Hubballi| ರೈತರಿಗೆ ‘ಗಂಧ’ ಹಚ್ಚಿದ MSP Agrotech?
* ಎಂಎಸ್‌ಪಿ ಅಗ್ರೋಟೆಕ್ ಎಂಬ ಕಂಪನಿ ಹೆಸರು ಬಳಸಿ ವಂಚನೆ
* ಆಮಿಷವೊಡ್ಡಿ 3 ಗಂಧದ ಸಸಿ 75ಗೆ ಮಾರಾಟ
* ಸಂಪರ್ಕಕ್ಕೆ ಸಿಗದೆ ನಾಪತ್ತೆ
ಮಯೂರ ಹೆಗಡೆ
ಹುಬ್ಬಳ್ಳಿ(ನ.16): ಇದು ರೈತರಿಗೆ ‘ಗಂಧ’ ಹಚ್ಚಿದ ಪ್ರಕರಣ! ಎಂಎಸ್‌ಪಿ ಅಗ್ರೋಟೆಕ್(MSP Agrotech) ಎಂಬ ಕಂಪನಿ ಹೆಸರು ಬಳಸಿ ಸಾಕಷ್ಟು ಅಮಿಷವೊಡ್ಡಿದ ವಂಚಕರು(Fraudsters) ಗಂಧದ ಸಸಿಯನ್ನು(Sandalwood Sapling) ಹೆಚ್ಚಿನ ಮೊತ್ತಕ್ಕೆ ಮಾರಿದ್ದಾರೆ. ರೈತರಿಗೆ ನೀಡಿದ್ದ ಭರವಸೆಯನ್ನು ಈಡೇರಿಸದೆ ನಾಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ನೂರಾರು ರೈತರು ಲಕ್ಷಾಂತರ ರು. ಕಳೆದುಕೊಂಡಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಲು ಮುಂದಾಗಿದ್ದಾರೆ.
ಹುಬ್ಬಳ್ಳಿಯ(Hubballi) ಛಬ್ಬಿ ಹೋಬಳಿಯ ರಾಮಾಪುರ, ಕುರಡಿಕೆರಿ, ಇನಾಂ ವೀರಾಪುರ, ಕರಡಿಕೊಪ್ಪ, ಕಲಘಟಗಿ ತಾಲೂಕಿನ ತಿರುಮಲಕೊಪ್ಪ, ಬೀರವಳ್ಳಿ ಗ್ರಾಮದ ರೈತರು(Farmers) ಮೋಸ(Fraud) ಹೋಗಿದ್ದಾರೆ. ಪ್ರತಿ ರೈತರು ಕನಿಷ್ಠ 500 ಸಸಿಗಳನ್ನು ಪಡೆದಿದ್ದು, ಮುಂದೇನು ಮಾಡಬೇಕೆಂದು ತೋಚದೆ ತಲೆ ಮೇಲೆ ಕೈ ಹೊತ್ತಿದ್ದಾರೆ. ಕೃಷಿಯಲ್ಲಿ(Agriculture) ಆಸಕ್ತಿ ಹೊಂದಿದ್ದ ಇಬ್ಬರು ವೈದ್ಯರು ಕೂಡಾ ವಂಚನೆಗೆ ಒಳಗಾಗಿದ್ದಾರೆ.
ಹೇಗೆ ವಂಚನೆ?
ಡಾ. ಚನ್ನಬಸಪ್ಪ ಅಂಗಡಿ, ‘ಮೈಸೂರು(Mysuru) ಮೂಲದ ವಿಳಾಸ ತೋರಿಸಿದ ಶ್ರೀನಿವಾಸ ಹಾಗೂ ರುದ್ರೇಶ ಎಂಬುವವರು ಎಂಎಸ್‌ಪಿ ಅಗ್ರೋಟೆಕ್ ಕಂಪನಿ ಪ್ರತಿನಿಧಿ(Representative) ಎಂದು ಹೇಳಿಕೊಂಡು ರೈತರಿಗೆ ತಮ್ಮನ್ನು ಪರಿಚಯ ಮಾಡಿಕೊಂಡಿದ್ದರು. ಕಾಸರಗೋಡಿನಿಂದ ಉತ್ಕೃಷ್ಟ ಗಂಧದ ಸಸಿಯನ್ನು ನೀಡುತ್ತೇವೆ. ನರೇಗಾ ಯೋಜನೆಯಡಿ ಸಸಿ ನೆಡಿಸಿಕೊಡುತ್ತೇವೆ. ಅದಕ್ಕೆ ಸುತ್ತಲೂ ಬೇಲಿ, ಸೋಲಾರ್ ಸೆಕ್ಯೂರಿಟಿ, ಸಿಸಿ ಕ್ಯಾಮೆರಾ ಅಳವಡಿಸುತ್ತೇವೆ. ಜತೆಗೆ ಪ್ರತಿ ಮರಕ್ಕೂ ಜಿಪಿಎಸ್ ಚಿಪ್(GPS Chip) ಅಳವಡಿಸಿ ಕಳವಾಗದಂತೆ ನೋಡಿಕೊಳ್ಳುತ್ತೇವೆ. ಅಲ್ಲದೆ, ಮೂರು ತಿಂಗಳಲ್ಲಿ ಪ್ರತಿ ಮರಕ್ಕೆ . 120 ಸಬ್ಸಿಡಿ ನೀಡುತ್ತೇವೆ. 12 ವರ್ಷದ ಬಳಿಕ ನಾವೇ ಮರಗಳನ್ನು ರೈತರಿಂದ ಖರೀದಿ ಮಾಡುತ್ತೇವೆ. ಆದರೆ, ಕನಿಷ್ಠ 500 ಸಸಿ ಪಡೆದರೆ ಮಾತ್ರ ಈ ಸೌಲಭ್ಯ ನೀಡುವುದಾಗಿ ನಂಬಿಸಿದ್ದರು’ ಎಂದರು.
