Asianet Suvarna News Asianet Suvarna News

ಸಾಲ ತೀರಿಸಲು ವೃದ್ಧೆಯ ಕೈಕಾಲು ಕಟ್ಟಿ ಸರ ಕಿತ್ತ ಖದೀಮರು..!

ಗೆಳತಿಯೊಂದಿಗೆ ಕಷ್ಟ ಹೇಳಿಕೊಂಡಿದ್ದ ಖದೀಮ| ಪಕ್ಕದ ಮನೆಯನ್ನೇ ಟಾರ್ಗೆಟ್‌ ಮಾಡಿದ ಚಾಲಾಕಿ ಕಳ್ಳಿ|  ಆರೋಪಿಗಳಿಂದ ಬೈಕ್‌ ಹಾಗೂ ಹಣ ವಶ|

Police Arrest for Two People on Theft Case in Bengaluru
Author
Bengaluru, First Published Aug 6, 2020, 9:59 AM IST

ಬೆಂಗಳೂರು(ಆ.06): ತಮ್ಮ ಪರಿಚಿತ ವೃದ್ಧೆಯ ಕೈ ಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿದ್ದ ಮಹಿಳೆ ಹಾಗೂ ಆಕೆಯ ಗೆಳೆಯನನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಎಚ್‌.ಕಿಶೋರ್‌ ಕುಮಾರ್‌ ಹಾಗೂ ಚಿಕ್ಕಬಿದರಕಲ್ಲು ನಿವಾಸಿ ಲೀಲಾವತಿ ನಾಗ್‌ ಬಂಧಿತರಾಗಿದ್ದು, ಆರೋಪಿಗಳಿಂದ ಬೈಕ್‌ ಹಾಗೂ ಹಣ ವಶಪಡಿಸಿಕೊಳ್ಳಲಾಗಿದೆ. ಕೆಲ ದಿನಗಳ ಹಿಂದೆ ಚನ್ನನಾಯಕನಪಾಳ್ಯದಲ್ಲಿ 68 ವರ್ಷದ ವೃದ್ಧೆ ವೆಂಕಟಲಕ್ಷ್ಮಮ್ಮ ಮನೆಯಲ್ಲಿ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಅನುಮಾನದ ಮೇರೆಗೆ ಅಜ್ಜಿ ಪರಿಚಿತ ಲೀಲಾವತಿಯನ್ನು ವಶಕ್ಕೆ ಪಡೆದಾಗ ಸತ್ಯ ಬಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೊಲೆ ಪ್ರಕರಣ: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದವನಿಗೆ ಗುಂಡೇಟು

ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಲೀಲಾವತಿಯು ಕೌಟುಂಬಿಕ ಕಾರಣಗಳ ಹಿನ್ನೆಲೆಯಲ್ಲಿ ಪತಿಯಿಂದ ಪ್ರತ್ಯೇಕವಾಗಿ ಚಿಕ್ಕಬಿದರಕಲ್ಲು ಗ್ರಾಮದಲ್ಲಿ ವಾಸವಾಗಿದ್ದಳು. ಕೆಲ ತಿಂಗಳ ಹಿಂದೆ ಆಕೆಗೆ ತನ್ನ ತಾಲೂಕಿನ ಕಿಶೋರ್‌ ಪರಿಚಯವಾಗಿತ್ತು. ನಗರದಲ್ಲಿ ಆತ ಕೂಡಾ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗೆ ಉದ್ಯೋಗವಿಲ್ಲದೆ ಊರು ಸೇರಿದ್ದ. ಈ ಸ್ನೇಹದಲ್ಲೇ ಕಿಶೋರ್‌, ತನ್ನ ಆರ್ಥಿಕ ಪರಿಸ್ಥಿತಿ ಬಗ್ಗೆ ಗೆಳತಿ ಬಳಿ ಹೇಳಿಕೊಂಡಿದ್ದ. ಸಾಲ ಮಾಡಿಕೊಂಡಿದ್ದೇನೆ. ಸಹಾಯ ಮಾಡುವಂತೆ ಆತ ಕೇಳಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ತನ್ನ ಮನೆ ಹತ್ತಿರದ ಏಕಾಂಗಿಯಾಗಿ ನೆಲೆಸಿರುವ ವೆಂಕಟಲಕ್ಷ್ಮಮ್ಮ ಮನೆಯಲ್ಲಿ ಕಳ್ಳತನಕ್ಕೆ ಸಂಚು ರೂಪಿಸಿದ್ದಳು. ಅಂತೆಯೇ ಕಂಪ್ಲಿಯಿಂದ ಕಿಶೋರ್‌ನನ್ನು ಕರೆಸಿಕೊಂಡ ಆಕೆ, ಜು.23ರಂದು ಸಂಜೆ ಅಜ್ಜಿ ಮನೆಗೆ ನುಗ್ಗಿದ್ದರು. ಅಜ್ಜಿ ಕೈ-ಕಾಲು ಕಟ್ಟಿಹಾಕಿ 50 ಸಾವಿರ ಮೌಲ್ಯದ ಸರ ಕಿತ್ತು ಪರಾರಿಯಾಗಿದ್ದರು. ಬಳಿಕ ಸ್ಥಳೀಯ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಹಾಗೂ ಅಜ್ಜಿ ನೀಡಿದ ಹೇಳಿಕೆ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಪತ್ತೆಗೆ ತನಿಖೆಗೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

Follow Us:
Download App:
  • android
  • ios