ಕುಡಿದ ಮತ್ತಿನಲ್ಲಿ ನಿದ್ರೆಯಲ್ಲಿದ್ದ ಪತ್ನಿ, ನಾಲ್ವರು ಮಕ್ಕಳ ಕತ್ತು ಸೀಳಿ ಕೊಂದ ತಂದೆ!
ವ್ಯಕ್ತಿಯನ್ನು 45 ವರ್ಷದ ಪಳನಿಸಾಮಿ ಎಂದು ಗುರುತಿಸಲಾಗಿದ್ದು, ಜಿಲ್ಲೆಯ ಚೆಂಗಂ ಬಳಿಯ ಒರಂತವಾಡಿ ಗ್ರಾಮದ ರೈತ ಕಾರ್ಮಿಕ ಎಂದು ಹೇಳಲಾಗಿದೆ. ಐವರನ್ನು ಕೊಲೆ ಮಾಡಿದ ಬಳಿಕ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನವದೆಹಲಿ (ಡಿ.13): ಪತಿಯೊಬ್ಬ ತನ್ನ ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಮಧ್ಯರಾತ್ರಿ ಅವರೆಲ್ಲರೂ ನಿದ್ರೆಯಲ್ಲಿದ್ದಾಗ ಬರ್ಬರವಾಗಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿದ ಚೆಂಗಂ ಜಿಲ್ಲೆಯ ಒರಂತವಾಡಿಯಲ್ಲಿ ನಡೆದಿದೆ. ಪತ್ನಿ ಶೀಲದ ಮೇಲೆ ಶಂಕೆ ವ್ಯಕ್ತಪಡಿಸುತ್ತಿದ್ದ ಕಾರಣಕ್ಕೆ ಈ ಘಟನೆ ನಡೆದಿರುವ ಸಾಧ್ಯತೆ ಇದ್ದು, ಈ ಪ್ರಕರಣ ಅಕ್ಕಪಕ್ಕದವರ ಪಾಲಿಗೆ ಆಘಾತಕಾರಿ ಎನಿಸಿದೆ. 45 ವರ್ಷದ ಪಳನಿಸ್ವಾಮಿ ತಿರುವಣ್ಣಾಮಲೈ ಜಿಲ್ಲೆಯ ಸಮೀಪದ ಚೆಂಗಂ ಜಿಲ್ಲೆಯ ಒರಂತವಾಡಿ ಗ್ರಾಮದ ರೈತ. ಆತನ ಪತ್ನಿ 37 ವರ್ಷದ ವಲ್ಲಿ, ಇವರಿಬ್ಬರಿಗೆ ಹಿರಿಯ ಪುತ್ರಿ 19 ವರ್ಷದ ಸೌಂದರ್ಯ, 15 ವರ್ಷದ ತ್ರಿಶಾ, 14 ವರ್ಷದ ಮೋನಿಶಾ, 9 ವರ್ಷದ ಭೂಮಿಕಾ, 4 ವರ್ಷದ ತನು ಹಾಗೂ 6 ವರ್ಷದ ಶಿವಶಕ್ತಿ ಎನ್ನುವ ಮಕ್ಕಳಿದ್ದರು. ಮೂರು ತಿಂಗಳ ಹಿಂದೆಯಷ್ಟೇ ಸೌಂದರ್ಯಗೆ ವಿವಾಹವಾಗಿತ್ತು. ಹಾಗೂ ಆಕೆ ತನ್ನ ಗಂಡನ ಮನೆಯಲ್ಲಿ ವಾಸವಿದ್ದಾಳೆ.
