ಸ್ನಾನದ ಕೋಣೆಯಲ್ಲಿ ಬಕೆಟ್‌ನೊಳಗೆ ನೀರು ಕಾಯಿಸಲು ಹಾಕಿದ್ದ ವಾಟರ್‌ ಹೀಟರ್‌ ಬಕೆಟ್‌ ಮೈಮೇಲೆ ಬಿದ್ದು ತಾಯಿ ಹಾಗೂ 4 ವರ್ಷದ ಮಗ ಮನೆಯಲ್ಲಿ ಸಾವನ್ನಪ್ಪಿದ ದುರ್ಘಟನೆ ಹೊಸಕೋಟೆಯಲ್ಲಿ ನಡೆದಿದೆ. 

ಹೊಸಕೋಟೆ (ಫೆ.27): ಸ್ನಾನದ ಕೋಣೆಯಲ್ಲಿ ಬಕೆಟ್‌ನೊಳಗೆ ನೀರು ಕಾಯಿಸಲು ಹಾಕಿದ್ದ ವಾಟರ್‌ ಹೀಟರ್‌ ಬಕೆಟ್‌ ಮೈಮೇಲೆ ಬಿದ್ದು ತಾಯಿ ಹಾಗೂ 4 ವರ್ಷದ ಮಗ ಮನೆಯಲ್ಲಿ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕನಕ ನಗರದಲ್ಲಿ ನಡೆದಿದೆ. 

ಸಾವು ಹೇಗೆಲ್ಲಾ ಬರುತ್ತದೆ ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ವಾಹನಗಳ ಅಪಘಾತ, ಹೃದಯಾಘಾತ, ಅನಾರೋಗ್ಯ, ಗ್ಯಾಸ್‌ ಸ್ಪೋಟ ಎಲ್ಲವೂ ಆಯಿತು. ಈಗ ದಿನನಿತ್ಯ ಬಳಸುವ ವಾಟರ್‌ ಹೀಟರ್‌ನಿಂದಲೇ ತಾಯಿ ಮಗ ಇಬ್ಬರೂ ಸಾವನ್ನಪ್ಪಿದ ದುರ್ಘಟನೆ ಈಗ ನಡೆದಿದೆ. ಹೊಸಕೋಟೆ ತಾಲೂಕಿನ ಕನಕ ನಗರದಲ್ಲಿ ಈ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನವೇ ಘಟನೆ ನಡೆದಿದ್ದು, ಇಂದು ಬೆಳಗ್ಗೆಯೂ ಮನೆಯಿಂದ ಯಾರೊಬ್ಬರೂ ಹೊರಗೆ ಬರದಿರುವುದನ್ನು ಕಂಡು ನೆರೆಹೊರೆಯವರು ಮನೆಗೆ ಹೋಗಿ ನೋಡಿದ್ದಾರೆ. ಈ ವೇಳೆ ಮಹಿಳೆ ಮತ್ತು ಮಗು ಸಾವನ್ನಪ್ಪಿರುವುದು ಕಂಡುಬಂದಿದೆ.

