ಮದ್ಯದ ಅಮಲಿನಲ್ಲಿ ಸಿಗರೇಟ್ ಲೈಟರ್ ವಿಚಾರಕ್ಕೆ ಉಂಟಾದ ಜಗಳದಿಂದ ಕೋಪಗೊಂಡು ಚಲಿಸುವ ಕಾರಿನಲ್ಲಿ ನೇತಾಡುತ್ತಿದ್ದರೂ ಬಿಡದೆ ಮರಕ್ಕೆ ಗುದ್ದಿಸಿ ಸ್ನೇಹಿತನನ್ನು ಸಾಫ್ಟ್‌ವೇರ್ ಎಂಜಿನಿಯರ್‌ವೊಬ್ಬರು ಹತ್ಯೆಗೈದಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು : ಮದ್ಯದ ಅಮಲಿನಲ್ಲಿ ಸಿಗರೇಟ್ ಲೈಟರ್ ವಿಚಾರಕ್ಕೆ ಉಂಟಾದ ಜಗಳದಿಂದ ಕೋಪಗೊಂಡು ಚಲಿಸುವ ಕಾರಿನಲ್ಲಿ ನೇತಾಡುತ್ತಿದ್ದರೂ ಬಿಡದೆ ಮರಕ್ಕೆ ಗುದ್ದಿಸಿ ಸ್ನೇಹಿತನನ್ನು ಸಾಫ್ಟ್‌ವೇರ್ ಎಂಜಿನಿಯರ್‌ವೊಬ್ಬರು ಹತ್ಯೆಗೈದಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವೀರಸಂದ್ರ ನಿವಾಸಿ ಪ್ರಶಾಂತ್ (35) ಮೃತ ದುರ್ದೈವಿ. ಈ ಹತ್ಯೆ ಸಂಬಂಧ ಕೆ.ಆರ್‌.ಪುರ ನಿವಾಸಿ ರೋಷನ್‌ನನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ವೀರಸಂದ್ರ ಸಮೀಪ ಭಾನುವಾರ ಕ್ರಿಕೆಟ್ ಪಂದ್ಯದ ಬಳಿಕ ಈ ಸ್ನೇಹಿತರು ಮದ್ಯ ಸೇವಿಸಿ ಕಿತ್ತಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವೀರಸಂದ್ರ ಸಮೀಪ ಎಂಲ್‌ ಮಾಲ್ ಹಿಂಭಾಗದಲ್ಲಿ ಭಾನುವಾರ ರಾತ್ರಿ ಸ್ನೇಹಿತರಾದ ಪ್ರಶಾಂತ್ ಹಾಗೂ ರೋಷನ್ ಕ್ರಿಕೆಟ್ ಆಟವಾಡಿದ್ದಾರೆ. ಬಳಿಕ ಆ ಮೈದಾನದಲ್ಲಿ ರಾತ್ರಿ ಇಬ್ಬರೂ ಮದ್ಯ ಸೇವಿಸಿದ್ದಾರೆ. ಈ ವೇಳೆ ಸಿಗರೇಟ್ ಲೈಟರ್ ವಿಚಾರಕ್ಕೆ ಪರಸ್ಪರ ಜಗಳವಾಡಿದ್ದಾರೆ. ಬಳಿಕ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆಗ ಇಬ್ಬರೂ ಬಿಯರ್ ಬಾಟಲ್‌ನಿಂದ ಹೊಡೆದಾಡಿದ್ದಾರೆ ಎಂದು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ.ನಾರಾಯಣ್ ತಿಳಿಸಿದ್ದಾರೆ.

