ಬಳ್ಳಾರಿಯಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಣಿಕೆ; 7 ಜನ ಬಂಧನ
ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಏಳು ಜನರನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ .3 ಲಕ್ಷ ಮೌಲ್ಯದ 201 ಕ್ವಿಂಟಲ್ ಅಕ್ಕಿ ಹಾಗೂ .30,120 ನಗದು ವಶಪಡಿಸಿಕೊಂಡಿದ್ದಾರೆ.
ಬಳ್ಳಾರಿ (ಅ.30) : ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಏಳು ಜನರನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ .3 ಲಕ್ಷ ಮೌಲ್ಯದ 201 ಕ್ವಿಂಟಲ್ ಅಕ್ಕಿ ಹಾಗೂ .30,120 ನಗದು ವಶಪಡಿಸಿಕೊಂಡಿದ್ದಾರೆ. ಬಳ್ಳಾರಿ ತಾಲೂಕಿನ ಕೋಳೂರು ಗ್ರಾಮದ ತಿರುಮಲ, ಚಾಗನೂರು ಗ್ರಾಮದ ಚಂದ್ರಶೇಖರ, ಕುರುಗೋಡಿನ ಕಿರಣ್‌ಕುಮಾರ್, ಬಲಕುಂದಿ ಗ್ರಾಮದ ವೆಂಕಟೇಶ್, ಬಳ್ಳಾರಿಯ ನಿವಾಸಿ ಬಿ.ಶರಬಯ್ಯ, ಅಂಜಿ ಹಾಗೂ ಚಿತ್ರದುರ್ಗ ಜಿಲ್ಲೆ ವಡ್ಡರಹಳ್ಳಿಯ ಶಶಿಕುಮಾರ್ ಬಂಧಿತರು.
Cover Story: ಅನ್ನಭಾಗ್ಯ ಅಕ್ಕಿ ದಂಧೆ ಬಯಲಿಗೆ: ಅಕ್ರಮ ಪಡಿತರ ದಂಧೆಗೆ ಬ್ರೇಕ್
ಗ್ರಾಮೀಣ ಠಾಣೆ ವ್ಯಾಪ್ತಿಯ ವಕ್ರಾಣಿ ಕ್ಯಾಂಪ್‌ನ ಕೊಳಗಲ್ಲು ಗ್ರಾಮದ ಕಡೆ ತೆರಳುವ ರಸ್ತೆ ಮಧ್ಯದಲ್ಲಿ ಶನಿವಾರ ಬೆಳಗಿನ ಜಾವ ಲಾರಿಗೆ ಅಕ್ಕಿಯನ್ನು ಲೋಡ್ ಮಾಡಲಾಗುತ್ತಿತ್ತು. ಸ್ಥಳೀಯರು ಈ ಕುರಿತು ಮಾಹಿತಿ ನೀಡುತ್ತಿದ್ದಂತೆಯೇ ಗ್ರಾಮೀಣ ಠಾಣೆಯ ಡಿಸಿಆರ್‌ಬಿಯ ಸಿಪಿಐ ನಿರಂಜನ್ ನೇತೃತ್ವದಲ್ಲಿ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅಕ್ರಮ ಅಕ್ಕಿ ಸಾಗಾಣಿಕೆಯ ದಂಧೆಕೋರರನ್ನು ಬಂಧಿಸಿದ್ದಾರೆ. ಆರೋಪಿಗಳು ಅಕ್ರಮ ಅಕ್ಕಿ ಸಾಗಣೆಗೆ ಬಳಸುತ್ತಿದ್ದ ಲಾರಿ,ಮಿನಿ ಗೂಡ್‌್ಸ ಲಾರಿ, ಮಾರುತಿ ವ್ಯಾನ್, ಮೊಟಾ ಸೈಕಲ್, ವಿವಿಧ ಕಂಪನಿಗಳ 5 ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ನಿಲ್ಲದ ಅಕ್ರಮ ದಂಧೆ:
ಬಳ್ಳಾರಿ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಣಿಕೆ ಪ್ರಕರಣ ಇದೇ ಮೊದಲಲ್ಲ. ನಿರಂತರವಾಗಿ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಾಗ್ಯೂ ಅಕ್ರಮ ದಂಧೆಗೆ ಕಡಿವಾಣ ಬಿದ್ದಿಲ್ಲ. ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ಪ್ರಕಾರ, ರಾಜ್ಯದ ಪೈಕಿ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಿನ ಪಡಿತರ ಅಕ್ಕಿ ಅಕ್ರಮ ಸಾಗಣೆ ಪ್ರಕರಣ ದಾಖಲಾಗುತ್ತಿವೆ. ಜಿಲ್ಲೆಯ ಎಲ್ಲ ಕಡೆ ಗುಣಮಟ್ಟದ ಅಕ್ಕಿಯನ್ನು ಬೆಳೆಯಲಾಗುತ್ತಿದ್ದು, ಸರ್ಕಾರದಿಂದ ಕೊಡುತ್ತಿರುವ ಅಕ್ಕಿಯನ್ನು ಹೋಟೆಲ್‌ಗಳು,ಮಂಡಾಳು ಭಟ್ಟಿಗಳಿಗೆ ಮಾರಾಟ ಮಾಡಿಕೊಳ್ಳಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಗೆ ತೆರಳಿ ಅಕ್ಕಿಯನ್ನು ಖರೀದಿಸುವ ಗುಂಪೇ ಇದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಪಡೆದುಕೊಳ್ಳುವ ಕಾರ್ಡ್‌ದಾರರು .10 ಕೆಜಿಯಂತೆ ಮಾರಾಟ ಮಾಡಿಕೊಳ್ಳುತ್ತಾರೆ. ಗ್ರಾಮೀಣ ಭಾಗದಲ್ಲಿ ಖರೀದಿಸಿದ ಈ ಅಕ್ಕಿಯನ್ನು ಒಂದೆಡೆ ಸಂಗ್ರಹಿಸಿಕೊಂಡು ಬೇರೆ ಜಿಲ್ಲೆಗಳಿಗೆ ಅಕ್ರಮವಾಗಿ ಸಾಗಿಸಲಾಗುತ್ತದೆ.
ಗದಗಿನಲ್ಲಿ ಮತ್ತೆ ಗರಿಗೆದರಿದ ಅಕ್ರಮ ಪಡಿತರ ಅಕ್ಕಿ ದಂಧೆ!
ಇನ್ನು ಆಘಾತಕಾರಿ ಸಂಗತಿ ಎಂದರೆ ಕೆಲ ರೈಸ್‌ಮಿಲ್‌ಗಳ ಮಾಲೀಕರು ಇಂತಹ ಅಕ್ರಮ ದಂಧೆಕೋರರ ಜೊತೆ ಸಂಪರ್ಕವಿಟ್ಟುಕೊಂಡು ಅಕ್ಕಿ ಖರೀದಿಸುತ್ತಾರೆ. ಬಳಿಕ ಇದೇ ಅಕ್ಕಿಯನ್ನು ಪಾಲಿಷ್ ಮಾಡಿ ಹೊರಗಡೆ ದುಬಾರಿ ಹಣಕ್ಕೆ ಮಾರಾಟ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದ್ದು, ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕಾಗಿದೆ. ಈ ದಂಧೆಯ ಹಿಂದೆ ರಾಜಕೀಯ ನಾಯಕರ ಕೃಪಾಪೋಷಣೆ ಇದೆ ಎಂದು ಹೇಳಲಾಗುತ್ತಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.