Asianet Suvarna News Asianet Suvarna News

ಮನೆಗೆ ಕರೆದು ಹನಿಟ್ರ್ಯಾಪ್: ಹಣ, ಕಾರು ಕಿತ್ತುಕೊಂಡು ಬ್ಲಾಕ್‌ಮೇಲ್

  • ಮನೆ ಆಹ್ವಾನಿಸಿ ಹನಿ ಟ್ರ್ಯಾಪ್‌: ಐವರ ಸೆರೆ
  • ಮೊಬೈಲ್‌ನಲ್ಲಿ ಪರಿಚಯವಾಗಿದ್ದ ತಮಿಳುನಾಡಿನ ಯುವಕ
  • ಮನೆಗೆ ಬರುವಂತೆ ಆಹ್ವಾನ
  • ಬಳಿಕ ಥಳಿಸಿ, ಹಣ, ಕಾರು ಕಿತ್ತುಕೊಂಡು ಬ್ಲ್ಯಾಕ್‌ಮೇಲ್‌
  • ಮತ್ತೆ ಹಣಕ್ಕೆ ಬೇಡಿಕೆ: ದೂರು
Home Invite Honey Trap Arrest of five accused bengaluru rav
Author
First Published Nov 7, 2022, 7:07 AM IST

ಬೆಂಗಳೂರು (ನ.7) : ವ್ಯಕ್ತಿಯೊಬ್ಬರನ್ನು ಮೊಬೈಲ್‌ ಫೋನ್‌ನಲ್ಲಿ ಪರಿಚಯಿಸಿಕೊಂಡು ನಂತರ ‘ಒಂಟಿಯಾಗಿದ್ದೇನೆ ಮನೆಗೆ ಬಾ’ ಎಂದು ಕರೆಸಿಕೊಂಡು ‘ಹನಿಟ್ರ್ಯಾಪ್‌’ ಖೆಡ್ಡಾಕ್ಕೆ ಬೀಳಿಸಿದ್ದ ಯುವತಿ ಸೇರಿ ಐದು ಮಂದಿಯನ್ನು ಸುದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೈಕೋರ್ಟ್ ಸಿಬ್ಬಂದಿಯನ್ನೇ ಖೆಡ್ಡಾಗೆ ಕೆಡವಿದ 'ಹನಿಟ್ರ್ಯಾಪ್' ಗ್ಯಾಂಗ್‌: ಪ್ರಮುಖ ಆರೋಪಿ ಸೇರಿ 10 ಜನ ಅರೆಸ್ಟ್‌

ಬಿಟಿಎಂ ಲೇಔಟ್‌ ನಿವಾಸಿಗಳಾದ ಹಲೀಮಾ ಅಲಿಯಾಸ್‌ ಪ್ರಿಯಾ, ಜಾಹೀದ್‌, ಮುಕ್ತಿಹಾರ್‌, ಫಾರನ್‌ ಹಾಗೂ ಅಸ್ಲಾಮ್‌ ಬಂಧಿತರು. ಆರೋಪಿಗಳು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಹೊಸೂರು ಸಮೀಪದ ತೆರುಪೇಟೆಯ ದಿಲೀಪ್‌ಕುಮಾರ್‌ (32) ಎಂಬಾತನನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸಿ, ಹಣ, ಕಾರು ದೋಚಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್‌ ಕೊನೆಯ ವಾರ ದಿಲೀಪ್‌ಕುಮಾರ್‌ ಮೊಬೈಲ್‌ಗೆ ಅಪರಿಚಿತ ನಂಬರ್‌ನಿಂದ ಬಂದ ‘ಹಾಯ್‌’ ಎಂಬ ಮೆಸೇಜ್‌ಗೆ ಪ್ರತಿಕ್ರಿಯಿಸಿದಾಗ, ‘ನನ್ನ ಹೆಸರು ಪ್ರಿಯಾ, ತಮಿಳನಾಡು ಮೂಲದವಳು. ಸದ್ಯ ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದೇನೆ’ ಎಂದು ಮೆಸೇಜ್‌ನಲ್ಲಿ ತಿಳಿಸಿದ್ದಾಳೆ. ಇದಾದ ಬಳಿಕ ದಿಲೀಪ್‌ ಜತೆಗೆ ಸಲುಗೆಯಿಂದ ಮಾತನಾಡಲು ಪ್ರಾರಂಭಿಸಿದ್ದಾಳೆ. ಅ.27ರಂದು ದಿಲೀಪ್‌ಗೆ ಕರೆ ಮಾಡಿರುವ ಪ್ರಿಯಾ, ‘ಮನೆಯಲ್ಲಿ ಒಬ್ಬಳೇ ಇದ್ದೇನೆ, ಭೇಟಿಯಾಗೋಣ ಬಾ’ ಎಂದು ಆಹ್ವಾನ ನೀಡಿದ್ದಾಳೆ. ಆದರೆ, ದಿಲೀಪ್‌ಗೆ ಕೆಲಸವಿದ್ದ ಹಿನ್ನೆಲೆಯಲ್ಲಿ ಅಂದು ಭೇಟಿಯಾಗಲು ಸಾಧ್ಯವಾಗಿಲ್ಲ.

