Asianet Suvarna News Asianet Suvarna News

ಕೊಡಗು: ಅನುಮಾನದ ಭೂತಕ್ಕೆ ಪತ್ನಿಗೆ ಇರಿದು ತಾನೇ ನೇಣಿಗೆ ಶರಣಾದ ಪಾಪಿ..!

ಪ್ರೀತಿಸಿ ಮದುವೆಯಾದವನ ತಲೆಗೆ ಅನುಮಾನದ ಭೂತ ಹೊಕ್ಕು ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕಾದವಳ ಶ್ವೇತನ ಬದುಕಿಗೂ ಬೆಂಕಿ ಇಟ್ಟು, ತಾನೂ ಸಾವಿಗೆ ಕೊರಳೊಡ್ಡಿ ತನ್ನ ಬದುಕನ್ನು ಕೊನೆಗಾಣಿಸಿಕೊಂಡಿದ್ದಾನೆ. 

Husband Committed to Suicide after Attempt Murder Wife in Kodagu grg
Author
First Published Nov 30, 2023, 8:47 PM IST

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ನ.30):  ಅವರಿಬ್ಬರೂ ಪ್ರೀತಿಸಿ ಮದುವೆಯಾದವರು. ಆದರೆ ಕಳೆದ ಕೆಲವು ತಿಂಗಳ ಹಿಂದೆ ಇಬ್ಬರ ನಡುವೆ ಅದ್ಯಾಕೋ ವಿರಸ ಆರಂಭವಾಗಿತ್ತು. ವಿರಸ ದ್ವೇಷಕ್ಕೆ ತಿರುಗಿ ಪತ್ನಿಗೆ ಚಾಕುವಿನಿಂದ ಮನಸ್ಸೋ ಇಚ್ಛೆ ಇರಿದಿದ್ದ. ಕೊನೆಗೆ ತಾನೂ ಸಾವಿಗೆ ಶರಣಾಗಿಬಿಟ್ಟಿದ್ದಾನೆ. 

ಬಡತನದಲ್ಲಿ ಹುಟ್ಟಿ ಬೆಳೆದ ಈಕೆ ಶ್ವೇತ ಅಂತ. ಕೊಡಗು ಮೈಸೂರು ಜಿಲ್ಲೆಗಳ ಗಡಿ ಗ್ರಾಮವಾದ ಮುತ್ತಿನ ಮುಳ್ಳುಸೋಗೆಯವರು. ಭಾಗ್ಯ ಎಂಬುವರ ಹಿರಿಯ ಮಗಳು. ಒಂದಿಷ್ಟು ಓದಿಕೊಂಡಿದ್ದ ಶ್ವೇತ ಕೊಡಗಿನ ಕುಶಾಲನಗರದಲ್ಲಿರುವ ಖಾಸಗಿ ಬೃಹತ್ ಬಟ್ಟೆ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದವರು. ಮುತ್ತಿನಮುಳ್ಳುಸೋಗೆ ಗ್ರಾಮದವನೇ ಆದ ಹಾಗೂ ದೂರದ ಸಂಬಂಧಿಯೂ ಆದ ಪ್ರಸನ್ನ ಎಂಬಾತ ಆಕೆಯ ಹಿಂದೆ ಬಿದ್ದಿದ್ದ. ಖಾಸಗಿ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಶ್ವೇತ ಅವರ ಮನೆಗೆ ಹೋಗಿ ಅವರ ತಾಯಿ ಭಾಗ್ಯ ಅವರನ್ನು ಒಪ್ಪಿಸಿ ಒಂದುವರೆ ವರ್ಷದ ಹಿಂದೆ ಮದುವೆಯೂ ಆಗಿದ್ದ. ಕೆಲವು ದಿನಗಳ ಕಾಲ ಸಂತೋಷದಿಂದಲೇ ಜೀವನ ನಡೆಯುತ್ತಿತ್ತು. ಅದಾದ ಕೆಲವೇ ತಿಂಗಳಲ್ಲಿ ಪಾಪಿ ಪತಿ ಪ್ರಸನ್ನನ ತಲೆಗೆ ಪತ್ನಿಯ ಮೇಲೆ ಅನುಮಾನದ ಭೂತ ಹೊಕ್ಕಿತ್ತು. ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದವನು. ಆ ಕೆಲಸವನ್ನು ಬಿಟ್ಟು ಮನೆಯಲ್ಲೇ ತಿಂದುಂಡು ತಿರುಗಿಕೊಂಡಿರಲು ಶುರುಮಾಡಿದ್ದನಂತೆ. 

ಕುಡಿದ ನಶೆಯಲ್ಲಿ ಕುಡುಕರಿಬ್ಬರ ಗಲಾಟೆ; ಕೊಲೆಯಲ್ಲಿ ಅಂತ್ಯ!

