ಕೃಷ್ಟ ಮಠದೊಳಗೆ ಕಳ್ಳರ ಕೈಚಳ, ಭಕ್ತರೊಬ್ಬ ಬ್ಯಾಗಿನಿಂದ ಚಿನ್ನಾಭರಣ ಮಾಯ
* ಉಡುಪಿಯ ಕೃಷ್ಟ ಮಠದೊಳಗೆ ಕಳ್ಳರ ಕೈಚಳ,
* ಭಕ್ತರೊಬ್ಬ ಬ್ಯಾಗಿನಿಂದ ಚಿನ್ನಾಭರಣ ಮಾಯ
* ಉಡುಪಿ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲು
ವರದಿ-ಶಶಿಧರ ಮಾಸ್ತಿಬೈಲು , ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ, (ಮೇ.14): ಉಡುಪಿಯ ಕೃಷ್ಣ ಮಠದಲ್ಲಿ ಕೃಷ್ಣ ದೇವರ ತೊಟ್ಟಿಲು ಪೂಜೆ ನೋಡುತ್ತಿದ್ದ ಮಹಿಳೆಯೊಬ್ಬರ ಬ್ಯಾಗಿನಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳುವಾಗಿರು ಪ್ರಕರಣ ನಡೆದಿದೆ.
ಹೌದು.. ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಭಕ್ತರೊಬ್ಬರ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವಾಗಿದೆ. ಬೆಂಗಳೂರಿನ ಅತ್ತಿಬೆಲೆ ಮೂಲದ ಷಣ್ಮುಗಂ ಅವರ ಕುಟುಂಬ, ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು, ನಂತರ ಕೃಷ್ಣಮಠದ ವಸಂತ ಮಂಟಪದ ಬಳಿ ತೊಟ್ಟಿಲು ಸೇವೆ ವೀಕ್ಷಿಸುತ್ತಿದ್ದರು. ಈ ವೇಳೆ ದೇವರ ಆರತಿ ಪಡೆಯುವಾಗ ಕಳ್ಳರು ಷಣ್ಮುಗಂ ರವರ ಹೆಂಡತಿಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣದ ಬಾಕ್ಸ್ ನ್ನು ಕಳವು ಮಾಡಿದ್ದಾರೆ.
ಬಾಕ್ಸ್ ನಲ್ಲಿ 58 ಗ್ರಾಂ ತೂಕದ ಬಳೆಗಳು, 2.16 ಗ್ರಾಂ ತೂಕದ ಕಿವಿಯೊಲೆ, 2.13 ಗ್ರಾಂ ತೂಕದ ಮಗುವಿನ ಚಿಕ್ಕ ಬಳೆ, 1.20 ಗ್ರಾಂ ತೂಕದ ಪೆಂಡೆಂಟ್ ಇರುವ ಚಿನ್ನದ ಸರ, 1.48 ಗ್ರಾಂ ತೂಕದ ದೊಡ್ಡ ಚಿನ್ನದ ಸರ1 ಹೀಗೆ ಒಟ್ಟು 155 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದೆ. ಕಳುವಾದ ಚಿನ್ನಾಭರಣಗಳ ಒಟ್ಟು ಅಂದಾಜು ಮೊತ್ತ 6,30,000 ಮೌಲ್ಯ ರೂಪಾಯಿ ಎಂದು ತಿಳಿದುಬಂದಿದೆ .ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಕಾರಿನಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಹಣ ಎಗರಿಸಿದ ಕಳ್ಳರು!
