3 ವರ್ಷದ ದತ್ತುಪುತ್ರಿಯ ಗುಪ್ತಾಂಗವನ್ನು ಸಿಗರೇಟ್‌ನಿಂದ ಸುಟ್ಟ ಪಾಪಿಗಳು, ಅಸ್ಸಾಂನಲ್ಲಿ ವೈದ್ಯ ದಂಪತಿಯ ಬಂಧನ!
ಮೂರು ವರ್ಷದ ತಮ್ಮ ಅವಳಿ ಮಕ್ಕಳ ಮೇಲೆ ಪೈಶಾಚಿಕವಾಗಿ ಹಲ್ಲೆ ಮಾಡಿದ ಕಾರಣಕ್ಕಾಗಿ ಅಸ್ಸಾಂನ ವೈದ್ಯ ದಂಪತಿಗಳಾದ ಡಾ. ಸಂಗೀತಾ ದತ್ತಾ ಹಾಗೂ ಡಾ.ವಲಿಯುಲ್ ಇಸ್ಲಾಂ ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಅದರಲ್ಲೂ ಪುತ್ರಿಯ ಗುಪ್ತಾಂಗವನ್ನು ಸಿಗರೇಟ್ ಮೂಲಕ ಸುಟ್ಟಿದ್ದರು ಎಂದು ಆರೋಪಿಸಲಾಗಿದೆ.
ಗುವಾಹಟಿ (ಮೇ.9): ಮೂರು ವರ್ಷದ ಅವಳಿ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದ ಅಸ್ಸಾಂ ವೈದ್ಯ ದಂಪತಿಗಳು ಈ ಮಕ್ಕಳಿಗೆ ಪೈಶಾಚಿಕವಾಗಿ ಹಿಂಸೆ ನೀಡುತ್ತಿದ್ದ ಕಾರಣಕ್ಕೆ ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. 3 ವರ್ಷದ ಮಗುವಿನ ಗುಪ್ತಾಂಗವನ್ನು ಸಿಗರೇಟ್ ಮೂಲಕ ಸುಟ್ಟಿದ್ದಲ್ಲದೆ, ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಕಾರಣಕ್ಕೆ ಡಾ.ಸಂಗೀತಾ ದತ್ತಾ ಹಾಗೂ ಡಾ. ವಲಿಯುಲ್ ಇಸ್ಲಾಂ ಅವರ ಮೇಲೆ ಪೊಲೀಸರು ಪೋಕ್ಸೋ ಕೇಸ್ ದಾಖಲಿಸಿ ಬಂಧನ ಮಾಡಿದ್ದಾರೆ. ಈ ಪುಟ್ಟ ಮಕ್ಕಳದ ಅಗತ್ಯ ವೈದ್ಯಕೀಯ ಪರಿಕ್ಷೆಯನ್ನು ನಡೆಸಿದ ಬಳಿಕ ಇವರ ಮೇಲೆ ಪೈಶಾಚಿಕವಾಗಿ ಹಿಂಸೆಯಾಗಿರುವುದು ಖಚಿತವಾಗಿದೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ. ವೈದ್ಯ ದಂಪತಿಗಳು ವಾಸವಿದ್ದ ರೋಮಾ ಎನ್‌ಕ್ಲೇವ್‌ನ ನಾಲ್ಕನೇ ಮಹಡಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಸೆರೆಯಲ್ಲಿ ಇರಿಸಲಾಗಿತ್ತು. 3 ವರ್ಷದ ಹೆಣ್ಣು ಮಗುವಿನ ಖಾಸಗಿ ಭಾಗಗಳಲ್ಲಿ ಗಾಯ ಮತ್ತು ಸುಟ್ಟ ಗುರುತುಗಳು ಮತ್ತು ಆಕೆಯ ದೇಹದ ಹಲವು ಭಾಗಗಳಲ್ಲಿ ಮೂಗೇಟುಗಳು ಕಾಣಿಸಿಕೊಂಡಿದೆ. ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ, ಸರಿಯಾಗಿ ನಡೆಯಲೂ ಬಾರದ ಮಗುವಿನ ಖಾಸಗಿ ಭಾಗಗಳನ್ನು ಸಿಗರೇಟಿನಿಂದ ಸುಟ್ಟಿರುವುದು ಕಂಡುಬಂದಿದೆ ಎಂದು ಗುವಾಹಟಿ ಪೊಲೀಸ್ ಕಮಿಷನರ್ ದಿಗಂತ ಬರಾಹ್ ತಿಳಿಸಿದ್ದಾರೆ.
ಅಪರಾಧವಾಗಿರುವ ರೀತಿಯನ್ನು ಗಮನದಲ್ಲಿಟ್ಟುಕೊಂಡು ಅಸ್ಸಾಂ ಪೊಲೀಸರು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ನೇಮಕ ಮಾಡುವಂತೆ ಕೋರಿದ್ದೇವೆ ಎಂದು ಗುವಾಹಟಿ ಪೊಲೀಸ್ ಕಮಿಷನರ್ ದಿಗಂತ ಬರಾಹ್ ಹೇಳಿದ್ದಾರೆ. ಹೆಣ್ಣು ಮಗುವಷ್ಟೇ ಅಲ್ಲ, ವೈದ್ಯ ದಂಪತಿಗಳು ಅಪ್ರಾಪ್ತ ಬಾಲಕನಿಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಅವರು ಪ್ರಸ್ತುತ ಗುವಾಹಟಿಯ ಗೌಹಾಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (GMCH) ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಈಗ ಅಂತಿಮ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ ಎಂದು ಬರಾಹ್ ತಿಳಿಸಿದ್ದಾರೆ.
