PSI Scam: ಪ್ಲಾಟೂ ಹೋಯ್ತು, ಪೋಸ್ಟೂ ಹೋಯ್ತು, ಅಪ್ಪ ಮಗ ಜೈಲು ಪಾಲಾಗಬೇಕಾಯ್ತು

* ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ತನಿಖೆ ಚುರುಕು
* ಪ್ಲಾಟೂ ಹೋಯ್ತು, ಪೋಸ್ಟೂ ಹೋಯ್ತು, ಅಪ್ಪ ಮಗ ಜೈಲು ಪಾಲಾಗಬೇಕಾಯ್ತು
* ಇದು ಬಲೆ ಹೆಣೆದು ಬಲಿಯಾದವರ ಕಥೆ

Kalaburagi Police Arrests Son And father In PSI Scam Case rbj

ವರದಿ: ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್ ಕಲಬುರಗಿ

ಕಲಬುರಗಿ, (ಮೇ.3):
  ಮಗ ಪಿ.ಎಸ್.ಐ ಆಗಲಿ ಎಂದು ಆ ತಂದೆ ಇದ್ದ ಪ್ಲಾಟ್ ಮಾರಿ 50 ಲಕ್ಷ ರೂಪಾಯಿ ಕೊಟ್ಟಿದ್ದ. ಗೋಲ್ ಮಾಲ್ ಹೊರಬಂದು ಇದೀಗ ಪ್ಲಾಟೂ ಹೋಯ್ತು, ಪೋಸ್ಟೂ ಹೋಯ್ತು ಎನ್ನುವಂತಾಗಿದೆ. ನೌಕರಿಗಾಗಿ ಅಕ್ರಮದ ದಾರಿ ಹಿಡಿದವರ ಕಣ್ಣಿರ ಕಥೆ ಇಲ್ಲಿದೆ ನೋಡಿ. 

ಪಿ.ಎಸ್.ಐ ನೌಕರಿಗಾಗಿ ಹಲವರು ಹಲವು ರೀತಿಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಮರು ಪರೀಕ್ಷೆಯ ಕಾರಣ, ನಿಯತ್ತಾಗಿ ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳು ಒಂದೆಡೆ ಕಣ್ಣೀರು ಸುರಿಸುತ್ತಿದ್ದಾರೆ. ಇನ್ನೊಂದೆಡೆ ಹಣ ಕೊಟ್ಟು ಆಯ್ಕೆಯದವರು ಹಣವೂ ಹೋಯ್ತು ನೌಕರಿಯೂ ಹೋಯ್ತು ಅಂತ ಕಣ್ಣಿರು ಸುರಿಸುತ್ತಿದ್ದಾರೆ. ಅಂತವರ ಸಾಲಿನಲ್ಲಿ ಕಲಬುರಗಿಯ ತಂದೆ-ಮಗನ ಕಣ್ಣೀರ ಕಥೆ ಇಲ್ಲಿದೆ ಓದಿ.

ನನ್ನ ಮಗ ಒಳ್ಳೆ ನೌಕರಿಯಲ್ಲಿರಬೇಕು ಎಂದು ಎಲ್ಲಾ ಅಪ್ಪಾ-ಅಮ್ಮ ಬಯಸೋದು ಸಾಮಾನ್ಯವೇ. ಆದ್ರೆ ಅದಕ್ಕಾಗಿ ಮಗನಿಗೆ  ಓದಲು ಉತ್ತಮ ವಾತಾವರಣ ಕಲ್ಪಿಸುವುದು ಬಿಟ್ಟು ಅಡ್ಡ ದಾರಿ ಹಿಡಿದು ಹೋದ್ರೆ ಏನಾಗುತ್ತೇ ಎನ್ನುವುದಕ್ಕೆ ಈ ತಂದೆ-ಮಗನ ಕಣ್ಣೀರ ಕಥೆ ಜೀವಂತ ಸಾಕ್ಷಿ. 

PSI Recruitment Scam: ಕಲಬುರಗಿ ಆಯ್ತು, ಯಾದಗಿರಿಯಲ್ಲೂ ಅಕ್ರಮ ನೇಮಕ..?

