ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದ ಆರೋಪಿಗಳು, ಇದನ್ನು ನೋಡಿ ಸಂಪರ್ಕಿಸಿದವರಿಗೆ ಶುಲ್ಕ ಎಂದು ಲಕ್ಷಾಂತರ ರು. ವಸೂಲಿ, ಸಾಲ ಮಂಜೂರು ಆದೇಶ ಪ್ರತಿ ನೀಡಿ ವಂಚನೆ, ಸ್ವಾಮಿನಾಥನ್‌ ಫೈನಾನ್ಶಿಯಲ್‌ ಸರ್ವೀಸ್‌ನ ಇಬ್ಬರ ಬಂಧನ. 

ಬೆಂಗಳೂರು(ಡಿ.29):  ಕಡಿಮೆ ಬಡ್ಡಿಗೆ ಸಾಲ ಕೊಡುವುದಾಗಿ ನಂಬಿಸಿ ಜನರಿಗೆ ಲಕ್ಷಾಂತರ ರುಪಾಯಿ ವಂಚಿಸಿದ ಆರೋಪದ ಮೇರೆಗೆ ಫೈನಾನ್ಸ್‌ ಸಂಸ್ಥೆ ವ್ಯವಸ್ಥಾಪಕ ಸೇರಿದಂತೆ ಇಬ್ಬರನ್ನು ವೈಯಾಲಿಕಾವಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ ನಿವಾಸಿಗಳಾದ ವೆಂಕಟೇಶ್‌ ಹಾಗೂ ಸುಗುಣ ಬಂಧಿತರಾಗಿದ್ದು, ಈ ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿರುವ ಸ್ವಾಮಿನಾಥನ್‌ ಫೈನಾನ್ಸ್‌ ಸಂಸ್ಥೆಯ ಮಾಲಿಕ ಸ್ವಾಮಿನಾಥನ್‌ ಸುಬ್ಬಯ್ಯ ಚೆಟ್ಟಿ, ಹಿರಿಯ ವ್ಯವಸ್ಥಾಪಕ ಲಕ್ಷ್ಮೇನಾರಾಯಣ್‌, ಸಿಬ್ಬಂದಿ ವತ್ಸಲ ಹಾಗೂ ಬಾಲು ಸೇರಿದಂತೆ ಇತರರ ಪತ್ತೆಗೆ ತನಿಖೆ ನಡೆದಿದೆ.

ಇತ್ತೀಚೆಗೆ ಸಹಕಾರ ನಗರದ ಶ್ರೀದೇವಿ ಅವರಿಗೆ 10 ಕೋಟಿ ಸಾಲ ಮಂಜೂರು ಮಾಡುವುದಾಗಿ ಹೇಳಿ 11 ಲಕ್ಷ ಪಡೆದು ಆರೋಪಿಗಳು ವಂಚಿಸಿದ್ದರು. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಪ್ರಕರಣ ಸಂಬಂಧ ಸ್ವಾಮಿನಾಥನ್‌ ಫೈನಾನ್ಸ್‌ ಸಂಸ್ಥೆಯ ವ್ಯವಸ್ಥಾಪಕ ವೆಂಕಟೇಶ್‌ ಹಾಗೂ ಲೆಕ್ಕ ವಿಭಾಗದ ಅಧಿಕಾರಿ ಸುಗುಣ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು: ನೌಕರರಿಂದಲೇ ಜಲಮಂಡಳಿಗೆ 1 ಕೋಟಿ ಟೋಪಿ..!

ನಾಲ್ಕು ತಿಂಗಳ ಹಿಂದೆ ವೈಯಾಲಿಕಾವಲ್‌ನ ವಿನಾಯಕ ಸರ್ಕಲ್‌ ಬಳಿ ‘ಸ್ವಾಮಿನಾಥನ್‌ ಫೈನಾನ್ಶಿಯಲ್‌ ಸವೀರ್‍ಸ್‌’ ಹೆಸರಿನ ಸಂಸ್ಥೆಯನ್ನು ಸ್ವಾಮಿನಾಥನ್‌ ಸುಬ್ಬಯ್ಯ ಚೆಟ್ಟಿಸ್ಥಾಪಿಸಿದ್ದ. ಈ ಸಂಸ್ಥೆಗೆ ಹಿರಿಯ ವ್ಯವಸ್ಥಾಪಕರಾಗಿ ಲಕ್ಷ್ಮೇನಾರಾಯಣ್‌, ವ್ಯವಸ್ಥಾಪಕ ವೆಂಕಟೇಶ್‌, ಸುಗುಣ ಹಾಗೂ ವತ್ಸಲ ಸೇರಿದಂತೆ ಇತರರನ್ನು ಸ್ವಾಮಿನಾಥನ್‌ ನೇಮಿಸಿಕೊಂಡಿದ್ದ. ಕಳೆದ ಅಕ್ಟೋಬರ್‌ ತಿಂಗಳಲ್ಲಿ ದಿನಪತ್ರಿಕೆಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಪ್ರಾಪರ್ಟಿ ಲೋನ್‌ ಕೊಡುವುದಾಗಿ ಸಂಸ್ಥೆ ಜಾಹೀರಾತು ಪ್ರಕಟಿಸಿತ್ತು.

