ಪ್ರಿಯಕರನ ಜೊತೆ ಸೇರಿ ಪತ್ನಿಯೊಬ್ಬಳು ಗಂಡನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಶವವನ್ನು ಗೋಣಿ ಚೀಲದಲ್ಲಿ ತುಂಬಿ 30 ಕಿ.ಮೀ. ದೂರ ಸಾಗಿಸಿ ಬಾವಿಗೆ ಎಸೆದಿದ್ದಾರೆ. ಪೊಲೀಸರ ತನಿಖೆಯಲ್ಲಿ ಅಸಲಿ ಸತ್ಯ ಬಯಲಾಗಿದೆ.

ತುಮಕೂರು: ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಬಳಿಯ ಕಾಡುಶೆಟ್ಟಿಹಳ್ಳಿಯಲ್ಲಿ ನಡೆದಿದೆ. 50 ವರ್ಷದ ಶಂಕರಮೂರ್ತಿ ಕೊಲೆಯಾದ ವ್ಯಕ್ತಿ. ಶಂಕರಮೂರ್ತಿ ಪತ್ನಿ ಸುಮಂಗಳಾ ಮತ್ತು ಆಕೆಯ ಪ್ರಿಯಕರ ನಾಗರಾಜು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಈ ಸಂಬಂಧ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂನ್ 24ರಂದು ಶಂಕರಮೂರ್ತಿಯನ್ನು ಕೊಂದು ಗೋಣಿಚೀಲದಲ್ಲಿ ತುಂಬಿದ ಸುಮಂಗಳಾ ಮತ್ತು ನಾಗರಾಜು 30 ಕಿಮೀ ಸಾಗಿಸಿದ್ದಾರೆ.

ಆರೋಪಿ ಸುಮಂಗಳಾ ತಿಪಟೂರು‌ ನಗರದ ಕಲ್ಪತರು ಕಾಲೇಜಿನ ಗರ್ಲ್ಸ್ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಳು. ಅಡುಗೆ ಕೆಲಸದ ಜೊತೆಯಲ್ಲಿ ಕರಡಾಳು ಸಂತೆ ಗ್ರಾಮದ ನಾಗರಾಜು ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಆದ್ರೆ ಇವರಿಬ್ಬರ ಅಕ್ರಮ ಸಂಬಂಧಕ್ಕೆ ಶಂಕರಮೂರ್ತಿ ಅಡ್ಡಿಯಾಗಿದ್ದನು. ಹೀಗಾಗಿ ಶಂಕರಮೂರ್ತಿಯ ಉಸಿರು ನಿಲ್ಲಿಸಲು ಸುಮಂಗಳಾ ಮತ್ತು ನಾಗರಾಜು ಪ್ಲಾನ್ ಮಾಡಿಕೊಂಡಿದ್ದರು.

ಜೂನ್ 24ರಂದು ಸುಮಂಗಲಾ ಮತ್ತು ನಾಗರಾಜು ಜೊತೆಯಾಗಿ ಮೊದಲು ಕಣ್ಣಿಗೆ‌ ಖಾರದ ಪುಡಿ ಎರಚಿದ್ದಾರೆ. ನಂತರ ದೊಣ್ಣೆಯಿಂದ ಹೊಡೆದಿದ್ದಾರೆ. ಆನಂತರ ಕುತ್ತಿಗೆ ಮೇಲೆ ಕಾಲಿಟ್ಟು ಭೀಕರವಾಗಿ ಕೊಲ್ಲಲಾಗಿದೆ. ಆನಂತರ ಶಂಕರಮೂರ್ತಿ ಶವವನ್ನು ಗೋಣಿ ಚೀಲದಲ್ಲಿ ತುಂಬಿಸಿ ಸುಮಾರು 30 ಕಿ.ಮೀ. ಸಾಗಿಸಿದ್ದಾರೆ. ತುರುವೇಕೆರೆ ತಾಲೂಕಿನ ದಂಡನಶಿವರ ಪೊಲೀಸ್ ಠಾಣಾ ವ್ಯಾಪ್ತಿಯ ತೋಟದ ಬಾವಿಯೊಂದಕ್ಕೆ ಶವ ಎಸೆದ ಸುಮಂಗಳಾ ಮತ್ತು ನಾಗರಾಜು ತಮಗೇನು ಗೊತ್ತಿಲ್ಲ ಎಂಬಂತೆ ಗ್ರಾಮಕ್ಕೆ ಹಿಂದಿರುಗಿದ್ದಾರೆ.