ಪ್ರೀತಿಯ ಆಹ್ವಾನ:

ಅ.28ರಂದು ಬೆಳಗ್ಗೆ 9ಕ್ಕೆ ದಿಲೀಪ್‌ಗೆ ಪುನಃ ಕರೆ ಮಾಡಿರುವ ಪ್ರಿಯಾ, ಮನೆಯಲ್ಲಿ ಯಾರು ಇಲ್ಲ ಬಾ ಎಂದು ಮನೆಯ ಲೊಕೇಶನ್‌ ಕಳುಹಿಸಿದ್ದಾಳೆ. ಈಕೆಯ ಮಾತು ನಂಬಿದ ದಿಲೀಪ್‌, ಹೊಸೂರಿನಿಂದ ಮಧ್ಯಾಹ್ನ 12ಕ್ಕೆ ಹೊರಟು 1.30ಕ್ಕೆ ಪ್ರಿಯಾ ನೀಡಿದ್ದ ಲೊಕೇಶನ್‌ಗೆ ದಿಲೀಪ್‌ ಬಂದಿದ್ದಾನೆ. ಈ ವೇಳೆ ಪ್ರಿಯಾ ಕಟ್ಟಡವೊಂದರ 3ನೇ ಮಹಡಿಯಿಂದ ಕೈ ಬೀಸಿ ಮನೆಗೆ ಬರುವಂತೆ ಕರೆದಿದ್ದಾಳೆ.

ದಿಲೀಪ್‌ನ ಸುತ್ತವರೆದು ಹಲ್ಲೆ:

3ನೇ ಮಹಡಿ ಮನೆಗೆ ಹೋಗುತ್ತಿದ್ದಂತೆ ನಾಲ್ವರು ಆರೋಪಿಗಳು ಏಕಾಏಕಿ ಮನೆ ಪ್ರವೇಶಿಸಿ ದಿಲೀಪ್‌ನನ್ನು ಸುತ್ತವರೆದು ಥಳಿಸಿದ್ದಾರೆ. ಯಾರು ನೀನು? ಏಕೆ ಬಂದಿದ್ದಿಯಾ ಎಂದು ಪ್ರಶ್ನಿಸಿದ್ದಾರೆ. ಪ್ರಿಯಾ ಆಹ್ವಾನ ನೀಡಿದ ಬಗ್ಗೆ ಹೇಳಿದಾಗ, ನೀನು ಯಾವ ಕೆಲಸಕ್ಕೆ ಬಂದಿದ್ದಿಯಾ ಅಂತಾ ನಮಗೆ ಗೊತ್ತು ಎಂದು ಮತ್ತೆ ಥಳಿಸಿದ್ದಾರೆ. ಅಷ್ಟೇ ಅಲ್ಲದೆ, ದಿಲೀಪ್‌ ಜೇಬಿನಲ್ಲಿದ್ದ ಐಪೋನ್‌, ಕಾರಿನ ಕೀ ಹಾಗೂ .26 ಸಾವಿರ ಕಿತ್ತುಕೊಂಡಿದ್ದಾರೆ.

ಅರೆನಗ್ನ ವಿಡಿಯೋ ಸೆರೆ

ಬಳಿಕ ದಿಲೀಪ್‌ ಮತ್ತು ಪ್ರಿಯಾಳನ್ನು ಅಕ್ಕಪಕ್ಕ ನಿಲ್ಲಿಸಿ ಅರೆನಗ್ನ ವಿಡಿಯೋ ಸೆರೆ ಹಿಡಿದಿರುವ ಆರೋಪಿಗಳು, .1 ಲಕ್ಷ ಕೊಡದಿದ್ದರೆ ವಿಡಿಯೋವನ್ನು ನಿನ್ನ ಪತ್ನಿಗೆ ಕಳುಹಿಸುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆ ಎಂದು ಬೆದರಿಸಿದ್ದಾರೆ. ಇದರಿಂದ ಭಯಗೊಂಡ ದಿಲೀಪ್‌, ತನ್ನ ಸ್ನೇಹಿತ ಮತ್ತು ಸಹೋದರನಿಗೆ ಕರೆ ಮಾಡಿ ತಲಾ .25 ಸಾವಿರವನ್ನು ಆನ್‌ಲೈನ್‌ನಲ್ಲಿ ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಬಳಿಕ ಈ .50 ಸಾವಿರವನ್ನು ಆರೋಪಿಗಳಿಗೆ ನೀಡಿದ್ದಾನೆ. ಈ ವೇಳೆ ಕಾರಿನ ಕೀ ಕಿತ್ತುಕೊಂಡು ದಿಲೀಪ್‌ನನ್ನು ಬಿಟ್ಟು ಕಳುಹಿಸಿದ್ದಾರೆ.

ಮಾರನೇ ದಿನ ದಿಲೀಪ್‌ಗೆ ಕರೆ ಮಾಡಿ .60 ಸಾವಿರ ಕೊಟ್ಟರೆ ಮಾತ್ರ ಕಾರನ್ನು ವಾಪಾಸ್‌ ನೀಡುವುದಾಗಿ ಬೆದರಿಸಿದ್ದಾರೆ. ನಂತರ ದಿಲೀಪ್‌ ಅವರು ಸ್ನೇಹಿತನ ಸಲಹೆ ಮೇರೆಗೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ತಿಪ್ಪಾ ರೆಡ್ಡಿ ವಿರುದ್ದ ಹನಿಟ್ರಾಪ್, ತನಿಖೆ ಬಗ್ಗೆ ADGP ಅಲೋಕ್ ಕುಮಾರ್ ಮಾಹಿತಿ

ಪ್ರಿಯಕರನೇ ಮಾಸ್ಟರ್‌ ಮೈಂಡ್‌

ಬಂಧಿತ ಆರೋಪಿಗಳಾದ ಪೈಕಿ ಹಲೀಮಾ ಅಲಿಯಾಸ್‌ ಪ್ರಿಯಾ ಹಾಗೂ ಜಾಹೀದ್‌ ಪರಸ್ಪರ ಪ್ರೀತಿಸುತ್ತಿದಾರೆ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಆರೋಪಿ ಜಾಹೀದ್‌ ತನ್ನ ಪ್ರೇಯಸಿಯನ್ನೇ ಬಳಸಿಕೊಂಡು ಈ ‘ಹನಿ ಟ್ರ್ಯಾಪ್‌’ ಯೋಜನೆ ರೂಪಿಸಿದ್ದ. ಇದೇ ರೀತಿ ಆರೋಪಿಗಳು ಹಲವರನ್ನು ಹನಿಟ್ರ್ಯಾಪ್‌ ಖೆಡ್ಡಾಕ್ಕೆ ಬೀಳಿಸಿ ಹಣ ಸುಲಿಗೆ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಆದರೆ, ಹಣ ಕಳೆದುಕೊಂಡವರು ಮರ್ಯಾದೆಗೆ ಅಂಜಿ ದೂರು ನೀಡಿಲ್ಲ. ಈ ಬಗ್ಗೆಯೂ ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios