ತಂಗಿಯೊಂದಿಗೆ ಹೆಜ್ಜೆ ಹಾಕುತ್ತಿದ್ದ 5 ವರ್ಷದ ಬಾಲಕನ ಕಚ್ಚಿ ಎಳೆದೊಯ್ದು ಕೊಂದು ಹಾಕಿದ ಬೀದಿ ನಾಯಿ!
- ಭಯಾನಕ ಘಟನೆಯಿಂದ ಬೆಚ್ಚಿ ಬಿದ್ದ ಜನ
- ತಂಗಿ ಎದುರೇ ಅಣ್ಣನ ಕಚ್ಚಿ ಎಳೆದೊಯ್ದ ನಾಯಿಗಳ ಗುಂಪು
- ತಂಗಿ ಅದೆಷ್ಟೇ ಪ್ರಯತ್ನಿಸಿದರೂ ಅಣ್ಣ ಉಳಿಸಲು ಸಾಧ್ಯವಾಗಲಿಲ್ಲ
ನಾಗ್ಪುರ(ಜೂ.12): ಇದು ಅತ್ಯಂತ ಭಯಾನಕ ಘಟನೆ. ಪುಟ್ಟ ತಂಗಿಯೊಂದಿಗೆ ಹೆಜ್ಜೆ ಹಾಕುತ್ತಿದ್ದ 5 ವರ್ಷದ ಬಾಲಕನನ್ನು ಬೀದಿ ನಾಯಿಗಳು ಕಚ್ಚಿ ಎಳೆದೊಯ್ದು ಕೊಂದು ಹಾಕಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಶನಿವಾರ(ಜೂ.12) ಬೆಳಗ್ಗೆ ಈ ಘಟನೆ ನಡೆದಿದೆ. ದುರಂತ ಅಂದರೆ ಈ ವೇಳೆ ರಸ್ತೆಯಲ್ಲಿ ಯಾರೋಬ್ಬರು ಇರಲಿಲ್ಲ. ಪುಟ್ಟ ಬಾಲಕನಿಗೆ ನೆರವು ಸಿಗಲಿಲ್ಲ. ಪರಿಣಾಮ ದುರಂತ ಸಾವಿನಲ್ಲಿ ಅಂತ್ಯವಾಗಿದೆ.
ಕಚೋಲ್ ಪಟ್ಟಣದ ನಿವಾಸಿ ರಾಜೇಂದ್ರ ಪುತ್ರ 5 ವರ್ಷದ ಬಾಲಕ ವಿರಾಜ್ ಜೈವಾರ್ ಮೃತ ದುರ್ದೈವಿ. ತಂಗಿ ಜೊತೆ ಬೆಳಗ್ಗೆ ಸುಮಾರು 6 ಗಂಟೆಗೆ ಕೂಗಳತೆ ದೂರದಲ್ಲಿದ್ದ ಪಾರ್ಕ್‌ಗೆ ವಾಕಿಂಗ್ ತೆರಳಿದ್ದಾನೆ. ರಾಜೇಂದ್ರ ಕುಟಂಬಬದಲ್ಲಿ ಇದು ಸಾಮಾನ್ಯವಾಗಿತ್ತು. ಹೀಗಾಗಿ ಮಕ್ಕಳ ಬಗ್ಗೆ ಹೆಚ್ಚಿನ ಆತಂಕ ಪೋಷಕರಲ್ಲಾಗಲಿ, ಕುುಟುಂಬಕ್ಕಾಗಲಿ ಇರಲಿಲ್ಲ. ಕಾರಣ ಈ ರಸ್ತೆಯಲ್ಲಿ ವಾಹನಗಳ ಸಂಚಾರ ವಿರಳ.
ಬೀದಿ ನಾಯಿಗಳ ಅಟ್ಟಹಾಸ, ಆಟವಾಡುತ್ತಿದ್ದ ಪುಟ್ಟ ಕಂದನ ಕಚ್ಚಿ ಎಳೆದಾಡಿದ ಶ್ವಾನಗಳು!