ಅಂದ ಹಾಗೆ ಈತನ ಹೆಸರು ಪ್ರಭು. ಕಲಬುರಗಿ ನಗರದ ರಾಜಾಪೂರ ಬಡಾವಣೆಯ ನಿವಾಸಿ. ಈತನ ತಂದೆಯ ಹೆಸರು ಶರಣಪ್ಪ. ಕಟ್ಟಡ ಸಾಮಗ್ರಿ ಪೂರೈಕೆದಾರ. ಮಧ್ಯಮ ವರ್ಗದ ಕುಟುಂಬ. ಇವರ ಕುಟುಂಬಕ್ಕೆ ಆಪ್ತರಾದ ಚಂದ್ರಕಾಂತ ಕುಲ್ಕರ್ಣಿ ಎನ್ನುವ ವ್ಯಕ್ತಿಯೊಬ್ಬ ಐವತ್ತು ಲಕ್ಷ ಕೊಟ್ರೆ ನಿನ್ನ ಮಗನ್ನ ಪಿ.ಎಸ್.ಐ ಮಾಡಬಹುದು ಎಂದು ಸಲಹೆ ಕೊಡ್ತಾನೆ. ಆಗಿನಿಂದ ಮಗನನ್ನು ಪಿ.ಎಸ್.ಐ ಮಾಡುವ ಕನಸ್ಸು ಹೊತ್ತ ತಂದೆ ಶರಣಪ್ಪ, ಇದಕ್ಕಾಗಿ ರಾಜಾಪೂರ ಬಡಾವಣೆಯಲ್ಲಿದ್ದ ತನ್ನ ಖಾಲಿ ನಿವೇಶನವನ್ನು 35 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಾನೆ. 

ಅದರಂತೆ ಅಕ್ರಮವಾಗಿ ನೇಮಕಾತಿ ಮಾಡಿಸಲು ಚಂದ್ರಕಾಂತ ಕುಲ್ಕರ್ಣಿ ಮೂಲಕ ಆರ್.ಡಿ  ಪಾಟೀಲ್ ಜೊತೆ ಡೀಲ್ ಮಾಡಿಕೊಳ್ಖುತ್ತಾನೆ. ಅಷ್ಟೇ ಅಲ್ಲ ಲಿಖಿತ ಪರೀಕ್ಷೆಗೂ ಮುನ್ನ 30 ಲಕ್ಷ ಅಡ್ವಾನ್ಸ್ ಕೊಡ್ತಾನೆ. ಇನ್ನು ಪರೀಕ್ಷೆ ಮುಗಿದು ಪಾಸಾಗಿ ನೇಮಕಾತಿ ಪಟ್ಟಿಯಲ್ಲಿ ಹೆಸರು ಬಂದ ಬಳಿ ಉಳಿದ 20 ಲಕ್ಷ ಕೊಡಬೇಕು ಎನ್ನುವ ಕಮಿಟಮೆಂಟ್ ಇರುತ್ತೆ. 

ಎಲ್ಲವೂ ಅವರು ಅಂದುಕೊಂಡಂತೆ ಪರೀಕ್ಷೆಯಲ್ಲಿ ಬ್ಲ್ಯೂಟೂತ್ ಡಿವೈಸ್ ಮೂಲಕ ಅಕ್ರಮವಾಗಿ ಪರೀಕ್ಷೆ ಬರೆದು ಪ್ರಭು ಪಾಸಾಗ್ತಾನೆ. ನೇಮಕಾತಿ ಪಟ್ಟಿಯಲ್ಲಿ ಹೆಸರೂ ಬರುತ್ತೆ. ಉಳಿದ 20 ಲಕ್ಷ ಕೊಡಲು ತೀವ್ರ ಪ್ರಯಾಸ ಪಟ್ಟ ಈ ಕುಟುಂಬ ತಾವು ವಾಸವಿದ್ದ ಪಿತ್ರಾರ್ಜಿತ ಮನೆಯನ್ನು ಅಡವಿಟ್ಟು 20 ಲಕ್ಷ ರೂ. ಸಾಲ ಮಾಡಿ ಆರ್.ಡಿ ಪಾಟೀಲ್ ಟೀಂ ಗೆ ಕೊಡ್ತಾರೆ. ಅಂತೂ ಮಗ ಪಿ.ಎಸ್.ಐ ಆದ ಅಂತ ಖುಷಿಯಲ್ಲಿರುವಾಗಲೇ ಇತ್ತ ಈ ಗೋಲ್ ಮಾಲ್ ಬೆಳಕಿಗೆ ಬಂದು ಮರು ಪರೀಕ್ಷೆಗೆ ಆದೇಶ ನೀಡಿದ್ದು ಈ ತಂದೆ ಮಕ್ಕಳಿಗೆ ಬರಸಿಡಿಲು ಬಡಿದಂತಾಗುತ್ತದೆ. 

ಗಾಯದ ಮೇಲೆ ಬರೆ
ಮೊದಲೇ ಪ್ಲಾಟ್ ಮತ್ತು ನೌಕರಿ ಎರಡೂ ಕಳೆದುಕೊಂಡು ಕಂಗಾಲಾಗಿ ಕುಳಿತಿದ್ದ ಕುಟುಂಬಕ್ಕೆ ಸಿಐಡಿ ತನಿಖೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪಿ.ಎಸ್.ಐ ನೇಮಕಾತಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಟೀಂ ಗೆ ಕಲಬುರಗಿಯ ಎಂ.ಎಸ್ ಇರಾನಿ  ಕಾಲೇಜಿನಲ್ಲೂ ಅಕ್ರಮ ನಡೆದಿದ್ದು ಗೊತ್ತಾಗುತ್ತದೆ. ತನಿಖೆ ತೀವ್ರಗೊಳಿಸಿದಾಗ, ಈ ಪ್ರಭು ಎನ್ನುವ ಅಭ್ಯರ್ಥಿಯ ಆಯ್ಕೆಯೇ ಅಕ್ರಮ ಎನ್ನುವುದು ಬೆಳಕಿಗೆ ಬರುತ್ತದೆ. 

