Asianet Suvarna News Asianet Suvarna News

Hubballi| Nex Coin ಹೆಸರಲ್ಲಿ ಕೋಟ್ಯಂತರ ರೂ. ವಂಚನೆ

*  7 ಲಕ್ಷ ಕಳೆದುಕೊಂಡ ಹುಬ್ಬಳ್ಳಿ ಯುವ ಟೆಕ್ಕಿ
*  ಬೆಂಗಳೂರಿನ ಮಹಿಳೆಗೆ 24 ಲಕ್ಷ ಪಂಗನಾಮ
*  ಹೆಚ್ಚಿನ ಲಾಭ ಗಳಿಸುವುದಾಗಿ ಅಮಿಷವೊಡ್ಡಿ ವಂಚನೆ
 

Fraud in the Name of Nex Coin in Hubballi grg
Author
Bengaluru, First Published Nov 7, 2021, 2:50 PM IST

ಮಯೂರ ಹೆಗಡೆ

ಹುಬ್ಬಳ್ಳಿ(ನ.07):  ರಾಜ್ಯಾದ್ಯಂತ ಬಿಟ್‌ ಕಾಯಿನ್‌(Bitcoin) ಹ್ಯಾಕಿಂಗ್‌(Hacking) ಸದ್ದು ಮಾಡುತ್ತಿರುವ ಬೆನ್ನಲ್ಲೆ ಇನ್ನೊಂದು ಭಿನ್ನ ಸ್ವರೂಪದ ವಂಚನೆ ಬೆಳಕಿಗೆ ಬಂದಿದೆ. ವಂಚಕರು(fraudsters) ಮೋಸ ಹೋದವರಿಗೆ ಆತ್ಮಹತ್ಯೆಗೆ ಪ್ರಚೋದಿಸುವ ಮಾತನ್ನೂ ಆಡಿರುವುದು ಬಿಟಿಸಿ ಕರಾಳ ಮುಖವನ್ನು ಅನಾವರಣ ಮಾಡಿದೆ.

ನೆಕ್ಸ್‌ ಇನ್ವೆಸ್ಟ್‌ಮೆಂಟ್‌(Nex Investment) (ದಲ್ಲಾಳಿ ಕಂಪನಿ) ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣ ಇದು. ಬಿಟ್‌ ಕಾಯಿನ್‌ ಮೇಲೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸುವುದಾಗಿ ಅಮಿಷವೊಡ್ಡಿ ಹಣ ದೋಚಲಾಗಿದೆ. ಬೆಂಗಳೂರಿನಲ್ಲಿ(Bengaluru) ವಂಚನೆಗೆ(Fraud) ಒಳಗಾದವರು ಪ್ರಕರಣ ದಾಖಲಿಸಿದ್ದಾರೆ. ಹುಬ್ಬಳ್ಳಿಯ(Hubballi) ಟೆಕ್ಕಿಯೊಬ್ಬರು ಹೀಗೆ ಇನ್‌ವೆಸ್ಟ್‌ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ನೆಕ್ಸ್‌ನಲ್ಲಿ(Nex) ನೂರಾರು ಜನರು ಸೇರಿ ಕೋಟ್ಯಂತರ ರು. ಕಳೆದುಕೊಂಡಿರುವ ಸಂಶಯ ವ್ಯಕ್ತವಾಗಿದೆ.

ಹುಬ್ಬಳ್ಳಿ: ಬಿಟ್ ‌ಕಾಯಿನ್‌‌ ನೀಡೋದಾಗಿ 45 ಲಕ್ಷ ವಂಚನೆ

ವಂಚನೆ ಸ್ವರೂಪ;

ಮೊದಲು ನೆಕ್ಸ್‌ ಇನ್ವೆಸ್ಟ್‌ಮೆಂಟ್‌ ಹೆಸರಿನ ವಾಟ್ಸ್‌ಆ್ಯಪ್‌(WhatsApp) ಗ್ರೂಪ್‌ನಲ್ಲಿ ಸೇರ್ಪಡೆ ಮಾಡಲಾಗಿದೆ. ಬಳಿಕ ತಮ್ಮದೆ ವಂಚಕರ ಗುಂಪಿನಲ್ಲಿ ಇರುವವರೆ ತಮಗೆ ಇವತ್ತು ಇಂತಿಷ್ಟು ರಿಟನ್ಸ್‌ರ್‍ ಬಂದಿದೆ ಎಂದು ಗ್ರೂಪ್‌ನಲ್ಲಿ ಸಂದೇಶ ಕಳಿಸುತ್ತಾರೆ. ಆ ಮೂಲಕ ಇತರರನ್ನು ಸೆಳೆಯುತ್ತಾರೆ. ಆಸಕ್ತರಿಗೆ ಎಲೀನಾ ಎಂಬ ಹೆಸರಿನ ವಿದೇಶಿ ಮಹಿಳೆ ಇನ್‌ವೆಸ್ಟ್‌ ಮಾಡಲು ನೆರವಾಗುತ್ತಾರೆ. ಜಾಜ್‌ರ್‍, ವಿಲಿಯಮ್ಸ್‌ ಎಂಬುವವರು ವಿಶ್ಲೇಷಕರಾಗಿರುತ್ತಾರೆ.

ವಂಚನೆಗೆ ಒಳಗಾದ ಹುಬ್ಬಳ್ಳಿಯ ಟೆಕ್ಕಿ ವಂಚನೆ ಸ್ವರೂಪ ತಿಳಿಸಿದ್ದಾರೆ. ವಂಚಕರು ಮೊದಲು ಎಂ.ನೆಕ್ಸ್‌ಕಾಯಿನ್‌.ವಿಐಪಿ (m.nexcoinvip) ಎಂಬ ವೆಬ್‌ಸೈಟ್‌ನಲ್ಲಿ(Website)ಹೂಡಿಕೆ ಮಾಡುವಂತೆ ಖಾತೆ ತೆರೆದು ಕೊಡುತ್ತಾರೆ. ಮೊದಲು 300 ಡಾಲರ್‌ನ್ನು(Dollar) ತಮ್ಮ ವೆಬ್‌ ವಾಲೆಟ್‌ಗೆ ಜಮೆ ಮಾಡುವಂತೆ ತಿಳಿಸುತ್ತಾರೆ. ಅದಕ್ಕೆ ಜಾರ್ಜ್‌, ವಿಲಿಯಮ್ಸ್‌ ದಿನಕ್ಕೆ ಮೂರು ಸಮಯ ನಿಗದಿಸಿ ಹೂಡಿಕೆಗೆ ಕರೆ ಕೊಡುತ್ತಾರೆ. ಆ ವೇಳೆ ಒಂದು ನಿಮಿಷದಲ್ಲಿ ಟ್ರೇಡ್‌ ಮಾಡಿದರೆ ಮಾತ್ರ ರಿಟನ್ಸ್‌ರ್‍ ಸಿಗುತ್ತದೆ. ಹೀಗೆ ದಿನಕ್ಕೆ 130 ಡಾಲರ್‌ ರಿಟನ್ಸ್‌ರ್‍ ನೀಡಿ ನಂಬಿಕೆ ಗಳಿಸಿಕೊಳ್ಳುತ್ತಾರೆ.