ತಗ್ಲಾಕೊಂಡಿದ್ದೇಗೆ ಸುಮಂಗಳಾ - ನಾಗರಾಜು?

ಕೊಲೆ ಬಳಿಕ ತನ್ನ ಗಂಡ ಶಂಕರಮೂರ್ತಿ ಕಾಣಿಸುತ್ತಿಲ್ಲವೆಂದು ಸುಮಂಗಳಾ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಸುಮಂಗಳಾ ನೀಡಿದ ದೂರಿನ ಅನ್ವಯ ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಶಂಕರಮೂರ್ತಿ ತೋಟದ ಬಳಿ ತೆರಳಿದಾಗ ಪೊಲೀಸರಿಗೆ ಕೆಲವು ಅನುಮಾನಾಸ್ಪದ ವಿಷಯಗಳು ಕಂಡು ಬಂದಿದ್ದವು.

ತೋಟದಲ್ಲಿದ್ದ ಹಾಸಿಗೆ ಮೇಲೆ ಖಾರದ ಪುಡಿ ಬಿದ್ದಿರೋದು ಮತ್ತು ಓರ್ವ ವ್ಯಕ್ತಿಯನ್ನು ಎಳೆದಾಡಿದ ಗುರುತುಗಳು ಕಂಡು ಬಂದಿದ್ದವು. ಅನುಮಾನ ಬಂದು ತನಿಖೆ ಚುರಕುಗೊಳಿಸಿದ ಪೊಲೀಸರು ಮೊದಲು ಸುಮಂಗಳಾನ್ನೇ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಸುಮಂಗಳಾ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ. ಇದೀಗ ನೊಣವಿನಕೆರೆ ಪೊಲೀಸರು ಆರೋಪಿಗಳಾದ ಸುಮಂಗಳಾ ಮತ್ತು ನಾಗರಾಜುನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಬೀದರ್: ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ.

ಆಸ್ತಿಗಾಗಿ ಎರಡು ಕುಟುಂಬಗಳ ಮಧ್ಯೆ ನಡೆದ ಗಲಾಟೆಯಲ್ಲಿ 8 ಜನರು ಗಾಯಗೊಂಡಿರುವ ಘಟನೆ ಬೀದರ್ ತಾಲೂಕಿನ ಕಮಠಾಣಾ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಗ್ಗೆಯೇ ಅಣ್ಣ-ತಮ್ಮಂದಿರ ನಡುವೆ ಆಸ್ತಿ ಕಲಹ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಕಳೆದ ಒಂದು ವರ್ಷದಿಂದ ಎರಡು ಕುಟುಂಬಗಳ ನಡುವೆ 8 ಎಕರೆ ಕೃಷಿ ಜಮೀನಿಗಾಗಿ ಹೊಡೆದಾಟ ನಡೆದಿತ್ತು. ಇಂದು ಬೆಳಗ್ಗೆ ಕಸ ಎಸೆಯುವ ವಿಷಯಕ್ಕೆ ಕುಟುಂಬಗಳ ನಡುವೆ ಜಗಳ ಆರಂಭಗೊಂಡಿದೆ. ಈ ವೇಳೆ ಕುಟುಂಬಸ್ಥರು ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ.

ಎಂಟು ಜನರಿಗೆ ಗಾಯ, ಆಸ್ಪತ್ರೆಗೆ ದಾಖಲು

ಈ ಗಲಾಟೆಯಲ್ಲಿ ಶಂಕ್ರಪ್ಪಾ ಯಾಬಾ, ಚಿತ್ರಮ್ಮಾ ಯಾಬಾ, ಶಿವ ಶರಣಪ್ಪ, ಸಂಗಮೇಶ್, ಶಾಂತಕುಮಾರ್, ಪ್ರಭುಶೆಟ್ಟಿ, ಮಾರುತಿ, ಶ್ರೀಕಾಂತ್ ಸೇರಿದಂತೆ ಒಟ್ಟು 8 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬೀದರ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬ್ರಿಮ್ಸ್ ಆಸ್ಪತ್ರೆಗೆ ಅಡಿಷನಲ್ ಎಸ್‌ಪಿ ಚಂದ್ರಕಾಂತ್ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.