ಬೆಂಗಳೂರು(ಆ.09): ಅಕ್ಕಪಕ್ಕದ ಅಂಗಡಿ ಮೂಲಕ ಗೋಡೆ ಕೊರೆದು ಚಿನ್ನಾಭರಣ ಅಂಗಡಿಯೊಂದಕ್ಕೆ ದುಷ್ಕರ್ಮಿಗಳು ಕನ್ನ ಹಾಕಿ ಸುಮಾರು 50 ಕೆ.ಜಿ ಬೆಳ್ಳಿ ವಸ್ತುಗಳನ್ನು ದೋಚಿರುವ ಘಟನೆ ವೈಟ್‌ಫೀಲ್ಡ್‌ ಸಮೀಪ ನಡೆದಿದೆ.

ಮೂರು ದಿನಗಳ ಹಿಂದೆ ಇಮ್ಮಡಿಹಳ್ಳಿ ಮುಖ್ಯರಸ್ತೆಯ ಮಾತಾಜಿ ಜ್ಯುವೆಲ​ರ್ಸ್‌ ಮಳಿಗೆಯಲ್ಲಿ ಕಳ್ಳತನ ನಡೆದಿದ್ದು, ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಸಿಸಿಬಿ ವಶಕ್ಕೆ ಪಡೆದಿದೆ. ಅಂಗಡಿ ಮಾಲೀಕರು ವಹಿವಾಟು ಮುಗಿಸಿ ಮನೆಗೆ ತೆರಳಿದಾಗ ಬಳಿಕ ಖದೀಮರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಲ ತೀರಿಸಲು ವೃದ್ಧೆಯ ಕೈಕಾಲು ಕಟ್ಟಿ ಸರ ಕಿತ್ತ ಖದೀಮರು..!

ಗ್ರಂಧಿಗೆ ಮಳಿಗೆ ಮೂಲಕ ಚಿನ್ನಕ್ಕೆ ಕನ್ನ:

ವೈಟ್‌ಫೀಲ್ಡ್‌ ಹತ್ತಿರದದ ವಿನಾಯಕ ಲೇಔಟ್‌ನಲ್ಲಿ ನೆಲೆಸಿರುವ ಧರ್ಮರಾಮ್‌ ಅವರು, ಎರಡು ದಶಕಗಳಿಂದ ಇಮ್ಮಡಿಹಳ್ಳಿ ರಸ್ತೆಯಲ್ಲಿ ಚಿನ್ನಾಭರಣ ಮಾರಾಟ ಮಳಿಗೆ ಇಟ್ಟಿದ್ದಾರೆ. ಎಂದಿನಂತೆ ಜು.4ರ ರಾತ್ರಿ 9ಕ್ಕೆ ವಹಿವಾಟು ಮುಗಿಸಿ ಅಂಗಡಿಗೆ ಬೀಗ ಹಾಕಿ ಧರ್ಮರಾಮ್‌ ಮನೆಗೆ ಮರಳಿದ್ದರು. ಮಧ್ಯರಾತ್ರಿ ವೇಳೆಯಲ್ಲಿ ಅವರ ಅಂಗಡಿ ಪಕ್ಕದ ಗ್ರಂಧಿಗೆ ಅಂಗಡಿ ಕಿಟಕಿ ಸರಳುಗಳನ್ನು ಗ್ಯಾಸ್‌ ಕಟ್ಟರ್‌ ಬಳಸಿ ಮುರಿದು ಕಳ್ಳರ ಗ್ಯಾಂಗ್‌ ಒಳ ಪ್ರವೇಶಿಸಿದೆ. ಬಳಿಕ ಗ್ರಂಧಿಗೆ ಅಂಗಡಿಯೊಳಗಿನಿಂದ ಆಭರಣ ಅಂಗಡಿ ಗೋಡೆ ಕೊರೆದು ಒಳ ನುಗ್ಗಿದ ಆರೋಪಿಗಳು, ಅಲ್ಮೇರಾದಲ್ಲಿಟ್ಟಿದ್ದ 50 ಕೆ.ಜಿ ಬೆಳ್ಳಿ ವಸ್ತು ಹಾಗೂ ಗಲ್ಲಾ ಪೆಟ್ಟಿಗೆಯಲ್ಲಿದ್ದ 10 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ. ಮರು ದಿನ ಬೆಳಗ್ಗೆ ಗ್ರಂಧಿಗೆ ಅಂಗಡಿ ಮಾಲೀಕ ಅಂಬರೀಷ್‌ ಅವರು, ಅಂಗಡಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಚಿನ್ನಾಭರಣ ಮಳಿಗೆಯ ಸೇಫ್ಟಿಲಾಕರ್‌ ಒಡೆಯಲು ಕಳ್ಳರು ಯತ್ನಿಸಿ ವಿಫಲರಾಗಿದ್ದಾರೆ. ಹೀಗಾಗಿ ಅವರು ಅಲ್ಮೇರಾದಲ್ಲಿದ್ದ ಬೆಳ್ಳಿ ಮಾತ್ರ ಕಳ್ಳತನ ಮಾಡಿದ್ದಾರೆ ಎಂದು ಚಿನ್ನದ ವ್ಯಾಪಾರಿ ಧರ್ಮರಾಮ್‌ ತಿಳಿಸಿದ್ದಾರೆ. ಈ ಬಗ್ಗೆ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತ ಕಮಲ್‌ ಪಂತ್‌ ಅವರು, ಸಿಸಿಬಿಗೆ ತನಿಖೆಯನ್ನು ವಹಿಸಿದ್ದಾರೆ. ನಗರ ತೊರೆಯಲು ಸಜ್ಜಾಗಿದ್ದ ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದೆ. ಆತ ನೀಡಿದ ಸುಳಿವು ಆಧರಿಸಿ ಸಿಸಿಬಿ ತಂಡ, ಇನ್ನುಳಿದ ಆರೋಪಿಗಳು ಹಾಗೂ ಕಳವು ಮಾಲು ವಶಕ್ಕೆ ಪಡೆಯಲು ಮಹಾರಾಷ್ಟ್ರದ ಪುಣೆಗೆ ಶನಿವಾರ ರಾತ್ರಿ ಪಯಣ ಬೆಳೆಸಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.