ಬಳಿಕ ಎಕ್ಸ್‌ಪೀರಿಯನ್ಸ್‌ ಎಂಬ ಇನ್ನೊಂದು ವಾಟ್ಸ್‌ಆ್ಯಪ್‌ ಗ್ರೂಪಿಗೆ ಸೇರ್ಪಡೆ ಮಾಡಿದ್ದರು. ಅಲ್ಲಿ ದಿನಕ್ಕೆ 1 ಸಾವಿರ ಡಾಲರ್‌ಗಿಂತ ಹೆಚ್ಚಿನ ಮೊತ್ತ ಹೂಡಿಕೆ ಮಾಡಲು ತಿಳಿಸಿದ್ದರು. ಆದರೆ ಬಳಿಕ, ಹೂಡಿಕೆಯಲ್ಲಿ ನಷ್ಟವಾದಾಗ ತಾವೇ ಒಂದಿಷ್ಟುಮೊತ್ತವನ್ನು ಸಬ್ಸಿಡಿಯಾಗಿ ನೀಡಿ, ಅದಕ್ಕೆ ಮತ್ತಷ್ಟು ಹಣವನ್ನು ಜಮೆ ಮಾಡಿ ಪುನಃ ಹೂಡಿಕೆ ಮಾಡುವಂತೆ ಮನವೊಲಿಸುತ್ತಾರೆ ಎಂದರು.

ಬಿಟ್‌ಕಾಯನ್‌ನಂಥ ಕರೆನ್ಸಿ ಬಳಸಿದರೆ ಜೈಲುಶಿಕ್ಷೆ, ದಂಡ

ಖಾತೆ ಫ್ರೀಝ್‌;

ಈ ಸಂದರ್ಭದಲ್ಲಿ ಲಾಭ ಬಂದಾಗ ಡ್ರಾ ಮಾಡಿಕೊಳ್ಳಲು ಬಿಡದೆ, ಸಬ್ಸಿಡಿ ವಾಪಸ್‌ ಕೊಡಿ, ಜತೆಗೆ ಲಾಭದ ಮೇಲೆ ಶೇ. 15ರಷ್ಟು ಕಮೀಷನ್‌ ಕೊಡಿ ಎಂದು ಸತಾಯಿಸುತ್ತಾರೆ. ಅಲ್ಲದೆ, ಪದೇಪದೆ ಹೂಡಿಕೆಯನ್ನು ಸಂಪೂರ್ಣ ನಷ್ಟವಾಗಿಸಿ, ಅಷ್ಟೇ ಹಣವನ್ನು ಮತ್ತೊಮ್ಮೆ (Investment) ಮಾಡಿ ನಷ್ಟ ತುಂಬಿಕೊಡುತ್ತೇವೆ ಎನ್ನುತ್ತಾರೆ. ಇವೆರಡಕ್ಕೂ ಒಪ್ಪದಿದ್ದಾಗ ಖಾತೆಯನ್ನು ತಡೆಹಿಡಿಯುತ್ತಾರೆ ಎಂದು ಮೋಸದ ಬಗೆಯನ್ನು ವಿವರಿಸಿದರು.

ಒಮ್ಮೆ ನಾನು ಸುಮಾರು ಒಂದು ಸಾವಿರ ಡಾಲರ್‌ನ್ನು ಕಳೆದುಕೊಂಡೆ. ಬಳಿಕ ನಷ್ಟ ತುಂಬಿಕೊಡುತ್ತೇವೆ ಎಂದಾಗ ಸಹೋದರನ ಹೆಸರಲ್ಲಿ ಖಾತೆ ತೆರೆದು ಸಾಲ(Loan) ಮಾಡಿ 8044.34 ಡಾಲರ್‌ ಹೂಡಿಕೆ ಮಾಡಿದೆ. ಈಗ ಆ ಹಣ ಡ್ರಾ ಮಾಡಲೂ ಬಿಡುತ್ತಿಲ್ಲ. ಮತ್ತೆ 8 ಸಾವಿರ ಡಾಲರ್‌ ಹೂಡಿಕೆ ಮಾಡಿ ಡ್ರಾ ಮಾಡಲು ಅವಕಾಶ ಕೊಡುತ್ತೇವೆ ಎಂದು ನೆಕ್ಸ್‌ ಖಾತೆಯನ್ನು ಫ್ರೀಝ್‌ ಮಾಡಿದ್ದಾರೆ ಎಂದು ಟೆಕ್ಕಿ ಅಳಲು ತೋಡಿಕೊಂಡರು.

