ಉಲ್ಲಾಳ ಮುಖ್ಯರಸ್ತೆಯಲ್ಲಿ ವ್ಯಕ್ತಿಯೊಬ್ಬ ಬಾನೆಟ್‌ ಮೇಲೆ ಕುಳಿತಿದ್ದಾಗ ಮಹಿಳೆಯೊಬ್ಬಳು ಕಾರನ್ನು ಎರಡು ಕಿ.ಮೀ. ಚಲಾಯಿಸಿ ಆತಂಕ ಸೃಷ್ಟಿಸಿದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೆಂಗಳೂರು (ಜ.22): ಉಲ್ಲಾಳ ಮುಖ್ಯರಸ್ತೆಯಲ್ಲಿ ವ್ಯಕ್ತಿಯೊಬ್ಬ ಬಾನೆಟ್‌ ಮೇಲೆ ಕುಳಿತಿದ್ದಾಗ ಮಹಿಳೆಯೊಬ್ಬಳು ಕಾರನ್ನು ಎರಡು ಕಿ.ಮೀ. ಚಲಾಯಿಸಿ ಆತಂಕ ಸೃಷ್ಟಿಸಿದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜ್ಞಾನಭಾರತಿ ಠಾಣೆ ಪೊಲೀಸರು ಶನಿವಾರ ಆರೋಪಿಗಳಾದ ಪ್ರಿಯಾಂಕಾ, ವಿನಯ್‌, ದರ್ಶನ್‌, ಸುಜನ್‌, ಯಶವಂತ್‌ ಅವರನ್ನು 9ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ಮಾಡಿದ ನ್ಯಾಯಾಧೀಶರು ಆರೋಪಿಗಳನ್ನು ಫೆಬ್ರವರಿ 3ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದರು. 

ಉಲ್ಲಾಳ ಮುಖ್ಯರಸ್ತೆಯ ಜಂಕ್ಷನ್‌ನಲ್ಲಿ ಶುಕ್ರವಾರ ಬೆಳಗ್ಗೆ ಕ್ಷುಲ್ಲಕ ಕಾರಣಕ್ಕಾಗಿ ನಡೆದ ವಾಗ್ವಾದದ ಬಳಿಕ ಕ್ಷಮೆ ಕೇಳುವಂತೆ ಒತ್ತಾಯಿಸಿ ದರ್ಶನ್‌ ಪ್ರಿಯಾಂಕಾಳ ಕಾರಿನ ಬಾನೆಟ್‌ ಏರಿ ಕುಳಿತ್ತಿದ್ದ. ಈ ವೇಳೆ ಆಕ್ರೋಶಗೊಂಡ ಪ್ರಿಯಾಂಕಾ ಸುಮಾರು ಎರಡು ಕಿ.ಮೀ. ಕಾರನ್ನು ಚಲಾಯಿಸಿದ್ದಳು. ಈ ವೇಳೆ ಸಾರ್ವಜನಿಕರು ಕಾರನ್ನು ತಡೆದು ನಿಲ್ಲಿಸಿ ದರ್ಶನ್‌ನನ್ನು ರಕ್ಷಿಸಿದ್ದರು. ಬಳಿಕ ರೊಚ್ಚಿಗೆದ್ದ ಸಾರ್ವಜನಿಕರು ಪ್ರಿಯಾಂಕಾಳ ಕಾರಿನ ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಚಲಿಸುವ ಕಾರಿನ ಬಾನೆಟ್‌ ಮೇಲೆ ದರ್ಶನ್‌ ನೇತಾಡುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಘಟನೆ ಸಂಬಂಧ ದೂರು-ಪ್ರತಿದೂರು ಸ್ವೀಕರಿಸಿದ್ದ ಜ್ಞಾನಭಾ ರತಿ ಠಾಣೆ ಪೊಲಿಸರು, ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿ ಐವರನ್ನು ಬಂಧಿಸಿದ್ದರು.

