ಪ್ರೀತಿ ನಿರಾಕರಿಸಿದ್ದಕ್ಕೆ ಹುಡುಗಿ ಮೇಲೆ ಆ್ಯಸಿಡ್ ದಾಳಿ ಮಾಡಿದ ವಿಕೃತ ಪ್ರೇಮಿ

Bengaluru Acid Attack News: ಪ್ರೀತಿ ನಿರಾಕರಿಸಿದ ಒಂದೇ ಕಾರಣಕ್ಕೆ ಹುಚ್ಚು ಪ್ರೇಮಿಯೊಬ್ಬ ಪ್ರೀತಿಸಿದ ಹುಡುಗಿಯ ಮೇಲೆ ಆ್ಯಸಿಡ್ ದಾಳಿ ಮಾಡಿರುವ ದುರಂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

Gilted lover attacks girl with acid for refusing his proposal

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಮನಕಲಕುವ ಘಟನೆ ನಡೆದಿದೆ. ಪ್ರೀತಿ ನಿರಾಕರಿಸಿದ ಕಾರಣಕ್ಕೆ ಪ್ರೀತಿಸಿದ ಹುಡುಗಿಯ ಮೇಲೆ ಆಸಿಡ್‌ ದಾಳಿ ಮಾಡಿರುವ ದುರಂತ ಘಟನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದಿದೆ. 23 ವರ್ಷದ ಸಂತ್ರಸ್ಥೆಯ ಮೇಲೆ ಸುಂಕದಕಟ್ಟರ ಮುತ್ತೂಟು ಫಿನ್‌ಕಾರ್ಪ್‌ ಬಳಿ ಹುಚ್ಚು ಪ್ರೇಮಿಯೊಬ್ಬ ಆಸಿಡ್‌ ದಾಳಿ ನಡೆಸಿದ್ದಾನೆ. ಆರೋಪಿಯನ್ನು ನಾಗೇಶ್‌ ಎಂದಯ ಗುರುತಿಸಲಾಗಿದೆ. 

ಮಾಹಿತಿಯ ಪ್ರಕಾರ ನಾಗೇಶ್‌ ಯುವತಿಯನ್ನು ಹಲವು ದಿನಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ. ಎಲ್ಲಿ ಹೋದರೂ ಹಿಂದೆ ಹಿಂದೆಯೇ ಸುತ್ತುತ್ತಿದ್ದ. ಹುಡುಗಿ ತನಗೆ ಇಷ್ಟವಿಲ್ಲ ಎಂದು ಎಷ್ಟು ಬಾರಿ ಹೇಳಿದರೂ ಕೇಳಲು ನಾಗೇಶ್‌ ಸಿದ್ಧನಿರಲಿಲ್ಲ. ಕಡೆಯಬಾರಿಗೆ ಪ್ರೀತಿಸುತ್ತೀಯಾ ಇಲ್ಲವಾ ಎಂದು ಧಮಕಿ ಹಾಕಿದ್ದಾನೆ, ಹುಡುಗಿ ನಿರಾಕರಿಸಿದಾಗ ಆಸಿಡ್‌ ಎರಚಿದ್ದಾನೆ ಎಂದು ಸ್ಥಳೀಯ ಮೂಲಗಳು ಮಾಹಿತಿ ನೀಡಿವೆ. ಯುವತಿ ಇಂದು (ಗುರುವಾರ) ಬೆಳಗ್ಗೆ ಕಚೇರಿಗೆ ತೆರಳಲು ಮುತ್ತೂಟು ಫಿನ್‌ಕಾರ್ಪ್‌ ಬಳಿ ಹೋದಾಗ ವಿಕೃತ ಪ್ರೇಮಿ ನಾಗೇಶ್‌ ಈ ಕೃತ್ಯ ಎಸಗಿದ್ದಾನೆ. 

ಸದ್ಯ ಯುವತಿಯನ್ನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯ ಬಳಿಕ ನಾಗೇಶ್‌ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಈಗಾಗಲೇ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಏಳು ವರ್ಷಗಳ ಪ್ರೀತಿ:

ಇದು ಒಂದೆರಡು ದಿನದ ಪ್ರೇಮ ನಿವೇದನೆಯಲ್ಲ, ಬರೋಬ್ಬರಿ ಏಳು ವರ್ಷಗಳಿಂದ ಪ್ರೀತಿಸುವಂತೆ, ಮದುವೆಯಾಗುವಂತೆ ನಾಗೇಶ್‌ ಪೀಡಿಸುತ್ತಿದ್ದ ಎನ್ನಲಾಗಿದೆ. ನಿನ್ನೆ ಮತ್ತೆ ಮದುವೆಯಾಗುವಂತೆ ಆತ ಕೇಳಿದಾಗ, ಇಬ್ಬರ ನಡುವೆ ಜಗಳವಾಗಿದೆ. ಹುಡುಗಿ ಸಾಧ್ಯವೇ ಇಲ್ಲವೆಂದು ಹೇಳಿದ್ದಾಳೆ. ಇದಾದ ನಂತರ ಇಂದು ಮುಂಜಾನೆ ನಾಗೇಶ್‌ ಆಸಿಡ್‌ ದಾಳಿ ಮಾಡಿದ್ದಾನೆ. 