ಪಳನಿ ಅದೇ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ ಕೃಷಿ ಭೂಮಿಯನ್ನು ಗುತ್ತಿಗೆ ಪಡೆದು ಕೃಷಿ ನಡೆಸುತ್ತಿದ್ದಾರೆ. ಪಳನಿಗೆ ವಿಪರೀತ ಕುಡಿತದ ಚಟವಿತ್ತು ಎನ್ನಲಾಗಿದೆ. ದಿನವೂ ಕುಡುದುಕೊಂಡೇ ಮನೆಗೆ ಬರುತ್ತಿದ್ದ ಪಳನಿ, ಪ್ರತಿ ದಿನವೂ ಹೆಂಡತಿಯ ಶೀಲದ ಬಗ್ಗೆ ಶಂಕೆ ಮಾಡಿ ಮಾತನಾಡುತ್ತಾ, ಜಗಳಕ್ಕೆ ಬೀಳುತ್ತಿದ್ದ. ವಿಪರೀತ ಸಾಲ ಕೂಡ ಮಾಡಿಕೊಂಡಿದ್ದ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ದಂಪತಿಯ ನಡುವೆ ಆಗಾಗ ಜಗಳ ನಡೆಯುತ್ತಲೇ ಇರುತ್ತಿತ್ತು. ಅದೇ ಪ್ರದೇಶದಲ್ಲಿ ವಾಸವಾಗಿರುವ ವಲ್ಲಿ ಅವರ ತಾಯಿ ಜಾನಕಿ ಅವರಿಗೂ ಕೂಡ ಅಳಿಯನ ಕುಡಿತದ ಚಟದ ಬಗ್ಗೆ ಮಾಹಿತಿಗಳಿದ್ದವು. ಸೋಮವಾರ ರಾತ್ರಿ ಕೂಡ ಪಾನಮತ್ತನಾಗಿ ಮನೆಗೆ ಮರಳಿದ ಪಳನಿ ಕುಟುಂಬದ ಜೊತೆ ಊಟ ಮಾಡಿದ ಬಳಿಕ ಮಲಗಿದ್ದರು.
ಇಂದು ಬೆಳಗ್ಗೆ ಎಂದಿನಂತೆ ಮಗಳು ಮತ್ತು ಮೊಮ್ಮಕ್ಕಳನ್ನು ನೋಡಲು ಜಾನಕಿ ಬಂದಿದ್ದಾಗ ಬಾಗಿಲು ತೆರೆದಿತ್ತು. ಅನುಮಾನಾಸ್ಪದವಾಗಿ ಒಳಗೆ ಹೋದಾಗ ಮೊದಲ ಕೊಠಡಿಯಲ್ಲಿ ಪಳನಿ ಶವವಾಗಿ ಪತ್ತೆಯಾಗಿದ್ದಾರೆ. ಮೃತದೇಹ ನೋಡಿ ಗಾಬರಿಗೊಂಡು ಕೂಗಾಡಿದ್ದಾರೆ. ಜಾನಕಿ ಕೂಗಿದ ಶಬ್ದ ಕೇಳಿ ಅಕ್ಕಪಕ್ಕದವರು ಮನೆಗೆ ಓಡಿಬಂದಿದ್ದಾರೆ. ಈ ವೇಳೆ, ಮನೆಯಲ್ಲಿ ಉಳಿದವರಿಗಾಗಿ ಶೋಧ ಕಾರ್ಯ ನಡೆಸಿದಾಗ, ವಲ್ಲಿ, ತ್ರಿಷಾ, ಮೋನಿಶಾ, ತನು, ಶಿವಶಕ್ತಿಯ ಶವ ಕೂಡ ಇನ್ನೊಂದು ಕೋಣೆಯಲ್ಲಿ ಸಿಕ್ಕಿದೆ. ಅವರ ಕತ್ತನ್ನು ಚೂರಿಯಿಂದ ಕತ್ತರಿಸಿದ ಕಾರಣಕ್ಕೆ ರಕ್ತದ ಮಡುವಿನಲ್ಲಿ ಅವರು ಶವಗಳಾಗಿ ಬಿದ್ದಿದ್ದರು. ಈ ನಡುವೆ ಭೂಮಿಕಾ ಮಾತ್ರ ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಳು. ಇದನ್ನು ನೋಡಿದ ಜಾನಕಿ ಮತ್ತೊಮ್ಮೆ ಕೂಗಿಕೊಂಡಾಗ ನೆರೆಹೊರೆಯವರು ಆಗಮಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಧರ್ಮ ಮುಚ್ಚಿಟ್ಟು ಹಿಂದೂ ಯುವತಿಯ ವಿವಾಹಕ್ಕೆ ಯತ್ನ: ಮದುವೆಗೆ ದಿನವಿರುವಾಗ ವರ ಅಂದರ್
