ಆನ್‌ಲೈನ್‌ನಲ್ಲಿ ಚಂದದ ಹುಡುಗಿ ನೋಡಿ ಮದುವೆಯಾದ, ರೌಡಿಶೀಟರ್ ಎಂದು ಗೊತ್ತಾಗಿ ದಂಗಾದ!
ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ಹುಡುಗ-ಹುಡುಗಿಯನ್ನು ನೋಡಿ ಮದುವೆಯಾದ ಬಳಿಕ ಹೆಚ್ಚಾಗಿ ವಂಚನೆಯ ವಿಚಾರವೇ ಮುನ್ನಲೆಗೆ ಬರುತ್ತದೆ. ಆದರೆ, ಗುಜರಾತ್‌ನ ಪೋರಬಂದರ್‌ನಲ್ಲಿ ಯುವಕನೊಬ್ಬ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಚಂದದ ಹುಡುಗಿ ನೋಡಿ ಮದುವೆಯಾಗಿದ್ದಾನೆ. ಆದರೆ, ಮದುವೆಯಾದ ಬಳಿಕ ಆಕೆ ಲೇಡಿ ಡಾನ್ ಅನ್ನೋದು ಗೊತ್ತಾಗಿದೆ.
ನವದೆಹಲಿ (ಫೆ.16): ಗುಜರಾತ್‌ನ ಪೋರ್‌ಬಂದರ್‌ನಲ್ಲಿ ಕುತೂಹಲಕಾರಿ ಪ್ರಕರಣ ದಾಖಲಾಗಿದೆ. ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಚಂದದ ಹುಡುಗಿಯನ್ನು ನೋಡಿದ ಹುಡುಗನೊಬ್ಬ, ಆಕೆಯನ್ನು ಮದುವೆಯಾಗುವ ಆಸೆ ವ್ಯಕ್ತಪಡಿಸಿ ಮದುವೆ ಕೂಡ ಆಗಿದ್ದ. ಮದುವೆಗೂ ಮುನ್ನ ಕೆಲವು ಬಾರಿ ಆಕೆಯನ್ನು ಭೇಟಿ ಕೂಡ ಆಗಿದ್ದ. ಮದುವೆಯಾದ ಆರು ತಿಂಗಳುಗಳ ಬಳಿಕ, ತಾನು ಮದುವೆಯಾಗಿದ್ದ ಸಾಮಾನ್ಯ ಹುಡುಗಿಯಲ್ಲ ಎನ್ನುವುದು ಆತನಿಗೆ ಗೊತ್ತಾಗಿದೆ. ಯಾಕೆಂದರೆ, ಆತ ಮದುವೆಯಾಗಿದ್ದ ಹುಡುಗಿ ಲೇಡಿ ಡಾನ್, ರೌಡಿ ಶೀಟರ್ ಮಾತ್ರವಲ್ಲ ಆತ ಕನಸಲ್ಲೂ ಎಣಿಸದಷ್ಟು ಕೇಸ್‌ಗಳು ಆಕೆಯ ಮೇಲಿದ್ದವು. ಇದನ್ನು ಕೇಳಿದ್ದೇ ಹುಡುಗ ತಲೆ ತಿರುಗಿಹೋಗಿದೆ. ಮದುವೆಯಾಗಿ ಹನಿಮೂನ್ ಎನ್ನುತ್ತಿದ್ದ ಹುಡುಗನಿಗೆ ತನ್ನ ಹೆಂಡ್ತಿ ಲೇಡಿ ಡಾನ್ ಅನ್ನೋದು ಗೊತ್ತಾದಾಗ ಪೋರ್‌ಬಂದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಬಂದಿದ್ದಾನೆ. ಅಹಮದಾಬಾದ್ ನಗರದ ಹುಡುಗನಿಗೆ ಕಳೆದ ಕೆಲವು ವರ್ಷಗಳಿಂದ ಮನೆಯಲ್ಲಿ ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದರು. ಇದಕ್ಕೆ ಒಪ್ಪಿದ್ದ ಆತ ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ಹುಡುಗಿ ಹುಡುಕುತ್ತಿದ್ದ. ಈ ವೇಳೆ ಅಸ್ಸಾಂನ ಗುವಾಹಟಿಯ ರಿಟಾ ದಾಸ್ ಎನ್ನುವ ಹುಡುಗಿ ಈತನಿಗೆ ಇಷ್ಟವಾಗಿದ್ದಳು. ನಾನು ಸಣ್ಣ ವಯಸ್ಸಿನಲ್ಲಿಯೇ ಮದುವೆಯಾಗಿದ್ದೆ. ಈಗ ವಿಚ್ಛೇದನ ಪಡೆದುಕೊಂಡಿದ್ದು ಒಬ್ಬಳೇ ಬದುಕುತ್ತಿದ್ದೇನೆ ಎಂದಿದ್ದಳು. ಆಕೆಯ ಮಾತನ್ನು ನಂಬಿದ್ದ ಆತ ಪ್ರತಿ ದಿನ ಮಾತುಕತೆ ಆರಂಭ ಮಾಡಿದ್ದ.
