊಲೆ ಆರೋಪ:
ಮಳವಳ್ಳಿಯಿಂದ ಕಳೆದ ಶುಕ್ರವಾರ ರಾತ್ರಿ ಪಕ್ಕದ ತಮಿಳುನಾಡಿನಲ್ಲಿ ನಡೆಯುತ್ತಿದ್ದ ದನಗಳ ಸಂತೆಯಲ್ಲಿ 16 ಹಸುಗಳ ಮಾರಾಟಕ್ಕೆ ಇರ್ಗಿಷ್ ಪಾಷಾ ತನ್ನ ಸ್ನೇಹಿತನೊಂದಿಗೆ ವಾಹನದಲ್ಲಿ ತೆರಳುತ್ತಿದ್ದ ವೇಳೆ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಹಾಗೂ ಆತನ ಸಂಗಡಿಗರು ವಾಹನವನ್ನು ಅಡ್ಡಗಟ್ಟಿ ಇರ್ಗೀಷ್ ಪಾಷಾ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸಾಕಲು ದನಗಳನ್ನ ಕೊಂಡೊಯ್ಯುತ್ತಿದ್ದ ರೈತನ ಹತ್ಯೆ: 25 ಲಕ್ಷ ರೂ. ಪರಿಹಾರಕ್ಕೆ ಡಿಕೆಶಿ ಆಗ್ರಹ
ಡಿಕೆಶಿ ಆಕ್ರೋಶ: ಹಸುಗಳನ್ನು ಸಾಕುವುದಕ್ಕೆಂದು ರಶೀದಿ ಸಮೇತವಾಗಿ ಲಾರಿಗಳಲ್ಲಿ ಹಸುಗಳನ್ನು ತುಂಬಿಕೊಂಡು ಹೋಗುವ ರೈತನನ್ನು ಕನಕಪುರದಲ್ಲಿ ಹತ್ಯೆ ಮಾಡಲಾಗಿದೆ. ಸರ್ಕಾರದಿಂದ ಕೂಡಲೇ 25 ಲಕ್ಷ ರೂ. ಪರಿಹಾರ ಕೊಟ್ಟು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದರು. ಕನಕಪುರದಲ್ಲಿ ಹತ್ಯೆಯಾಗಿದೆ. ಪೊಲೀಸರ ತನಿಖೆಯ ಮೇಲೆ ಪರಿಣಾಮ ಬೀರಬಹುದು ಎಂದು ನಾನು ಈ ಬಗ್ಗೆ ಯಾವುದೇ ಹೇಳಿಕೆ ಕೊಟ್ಟಿರಲಿಲ್ಲ. ಆದರೆ, ಕೆಲವರು ರಾಜ್ಯದಲ್ಲಿ ಮಾರಲ್ ಪೊಲೀಸಿಂಗ್‌ಗೆ ಪ್ರೋತ್ಸಾಹ ಮಾಡುತ್ತಿದ್ದಾರೆ. ಇದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರು.