ಭೂ ವಿವಾದ ಸಂಬಂಧ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕುಳಿತು ಉದ್ಯಮಿಗೆ ಬೆದರಿಸಿ ಹಣ ವಸೂಲಿಗೆ ಯತ್ನಿಸಿದ್ದ ರೌಡಿ ವಿರುದ್ಧ ತನಿಖೆ ನಡೆಸದೆ ನಿರ್ಲಕ್ಷ್ಯತನ ತೋರಿದ ಆರೋಪದ ಕಲಾಸಿಪಾಳ್ಯ ಠಾಣೆ ಇನ್‌ಸ್ಪೆಕ್ಟರ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಸೇರಿ ಇಬ್ಬರು ಪೊಲೀಸ್‌ ಅಧಿಕಾರಿಗಳ ತಲೆದಂಡವಾಗಿದೆ. 

ಬೆಂಗಳೂರು (ಜು.08): ಭೂ ವಿವಾದ ಸಂಬಂಧ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕುಳಿತು ಉದ್ಯಮಿಗೆ ಬೆದರಿಸಿ ಹಣ ವಸೂಲಿಗೆ ಯತ್ನಿಸಿದ್ದ ರೌಡಿ ವಿರುದ್ಧ ತನಿಖೆ ನಡೆಸದೆ ನಿರ್ಲಕ್ಷ್ಯತನ ತೋರಿದ ಆರೋಪದ ಕಲಾಸಿಪಾಳ್ಯ ಠಾಣೆ ಇನ್‌ಸ್ಪೆಕ್ಟರ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಸೇರಿ ಇಬ್ಬರು ಪೊಲೀಸ್‌ ಅಧಿಕಾರಿಗಳ ತಲೆದಂಡವಾಗಿದೆ. ಕಲಾಸಿಪಾಳ್ಯ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಎಂ.ಎಲ್‌.ಚೇತನ್‌ ಕುಮಾರ್‌ ಹಾಗೂ ಪ್ರಸನ್ನ ಕುಮಾರ್‌ ಅಮಾನತುಗೊಂಡಿದ್ದು, ಶಿವಾಜಿ ನಗರದ ಕುಖ್ಯಾತ ರೌಡಿ ಬಾಂಬೆ ಸಲೀಂ ಹಾಗೂ ಆತನ ಸಹಚರರ ವಿರುದ್ಧ ಕ್ರಮ ಜರುಗಿಸದೆ ಉದಾಸೀನತೆ ತೋರಿದ ಆರೋಪಕ್ಕೆ ಪೊಲೀಸರು ತುತ್ತಾಗಿದ್ದಾರೆ.

ಜೈಲಿನಿಂದ ರೌಡಿ ಬೆದರಿಕೆ ಕರೆ ಸಂಬಂಧ ಕಾರಾಗೃಹದ ಡಿಜಿಪಿ ಅಲೋಕ್‌ ಮೋಹನ್‌ ಅವರಿಗೆ ರಕ್ಷಣೆ ಕೋರಿ ಉದ್ಯಮಿ ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಪಿ ಅವರು, ಈ ಬಗ್ಗೆ ಮುಂದಿನ ಕ್ರಮಕ್ಕೆ ಸೂಚಿಸಿ ನಗರ ಪೊಲೀಸ್‌ ಆಯುಕ್ತರಿಗೆ ದೂರು ರವಾನಿಸಿದರು. ಈ ಬಗ್ಗೆ ಸಿಸಿಬಿ ತನಿಖೆಗೆ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಆದೇಶಿಸಿದ್ದರು. ಸಿಸಿಬಿ ತನಿಖೆ ವೇಳೆ ಹಣಕ್ಕಾಗಿ ಉದ್ಯಮಿಗೆ ರೌಡಿ ಕರೆ ಮಾಡಿರುವ ಸಂಗತಿ ಗೊತ್ತಿದ್ದರೂ ಪಿಐ ಹಾಗೂ ಪಿಎಸ್‌ಐ ತನಿಖೆ ನಡೆಸದೆ ಕರ್ತವ್ಯಲೋಪ ಎಸಗಿರುವುದು ಬಯಲಾಯಿತು. ಕೊನೆಗೆ ಸಿಸಿಬಿ ವರದಿ ಆಧರಿಸಿ ಆಯುಕ್ತರು ಅವರು, ಇನ್‌ಸ್ಪೆಕ್ಟರ್‌ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಎಸಿಬಿ ವಿರುದ್ಧ ಹೈಕೋರ್ಟ್ ಮತ್ತೆ ಹಿಗ್ಗಾಮುಗ್ಗಾ ತರಾಟೆ