ಕೊನೆಗೆ ಒಂದು ದಿನ ಇಬ್ಬರೂ ಮದುವೆಯಾಗುವ ತೀರ್ಮಾನ ಮಾಡಿದ್ದರು. ಅದರಂತೆ ಅಹಮದಾಬಾದ್‌ನಲ್ಲಿ ಸರಳವಾಗಿ ಮದುವೆಯಾಗಿದ್ದರು. ಸಂಸಾರ ಸುಖವಾಗಿ ಸಾಗುತ್ತಿತ್ತು. ಆದರೆ, ಮದುವೆಯಾಗಿ ಆರು ತಿಂಗಳ ಬಳಿಕ, ಒಂದು ದಿನ ರಿಟಾ ದಾಸ್ ತನ್ನ ಜಮೀನಿನ ಕುರಿತಾದ ಕೇಸ್ ಇದೆ ಎಂದು ಗುವಾಹಟಿಗೆ ತೆರಳಿದ್ದರು. ಆದರೆ, ಹೋಗಿ ನಾಲ್ಕು ದಿನಗಳಾದರೂ ಪತ್ತೆಯಿರಲಿಲ್ಲ. ಪತ್ನಿಗೆ ಎಷ್ಟು ಸಾರಿ ಫೋನ್ ಮಾಡಿದರೂ, ಉತ್ತರ ನೀಡಿರಲಿಲ್ಲ.
ಒಂದು ದಿನ ಪತಿಯ ಕರೆಯನ್ನು ಸ್ವೀಕರಿಸಿದ ವಕೀಲ ಇದ್ದ ವಿಷಯವನ್ನೆಲ್ಲಾ ತಿಳಿಸಿದ್ದಾನೆ. 'ನಿನ್ನ ಪತ್ನಿ ಜೈಲಿನಲ್ಲಿದ್ದಾಳೆ. ಕೋರ್ಟ್ ಕೂಡ ಜಾಮೀನು ನೀಡಲು ಒಂದು ಲಕ್ಷ ಕಟ್ಟುವಂತೆ ಹೇಳಿದೆ' ಎಂದು ಮಾಹಿತಿ ನೀಡಿದ. ವಿಷಯ ಸರಿಯಾಗಿ ತಿಳಿದುಕೊಳ್ಳದ ಗಂಡ 1 ಲಕ್ಷ ರೂಪಾಯಿಯನ್ನು ವಕೀಲನಿಗೆ ಕಳುಹಿಸಿಕೊಟ್ಟಿದ್ದಾನೆ. ಆದರೆ, ವಕೀಲ ಕಳುಹಿಸಿಕೊಟ್ಟ ಕೋರ್ಟ್ ದಾಖಲೆಗಳಲ್ಲಿ ಪತ್ನಿಯ ಹೆಸರನ್ನು ರಿಟಾ ದಾಸ್ ಎನ್ನುವ ಬದಲು ರಿಟಾ ಚೌಹಾಣ್ ಎಂದು ಹಾಕಿದ್ದರಿಂದ ಪತಿ ಅನುಮಾನಗೊಂಡಿದ್ದ.
