ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಗ್ಲೂಕೋಸ್ ಪೈಪ್ ಕಳಚಿ ಬಿದ್ದ ಪರಿಣಾಮ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ವೈದ್ಯಕೀಯ ನಿರ್ಲಕ್ಷ್ಯದ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಮತ್ತು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಕಲಬುರಗಿ (ಜು.5): ಕಲಬುರಗಿಯ ಜಿಲ್ಲಾ ಆಸ್ಪತ್ರೆಯಾದ ಜಿಮ್ಸ್‌ನಲ್ಲಿ ವೈದ್ಯಕೀಯ ಯಡವಟ್ಟಿನಿಂದ ರೋಗಿಯೊಬ್ಬರು ಪ್ರಾಣ ಕಳೆದುಕೊಂಡ ಆಘಾತಕಾರಿ ಘಟನೆ ನಡೆದಿದೆ.
ಕಲಬುರಗಿ ತಾಲೂಕಿನ ಮೇಳಕುಂದಾ ಗ್ರಾಮದ ನಿವಾಸಿಯಾದ ಸಿದ್ದಣ್ಣ ಎಂಬಾತ ಕಳೆದ ನಾಲ್ಕು ದಿನಗಳ ಹಿಂದೆ ವಿಷ ಕುಡಿದು ಜಿಮ್ಸ್ ಆಸ್ಪತ್ರೆಯ ಐಸಿಯು ವಿಭಾಗಕ್ಕೆ ದಾಖಲಾಗಿದ್ದ. ಆದರೆ ಚಿಕಿತ್ಸೆಯ ವೇಳೆ ಗ್ಲೂಕೋಸ್ ಪೈಪ್ ಕಳಚಿ ಬಿದ್ದು ತೀವ್ರ ರಕ್ತಸ್ರಾವವಾಗಿದ್ದು, ತಕ್ಷಣದ ಚಿಕಿತ್ಸೆಯ ಕೊರತೆಯಿಂದ ಸಿದ್ದಣ್ಣ ಚೇತರಿಸಿಕೊಳ್ಳದೇ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಕಲಬುರಗಿಯನ್ನು ಸ್ಮಾರ್ಟ್ ಸಿಟಿ ಮಾಡಲು ಶತಸಿದ್ಧ: ಸಚಿವ ಪ್ರಿಯಾಂಕ್ ಖರ್ಗೆ
ಈ ಘಟನೆ ಜಿಮ್ಸ್ ಆಸ್ಪತ್ರೆಯಲ್ಲಿ ಮುಂದುವರಿಯುತ್ತಿರುವ ವೈದ್ಯಕೀಯ ನಿರ್ಲಕ್ಷ್ಯದ ಸರಣಿಯ ಭಾಗವಾಗಿದ್ದು, ಈ ಹಿಂದೆಯೂ ಇದೇ ಆಸ್ಪತ್ರೆಯಲ್ಲಿ ರೋಗಿಗಳು ವೈದ್ಯರ ಯಡವಟ್ಟಿನಿಂದ ಪ್ರಾಣ ಕಳೆದುಕೊಂಡಿರುವ ಘಟನೆಗಳು ವರದಿಯಾಗಿವೆ. ಸಿದ್ದಣ್ಣನ ಸಾವಿನಿಂದ ಕುಟುಂಬದವರು ಮತ್ತು ಸ್ಥಳೀಯರು ಆಕ್ರೋಶಗೊಂಡಿದ್ದು, ಆಸ್ಪತ್ರೆ, ವೈದ್ಯರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಘಟನೆಯಿಂದ ವೈದ್ಯಕೀಯ ಸೇವೆಗಳ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.