ವೈದ್ಯ ದಂಪತಿಗಳು ಯಾಕಾಗಿ ಈ ಮಕ್ಕಳಿಗೆ ಈ ರೀತಿಯ ಪೈಶಾಚಿಕ ಹಿಂಸೆ ನೀಡುತ್ತಿದ್ದರು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಸತ್ಯವನ್ನು ತಿಳಿಯುವ ನಿಟ್ಟಿನಲ್ಲಿ ನಮ್ಮ ತನಿಖೆ ಮುಂದುವರಿಸಲಿದೆ ಎಂದು ಅವರ ತಿಳಿಸಿದ್ದಾರೆ. ಇದಲ್ಲದೆ, ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ಹಾಗೂ ಡಿಜಿಪಿ ಜಿಪಿ ಸಿಂಗ್ ಈ ಕೇಸ್ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ವೈದ್ಯಕೀಯ ವರದಿಯ ಬಳಿಕ ಇಬ್ಬರೂ ವೈದ್ಯರನ್ನು ಪೋಕ್ಸೋ ಕಾಯ್ದೆ ದಾಖಲು ಮಾಡಲಾಗಿದೆ.
ಗುವಾಹಟಿಯ ಪಲ್ಟಾನ್ ಬಜಾರ್ ಪೊಲೀಸರು ದಂಪತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಆರಂಭದಲ್ಲಿ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ ಯತ್ನ (307), ಸ್ವಯಂಪ್ರೇರಣೆಯಿಂದ ಘೋರವಾದ ಗಾಯ (325), ಅಕ್ರಮ ಸಂಯಮ (341), ಮತ್ತು ಸಾಮಾನ್ಯ ಉದ್ದೇಶದ ಮುಂದುವರಿಕೆಗಾಗಿ ಹಲವಾರು ವ್ಯಕ್ತಿಗಳು ಮಾಡಿದ ಕಾರ್ಯಗಳು (34) ಕೇಸ್ ದಾಖಲು ಮಾಡಲಾಗಿದೆ. ನಂತರ, ಜುವೆನೈಲ್ ಜಸ್ಟೀಸ್ ಆಕ್ಟ್ನ ಸೆಕ್ಷನ್ 75 ಅನ್ನು ಸಹ ಇವರ ಮೇಲೆ ಹಾಕಲಾಗಿದೆ.
ಸಾಲ ತೀರಿಸಲು ವಿಫಲವಾಗಿದ್ದಕ್ಕೆ 11ರ ಬಾಲಕಿಯ ಮದುವೆಯಾದ 40 ವರ್ಷದ ವ್ಯಕ್ತಿ!
ವೈದ್ಯ ದಂಪತಿಗಳು ಇದಕ್ಕೂ ಮುನ್ನ ಇಬ್ಬರೂ ಮಕ್ಕಳ ಸ್ವಂತ ಪೋಷಕರು ಎಂದು ಹೇಳಿದ್ದರು. ಆದರೆ, ತನಿಖೆಯ ಬಳಿಕ ಇದು ಸುಳ್ಳೆಂದು ಸಾಬೀತಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಗುವಾಹಟಿ ಮೂಲದ ಪ್ರಖ್ಯಾತ ಮನೋವೈದ್ಯೆಯಾಗಿರುವ ಡಾ. ಸಂಗೀತಾ ದತ್ತಾ ಅವರನ್ನು ಶನಿವಾರ ಬಂಧಿಸಲಾಗಿದ್ದು ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
Pocso case: ಪುತ್ರಿಯರಿಂದಲೇ ತಂದೆ ವಿರುದ್ಧ ಅತ್ಯಾಚಾರ ದೂರು, ಆರೋಪಿ ಖುಲಾಸೆ
ಪ್ರಮುಖವಾಗಿ, ಅಪ್ರಾಪ್ತ ಬಾಲಕಿಗೆ ದೈಹಿಕವಾಗಿ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಡಾ.ಸಂಗೀತಾ ದತ್ತಾ ಅವರನ್ನು ಮೇಘಾಲಯದ ರಿ ಭೋಯ್ ಜಿಲ್ಲೆಯ ಉಮ್ಸ್ನಿಂಗ್‌ನಲ್ಲಿರುವ ಮನೆಯೊಂದರಿಂದ ಪೊಲೀಸರು ಬಂಧಿಸಿದ್ದಾರೆ. ಇದಲ್ಲದೆ, ಇದೇ ಪ್ರಕರಣದಲ್ಲಿ ಡಾ ಸಂಗೀತಾ ದತ್ತ ಅವರ ಪತಿ - ಡಾ ವಲಿಯುಲ್ ಇಸ್ಲಾಂ ಮತ್ತು ಮನೆಕೆಲಸದಾಕೆ ಲಕ್ಷ್ಮಿ ರೈ ಅವರನ್ನು ಸಹ ಬಂಧಿಸಲಾಗಿದೆ.