ಸಿಐಡಿ ದೂರು
ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಐಡಿ ಡಿವೈಎಸ್ಪಿ ಪ್ರಕಾಶ ರಾಠೋಡ್, ಎಂ.ಎಸ್  ಇರಾನಿ ಕಾಲೇಜಿನಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.‌

ತಂದೆ - ಮಗ- ಅಕೌಂಟೆಂಟ್ ಅರೆಸ್ಟ್
ದೂರು ದಾಖಲಿಸಿಕೊಂಡ ಕಲಬುರಗಿಯ ಸ್ಟೇಷನ್ ಬಜಾರ್ ಠಾಣಾ ಪೊಲೀಸರು, ನೇಮಕಾತಿ ಅಕ್ರಮದಲ್ಲಿ ಶಾಮೀಲಾದ ಅಭ್ಯರ್ಥಿ ಪ್ರಭು ಹಾಗೂ ಹಣ ಕೊಟ್ಟ ಪ್ರಭುನ ತಂದೆ ಶರಣಪ್ಪ ಮತ್ತು ಆರ್.ಡಿ ಪಾಟೀಲ್ ಜೊತೆ ಡೀಲ್ ನಲ್ಲಿ ಮಧ್ಯವರ್ತಿಯಾಗಿದ್ದ ಅಕೌಂಟೆಂಟ್ ಚಂದ್ರಕಾಂತ ಕುಲ್ಕರ್ಣಿ ಈ ಮೂವರನ್ನು ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಎಲ್ಲವೂ ಹೋಯ್ತು
ಪಿ.ಎಸ್.ಐ ಆಗಬೇಕು ಎನ್ನು ಕನಸ್ಸು ಹೊತ್ತು ಹಣ ನೀಡಿ ಅಕ್ರಮದ ದಾರಿ ಹಿಡಿದ ತಪ್ಪಿಗೆ ಈ ತಂದೆ ಮಗ ಇಬ್ನರೂ ಜೈಲು ಸೇರಿ ಪಶ್ಚಾತಾಪ ಪಡುತ್ತಿದ್ದಾರೆ. ನಿವೇಶನವೂ ಹೊಯ್ತು, ಹಣವೂ ಹೋಯ್ತು..‌ಇತ್ತ ನೌಕರಿಯೂ ಸಿಗಲಿಲ್ಲ. ಮೇಲಾಗಿ ಮರ್ಯಾದೆಯೂ ಕಳಕೊಳ್ಳುವ ಸ್ಥಿತಿ. ಎಲ್ಲಕ್ಕಿಂತ ಹೆಚ್ಚಾಗಿ ಅಪ್ಪ ಮಗ ಇಬ್ಬರೂ ಜೈಲು ಸೇರಿದ್ದಾರೆ. 

ಇದೊಬ್ಬನದೇ ಕಣ್ಣೀರ ಕಥೆಯಲ್ಲ
ಇದು ಪಿ.ಎಸ್.ಐ ಆಗೋದಕ್ಕೆ ಅಕ್ರಮದ ಹಾದಿ ಹಿಡಿದು ತಾನೇ ಹೆಣೆದ ಬಲಿಯಲ್ಲಿ ಬಲಿಯಾದ ಕಥೆ. ಇಂತಹ ಕಣ್ಣೀರ ಕಥೆ ಕಲಬುರಗಿಯ ಅಭ್ಯರ್ಥಿ ಪ್ರಭು ಒಬ್ಬರದ್ದಲ್ಲ.‌ ಅಕ್ರಮದ ಹಾದಿ ಹಿಡಿದವರಲ್ಲಿ ಅರ್ದದಷ್ಟು ಜನ ಇದೇ ರೀತಿ ಕಣ್ಣೀರು ಸುರಿಸುತ್ತಿದ್ದಾರೆ. ನೌಕರಿಗಾಗಿ ಹೊಲ ಮನೆ ಮಾರಿಕೊಂಡು ಕಣ್ಣೀರಿಡುತ್ತಿದ್ದಾರೆ. ಒಬ್ಬೊಬ್ಬರ ಕಣ್ಣೀರ ಕಥೆ ಒಂದೊಂದು ರೀತಿ..  ಅದಕ್ಕೆನೇ ಹೇಳುವುದು..  ಮಾಡಿದ್ದುಣ್ಣೋ ಮಹಾರಾಯ ಅಂತ. ಅಲ್ವಾ ?

Latest Videos
Follow Us:
Download App:
  • android
  • ios