ಎನ್‌ಐಎ ತನಿಖೆ ವೇಳೆ ಶಾಕ್, ಮಂಗ್ಳೂರು ಕುಕ್ಕರ್ ಬಾಂಬ್ ಕಿಂಗ್‌ಪಿನ್ ಬೆಳಗಾವಿ ಲಷ್ಕರ್ ಉಗ್ರ!
ಬೆಳಗಾವಿ ಜೈಲಲ್ಲಿದ್ದ ಅಫ್ಸರ್ ಈಗ ಗಡ್ಕರಿ ಕೇಸಲ್ಲಿ ನಾಗ್ಪುರ ಜೈಲಲ್ಲಿ ಬಂಧಿಯಾಗಿದ್ದಾನೆ. ಹೀಗಾಗಿ ಎನ್‌ಐಎ ತನಿಖೆ ವೇಳೆ ಸ್ಫೋಟಕ ಸಂಗತಿ ಪತ್ತೆಯಾಗಿದ್ದು, ಮಂಗ್ಳೂರು ಕುಕ್ಕರ್ ಬಾಂಬರ್ ಶಾರೀಖ್‌ಗೆ ಜೈಲಿನಲ್ಲೇ ಅಫ್ಸರ್ ತರಬೇತಿ ಕೊಟ್ಟಿದ್ದ ಎಂಬುದು ತಿಳಿದುಬಂದಿದೆ.
ನಾಗಪುರ (ಜು.31): ಕರ್ನಾಟಕ ಕರಾವಳಿಯ ಮಹಾನಗರ ಮಂಗಳೂರಿನಲ್ಲಿ 2022ರ ನ.19ರಂದು ಸಂಭವಿಸಿದ್ದ ‘ಕುಕ್ಕರ್ ಬಾಂಬ್’ ಸ್ಫೋಟ ಪ್ರಕರಣದ ‘ಮಾಸ್ಟರ್‌ಮೈಂಡ್’ ಬೆಳಗಾವಿ ಜೈಲಿನಲ್ಲಿ ಬಂಧಿತನಾಗಿದ್ದ ಲಷ್ಕರ್ ಎ ತೊಯ್ಬಾ ಸಂಘಟನೆಯ ಸದಸ್ಯ ಅಫ್ಸರ್ ಪಾಷಾ ಎಂಬ ಸ್ಫೋಟಕ ಮಾಹಿತಿಯನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಮಾಡಿದ್ದಾರೆ. 2005ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮೇಲಿನ ದಾಳಿ ಪ್ರಕರಣದಲ್ಲಿ ಆರೋಪಿ ಹಾಗೂ 2012ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಉಗ್ರರ ನೇಮಕಾತಿ ಪ್ರಕರಣದಲ್ಲಿ ಅಪರಾಧಿಯಾಗಿರುವ ಪಾಷಾ, ಕುಕ್ಕರ್ ಬಾಂಬ್ ಸ್ಫೋಟಿಸಿದ್ದ ಶಿವಮೊಗ್ಗ ಮೂಲದ ಮೊಹಮ್ಮದ್ ಶಾರೀಖ್‌ಗೆ ಕರ್ನಾಟಕದ ಜೈಲೊಂದರಲ್ಲಿ ತರಬೇತಿ ನೀಡಿದ್ದ ಎಂದೂ ಹೇಳಿದ್ದಾರೆ.
ಬಾಂಬ್ ತಯಾರಿಕೆ ಕುರಿತು ಬಾಂಗ್ಲಾದೇಶದಲ್ಲಿ ತರಬೇತಿ ಪಡೆದಿರುವ ಅಫ್ಸರ್ ಪಾಷಾ ಬ್ಯಾಂಕ್ ಖಾತೆಗೆ ಈಗ ದೇಶದಲ್ಲಿ ನಿಷೇಧಕ್ಕೆ ಒಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) 5 ಲಕ್ಷ ರು. ಹಣ ವರ್ಗಾಯಿಸಿತ್ತು ಎಂದೂ ಮಹಾರಾಷ್ಟ್ರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗ್ಳೂರಿಂದ ಕೇರಳಕ್ಕೆ ಹೊರಟ ಕಾರಿಂದ ₹4.5 ಕೋಟಿ ಲೂಟಿ!