ಇದೇ ರೀತಿ ಬೆಂಗಳೂರಿನ ಹೊರಮಾವು ರಸ್ತೆ ನಿವಾಸಿಯೊಬ್ಬರು ನೆಕ್ಸ್‌ನವರು ನಮ್ಮಿಂದ ಟ್ರೇಡಿಂಗ್‌(Trading), ಬಿನಾನ್ಸ್‌(Binance) ಖಾತೆ ತೆರೆಸಿ 24.30 ಲಕ್ಷ ದೋಚಲಾಗಿದೆ ಎಂದು ಬೆಂಗಳೂರು ಪೂರ್ವ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಹುಬ್ಬಳ್ಳಿಯ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ ಎಂದು ಇಲ್ಲಿನವರು ಅಳಲು ತೋಡಿಕೊಂಡಿದ್ದಾರೆ.

ಬಿಟ್‌ಕಾಯಿನ್‌ ಮೌಲ್ಯ 190000 ಡಾಲರ್‌ಗೆ: ಇದು 3 ವರ್ಷದ ಗರಿಷ್ಠ!

ಆತ್ಮಹತ್ಯೆ ಮಾಡಿ ವಿಡಿಯೋ ಕಳಿಸಿ

ಇಷ್ಟೆಲ್ಲ ಆದಮೇಲೆ ಹುಬ್ಬಳ್ಳಿಯ ಟೆಕ್ಕಿ, ಸಾಲ ಮಾಡಿ ಹೂಡಿಕೆ ಮಾಡಿದ್ದೇನೆ. ಈಗ ಆತ್ಮಹತ್ಯೆ ಮಾಡಿಕೊಳ್ಳುವುದೊಂದೆ ದಾರಿ ನನ್ನೆದುರು ಇರುವ ದಾರಿ ಎಂದು ಸಹಾಯಕಿ ಎಲೀನಾಗೆ ಸಂದೇಶ ಕಳಿಸಿದ್ದರು. ಅದಕ್ಕೂ ಜಗ್ಗದ ನೆಕ್ಸ್‌ನವರು ‘ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಚಿತ್ರೀಕರಿಸಿ ನಮಗೆ ನೀಡಿ, ನಾವು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುತ್ತೇವೆ’ ಎಂದು ಪ್ರಚೋದನೆ ನೀಡಿದ್ದಾರೆ.

ಮನೆ ಕಟ್ಟಿಸುತ್ತಿದ್ದೆವು. ಹೀಗಾಗಿ ನೆಕ್ಸ್‌ ನಂಬಿ ಹೂಡಿಕೆ ಮಾಡಿ ಒಟ್ಟಾರೆ 8044 ಡಾಲರ್‌ ಕಳೆದುಕೊಂಡಿದ್ದೇನೆ. ನನಗೆ ಗೊತ್ತಿರುವಂತೆ ರಾಜ್ಯ, ಪರರಾಜ್ಯದ ಕನಿಷ್ಠ 50 ಜನರು ಕನಿಷ್ಠ 15 ಲಕ್ಷವಾದರೂ ಹಣ ಕಳೆದುಕೊಂಡಿದ್ದಾರೆ ಎಂದು ನೆಕ್ಸ್‌ನಲ್ಲಿ ವಂಚನೆಗೆ ಒಳಗಾದ ಸೂರ್ಯ (ಹೆಸರು ಬದಲಿಸಲಾಗಿದೆ) ಎಂಬುವರು ತಿಳಿಸಿದ್ದಾರೆ. 

ಈ ಆನ್‌ಲೈನ್‌ ವಂಚನೆ ಪ್ರಕರಣ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಸೈಬರ್‌ ಠಾಣೆಗೆ ಸೂಚಿಸಲಾಗುವುದು ಎಂದು ಮಹಾನಗರ ಪೊಲೀಸ್ ಆಯುಕ್ತ ಲಾಭೂರಾಮ ತಿಳಿಸಿದ್ದಾರೆ. 
 

Follow Us:
Download App:
  • android
  • ios