ಹಲ್ಲೆಯಿಂದ ರೋಷನ್‌ ನಾಲಿಗೆಗೆ ತೀವ್ರವಾದ ಪೆಟ್ಟಾಗಿದೆ

ಹಲ್ಲೆಯಿಂದ ರೋಷನ್‌ ನಾಲಿಗೆಗೆ ತೀವ್ರವಾದ ಪೆಟ್ಟಾಗಿದೆ. ಇದರಿಂದ ಭೀತಿಗೊಂಡು ಕಾರಿನಲ್ಲಿ ಆತ ಅಲ್ಲಿಂದ ಹೊರಟಿದ್ದಾನೆ. ಆದರೆ ಆತನಿಗೆ ನಿನ್ನನ್ನು ಜೀವಂತ ಬಿಡಲ್ಲ ಎಂದು ಬೆದರಿಸಿ ಬಲವಂತವಾಗಿ ಕಾರಿಗೆ ಹತ್ತಿಕೊಳ್ಳಲು ಪ್ರಶಾಂತ್ ಯತ್ನಿಸಿದ್ದಾನೆ. ತಕ್ಷಣವೇ ರೋಷನ್ ಕಾರು ಚಲಾಯಿಸಿದ್ದಾನೆ. ಹೀಗಿದ್ದರೂ ಬಿಡದೆ ಆತ ಕಾರಿನ ಬಾಗಿಲನ್ನು ಬಲವಾಗಿ ಹಿಡಿದಿದ್ದಾನೆ. ಪ್ರಶಾಂತ್ ನೇತಾಡುತ್ತಿದ್ದರೂ ಕಾರು ನಿಲ್ಲಸದೆ ವೀರಸಂದ್ರ- ಕಮ್ಮಸಂದ್ರ ರಸ್ತೆಯಲ್ಲಿ ರೋಷನ್ ಅತಿವೇಗವಾಗಿ ಓಡಿಸಿದ್ದಾನೆ. ಕೊನೆಗೆ ರಸ್ತೆ ಬದಿಯ ಮರಕ್ಕೆ ಗುದ್ದಿಸಿ ಬಳಿಕ ಅಲ್ಲೇ ಇದ್ದ ತಡೆಗೋಡೆಗೆ ಕಾರು ಅಪ್ಪಳಿಸಿದೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಪ್ರಶಾಂತ್ ಮೃತಪಟ್ಟಿದ್ದಾನೆ ಎಂದು ಡಿಸಿಪಿ ವಿವರಿಸಿದ್ದಾರೆ.

ತಕ್ಷಣೇ ಘಟನೆ ಬಗ್ಗೆ ನಮ್ಮ-112 (ಪೊಲೀಸ್ ನಿಯಂತ್ರಣ ಕೊಠಡಿ)ಗೆ ಕರೆ ಮಾಡಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ವಿಷಯ ಗೊತ್ತಾದ ಕೂಡಲೇ ಘಟನಾ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಧಾವಿಸಿದ್ದಾರೆ. ಆಗ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾ ಪರಿಶೀಲಿಸಿದಾಗ ಇದು ಅಪಘಾತವಲ್ಲ ಕೊಲೆ ಎಂಬುದು ಗೊತ್ತಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಕೃತ್ಯ ನಡೆದ ಕೆಲವೇ ತಾಸಿನಲ್ಲಿ ಆರೋಪಿಯನ್ನು ಸಹ ಬಂಧಿಸಿದ್ದಾರೆ ಎಂದು ನಾರಾಯಣ್ ವಿವರಿಸಿದ್ದಾರೆ.

ಜೀವಭೀತಿಯಿಂದ ಕಾರನ್ನು ಮರಕ್ಕೆ ಗುದ್ದಿಸಿದೆ:ರೋಷನ್

ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ರೋಷನ್‌, ತನ್ನ ಕುಟುಂಬದ ಜತೆ ಕೆ.ಆರ್‌, ಪುರದಲ್ಲಿ ವಾಸವಾಗಿದ್ದ. ಹಲವು ದಿನಗಳಿಂದ ಆತನಿಗೆ ಪ್ರಶಾಂತ್ ಜತೆ ಸ್ನೇಹವಿತ್ತು. ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಕೊಲೆ ಮಾಡುವುದಾಗಿ ಗೆಳೆಯ ಬೆದರಿಸಿದ. ಆಗ ಜೀ‍ವಭೀತಿಯಂದ ಆತನನ್ನು ತಪ್ಪಿಸಿಕೊಳ್ಳಲು ಯತ್ನಿಸಿದೆ. ಆದರೂ ಸಹ ಆತ ನನ್ನನ್ನು ಬೆನ್ನತ್ತಿದ. ಇದರಿಂದ ಮತ್ತಷ್ಟು ಆತಂಕ ಉಂಟಾಯಿತು. ಆಗ ಭಯದಲ್ಲಿ ಕಾರನ್ನು ಮರಕ್ಕೆ ಗುದ್ದಿಸಿದೆ ಎಂದು ವಿಚಾರಣೆ ವೇಳೆ ರೋಷನ್ ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.