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆಳಗಾವಿ ಜೈಲಿನಿಂದ ಜಯೇಶ್ ಪೂಜಾರಿ ಎಂಬಾತ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ. ಈ ಪ್ರಕರಣದಲ್ಲಿ ಅಫ್ಸರ್ ಪಾಷಾನನ್ನು ಬೆಳಗಾವಿ ಜೈಲಿನಿಂದ ಜುಲೈ 14ರಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಕರೆದೊಯ್ದು ನಾಗಪುರ ಕೇಂದ್ರ ಕಾರಾಗೃಹದಲ್ಲಿ ವಿಚಾರಣೆ ನಡೆಸಿದ್ದಾರೆ. ಆ ವೇಳೆ ಈತನಿಗೆ ಮಂಗಳೂರು ಕುಕ್ಕರ್ ಬಾಂಬ್ ಜತೆಗೆ ನಂಟು ಇರುವ ಮಾಹಿತಿ ಪತ್ತೆಯಾಗಿದೆ. ಇದನ್ನು ಕೇಂದ್ರ ಗುಪ್ತಚರ ಸಂಸ್ಥೆಗಳ ಜತೆ ಹಂಚಿಕೊಂಡಿರುವುದಾಗಿ ಹಾಗೂ ಪಾಷಾ ಮಾಹಿತಿ ಆಧರಿಸಿ ಸಮಗ್ರ ವರದಿಯೊಂದನ್ನು ಸಿದ್ಧಪಡಿಸಿರುವುದಾಗಿಯೂ ಮಹಾರಾಷ್ಟ್ರ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ತನಿಖೆ ವೇಳೆ ಪತ್ತೆ: ಗಡ್ಕರಿ ಅವರಿಗೆ ಬೆದರಿಕೆ ಹಾಕಿದ ಪ್ರಕರಣ ತನಿಖೆಯನ್ನು ಎನ್‌ಐಎ ನಡೆಸುತ್ತಿದ್ದಾಗ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪಾಷಾ ಮಾಸ್ಟರ್ ಮೈಂಡ್ ಎಂಬ ಸಂಗತಿ ಬೆಳಕಿಗೆ ಬಂದಿದೆ. ಬಾಂಬ್ ಸ್ಫೋಟಿಸಿದ್ದ ಮೊಹಮ್ಮದ್ ಶಾರೀಖ್‌ಗೆ ಕುಕ್ಕರ್ ಬಾಂಬ್ ತಯಾರಿ ಕುರಿತ ತರಬೇತಿಯಲ್ಲಿ ಪಾಷಾ ಭಾಗಿಯಾಗಿದ್ದೂ ಪತ್ತೆಯಾಗಿದೆ. ಹಲವು ವರ್ಷಗಳ ಹಿಂದೆಯೇ ಬಾಂಗ್ಲಾದೇಶದ ಢಾಕಾದಲ್ಲಿ ಪಾಷಾ ಬಾಂಬ್ ತಯಾರಿಕೆಯ ತರಬೇತಿ ಪಡೆದು ಭಾರತಕ್ಕೆ ಬಂದಿದ್ದ. ಬೆಂಗಳೂರಿನ ಸ್ಫೋಟ ಪ್ರಕರಣವೊಂದರಲ್ಲೂ ಭಾಗಿಯಾಗಿದ್ದ. ಇಷ್ಟೆಲ್ಲಾ ಆಗಿದ್ದರೂ, ಮಂಗಳೂರು ಸ್ಫೋಟ ಪ್ರಕರಣದಲ್ಲಿ ಈ ಹಿಂದೆ ನಡೆದ ತನಿಖೆಗಳಲ್ಲಿ ಆತನ ಪಾತ್ರವನ್ನೇ ಉಪೇಕ್ಷಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಂಗ್ಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಶಿವಮೊಗ್ಗಕ್ಕೆ ಶಂಕಿತ ಉಗ್ರರ ಕರೆತಂದು ಎನ್‌ಐಎ ಶೋಧ
ಗಡ್ಕರಿ ಅವರಿಗೆ ಬೆದರಿಕೆ ಹಾಕಿದ್ದ ಜಯೇಶ್ ಪೂಜಾರಿ ಅಲಿಯಾಸ್ ಕಾಂತಾ ಅಲಿಯಾಸ್ ಶಾಹೀರ್ ಹಾಗೂ ಪಾಷಾ ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದುಕೊಂಡು ಇಸ್ಲಾಮಿಕ್ ಮೂಲಭೂತವಾದವನ್ನು ಪಸರಿಸುತ್ತಿದ್ದರು. ಸಹಕೈದಿಗಳ ಮೇಲೆ ಪ್ರಭಾವ ಬೀರುತ್ತಿದ್ದರು. ಪಾಷಾ ಖಾತೆಗೆ ಹಲವು ತಿಂಗಳ ಹಿಂದೆಯೇ 5 ಲಕ್ಷ ರು. ಹಣವನ್ನು ಪಿಎಫ್‌ಐ ಸಂದಾಯ ಮಾಡಿತ್ತು. ಅಬ್ದುಲ್ ಜಲೀಲ್ ಎಂಬಾತನ ಖಾತೆಯಿಂದ ಈ ಹಣ ವರ್ಗವಾಗಿತ್ತು. ತನ್ಮೂಲಕ ಪಿಎಫ್‌ಐ ಹಾಗೂ ಅದರ ಭಯೋತ್ಪಾದಕ ಚಟುವಟಿಕೆಗಳು ಕೂಡ ಬಯಲಾಗಿವೆ ಎಂಬುದು ತನಿಖೆ ವೇಳೆ ದೃಢಪಟ್ಟಿದೆ ಎಂದಿದ್ದಾರೆ.
ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ಹಲವು ಸವಲತ್ತು ಕಲ್ಪಿಸಲು ಹಣ ಕಳುಹಿಸಲಾಗಿತ್ತು. ಜೈಲಿನ ಕೋಣೆಯೊಳಗೆ ಇವರಿಗೆಲ್ಲಾ ಸ್ಮಾರ್ಚ್‌ಫೋನ್ ಸಿಗುವಂತೆ ಮಾಡಲಾಗಿತ್ತು ಎಂದು ಅಧಿಕಾರಿ ವಿವರಿಸಿದ್ದಾರೆ.
ಮಂಗಳೂರು ಸ್ಫೋಟ ಆಕಸ್ಮಿಕ ಅಲ್ಲ, ಉಗ್ರ ಕೃತ್ಯ: ಪೊಲೀಸರು
2022ರ ನ.19ರಂದು ಮಂಗಳೂರಿನಲ್ಲಿ ಆಟೋವೊಂದರಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾಗಿತ್ತು. ಶಿವಮೊಗ್ಗ ಮೂಲದ ಮೊಹಮ್ಮದ್ ಶಾರೀಖ್ ‘ಕುಕ್ಕರ್ ಬಾಂಬ್’ ಒಯ್ಯುತ್ತಿದ್ದಾಗ ಅದು ಸ್ಫೋಟಗೊಂಡಿತ್ತು. ಪ್ರೆಷರ್ ಕುಕ್ಕರ್‌ಗೆ ಡಿಟೋನೇಟರ್, ವೈರ್ ಹಾಗೂ ಬ್ಯಾಟರಿಗಳನ್ನು ಅಳವಡಿಸಲಾಗಿತ್ತು. ಆದರೆ ಆ ಘಟನೆ ಆಕಸ್ಮಿಕವಲ್ಲ. ಭಾರಿ ಸ್ವರೂಪದ ಹಾನಿ ಮಾಡುವ ಉದ್ದೇಶದಿಂದಲೇ ನಡೆಸಲಾದ ಭಯೋತ್ಪಾದಕ ಕೃತ್ಯ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.
ಯಾರು ಈ ಅಫ್ಸರ್ ಪಾಷಾ?
- ಕುಖ್ಯಾತ ಉಗ್ರಗಾಮಿ ಸಂಘಟನೆ ಲಷ್ಕರ್ ಎ ತೊಯ್ಬಾದ ಸದಸ್ಯ, ಬಂಧಿತ ಶಂಕಿತ ಉಗ್ರ
- ಹಲವು ವರ್ಷಗಳ ಹಿಂದೆಯೇ ಬಾಂಗ್ಲಾದಲ್ಲಿ ಬಾಂಬ್ ತಯಾರಿಕಾ ತರಬೇತಿ ಪಡೆದಿದ್ದಾನೆ
- 2005ರಲ್ಲಿ ಬೆಂಗಳೂರಿನ ಐಐಎಸ್ಸಿ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲೂ ಈತ ಭಾಗಿ
- ಬೆಂಗಳೂರಿನ ಸ್ಫೋಟವೊಂದರಲ್ಲೂ ಈತನ ಕೈವಾಡವಿದೆ ಎನ್ನುತ್ತಾರೆ ಮಹಾರಾಷ್ಟ್ರ ಪೊಲೀಸರು
- 2012ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಉಗ್ರ ಸಂಘಟನೆಗೆ ನೇಮಕಾತಿ ಪ್ರಕರಣದಲ್ಲಿ ಈತ ಅಪರಾಧಿ
- ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾಗ ಸಹಕೈದಿಗಳಿಗೆ ಮೂಲಭೂತವಾದ ಬೋಧನೆ
- ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗೆ ಜೈಲಿನಲ್ಲೇ ಬಾಂಬ್ ತರಬೇತಿ
- ಗಡ್ಕರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಎನ್‌ಐಎ ನಡೆಸಿದ ವಿಚಾರಣೆ ವೇಳೆ ಈ ಸಂಗತಿ ಬೆಳಕಿಗೆ
- ಸಮಗ್ರ ವರದಿ ತಯಾರಿಸಿ, ಕೇಂದ್ರ ಗುಪ್ತಚರ ದಳಕ್ಕೂ ಮಾಹಿತಿ ರವಾನಿಸಿದ ಪೊಲೀಸರು
- ಜು.14ರಿಂದ ಮಹಾರಾಷ್ಟ್ರದಲ್ಲಿರುವ ಅಫ್ಸರ್, ಸದ್ಯ ನಾಗಪುರ ಸೆಂಟ್ರಲ್ ಜೈಲಿನಲ್ಲಿ ಬಂಧಿ