Hubballi| Nex Coin ಹೆಸರಲ್ಲಿ ಕೋಟ್ಯಂತರ ರೂ. ವಂಚನೆ
‘ಹೀಗೆ ಹೇಳಿ ಕಳೆದ ಆಗಸ್ಟ್ ತಿಂಗಳಲ್ಲಿ ಒಂದು ಸಸಿಗೆ 54ರಿಂದ 75 ವರೆಗೂ ಒಂದೊಂದು ಹಳ್ಳಿಯಲ್ಲಿ(Village) ಒಂದೊಂದು ಬೆಲೆಗೆ ಮಾರಿದ್ದಾರೆ. ಇವರ ಮಾತು ನಂಬಿದ ರೈತರು 500 ಸಸಿಯಿಂದ 2 ಸಾವಿರ ಸಸಿ ವರೆಗೂ ಪಡೆದಿದ್ದಾರೆ. ಹಲವರು ಸಸಿಗಳನ್ನು ನೆಡಿಸಿದ್ದಾರೆ. ಇನ್ನೂ ಹಲವರು ಜೋಳ ಸೇರಿ ಇತರೆ ಪೀಕನ್ನು ತೆಗೆದ ಬಳಿಕ ನೆಡಲು ನಿರ್ಧರಿಸಿದ್ದರು. ಆದರೆ, ಕಳೆದ ಹದಿನೈದು ದಿನಗಳಿಂದ ಕಂಪನಿಯ ಸ್ಥಳೀಯ ಪ್ರತಿನಿಧಿಗಳು, ರಸೀದಿಯಲ್ಲಿ ನಮೂದಾಗಿದ್ದ ಕಂಪನಿ ದೂರವಾಣಿ, ಮೊಬೈಲ್‌ಗಳೆಲ್ಲ ಸ್ವಿಚ್ ಆಫ್ ಆಗಿವೆ’ ಎಂದರು.
ಡಾ. ರವಿ ಸೋಲಾರಗೊಪ್ಪ ಮಾತನಾಡಿ, ‘ನಾನು 2 ಸಾವಿರ ಸಸಿ ಖರೀದಿ ಮಾಡಿ ನಾಲ್ಕು ಎಕರೆಯಲ್ಲಿ ನೆಟ್ಟಿದ್ದೇನೆ. ಅಂದು ಕಂಪನಿಯ ಚಾಲಕನೊಬ್ಬ ಕರೆ ಮಾಡಿ ಇದು ವಂಚಕ ಕಂಪನಿ, ಹಣ ನೀಡಬೇಡಿ ಎಂದು ಮಾಹಿತಿ ನೀಡಿದ್ದ. ಆದರೆ, ಅಷ್ಟರಲ್ಲಾಗಲೆ ನಾನು ಹಣವನ್ನು ಅವರು ನೀಡಿದ್ದ ಖಾತೆಗೆ ಜಮಾ ಮಾಡಿದ್ದೆ. ಸಂಶಯಗೊಂಡು ಕಂಪನಿಯ ಜಿಎಸ್‌ಟಿ ನಂ. ಪರೀಕ್ಷಿಸಿದಾಗ ಮೂರು ತಿಂಗಳ ಹಿಂದೆಯೆ ಅದರ ಅವಧಿ ಮುಗಿದಿದ್ದು, ನವೀಕರಣ ಆಗದಿರುವುದು ತಿಳಿಯಿತು. ಅರಣ್ಯ ಇಲಾಖೆಗೆ ಹೋಗಿ ವಿಚಾರಿಸಿದಾಗ ಒಂದು ಸಸಿಗೆ ರೈತರಿಗೆ ಕೇವಲ 3ಗೆ ನೀಡುವುದನ್ನು ಹಾಗೂ ವರ್ಷಕ್ಕೆ ಸಸಿಗೆ 45 ಸಬ್ಸಿಡಿ ನೀಡುವುದನ್ನು ಅಧಿಕಾರಿಗಳು ತಿಳಿಸಿದರು ಎಂದರು.