ಇದೇ ವಿಚಾರವಾಗಿ ಮಾತನಾಡಲು ಮತ್ತೆ ಆತ ವಕೀಲರಿಗೆ ಫೋನ್ ಮಾಡಿದ್ದ. ಆದರೆ, ಅವರಿಂದ ಯಾವುದೇ ಉತ್ತರ ಬಂದಿರಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ಗೂಗಲ್‌ನಲ್ಲಿ ರಿಟಾ ಚೌಹಾಣ್ ಹೆಸರಿನಲ್ಲಿ ಮಾಹಿತಿ ಹುಡುಕಿದ್ದಾನೆ. ಆಗ ಪತ್ನಿ ಅಸ್ಸಾಂನ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎನ್ನುವುದು ಗೊತ್ತಾಗಿದೆ. 5 ಸಾವಿರಕ್ಕೂ ಅಧಿಕ ಕಾರ್‌ಗಳ ಕಳ್ಳತನ, ಖಡ್ಗಮೃಗಗಳ ಬೇಟೆ, ಅಕ್ರಮವಾಗಿ ಶಸ್ತ್ರಾಸ್ತ್ರ ಸಾಗಾಟದಂಥ ಭಾರಿ ಕೇಸ್‌ಗಳಿದ್ದವು. ಗುವಾಹಟಿ ಪೊಲೀಸ್ಅನ್ನು ಗೂಗಲ್‌ನಲ್ಲಿ ಹುಡುಕಿದಾಗ, ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಕಾರು ಕಳ್ಳತನ ಪ್ರಕರಣದಲ್ಲಿ ಪತ್ನಿ ಹೆಸರು ಕಂಡು ದಂಗಾಗಿದ್ದ.
ಬೂದಿ ಎಂದು ಲೇವಡಿ ಮಾಡ್ತೀರಲ್ಲ, ಅಮೆಜಾನ್‌ನಲ್ಲಿ 1 ಕೆಜಿಗೆ 1800ರೂಪಾಯಿ ಎಂದ ಬಾಬಾ ರಾಮ್‌ದೇವ್!
ಈ ಪ್ರಕರಣಗಳಲ್ಲಿ ರಿಟಾಳ ಮೊದಲ ಪತಿ ಅನಿಲ್ ನನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಮೋಸ ಹೋದ ವಿಷಯ ತಿಳಿದ ಎರಡನೇ ಪತಿ ಕೊನೆಗೆ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದ ಪತ್ನಿಯ ಶೀಲದ ಮೇಲೆ ಶಂಕೆ!: ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಪತಿ
ಪತಿಯ ನಂಬರ್ ಬ್ಲಾಕ್: ಇಷ್ಟೆಲ್ಲಾ ಘಟನೆಯ ಬಳಿಕ, ಪತ್ನಿಗೆ ಫೋನ್ ಮಾಡಿ ತನಗೆ ಮೋಸ ಮಾಡಿದ್ದೇಕೆ ಎಂದು ಕೇಳಲು ಪ್ರಯತ್ನಿಸಿದ್ದಾನೆ. ಈ ವೇಳೆ ರಿಟಾ ಆಗಿದ್ದೆಲ್ಲಾ ಆಗಿಹೋಯಿತು. ಈಗೇನೋ ಮಾಡೋಕೆ ಆಗಲ್ಲ ಎಂದಿದ್ದಲ್ಲದೆ, ಪತಿಯ ನಂಬರ್ ಕೂಡ ಬ್ಲಾಕ್ ಮಾಡಿದ್ದಾಳೆ. ಕುಟುಂಬದ ಸದಸ್ಯರು ಕೂಡ ಆನ್‌ಲೈನ್‌ನಲ್ಲಿ ಹುಡುಗಿಯನ್ನು ಹುಡುಕಿದ ಇಡೀ ವಿಷಯದ ಮೂಲದ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದಾರೆ. ಪೋರಬಂದರ್‌ನ ಮಹಾರಾಜ್‌ಬಾಗ್ ಪ್ರದೇಶದ ಜಲರಾಮ್ ಕುಟೀರ್ ನಿವಾಸಿ ವಿಮಲ್ ತುಳಸಿದಾಸ್ ಕರಿಯಾ ಅವರ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕರಿಯಾ ಮಾಣೆಕ್ ಚೌಕ್ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ವಿತರಿಸಲು ಕೆಲಸ ಮಾಡುತ್ತಿದ್ದಾನೆ.