ಮಾಹಿತಿ ಪಡೆದ ತಕ್ಷಣವೇ ತಿರುವಣ್ಣಾಮಲೈ ತಾಲೂಕು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಭೂಮಿಕಾಳನ್ನು ರಕ್ಷಿಸಿ ಆಂಬ್ಯುಲೆನ್ಸ್ ಮೂಲಕ ತಿರುವಣ್ಣಾಮಲೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿ ಭೂಮಿಕಾಳನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಆ ಬಳಿಕ ಪಳನಿ, ವಲ್ಲಿ ಮತ್ತು ಮಕ್ಕಳ ಮೃತದೇಹಗಳನ್ನು ಮನೆಯೊಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪಳನಿ ಹೆಂಡತಿಯ ಶೀಲದ ಬಗ್ಗೆ ಸಾಕಷ್ಟು ಬಾರಿ ಅನುಮಾನಗೊಂಡ ಜಗಳವಾಡಿದ್ದ. ಸೋಮವಾರ ರಾತ್ರಿ ಕೂಡ ಕುಡಿದ ಮತ್ತಿನಲ್ಲಿ ಜಗಳವಾಡಿದ್ದಾನೆ ಅದರ ಬೆನ್ನಲ್ಲಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
Mangaluru: ಅಪಘಾತಕ್ಕೆ ವೈದ್ಯ ವಿದ್ಯಾರ್ಥಿ ಬಲಿ, ಮೃತದೇಹ ನೋಡಲು ಬಂದ ಹೈಕೋರ್ಟ್ ಜಡ್ಜ್
ರಾತ್ರಿ ಊಟ ಮುಗಿಸಿದ ಬಳಿಕ ಪಳನಿ ಹೋಗಿ ಮಲಗಿಕೊಂಡಿದ್ದಾರೆ. ಮಧ್ಯರಾತ್ರಿಯ ವೇಳೆ ನಿದ್ರೆಯಿಂದ ಎಚ್ಚರಗೊಂಡಿದ್ದಾನೆ. ಆಗಲೂ ಕೂಡ ಆತ ಅಮಲಿನಲ್ಲಿದ್ದ. ಈ ವೇಳೆ ಹೆಂಡತಿ ಮಕ್ಕಳನ್ನು ಕಂಡು ಸಿಟ್ಟಾಗಿದ್ದ ಆತ, ಅವರೆಲ್ಲರೂ ನಿದ್ರೆಯಲ್ಲಿದ್ದಾಗಲೇ, ಚೂರಿ ಹಿಡಿದು ಎಲ್ಲರ ಕತ್ತು ಸೀಳಿದ್ದಾನೆ. ಇವರೆಲ್ಲರ ಕತ್ತು ಸೀಳಿ ಕೊಂದ ಬಳಿಕ ತನ್ನ ಕೋಣೆಗೆ ಹೋದ ಪಳನಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ತಿರುವಣ್ಣಾಮಲೈ ತಾಲೂಕು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅನುಮಾನಾಸ್ಪದ ವರ್ತನೆಯಿಂದ ಪತ್ನಿ ಮತ್ತು ಮಕ್ಕಳ ಕತ್ತು ಸೀಳಿ ಸಾಯಿಸಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪ್ರದೇಶದಲ್ಲಿ ತೀರಾ ಆಘಾತ ಮೂಡಿಸಿದೆ.