ಹೀಗೆ ತಂಗಿ ಜೊತೆ ಪಾರ್ಕ್‌ಗೆ ತೆರಳುತ್ತಿದ್ದ ವಿರಾಜ್ ಮೇಲೆ 6 ರಿಂದ 8 ಬೀದಿ ನಾಯಿಗಳು ಒಮ್ಮಲೆ ದಾಳಿ ಮಾಡಿದೆ. ಜೊತೆಗಿದ್ದ ತಂಗಿ ಕಿರುಚಿದ್ದಾಳೆ. ಭಯಭೀತಗೊಂಡಿದ್ದಾಳೆ. ನಾಯಿಯನ್ನು ಒಡಿಸುವ ಪ್ರಯತ್ನ ಮಾಡಿದ್ದಾಳೆ. ಆದರೆ ನಾಯಿ ಅಣ್ಣನನ್ನು ಕಚ್ಚಿ ಎಳೆದೊಯ್ದಿದೆ. ಹತ್ತಿರದ ಕಾಮಾಗಾರಿ ಹಂತದಲ್ಲಿದ್ದ ಕಟ್ಟಡದ ಬಳಿ ಎಳೆದೊಯ್ದಿ ಕಚ್ಚಿ ಕಚ್ಚಿ ಬಾಲಕನ ಕೊಂದು ಹಾಕಿದೆ.
ಅಣ್ಣನನ್ನು ರಕ್ಷಿಸಲು ಪ್ರಯತ್ನಿಸಿದ ತಂಗಿಗೆ ಸಾಧ್ಯವಾಗಲಿಲ್ಲ. ತಕ್ಷಣವೇ ಮನೆಗೆ ಹಿಂತುರುಗಿ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಮರುಕ್ಷಣದಲ್ಲೇ ಬಾಲನೆ ತಂದೆ ರಾಜೇಂದ್ರ ಕಟ್ಟಡದ ಬಳಿ ಓಡಿದ್ದಾರೆ. ಈ ವೇಳೆ ಚಲನೆ ಇಲ್ಲದೆ ಬಿದ್ದಿದ್ದ ಮಗನ ಎತ್ತಿ ಆಸ್ಪತ್ರೆ ಸಾಗಿಸಿದ್ದಾರೆ. ಆದರೆ ಪರೀಶೀಲಿಸಿದ ವೈದ್ಯರು ಆಸ್ಪತ್ರೆಗೆ ಬರುವ ಮೊದಲೇ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದಿದ್ದಾರೆ.
ವಿರಾಜ್ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಬೀದಿ ನಾಯಿಗೆ ಪುತ್ರ ಸಾವನ್ಪಿದ್ದಾನೆ ಅನ್ನೋದನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ, ಇತ್ತ ನೋವು ತಡೆದುಕೊಳ್ಳಲು ಸಾಧ್ಯವಾಗದೆ ಆಘಾತದಲ್ಲಿದೆ. ಈ ಕುರಿತು ಜಿಲ್ಲಾ ಪರಿಷತ್ ಸಮೀರ್ ಉಮಪ್, ಆಘಾತ ವ್ಯಕ್ತಪಡಿಸಿದ್ದಾರೆ. ಹತ್ತಿರದಲ್ಲಿರುವ ಮಾಂಸದಂಗಡಿ ಬಳಿ ಈ ನಾಯಿಗಳು ಇರುತ್ತವೆ. ಇದೀಗ ಈ ರಸ್ತೆಗೆ ಬಂದು ಈ ರೀತಿ ದಾಳಿ ಮಾಡಿದೆ. ಇದು ನಿಜಕ್ಕೂ ಆಘಾತ ತಂದಿದೆ ಎಂದು ಸಮೀರ್ ಹೇಳಿದ್ದಾರೆ.
ಆಟವಾಡ್ತಿದ್ದವನ ಮೇಲೆ ಬೀದಿ ನಾಯಿಗಳ ದಾಳಿ.. ಬಾಲಕ ದುರ್ಮರಣ
ನಾಯಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಲಿದೆ. ಆದರೆ ಇದಕ್ಕೆ ಸೂಕ್ತ ಪರಿಹಾರ ನೀಡುತ್ತೇವೆ. ಬೀದಿ ನಾಯಿಗಳ ಉಪಟಳ ಕಡಿಮೆ ಮಾಡಲು ಎಲ್ಲಾ ಪ್ರಯತ್ನ ಮಾಡುತ್ತೇವೆ ಎಂದು ಸಮೀರ್ ಹೇಳಿದ್ದಾರೆ. ಇದೇ ವೇಳೆ ಖಾಸಗಿ ಮನೆ ಮಾಲೀಕರು ತಮ್ಮ ತಮ್ಮ ನಾಯಿಗಳನ್ನು ಕಟ್ಟಿ ಹಾಕಬೇಕು. ಬೀದಿಗೆ ಬಿಡಬಾರದು ಎಂದು ಸೂಚಿಸಿದ್ದಾರೆ. ಆದರೆ ಪುತ್ರನ ಕಳೆದುಕೊಂಡು ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.