ಈ ಜಾಹೀರಾತು ನೋಡಿದ ಶ್ರೀದೇವಿ ಅವರು, ಸ್ವಾಮಿನಾಥನ್‌ ಫೈನಾನ್ಸ್‌ ಸಂಸ್ಥೆಗೆ ತೆರಳಿ ಸಾಲಕ್ಕೆ ಮನವಿ ಮಾಡಿದ್ದಾರೆ. ಆಗ ಫೈನಾನ್ಸ್‌ ಸಂಸ್ಥೆಯ ಅಧಿಕಾರಿ ಸುಗುಣ, ನಮ್ಮ ಕಂಪನಿಯು ಆರ್‌ಬಿಐ ನಿಯಮಾವಳಿ ಪ್ರಕಾರ ಪರವಾನಿಗೆ ಪಡೆದಿದೆ ಎಂದಿದ್ದಳು. ಅಲ್ಲದೆ, ಸಾಲಕ್ಕೆ ಲೀಗಲ್‌ ಚಾಜ್‌ರ್‍ .6 ಸಾವಿರ, ಭೌತಿಕ ಪರಿಶೀಲನೆಗೆ .10 ಸಾವಿರ, ಎಂಓಟಿಡಿ ಶುಲ್ಕ .10 ಸಾವಿರ ಹಾಗೂ ಸಾಲದ ಮೇಲಿನ ವಿಮೆ ಶುಲ್ಕ .5 ಲಕ್ಷ ಪಾವತಿಸಬೇಕು ಎಂದು ಸುಗುಣ ತಿಳಿಸಿದ್ದಳು. ಒಂದು ವೇಳೆ ನಾವು ಹೇಳಿದ ರೀತಿಯಲ್ಲಿ ಸಾಲ ಮಂಜೂರು ಮಾಡಲು ವಿಫಲವಾದ್ದಲ್ಲಿ ಗ್ರಾಹಕರಿಂದ ಶುಲ್ಕ ರೂಪದಲ್ಲಿ ಪಡೆದ ಹಣವನ್ನು ಬಡ್ಡಿ ಸಮೇತ ಮರು ಪಾವತಿಸುವುದಾಗಿ ಸುಗುಣ ತಿಳಿಸಿದ್ದಳು.

Bengaluru crime: ಕಲರ್ ಜೆರಾಕ್ಸ್ ನೋಟು ಕೊಟ್ಟು ವಂಚನೆ; ಮೂವರು ಕಿಲಾಡಿ ಕಳ್ಳರು ಪೊಲೀಸರ ಬಲೆಗೆ

ಈ ಮಾತು ನಂಬಿದ ಶ್ರೀದೇವಿ ಅವರು, .10.4 ಕೋಟಿಗೆ ಪ್ರತ್ಯೇಕವಾಗಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಇದಕ್ಕಾಗಿ .11.2 ಲಕ್ಷವನ್ನು ಶುಲ್ಕ ರೂಪದಲ್ಲಿ ಅವರು ಪಾವತಿಸಿದ್ದರು. ಇದಾದ ನಂತರ ಡಿ.7ರಂದು ಸಾಲ ಮಂಜೂರಾತಿ ಆದೇಶದ ಪ್ರತಿಯನ್ನು ಶ್ರೀದೇವಿಗೆ ಆರೋಪಿಗಳಾದ ಲಕ್ಷ್ಮೇನಾರಾಯಣ್‌ ಹಾಗೂ ಸುಗುಣ ನೀಡಿದ್ದರು. ಆದರೆ ಎರಡು ವಾರಗಳು ಕಳೆದರೂ ಸಾಲದ ಹಣ ಮಾತ್ರ ಜಮೆಯಾಗಿರಲಿಲ್ಲ. ಈ ಬಗ್ಗೆ ವಿಚಾರಿಸಿದರೆ ಏನಾದರೂ ಕಾರಣ ಕೊಟ್ಟು ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದರು. ಕೊನೆಗೆ ತಾವು ವಂಚನೆಗೆ ಒಳಗಾಗಿರುವುದು ಶ್ರೀದೇವಿ ಅವರಿಗೆ ಅರಿವಾಗಿದೆ. ಕೂಡಲೇ ವೈಯಾಲಿಕಾವಲ್‌ ಠಾಣೆಗೆ ತೆರಳಿದ ಅವರು ದೂರು ಸಲ್ಲಿಸಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

40 ಜನರಿಗೆ 80 ಲಕ್ಷ ಟೋಪಿ

ಕಡಿಮೆ ಬಡ್ಡಿ ದರದ ಆಮಿಷವೊಡ್ಡಿ ಸುಮಾರು 40 ಜನರಿಗೆ .80 ಲಕ್ಷ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೇವಲ ನಾಲ್ಕು ತಿಂಗಳ ಅವಧಿಯಲ್ಲೇ ಈ ಮಹಾ ವಂಚನೆ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.