ಅಷ್ಟಕ್ಕೆ ಸುಮ್ಮನಾಗದ ಪಾಪಿ ಹೆಂಡತಿ ದುಡಿದ ದುಡ್ಡನ್ನೆಲ್ಲಾ ತಾನೆ ಕಿತ್ತುಕೊಳ್ಳುತ್ತಿದ್ದನಂತೆ. ಎಲ್ಲಾ ಮಹಿಳಾ ಸ್ವಸಹಾಯ ಸಂಘಗಳಲ್ಲೂ ಹಣ ತೆಗೆದುಕೊಡುವಂತೆ, ವರದಕ್ಷಿಣೆಯಾಗಿ ಸಾಕಷ್ಟು ಹಣ ಕೊಡುವಂತೆ ಪೀಡಿಸುತ್ತಿದ್ದನಂತೆ. ಈ ಕಿರುಕುಳ ತಡೆಯಲಾರದೆ ಶ್ವೇತ ಮೈಸೂರು ಪೊಲೀಸ್ ಠಾಣೆಗೆ ದೂರು ನೀಡಿ ಒಂದು ತಿಂಗಳ ಹಿಂದೆ ತಾಯಿ ಮನೆಗೆ ಸೇರಿದ್ದರಂತೆ. ತನ್ನ ತಾಯಿ ಮನೆಯಲ್ಲಿ ಇದ್ದುಕೊಂಡೇ ಶ್ವೇತ ಬಟ್ಟೆಯಂಗಡಿಯಲ್ಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದರು. ಗುರುವಾರವೂ ಕೆಲಸಕ್ಕೆ ಹೋಗಬೇಕಾಗಿತ್ತು. ಶ್ವೇತನ ತಾಯಿ ಭಾಗ್ಯ ಹಾಗೂ ತಂಗಿ ಅಷ್ಟರಲ್ಲಿ ಕೆಲಸಕ್ಕೆ ಹೋಗಿದ್ದರು. ಇದನ್ನೇ ನೋಡಿಕೊಂಡು ಮನೆಗೆ ನುಗ್ಗಿದ್ದ ಪಾಪಿ ಪತಿ ಪ್ರಸನ್ನ ಶ್ವೇತಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದ. 

ರಕ್ತದ ಮಡುವಿನಲ್ಲಿ ಬಿದ್ದಿದ್ದ ಶ್ವೇತ ತನ್ನನ್ನು ರಕ್ಷಿಸುವಂತೆ, ಕಾಪಾಡುವಂತೆ ಎಲ್ಲರನ್ನು ಘೋಗರೆದಿದ್ದಾರೆ. ಮನೆ ಹತ್ತಿರ ಬಂದವರೆಲ್ಲಾ ಮೊಬೈಲ್ಗಳಲ್ಲಿ ಪೋಟೋ, ವಿಡಿಯೋ ಮಾಡಿಕೊಂಡಿದ್ದಾರೆ ವಿನಃ ಅವರನ್ನು ರಕ್ಷಿಸುವುದಕ್ಕೆ ಯಾರೂ ಮುಂದಾಗಿಲ್ಲ. ಕೊನೆಗೆ ಶ್ವೇತ ನರಳಾಡುತ್ತಲೇ ಫೋನ್ ನಿಂದ ತನ್ನ ತಂಗಿಗೆ ಕರೆ ಮಾಡಿ ತಿಳಿಸಿದ್ದಾರೆ. ಹೀಗಾಗಿ ಶ್ವೇತನ ಸ್ನೇಹಿತೆಯರು ಕೂಡಲೇ ಬಂದು ಆಕೆಯನ್ನು ಕೊಡಗು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. 

ಹಾಸನ ಜಿಲ್ಲಾಧಿಕಾರಿ ಕಚೇರಿ ಎಸ್‌ಡಿಸಿ ಸುಚಿತ್ರಾ ನೇಣುಬಿಗಿದು ಆತ್ಮಹತ್ಯೆ!

ಪ್ರೀತಿಸಿ ಮದುವೆಯಾದವನು ವರದಕ್ಷಿಣೆಯಾಗಿ ಹಣ ಕೊಡುವಂತೆ ತೀವ್ರ ಪೀಡಿಸುತ್ತಿದ್ದನಂತೆ. ಸಂಘಗಳಲ್ಲಿ, ಫೈನಾನ್ಸ್ ಗಳಲ್ಲಿ ಲಕ್ಷ ಲಕ್ಷ ಹಣ ಕೊಡಿಸಿದರೂ ಇನ್ನಷ್ಟು ಮಗದಷ್ಟು ಹಣ ಕೊಡುವಂತೆ ಕಿರುಕುಳ ನೀಡುತ್ತಿದ್ದನಂತೆ. ಅಷ್ಟಕ್ಕೆ ಸುಮ್ಮನಾಗದ ಪಾಪಿ ಹೆಂಡತಿ ಮೇಲೆ ಅನುಮಾನಪಟ್ಟು ಚಾಕುವಿನಿಂದ ಇರಿದು ಕೊನೆಗೆ ಹೆದರಿ ತನ್ನ ಮನೆಗೆ ಹೋಗಿ ತಾನೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಪ್ರೀತಿಸಿ ಮದುವೆಯಾದವನ ತಲೆಗೆ ಅನುಮಾನದ ಭೂತ ಹೊಕ್ಕು ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕಾದವಳ ಶ್ವೇತನ ಬದುಕಿಗೂ ಬೆಂಕಿ ಇಟ್ಟು, ತಾನೂ ಸಾವಿಗೆ ಕೊರಳೊಡ್ಡಿ ತನ್ನ ಬದುಕನ್ನು ಕೊನೆಗಾಣಿಸಿಕೊಂಡಿದ್ದಾನೆ ಪ್ರಸನ್ನ. ಘಟನೆ ಸಂಬಂಧ ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Follow Us:
Download App:
  • android
  • ios