ಹೈದರಾಬಾದ್‌ನ ಮೊಬೈಲ್ ಶೋರೂಮ್‌ನಲ್ಲಿ ಗೋಡೆ ಕೊರೆದು ಲಕ್ಷಾಂತರ ಮೌಲ್ಯದ ಮೊಬೈಲ್‌ಗಳನ್ನು ಕಳ್ಳತನ ಮಾಡಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಳ್ಳನ ಕೃತ್ಯ ಸೆರೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜೂನ್ 29ರ ರಾತ್ರಿ ಈ ಘಟನೆ ನಡೆದಿದ್ದು, ಕಳ್ಳನ ಪತ್ತೆಗೆ ಬಲೆ ಬೀಸಲಾಗಿದೆ.

ಹೈದರಾಬಾದ್‌: ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಮೊಬೈಲ್ ಶೋರೂಮ್ ಒಂದರಲ್ಲಿ ಕಳ್ಳತನ ನಡೆದಿದೆ. ಕಳ್ಳ ನೇರವಾಗಿ ಎದುರು ಬಾಗಿಲನ್ನು ಮುರಿಯದೇ ಮೊಬೈಲ್ ಶಾಪ್‌ನ ಹಿಂಬದಿ ಗೋಡೆಗೆ ತನ್ನ ಕಾರ್ಯಾಚರಣೆಗೆ ಸಾಕಾಗುವಷ್ಟು ದೊಡ್ಡ ಕನ್ನ ಕೊರೆದಿದ್ದಾನೆ. ಬಳಿಕ ಅದರ ಮೂಲಕ ಒಳನುಗ್ಗಿದ್ದು, ಐದು ಲಕ್ಷಕ್ಕೂ ಅಧಿಕ ಮೌಲ್ಯದ ಮೊಬೈಲ್ ಫೋನ್‌ಗಳನ್ನು ಅಲ್ಲಿಂದ ಎಗ್ಗರಿಸಿಕೊಂಡು ಬಂದಿದ್ದಾನೆ. ಈತ ಮೊಬೈಲ್ ಶೋ ರೂಮ್‌ಗೆ ನುಗ್ಗಿದ್ದ ನಂತರದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿವೆ.

ಹೈದರಾಬಾದ್‌ನ ದಿಲ್‌ಸುಖ್ ಕೋಟಿ ಮುಖ್ಯರಸ್ತೆಯಲ್ಲಿರುವ ಬಿಗ್ ಸಿ ಶೋ ರೂಮ್‌ನಲ್ಲಿ ಈ ಘಟನೆ ನಡೆದಿದೆ. ಜೂನ್ 29ರ ರಾತ್ರಿ 30ರ ಮುಂಜಾನೆಯ ನಡುವೆ ಈ ಘಟನೆ ನಡೆದಿದೆ.

ಘಟನಾ ಸ್ಥಳದಲ್ಲಿ ಆತ ಗೋಡೆ ಕೊರೆಯಲು ಬಳಸಿದ ಹ್ಯಾಮರ್ ಹಾಗೂ ಗೋಡೆಯ ಸಣ್ಣ ಸಣ್ಣ ತುಂಡು ಮಣ್ಣುಗಳು ಮೆಟ್ಟಿಲಿನ ಮೇಲೆ ಪತ್ತೆಯಾಗಿವೆ. ವೈರಲ್ ಆದ ವೀಡಿಯೋದಲ್ಲಿ ಕಳ್ಳ ಕೈಗೆ ಸಿಕ್ಕಿದ್ದೆಲ್ಲವನ್ನು ದೋಚಿಲ್ಲ, ತನಗೇನು ಬೇಕು ಅಷ್ಟನ್ನಷ್ಟೇ ದೋಚಿ ಪರಾರಿಯಾಗಿದ್ದಾನೆ. ಮೊದಲಿಗೆ ಮೊದಲ ಕಪಾಟಿನ ಬಳಿ ಹೋದ ಆತ ಅಲ್ಲಿ ಮೂರು ಮೊಬೈಲ್‌ ಫೋನ್‌ಗಳನ್ನು ತೆಗೆದುಕೊಂಡಿದ್ದಾನೆ. ನಂತರ ಮತ್ತೊಂದು ಕಪಾಟಿನ ಬಳಿ ಹೋದ ಆತ ಅಲ್ಲಿ ಮತ್ತೆ ಕೆಲವು ಫೋನ್‌ಗಳನ್ನು ತೆಗೆದುಕೊಂಡಿದ್ದಾನೆ. ನಂತರ ಸ್ಟೋರ್‌ನಿಂದ ಹೊರ ಹೋಗುವ ಮೊದಲು ವಿವಿಧ ಬ್ರಾಂಡ್‌ನ ಹಲವು ಮೊಬೈಲ್‌ ಫೋನ್‌ಗಳನ್ನು ಆತ ತೆಗೆದುಕೊಂಡಿದ್ದಾನೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Scroll to load tweet…

ಹೈದರಾಬಾದ್‌ನಲ್ಲಿ ಜೂನ್ 26ರಂದು ಮತ್ತೊಂದು ವಿಚಿತ್ರ ಘಟನೆ ನಡೆದಿತ್ತು. ದಂತಚಿಕಿತ್ಸೆಗೆ ಒಳಗಾದ ನಾಲ್ವರು ತಮ್ಮ ಚಿಕಿತ್ಸೆಗೆ ಹಣ ಭರಿಸಲಾಗದ ಹಿನ್ನೆಲೆಯಲ್ಲಿ ವೈದ್ಯಗೆ ಚಿನ್ನದ ನೆಕ್ಲೇಸ್ ಎಂದು ಹೇಳಿ ನಕಲಿ ನೆಕ್ಲೇಸ್ ನೀಡಿ ಮೋಸ ಮಾಡಲು ಯತ್ನಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದರು. ಹೈದರಾಬಾದ್‌ನ ಚಕ್ರಿಪುರಂನಲ್ಲಿರುವ ಪ್ರಿಯಾ ಸ್ಮೈಲ್ ಡೆಂಟಲ್ ಕ್ಲಿನಿಕ್‌ನಲ್ಲಿ ಘಟನೆ ನಡೆದಿತ್ತು. ಜೂನ್ 21ರಂದು ಈ ಕ್ಲಿನಿಕ್‌ಗೆ ಬಂದಿದ್ದ, ಆಗ್ರಾದ ದೇವೇಂದ್ರ ಕುಮಾರ್(65), ರವಿ(30) ಹಾಗೂ ನಾಗಪುರದ ಗಂಕು ಬಾಯಿ(45) ಇಲ್ಲಿ ತಮ್ಮ ಹಲ್ಲಿಗೆ ಚಿಕಿತ್ಸೆ ಪಡೆದಿದ್ದು, ಬಳಿಕ ತಮ್ಮ ಬಳಿ ಹಣವಿಲ್ಲ, ಆದರೆ ಜ್ಯುವೆಲ್ಲರಿ ಇದೆ. ಅದನ್ನು ತಮ್ಮ ಬಳಿ ಇಟ್ಟುಕೊಳ್ಳಿ, ನಮ್ಮ ಬಳಿ ಹಣ ಆದಾಗ ಬಂದು ಅದನ್ನು ತೆಗೆದುಕೊಳ್ಳುತ್ತೇವೆ ಎಂದು ನಕಲಿ ಚಿನ್ನದ ನೆಕ್ಲೇಸನ್ನು ನೀಡಿದ್ದರು.