ರಜಾದಿನಗಳು ಮುಗಿಯುತ್ತಾ ಬಂತು, ಹಾಗಾಗಿ ರಜೆ ಮುಗಿಯುವುದರೊಳಗೆ ಮಕ್ಕಳನ್ನು ಪ್ರವಾಸ ಕರೆದುಕೊಂಡು ಹೋಗಬೇಕು ಎಂದು ಆತುರ ದಲ್ಲಿರುವ ಜನರು ಪ್ರವಾಸಿ ತಾಣಗಳತ್ತ ದಾಂಗುಡಿ ಇಡುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಂತೂ ದೇವಾಲಯಗಳಲ್ಲಿ ಸಾವಿರಾರು ಜನ ಬರುತ್ತಿದ್ದಾರೆ. ಉಡುಪಿಯ ಕೃಷ್ಣ ಮಠ ಮತ್ತು ಕೊಲ್ಲೂರಿನಲ್ಲಿ ಅತೀ ಹೆಚ್ಚು ಭಕ್ತರು ಭೇಟಿ ಕೊಡುತ್ತಿದ್ದಾರೆ. ಶನಿವಾರ ಒಂದೇ ದಿನ ಕೊಲ್ಲೂರು ಕ್ಷೇತ್ರಕ್ಕೆ 10 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ಕೊಟ್ಟಿದ್ದಾರೆ. ಹೀಗೆ ಬರುವ ಭಕ್ತರಿಗೆ ದೇವಾಲಯದಲ್ಲಿ ದರ್ಶನ, ಭೋಜನ , ಪ್ರಸಾದ, ಸ್ವೀಕರಿಸುವುದೆಂದರೆ ಎಲ್ಲಿಲ್ಲದ ಉತ್ಸಾಹ. ಉತ್ಸಾಹದಲ್ಲಿ ಮೈಮರೆಯುವುದು ಕೂಡ ಸಹಜ. ಭಕ್ತಿಪರವಶರಾಗಿ ಮೈಮರೆತ ಮಹಿಳೆಯೊಬ್ಬರು ಇದೀಗ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದ್ದಾರೆ.
ಪ್ರವಾಸ ಬರುವಾಗ ಚಿನ್ನಾಭರಣ ಯಾಕೆ ಬೇಕು?
ಜಾಲಿ ಮೂಡ್ ನಲ್ಲಿ ಪ್ರವಾಸ ಬರುವಾಗ ಆದಷ್ಟು ಕಡಿಮೆ ರಿಸ್ಕ್ ತೆಗೆದುಕೊಳ್ಳಬೇಕು. ಮುಖ್ಯವಾಗಿ ಪ್ರವಾಸ ಹೋಗುವ ಸಮಯದಲ್ಲಿ ತಮ್ಮ ಪ್ರವಾಸದ ವಿವರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬರೆಯಕೂಡದು. ಮನೆಯವರು ಪ್ರವಾಸದ ವಿವರ ಸಂಗ್ರಹಿಸುವ ಕಳ್ಳರು ಅಂತಹ ಮನೆಗಳನ್ನು ಆಯ್ಕೆಮಾಡಿಕೊಂಡು ಮನೆಗಳ್ಳತನ ಮಾಡುವ ಪ್ರಕರಣಗಳು ಸಾಕಷ್ಟು ಬಯಲಾಗಿದೆ. ಎಚ್ಚರಿಕೆ ವಹಿಸಬೇಕಾದ ಇನ್ನೊಂದು ವಿಚಾರವೆಂದರೆ ಪ್ರವಾಸದ ವೇಳೆ ಆದಷ್ಟು ಕಡಿಮೆ ಆವರಣಗಳನ್ನು ಧರಿಸುವುದು ಅಗತ್ಯ.
ಇಷ್ಟಕ್ಕೂ ಪ್ರವಾಸದ ವೇಳೆ ಚಿನ್ನಾಭರಣಗಳ ಶೋಕಿ ಯಾಕೆ ಬೇಕು ಹೇಳಿ? ಪ್ರವಾಸಿಗರು ಹೆಚ್ಚಾಗಿ ಬರುವ ಸಮಯ ಮತ್ತು ಸ್ಥಳವನ್ನೇ ಚೋರರು ಆಯ್ಕೆ ಮಾಡಿಕೊಳ್ಳುತ್ತಾರೆ. ಸಮುದ್ರತೀರ ಗಳಿರಬಹುದು ದೇವಸ್ಥಾನ ಗಳಿರಬಹುದು ಹೆಚ್ಚಾಗಿ ಜನ ಸೇರುವ ಪ್ರದೇಶದಲ್ಲಿ ತಮ್ಮ ಕರಾಮತ್ತು ತೋರಿಸುತ್ತಾರೆ. ಹಾಗಾಗಿ ಪ್ರವಾಸದ ಸಂದರ್ಭದಲ್ಲಿ ಆದಷ್ಟು ಕಡಿಮೆ ಆಭರಣ ಹಾಗೂ ನಗದನ್ನು ಇಟ್ಟುಕೊಳ್ಳಿ ಎಂದು ಪೊಲೀಸರು ಎಚ್ಚರಿಸಿದ್ದಾರೆ.