ಆಟವಾಡ್ತಿದ್ದವನ ಮೇಲೆ ಬೀದಿ ನಾಯಿಗಳ ದಾಳಿ.. ಬಾಲಕ ದುರ್ಮರಣ
* ಆಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ: ಬಾಲಕ ಸಾವು
* ಬೆಂಗಳೂರಿನಲ್ಲಿ ಎರಡು ವರ್ಷದ ಹಿಂದೆ ಇಂಥದ್ದೆ ಪ್ರಕರಣ
* ಹೆಚ್ಚಿದ ಬೀದಿ ನಾಯಿಗಳ ಸಂಖ್ಯೆಗೆ ಜನ ಹೈರಾಣ
ಶಿಡ್ಲಘಟ್ಟ(ಚಿಕ್ಕಬಳ್ಳಾಪುರ) (ನ. 01)ರಾಜ್ಯದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿಗೆ ಮತ್ತೊಂದು ಜೀವ ಬಲಿಯಾಗಿದೆ. ಬೀದಿನಾಯಿಗಳ ಹಿಂಡೊಂದು ಏಕಾಏಕಿ ನಡೆಸಿದ ದಾಳಿಗೆ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಸಂತೋಷ ನಗರದಲ್ಲಿ ಭಾನುವಾರ ನಡೆದಿದೆ.
ಕಲಂದರ್ ಖಾನ್(11) ಮೃತ ಬಾಲಕ. ಬೆಳಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ಮನೆ ಮುಂದೆ ಆಟ ಆಡುತ್ತಿದ್ದ ಬಾಲಕನ ಮೇಲೆ ಸುಮಾರು 15-20 ಸಂಖ್ಯೆಯಲ್ಲಿದ್ದ ನಾಯಿಗಳ ಹಿಂಡು ದಾಳಿ ನಡೆಸಿ ಕಚ್ಚಿದೆ. ಈ ವೇಳೆ ಗಂಭೀರ ಗಾಯಗೊಂಡ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಹಾಸನದಲ್ಲಿ ಮಿತಿ ಮೀರಿದ ಬೀದಿ ನಾಯಿಗಳ ಹಾವಳಿ
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಗರಿಕರಿಂದ ಹಲವು ಬಾರಿ ನಗರಸಭೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ನಗರಸಭಾ ಸಿಬ್ಬಂದಿ ಸಾರ್ವಜನಿಕರ ತೀವ್ರ ಆಕ್ರೋಶ ಎದುರಿಸಬೇಕಾಯಿತು.
ದಾವಣಗೆರೆ ಆಜಾದ್ ನಗರದಲ್ಲಿ ಕಳೆದ ಜೂನ್ ವೇಳೆ ಬಾಲಕಿಯನ್ನು ಬೀದಿನಾಯಿಗಳು ಕಚ್ಚಿ ಎಳೆದೊಯ್ದಿದ್ದವು. ಮನೆಯಂಗಳದಲ್ಲಿದ್ದ ನಾಲ್ಕು ವರ್ಷದ ಬಾಲಕಿ ಮೇಲೆ ಬೀದಿನಾಯಿಗಳು ದಾಳಿ ಮಾಡಿವೆ. ಗಾಯಗೊಂಡ ಬಾಲಕಿಯನ್ನು ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.