ಏನಿದು ಬೆದರಿಕೆ ಕರೆ?: ತನ್ನ ಕುಟುಂಬದ ಜತೆ ಎಂಎಲ್‌ಎಚ್‌ ಸಿದ್ದಯ್ಯ ರಸ್ತೆ 2ನೇ ಕ್ರಾಸ್‌ನಲ್ಲಿ ನೆಲೆಸಿರುವ ಮುಯೀಜ್‌ ಅಹಮದ್‌ ಅವರು, ರಿಯಲ್‌ ಎಸ್ಟೇಟ್‌ ಸೇರಿದಂತೆ ಇತರೆ ಉದ್ಯಮದಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಶಿವಾಜಿ ನಗರದ ಆಸ್ತಿ ವಿಚಾರವಾಗಿ ಅಹಮದ್‌ ಹಾಗೂ ರಿಯಾಜ್‌ ಎಂಬಾತ ನಡುವೆ ವಿವಾದ ಉಂಟಾಗಿತ್ತು. ಆಗ ಭೂ ವ್ಯಾಜ್ಯ ಬಗೆಹರಿಸುವಂತೆ ಶಿವಾಜಿ ನಗರದ ಕುಖ್ಯಾತ ರೌಡಿ ಸಲೀಂ ಅಲಿಯಾಸ್‌ ಬಾಂಬೆ ಸಲೀಂ ಸಹಚರರನ್ನು ರಿಯಾಜ್‌ ಸಂಪರ್ಕಿಸಿದ್ದ.

ಅಂತೆಯೇ ಜೂ.5ರಂದು ಅಹಮದ್‌ ಮನೆಗೆ ತೆರಳಿದ ಸಲೀಂ ಸಹಚರರಾದ ಜಾಫರ್‌ ಮತ್ತು ಅಲಿ, ಶಿವಾಜಿ ನಗರದ ಭೂ ವಿವಾದವನ್ನು ರಿಯಾಜ್‌ ಪರವಾಗಿ ಬಗೆಹರಿಸಿಕೊಳ್ಳುವಂತೆ ತಾಕೀತು ಮಾಡಿದ್ದರು. ಆಗ ಜೈಲಿನಿಂದಲೇ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ಬಾಂಬೆ ಸಲೀಂ, ನೀನು .8 ಲಕ್ಷ ಕೊಡದೆ ಹೋದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಇದಾದ ನಂತರ ಹಣಕ್ಕಾಗಿ ಎರಡ್ಮೂರು ಬಾರಿ ಅಹಮದ್‌ನನ್ನು ಅಡ್ಡಗಟ್ಟಿಸಲೀಂ ಸಹಚರರು ಹೆದರಿಸಿದ್ದರು. ಈ ಬೆದರಿಕೆ ಹಿನ್ನೆಲೆಯಲ್ಲಿ ಭಯಗೊಂಡ ಅಹಮದ್‌, ಕೊನೆಗೆ ಕಲಾಸಿಪಾಳ್ಯ ಠಾಣೆ ಇನ್‌ಸ್ಪೆಕ್ಟರ್‌ ಚೇತನ್‌ ಕುಮಾರ್‌ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದರು.

ಆದರೆ ಈ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸದೆ ಇನ್‌ಸ್ಪೆಕ್ಟರ್‌, ಗಂಭೀರವಲ್ಲದ ಪ್ರಕರಣ (ಎನ್‌ಸಿಆರ್‌) ಎಂದು ಪರಿಗಣಿಸಿದರು. ಇದಾದ ಬಳಿಕ ಮತ್ತೆ ಅಹಮದ್‌ಗೆ ಜೈಲಿನಿಂದ ಜೀವ ಬೆದರಿಕೆ ಕರೆಗಳು ಬರುತ್ತಿದ್ದವು. ಇದರಿಂದ ಮತ್ತಷ್ಟುಆತಂಕಗೊಂಡ ಅವರು, ಕೊನೆಗೆ ಕಾರಾಗೃಹ ಡಿಜಿಪಿ ಅಲೋಕ್‌ ಮೋಹನ್‌ ಅವರಿಗೆ ದೂರು ಸಲ್ಲಿಸಿದರು. ಆನಂತರ ಬೆಂಗಳೂರು ಆಯುಕ್ತರಿಗೆ ದೂರು ರವಾನಿಸಿ ಮುಂದಿನ ಕ್ರಮಕ್ಕೆ ಡಿಜಿಪಿ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್‌ ಖದೀಮನ ಬಂಧನ

ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಸಿಸಿಬಿ, ಕಲಾಸಿಪಾಳ್ಯ ಠಾಣೆಯಲ್ಲಿ ಅಹಮದ್‌ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ರೌಡಿ ಬಾಂಬೆ ಸಲೀಂ ಸಹಚರರಾದ ಅಬ್ದುಲ್‌ ಜಾಫರ್‌, ಶೂಟರ್‌ ಖದೀಮ್‌, ಇಮ್ರಾನ್‌, ಬಾಂಬೆ ರಿಯಾಜ್‌, ಖದೀರ್‌ ಮತ್ತು ಅಲಿನನ್ನು ಬಂಧಿಸಿದರು. ಜೈಲಿನಲ್ಲಿದ್ದ ಸಲೀಂನನ್ನು ವಾರೆಂಟ್‌ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇನ್ನೊಂದೆಡೆ ಕರ್ತವ್ಯಲೋಪದ ಬಗ್ಗೆ ಇನ್‌ಸ್ಪೆಕ್ಟರ್‌ ಹಾಗೂ ಪಿಎಸ್‌ಐ ವಿರುದ್ಧ ಆಯುಕ್ತರಿಗೆ ಸಿಸಿಬಿ ಪ್ರತ್ಯೇಕ ವರದಿ ಸಲ್ಲಿಸಿತು ಎಂದು ಅಧಿಕಾರಿಗಳು ತಿಳಿಸಿದರು.