ಮನೆಗೆ ಬರಲು ನಿರಾಕರಣೆ: ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಪತಿ
ತನ್ನೊಂದಿಗೆ ಮನೆಗೆ ಬರಲು ನಿರಾಕರಿಸಿದ ಪತ್ನಿಗೆ ಪತಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ಶನಿವಾರ ನಡೆದಿದೆ. ಮೈಸೂರಿನ ಕುಂಬಾರಕೊಪ್ಪಲು ನಿವಾಸಿ ಹರ್ಷಿತಾ (21) ಎಂಬವರೇ ಕೊಲೆಯಾದವರು.
ಮೈಸೂರು (ಜು.16): ತನ್ನೊಂದಿಗೆ ಮನೆಗೆ ಬರಲು ನಿರಾಕರಿಸಿದ ಪತ್ನಿಗೆ ಪತಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ಶನಿವಾರ ನಡೆದಿದೆ. ಮೈಸೂರಿನ ಕುಂಬಾರಕೊಪ್ಪಲು ನಿವಾಸಿ ಹರ್ಷಿತಾ (21) ಎಂಬವರೇ ಕೊಲೆಯಾದವರು. ಇವರ ಪತಿ ಮಹದೇವ್ (30) ಎಂಬಾತ ಈ ಕೃತ್ಯ ಎಸಗಿದ್ದು, ಈತನನ್ನು ನೆರೆ ಹೊರೆಯವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಬೀರಂಬಾಡಿ ಗ್ರಾಮದ ಮಹದೇವ್ ಅವರನ್ನು ಹರ್ಷಿತಾ ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದರು. ಮದುವೆ ನಂತರ ಪತಿ ಮತ್ತು ಪತ್ನಿ ನಡುವೆ ಆಗಾಗ್ಗೆ ಜಗಳವಾಗಿದ್ದು, ಕುಟುಂಬದ ಹಿರಿಯರು ರಾಜೀ ಪಂಚಾಯಿತಿ ನಡೆಸಿ ಒಟ್ಟಿಗೆ ಇರುವಂತೆ ಬುದ್ಧಿವಾದ ಹೇಳಿದ್ದರು. ಹೀಗಿರುವಾಗ ಕೆಲವು ದಿನಗಳ ಹಿಂದೆ ಪತಿಯೊಂದಿಗೆ ಮನಸ್ತಾಪದಿಂದ ಹರ್ಷಿತಾ ಮೈಸೂರಿನ ಕುಂಬಾರಕೊಪ್ಪಲಿನಲ್ಲಿರುವ ತವರು ಮನೆ ಸೇರಿದ್ದರು. ಶನಿವಾರ ಮಧ್ಯಾಹ್ನ ಹರ್ಷಿತಾ ಅವರನ್ನು ಕರೆದುಕೊಂಡು ಹೋಗಲು ಮಹದೇವ್ ಬಂದಿದ್ದು, ಈ ವೇಳೆ ಪತಿಯೊಂದಿಗೆ ಹೋಗಲು ಹರ್ಷಿತಾ ನಿರಾಕರಿಸಿದ್ದಾರೆ.
ಕೋಟೆನಾಡಿನಲ್ಲಿ 13 ದಿನದ ಹೆಣ್ಣು ಶಿಶುವಿನ ಮೇಲೆ ಕೋತಿ ದಾಳಿ
ಇದರಿಂದ ಕುಪಿತಗೊಂಡ ಮಹದೇವ್ ಚಾಕುವಿನಿಂದ ಹರ್ಷಿತಾ ಅವರಿಗೆ ಇರಿದು ಪರಾರಿಯಾಗಲು ಯತ್ನಿಸಿದ್ದು, ನೆರೆ ಹೊರೆಯವರು ಮಹದೇವ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳು ಹರ್ಷಿತಾ ಅವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮೇಟಗಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಮಹದೇವ್‌ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಸೊಸೆ ಕೊಲೆ ಮಾಡಿದ್ದ ಮಾವನ ಬಂಧನ: ಪಕ್ಕದ ಮನೆಯವನ ಜೊತೆಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದಾಳೆಂದು ಅನುಮಾನಪಟ್ಟು ಸೊಸೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದ ಆರೋಪಿ ಮಾವನನ್ನು ಮೈಸೂರು ವರುಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮೈಸೂರು ತಾಲೂಕು ಹಾರೋಹಳ್ಳಿ ಗ್ರಾಮದ ಚಿಕ್ಕಲೂರಯ್ಯ ಎಂಬವರ ಪತ್ನಿ ಕವಿತಾ (35) ಎಂಬವರೇ ಕೊಲೆಯಾದವರು. ಇವರನ್ನು ಕೊಲೆ ಮಾಡಿದ್ದ ಮಾವ ಘಂಟಯ್ಯ(70) ಎಂಬವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಚಿಕ್ಕಲೂರಯ್ಯ ಮತ್ತು ಕವಿತಾ 15 ವರ್ಷಗಳ ಹಿಂದೆ ಮದುವೆ ಆಗಿದ್ದು, ಇವರಿಗೆ ಮೂವರು ಮಕ್ಕಳಿದ್ದಾರೆ.
ಸ್ಮಾರ್ಟ್ ಸಿಟಿಯಾಗಿ ದೇವನಹಳ್ಳಿ ಅಭಿವೃದ್ಧಿ: ಸಚಿವ ಮುನಿಯಪ್ಪ
ಕುಟುಂಬ ನಿರ್ವಹಣೆಗೆ ಗಂಡನ ದುಡಿಮೆ ಸಾಲದು ಎಂಬ ಕಾರಣದಿಂದ ಕವಿತಾ ಅವರು ಕಳೆದ 4- 5 ತಿಂಗಳಿಂದ ಮೈಸೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಹೌಸ್ ಕೀಪಿಂಗ್ ಕೆಲಸಕ್ಕೆ ಹೋಗುತ್ತಿದ್ದರು. ಇದು ಮಾವ ಘಂಟಯ್ಯಗೆ ಇಷ್ಟವಾಗುತ್ತಿರಲಿಲ್ಲ. ಈ ಬಗ್ಗೆ ಸಾಕಷ್ಟುಬಾರಿ ಸೊಸೆಯ ಜೊತೆಗೆ ತಕರಾರು ತೆಗೆದು, ಕೆಲಸಕ್ಕೆ ಹೋಗದಂತೆ ಗಲಾಟೆ ಮಾಡುತ್ತಿದ್ದರು. ಅಲ್ಲದೆ, ಸೊಸೆ ಪಕ್ಕದ ಮನೆಯ ವ್ಯಕ್ತಿಯ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಸಂಶಯದಿಂದ, ಕುಟುಂಬ ಗೌರವ ಹಾಳು ಮಾಡುತ್ತಿದ್ದಾಳೆ ಎಂದು ಮಂಗಳವಾರ ರಾತ್ರಿ ಮನೆಯಲ್ಲಿ ಜಗಳ ತೆಗೆದು ಕವಿತಾ ತಲೆಯ ಭಾಗಕ್ಕೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ವರುಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.