ಇದನ್ನೂ ಓದಿ: ಹಣಕ್ಕಾಗಿ‌ ಮಗುವನ್ನೇ ಮಾರಾಟ ಮಾಡಿದ ತಾಯಿ: ಐವರ ಬಂಧನ
   

ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಏಷಿಯಾನೆಟ್‌ ಸುವರ್ಣ ನ್ಯೂಸ್‌ ಜತೆ ಮಾತನಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದರು. "ಯುವತಿ ಮುತ್ತೂಟ್ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಎಂಟುವರೇ ಸುಮಾರಿಗೆ ಯುವತಿ ತಂದೆ ಬೈಕ್ ನಲ್ಲಿ ಕರೆದುಕೊಂಡು ಬಂದು ಡ್ರಾಪ್ ಮಾಡಿ ಹೋಗಿದ್ದರು. ಯುವತಿ ತಂದೆ ಡ್ರಾಪ್ ಮಾಡಿ ಹೋದ ಕೆಲವೇ ಕ್ಷಣದಲ್ಲಿ ಯುವತಿ ಮೇಲೆ ಆರೋಪಿ ನಾಗೇಶ್ ಆಸಿಡ್ ಎರಚಿದ್ದಾನೆ. ಆರೋಪಿ ನಾಗೇಶ್ ಮೊದಲೇ ಆಸಿಡ್ ಹಾಕಲು ಸಿದ್ದತೆ ಮಾಡ್ಕೊಂಡು ಬಂದಿದ್ದ. ಸದ್ಯ ಯುವತಿಯ ಪರಿಸ್ಥಿತಿ ಗಂಭೀರವಾಗಿದೆ. ಒಂದು ವಾರಗಳ ಕಾಲ ತ್ರೀವ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತದೆ," ಎಂದು ಮಾಹಿತಿ ನೀಡಿದರು.

ಮೂಲಗಳ ಪ್ರಕಾರ ಶೌಚಾಲಯಕ್ಕೆ ಬಳಸುವ ಆ್ಯಸಿಡ್ ನಿಂದ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಆ್ಯಸಿಡ್ ಯಾವುದು ಎಂಬುದರ ಬಗ್ಗೆ  ತನಿಖೆ ಮಾಡಲಾಗುತ್ತಿದ್ದು, ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದ್ದು ಶೀಘ್ರದಲ್ಲಿ ಬಂಧಿಸುವ ವಿಶ್ವಾಸ ಪೊಲೀಸರಿಗಿದೆ.

ಇದನ್ನೂ ಓದಿ: ಕಣ್ಣಾ ಮುಚ್ಚಾಲೆ ಆಟವಾಡುವಾಗ ಇಬ್ಬರು ಬಾಲಕಿಯರ ಸಾವು

ಸಂತ್ರಸ್ಥೆಯ ತಂದೆ ಹೇಳುವ ಪ್ರಕಾರ, ಅವರು ಬೈಕ್ ನಲ್ಲಿ ಆಫೀಸ್ ಬಿಟ್ಟು ಬಂದಿದ್ದಾರೆ. ಬಿಟ್ಟು ಬಂದು ಗ್ಯಾಸ್ ತೆಗೆದುಕೊಳ್ಳಲು ಅಂಗಡಿಗೆ ಹೋದಾಗ ಮಗಳು ಕರೆ ಮಾಡಿದ್ದಾಳೆ. "ನಾಗೇಶ್ ಆಸಿಡ್ ಹಾಕಿದ್ದಾನೆ ಅಂತ ಕಾಲ್ ಮಾಡಿದ್ಲು. ತಕ್ಷಣ ಸ್ಥಳಕ್ಕೆ ಹೋಗಿ ಮಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇನೆ," ಎಂದು ತಮ್ಮ ಅಳಲು ತೋಡಿಕೊಂಡರು. 

ಅಣ್ಣ ಅಂದಿದ್ದೇ ತಪ್ಪಾಯ್ತು:

ಸಂತ್ರಸ್ಥ ಯುವತಿ ಮತ್ತು ನಾಗೇಶ್‌ಗೆ ಪರಿಚಯವೇನೋ ಇತ್ತು. ಆತ ಯಾವಾಗಲೂ ಪ್ರೀತಿಸು ಅನ್ನುತ್ತಿದ್ದ, ಆದರೆ ಈಕೆ ನೀನು ನನ್ನ ಅಣ್ಣನಂತೆ ಅಂದುಬಿಟ್ಟಿದ್ದಳು. ಇದೇ ಕಾರಣಕ್ಕೆ ಅವನ ಕೋಪ ಹೆಚ್ಚಾಗಿದ್ದು ಎನ್ನಲಾಗಿದೆ. ಯುವತಿ ಹೆಗ್ಗನಹಳ್ಳಿ ನಿವಾಸಿ. ಅವರ ಮನೆಯ ಪಕ್ಕದಲ್ಲೇ ನಾಗೇಶ್‌ ಕೂಡ ಬಾಡಿಗೆ ಮನೆಯಲ್ಲಿದ್ದ. ಹುಡುಗಿ ಎಂ ಕಾಂ ವಿದ್ಯಾಭ್ಯಾಸ ಮುಗಿಸಿ ಮುತ್ತೂಟು ಫಿನ್‌ಕಾರ್ಪ್‌ ಸೇರಿಕೊಂಡಿದ್ದಳು. 9 ತಿಂಗಳಿಂದ ಹಿಂದಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದಳು. 

"

Latest Videos
Follow Us:
Download App:
  • android
  • ios