ಬೆಂಗಳೂರು: ಬಿಬಿಎಂಪಿ ಹೆಸರಲ್ಲಿ ಕರೆ ಮಾಡಿ ಸ್ನೇಹಿತರಿಗೇ ವಂಚನೆ..!
ವಿದ್ಯಾರಣ್ಯಪುರದ ಎಂ.ಹರ್ಷ, ವಿಜಯನಗರದ ಡಿ.ರೂಪೇಶ್ ಹಾಗೂ ಮೈಸೂರು ರಸ್ತೆ ಬಾಪೂಜಿ ನಗರದ ಆರ್.ಮೋಹನ್ ಬಂಧಿತರಾಗಿದ್ದು, ಈ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಹಾಗೂ ಸಿಮ್ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ.
ಬೆಂಗಳೂರು(ಜ.26): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸುವುದಾಗಿ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಜನರಿಗೆ ಕರೆ ಮಾಡಿ ಹಣ ಪಡೆದು ವಂಚಿಸುತ್ತಿದ್ದ ಮೂವರು ಕಿಡಿಗೇಡಿಗಳನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.
ವಿದ್ಯಾರಣ್ಯಪುರದ ಎಂ.ಹರ್ಷ, ವಿಜಯನಗರದ ಡಿ.ರೂಪೇಶ್ ಹಾಗೂ ಮೈಸೂರು ರಸ್ತೆ ಬಾಪೂಜಿ ನಗರದ ಆರ್.ಮೋಹನ್ ಬಂಧಿತರಾಗಿದ್ದು, ಈ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಹಾಗೂ ಸಿಮ್ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ವಿದ್ಯಾರಣ್ಯಪುರದ ಎಲೆಕ್ಟ್ರಿಶಿಯನ್ ರಾಘವೇಂದ್ರ ಅವರಿಗೆ ಉಚಿತವಾಗಿ ಲ್ಯಾಪ್‌ಟಾಪ್ ನೀಡುವುದಾಗಿ ನಂಬಿಸಿ .40,500 ವಸೂಲಿ ಮಾಡಿ ದುಷ್ಕರ್ಮಿಗಳು ವಂಚಿಸಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಸಿಇಎನ್ ಠಾಣೆ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Bengaluru: ಜಡ್ಜ್ ಮನೆಯನ್ನೂ ಬಿಡದ ಖದೀಮರು: 60ಕ್ಕೂ ಹೆಚ್ಚು ಬಾರಿ ಕಳ್ಳತನ ಮಾಡಿದ್ದ ಮನೆಗಳ್ಳರು ಅರೆಸ್ಟ್!
ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಕೊಡುವುದಾಗಿ ಬಿಬಿಎಂಪಿಯ ಸಮಾಜ ಕಲ್ಯಾಣ ಇಲಾಖೆ ಅರ್ಜಿ ಆಹ್ವಾನಿಸಿತ್ತು. ಈ ಬಗ್ಗೆ ಮಾಹಿತಿ ತಿಳಿದ ಆರೋಪಿಗಳು, ಸಾರ್ವಜನಿಕರಿಗೆ ಕರೆ ಮಾಡಿ ಬಿಎಂಪಿಯಿಂದ ಉಚಿತವಾಗಿ ಲ್ಯಾಪ್‌ಟಾಪ್ ನೀಡಲಾಗುತ್ತಿದೆ. ಇದಕ್ಕೆ ಅರ್ಜಿ ಸಲ್ಲಿಸುವಂತೆ ಹೇಳುತ್ತಿದ್ದರು. ಆಗ ತಮ್ಮ ಮಾತಿಗೊಪ್ಪಿದ ಜನರಿಗೆ ಮೊದಲು ಅರ್ಜಿ ಶುಲ್ಕ ನೆಪದಲ್ಲಿ .1,500 ವಸೂಲಿ ಮಾಡುತ್ತಿದ್ದರು. ನಂತರ ದಾಖಲೆಗಳ ದೃಢೀಕರಣ ಪರಿಶೀಲನೆ ಶುಲ್ಕ ಹಾಗೂ ಬಿಬಿಎಂಪಿ ಶುಲ್ಕ ಹೀಗೆ ವಿವಿಧ ಕಾರಣ ಹೇಳಿ ಹಣ ಸುಲಿಗೆ ಮಾಡಿದ್ದರು. ಹಣ ಸಂದಾಯವಾದ ಬಳಿಕ ಸಂಪರ್ಕ ಕಡಿತಗೊಳಿಸುತ್ತಿದ್ದ ವಂಚಕರು, ಜನರಿಂದ 5ರಿಂದ 42 ಸಾವಿರ ರು.ವರೆಗೆ ವಸೂಲಿ ಮಾಡಿದ್ದರು.
ಸ್ನೇಹಿತರ ಬಳಗಕ್ಕೇ ವಂಚನೆ:
ಈ ಮೂವರು ಆರೋಪಿಗಳು ಬಾಲ್ಯ ಸ್ನೇಹಿತರಾಗಿದ್ದು, ಎಸ್‌ಎಸ್‌ಎಲ್‌ಸಿಗೆ ಓದು ನಿಲ್ಲಿಸಿದ್ದ ಕೆಲಸವಿಲ್ಲದೆ ಅಲೆಯುತ್ತಿದ್ದರು. ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರ ಮೊಬೈಲನ್ನು ನೋಡುವ ನೆಪದಲ್ಲಿ ಪಡೆದು ಬಳಿಕ ಅವರ ಕಾಂಟೆಕ್ಟ್ ಲಿಸ್ಟ್‌ನಲ್ಲಿದ್ದ ಕೆಲವರ ಮೊಬೈಲ್ ನಂಬರ್‌ಗಳನ್ನು ಆರೋಪಿಗಳು ಪಡೆಯುತ್ತಿದ್ದರು. ಈ ಮೊಬೈಲ್ ನಂಬರ್‌ಗಳಿಗೆ ಬಿಬಿಎಂಪಿ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ವಂಚಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.