ಬೆಂಗಳೂರಿನಲ್ಲಿ ಮತ್ತೆ ರಾಕ್ಷಸ ಪ್ರವೃತ್ತಿಯ ಕಾರ್‌ ರೈಡ್‌: ಬಾನೆಟ್ ಏರಿದವನ 2 ಕಿ.ಮೀ ಎಳೆದೊಯ್ದಳು

ನಾಲ್ವರು ದರೋಡೆಕೋರರ ಬಂಧನ: ಶುಕ್ರವಾರ ಬೆಳಗ್ಗೆ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕಾರಿನಲ್ಲಿ ಕುಳಿತಿದ್ದ ಅನುಮಾನಾಸ್ಪದ ತಂಡದ ಮೇಲೆ ಪೊಲೀಸರು ದಾಳಿ ಮಾಡಿದ್ದ ವೇಳೆ ಪರಾರಿಯಾಗಿದ್ದ ನಾಲ್ವರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ತೌಷಿಫ್‌ ಪಾಷಾ, ನಿಷಾದ್‌ ಪಾಷಾ, ನದೀಮ್‌ ಪಾಷಾ, ಚಂದ್‌ ಪಾಷಾ ಬಂಧಿತ ಆರೋಪಿಗಳು.

ಕಾರಿನಲ್ಲಿ ಕುಳಿತು ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ತಂಡದ ಮೇಲೆ ನಗರ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಆರೋಪಿ ಸೆರೆ ಸಿಕ್ಕಿದ್ದು, ಉಳಿದ ನಾಲ್ಕು ಮಂದಿ ತಲೆಮರೆಸಿಕೊಂಡಿದ್ದರು. ಬಂಧಿತ ಇಮ್ರಾನ್‌ ಪಾಷಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇತರೆ ನಾಲ್ಕು ಆರೋಪಿಗಳ ಸುಳಿವು ದೊರೆತಿದೆ. ಬಂಧಿತರೆಲ್ಲರೂ ಮೈಸೂರಿನ ಗೌಸಿಯಾನಗರದ ನಿವಾಸಿಗಳಾಗಿದ್ದು, ಬಸ್‌ ನಿಲ್ದಾಣ ಸೇರಿದಂತೆ ಜನಜಂಗುಳಿ ಸ್ಥಳಗಳಲ್ಲಿ ಪ್ರಯಾಣಿಕರ ಮೊಬೈಲ್‌, ಚಿನ್ನಾಭರಣ, ನಗದು ಕಳವು ಮಾಡುವ ದಂಧೆಯಲ್ಲಿ ತೊಡಗಿದ್ದರು.

Bengaluru: 1 ಪೀಸ್‌ ಕಬಾಬ್‌ ಕಮ್ಮಿಕೊಟ್ಟ ಹೋಟೆಲ್‌ ಮಾಲೀಕನಿಗೆ ಥಳಿತ

ರಾತ್ರಿ ವೇಳೆ ಕಾರಲ್ಲಿ ಹೆದ್ದಾರಿಯಲ್ಲಿ ಲಾರಿ, ಟ್ರಕ್‌ಗಳನ್ನು ಅಡ್ಡಗಟ್ಟಿಡಕಾಯಿತಿ ಮಾಡುತ್ತಿದ್ದರು. ಬೆಂಗಳೂರು, ರಾಮನಗರ, ಚನ್ನಪಟ್ಟಣ, ಮಂಡ್ಯ ಸೇರಿದಂತೆ ಹಲವಾರು ಕಡೆ ನಡೆದ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ನೂಕುನುಗ್ಗುಲಿರುವ ಬಸ್‌ಗಳನ್ನೇ ಟಾರ್ಗೆಟ್‌ ಮಾಡಿಕೊಂಡಿದ್ದು, ಕಳವು ಮಾಡಿ ಕಾರಿನಲ್ಲಿ ಪರಾರಿಯಾಗುತ್ತಿದ್ದರು. ಕಳವು ಮಾಡಿದ ಮೊಬೈಲ್‌ಗಳನ್ನು ಮೈಸೂರಿನ ಇರ್ಫಾನ್‌ಗೆ 2ರಿಂದ 3 ಸಾವಿರ ರು.ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.