ರೈತ ಪ್ರಕಾಶಗೌಡ ಪಾಟೀಲ್, ಸಾಲ ಮಾಡಿಕೊಂಡು ಸಸಿ ಖರೀದಿ ಮಾಡಿದವರು ಇದ್ದಾರೆ. ಪಡೆದ ಸಸಿಗಳನ್ನು ನಾವು ಬೆಳೆಸುತ್ತೇವೆ. ಆದರೆ, ಬಳಿಕ ಮುಂದೇನು? ಬೇರೆ ರೈತರಿಗೆ ಈ ರೀತಿ ಮೋಸ ಆಗಬಾರದು ಎಂದರು.
ಪ್ರತಿನಿಧಿ ಕರೆಸಲು ಹರಸಾಹಸ
ಮೋಸ ಹೋಗಿದ್ದೇವೆ ಎಂದು ತಿಳಿದ ಬಳಿಕ ಕಂಪನಿ ಪ್ರತಿನಿಧಿಗಳನ್ನು ಕರೆಸಲು ರೈತರು ಹರಸಾಹಸ ಮಾಡಿದ್ದಾರೆ. ಹೆಚ್ಚಿನ ಸಸಿ ಬೇಕು. ಇನ್ನು ಕೆಲವರು ಸಸಿ ಬೇಕು ಎನ್ನುತ್ತಿದ್ದಾರೆ ಎಂದು ಸಂಪರ್ಕಕ್ಕೆ ಬಂದವರಿಗೆ ಹೇಳಿದ್ದಾರೆ. ವಿಷಯ ಬಹಿರಂಗ ಆಗಿದ್ದು ತಿಳಿಯುತ್ತಿದ್ದಂತೆ ಕಂಪನಿಯವರು ಎಲ್ಲ ಮೊಬೈಲ್, ದೂರವಾಣಿಯನ್ನು ಸ್ಥಗಿತಗೊಳಿಸಿದ್ದಾರೆ.
WhatsAppನಲ್ಲಿ Good Morning ಮೆಸೇಜ್: ಚಾಟಿಂಗ್, ಮೀಟಿಂಗ್‌ನಿಂದ 5 ಲಕ್ಷ ಕಳೆದುಕೊಂಡ ಭೂಪ!
40-50 ಸಾವಿರ ಕೊಟ್ಟು ಸಸಿ ಖರೀದಿ ಮಾಡಿದ್ದೇನೆ. ಮೂರು ತಿಂಗಳಾದರೂ ಕಂಪನಿಯವರು ಬಂದಿಲ್ಲ. ಈಗ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಇನಾಂ ವೀರಾಪುರ ರೈತ ಫಕ್ಕೀರಪ್ಪ ವಾಲೀಕಾರ ತಿಳಿಸಿದ್ದಾರೆ.
ಸಸಿಗಳನ್ನು ಮನೆ ಮುಂದೆ ಇಟ್ಟುಕೊಂಡು ಕುಳಿತಿದ್ದೇವೆ. ಈ ಬಗ್ಗೆ ಪೊಲೀಸರಿಗೆ(Police) ದೂರು ನೀಡುತ್ತೇವೆ ಎಂದು ರಾಮಾಪುರ ರೈತ ಶಿವಾನಂದ ಎಸ್ ಹೇಳಿದ್ದಾರೆ.
ರೈತರು ಗಂಧದ ಸಸಿ ಬೆಳೆಸುವುದಿದ್ದರೆ ಇಲಾಖೆಯ ನರ್ಸರಿಯಿಂದ ಪಡೆಯಿರಿ. ಇಲಾಖೆ 3ಗೆ ಒಂದು ಸಸಿ ಕೊಡುತ್ತದೆ. ಮೂರು ವರ್ಷ ಚೆನ್ನಾಗಿ ನಿರ್ವಹಣೆ ಮಾಡಿದರೆ 145 ಸಬ್ಸಿಡಿ ನೀಡುತ್ತದೆ. ಮರವಾದಾಗ ಮಾರಾಟ ಮಾಡಿದರೆ ಶೇ. 90ರಷ್ಟು ರೈತರಿಗೆ ಹಾಗೂ ಶೇ. 10ರಷ್ಟು ಇಲಾಖೆಗೆ ಆದಾಯ ಹೋಗುತ್ತದೆ. ಆಮಿಷಕ್ಕೆ ಒಳಗಾಗಿ ಗಂಧವನ್ನು ಖರೀದಿ ಮಾಡಬೇಡಿ ಎಂದು ಧಾರವಾಡ ಡಿಎಫ್‌ಒ(Dharwad DFO) ಯಶಪಾಲ್ ಕ್ಷೀರಸಾಗರ ತಿಳಿಸಿದ್ದಾರೆ.