ಜ್ವರ ಎಂದು ಆಸ್ಪತ್ರೆಗೆ ಹೋದ ಯುವಕ ಹೆಣವಾದ: ಶಸ್ತ್ರಚಿಕಿತ್ಸೆ ವೇಳೆ ಎಡವಟ್ಟು

ಫೋನ್‌ ಮಾಡಿದರೂ ಕರೆ ಸ್ವೀಕರಿಸದ ಹಿನ್ನೆಲೆ ಅನುಮಾನ: ಇನ್ನು ತಾಯಿ ಜ್ಯೋತಿ (25) ಮತ್ತು ಮಗ ಜಯಾನಂದ್ (4) ಮೃತ ದುರ್ದೈವಿಗಳು ಆಗಿದ್ದಾರೆ. ಇವರು ರಾಯಚೂರು ಮೂಲದವರಾಗಿದ್ದು, ಗಾರೆ ಕೆಲಸಕ್ಕೆಂದು ಕುಟುಂಬ ಸಮೇತರಾಗಿ ಬಂದು ಹೊಸಕೋಟೆ ತಾಲೂಕಿನ ಕನಕ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಆದರೆ, ಗಂಡ ಕೆಲಸಕ್ಕೆ ಹೋಗಿದ್ದು, ಕೆಲವೊಂದು ಬಾರಿ 2-3 ದಿನ ಮನೆಗೆ ಬರುವುದಿಲ್ಲ. ಹೀಗೆ, ಗಾರೆ ಕೆಲಸಕ್ಕೆ ಹೋದಾಗ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಇನ್ನು ಫೋನ್‌ ಮಾಡಿದರೂ ಕರೆಯನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಪಕ್ಕದ ಮನೆಯವರಿಗೆ ಕರೆ ಮಾಡಿದ್ದಾರೆ. ಬೆಳಗ್ಗೆ ನೆರೆಹೊರೆಯವರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಘಟನೆ ನಡೆದಿದ್ದಾದರೂ ಹೇಗೆ? ಪ್ರತಿನಿತ್ಯದಂತೆ ಸ್ನಾದ ಕೋಣೆಯಲ್ಲಿರುವ ಸಣ್ಣ ಕಟ್ಟೆಯ ಮೇಲೆ ಬಕೆಟ್‌ನಲ್ಲಿ ನೀರನ್ನು ತುಂಬಿಸಿ ಇಟ್ಟು, ಅದರೊಳಗೆ ಕರೆಂಟ್‌ ವಾರ್ ಹೀಟರ್‌ ಹಾಕಿದ್ದಾರೆ. ಈ ವೇಳೆ ಮಗ ಸ್ನಾನದ ಕೋಣೆಯೊಳಗೆ ಹೋದಾಗ ಬಕೆಟ್‌ ಜಾರಿಬಿದ್ದು, ಕರೆಂಟ್‌ ಇದ್ದ ಹೀಟರ್‌ ಮಗನಿಗೆ ತಾಗಿದೆ. ಕರೆಂಟ್‌ ಶಾಕ್‌ ಹೊಡೆದು ಕೂಗಿಕೊಂಡ ಮಗನನ್ನು ರಕ್ಷಣೆ ಮಾಡಲು ತಾಯಿ ಓಡಿ ಬಂದಿದ್ದಾರೆ. ಆದರೆ, ಬಿಸಿ ನೀರು ಸ್ನಾನದ ಕೋಣೆಯಲ್ಲಿ ತುಂಬಿಕೊಂಡಿದ್ದು, ಅದರಲ್ಲಿ ಕರೆಂಟ್‌ ಕೂಡ ಹರಿಯುತ್ತಿತ್ತು. ಇದನ್ನು ನೋಡದೇ ಕರೆಂಟ್‌ ಶಾಕ್‌ಗೆ ಒಳಗಾಗಿದ್ದ ಮಗನನ್ನು ರಕ್ಷಿಸಲು ಮುಂದಾದಾಗ ತಾಯಿಗೂ ಕರೆಂಟ್‌ ಶಾಕ್‌ ಉಂಟಾಗಿದೆ. ಹೀಗಾಗಿ, ತಾಯಿ ಜ್ಯೋತಿ ಹಾಗೂ ಮಗ ಧನಂಜಯ ಇಬ್ಬರೂ ಸ್ನಾನದ ಕೋಣೆಯಲ್ಲಿಯೇ ಮೃತಪಟ್ಟಿದ್ದಾರೆ.

Bengaluru: 10ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು: ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ?

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ: ರಾಯಚೂರಿನಿಂದ ಬಂದು ಗಾರೆ ಕೆಲಸವನ್ನು ಮಾಡಿಕೊಂಡಿದ್ದ ದಂಪತಿ ಹೊಸಕೋಟೆಯಲ್ಲಿ ಜೀವನ ನಡೆಸುತ್ತಿದ್ದರು. ಆದರೆ, ಈಗ ಒಂದೇ ಕುಟುಂಬದಲ್ಲಿ ತಾಯಿ, ಮಗ ಇಬ್ಬರೂ ಸಾವನ್ನಪ್ಪಿದ್ದು, ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ರಾಯಚೂರಿನಿಂದ ನೆಂಟರಿಷ್ಟರು ಆಗಮಿಸುತ್ತಿದ್ದಾರೆ. ಕೆಲಸಕ್ಕೆ ಹೋಗಿದ್ದ ಪತಿ ಮನೆಗೆ ಬಂದಿದ್ದು, ಹೊಸಕೋಟೆ ಪೊಲೀಸ್‌ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.