ಹುಬ್ಬಳ್ಳಿ: ಬಿಟ್ ಕಾಯಿನ್ ನೀಡೋದಾಗಿ 45 ಲಕ್ಷ ವಂಚನೆ
ಮೂರು ವರ್ಷದ ಹಿಂದಿನ ಪ್ರಕರಣ| ಅಂತಾರಾಷ್ಟ್ರೀಯ ಮಟ್ಟದ ವಂಚಕ ಅಮಿತ್ ಭಾರದ್ವಾಜ್ 2ನೇ ಆರೋಪಿ| ಚೇತನ ಪಾಟೀಲ್ ಎಂಬಾತ ನಂಬಿಸಿ ಹಣ ಪಡೆದು ವಂಚನೆ| ಈ ಬಗ್ಗೆ ದೂರು ನೀಡಿದ ವಾಸಪ್ಪ ಲೋಕಪ್ಪ ಅಂಕುಷ್ಕನಿ|
ಹುಬ್ಬಳ್ಳಿ(ಫೆ.14): ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಅಮಿತ್ ಭಾರದ್ವಾಜ್ ಗೇನ್ ಬಿಟ್ ಕಾಯಿನ್ ವಂಚನೆ ಪ್ರಕರಣದಲ್ಲಿ ಹುಬ್ಬಳ್ಳಿಯವರೂ ಮೋಸ ಹೋಗಿರುವ ಪ್ರಕರಣವೊಂದು ಪತ್ತೆಯಾಗಿದೆ. ಮೂರು ವರ್ಷಗಳ ಹಿಂದೆ ಬಿಟ್ ಕಾಯಿನ್ ನೀಡುವುದಾಗಿ ನಂಬಿಸಿ ನಮ್ಮಿಂದ 45 ಲಕ್ಷ ಪಡೆದು ವಂಚಿಸಲಾಗಿದೆ ಎಂದು ಇಲ್ಲಿನ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿಯ ತಾಡಪತ್ರಿ ಗಲ್ಲಿಯಲ್ಲಿ ಕಚೇರಿ ತೆರೆದಿದ್ದ, ಭವಾನಿ ನಗರದ ಚೇತನ ಪಾಟೀಲ್ ಎಂಬಾತ ನಂಬಿಸಿ ಹಣ ಪಡೆದು ವಂಚಿಸಿದ್ದಾರೆ ಎಂದು ವಾಸಪ್ಪ ಲೋಕಪ್ಪ ಅಂಕುಷ್ಕನಿ ಎಂಬುವವರು ದೂರು ದಾಖಲಿಸಿದ್ದಾರೆ. ಚೇತನ ಪಾಟೀಲ್ ಪ್ರಕರಣದ ಮೊದಲ ಆರೋಪಿಯಾದರೆ, ದೆಹಲಿಯ ಅಮಿತ್ ಭಾರದ್ವಾಜ, ಅಜಯ ಭಾರದ್ವಾಜ, ವಿವೇಕ ಭಾರದ್ವಾಜ, ಮಹೇಂದ್ರಕುಮಾರ ಹಾಗೂ ಅಮಿತ್ ರಾಜೇಂದ್ರ ಬೀರ್ ಕ್ರಮವಾಗಿ ಆನಂತರದ ಆರೋಪಿ ಸ್ಥಾನದಲ್ಲಿದ್ದಾರೆ.
‘2017ರಲ್ಲಿ ಕಂಪನಿಯ ಪರವಾಗಿ ಪ್ರತಿಷ್ಠಿತ ಹೊಟೆಲ್‌ಗಳಲ್ಲಿ ಸೆಮಿನಾರ್ ನಡೆಸಿದ ಚೇತನ ಪಾಟೀಲ್, ಅಮಿತ್ ಬೀರ್ ಸೇರಿ ಇತರರು ವೇರಿಯೇಬಲ್‌ಟೆಕ್ ಪ್ರೈ. ಲಿ. ಕಂಪನಿಯ ಬಿಟ್ ಕ್ವಾಯಿನ್ ಮೇಲೆ ನಾವು ಸಾಕಷ್ಟುಜನರಿಗೆ ಲಾಭ ಮಾಡಿಕೊಟ್ಟಿದ್ದೇವೆ ಎಂದು ನಂಬಿಸಿದ್ದರು. 1 ಬಿಟ್ ಕಾಯಿನ್ ಗೆ . 1 ಲಕ್ಷದಂತೆ 45 ಬಿಟ್ ಕಾಯಿನ್ ನೀಡುವುದಾಗಿ ನಂಬಿಸಿದ್ದರು. ನಾನು ಹಾಗೂ ಪತ್ನಿ, ಮಗನಿಂದ ತಲಾ . 15 ಲಕ್ಷದಂತೆ ಒಟ್ಟೂ. 45 ಲಕ್ಷ ಹಣವನ್ನು 2017ರ ಏ. 13ರಂದು ಪಡೆದಿದ್ದರು. ಅಲ್ಲದೆ ತಲಾ 15 ಬಿಟ್ ಕಾಯಿನ್ ಗಳ ಮೂರು ಇನ್‌ವೈಸ್ ನಂಬರ್ ನೀಡಿದ್ದರು. ಆದರೆ, ಈ ವರೆಗೂ ಬಿಟ್ ಕಾಯಿನ್ ನೀಡದೆ ವಂಚನೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಡ್ರಗ್ ಮಾಫಿಯಾ: 9 ಕೋಟಿ ಬಿಟ್ ಕಾಯಿನ್ ಸಂಪಾದಿಸಿದ್ದ ಹ್ಯಾಕರ್ ಶ್ರೀಕಿ
‘ಕನ್ನಡಪ್ರಭ’ದ ಜತೆ ಮಾತನಾಡಿದ ವಾಸಪ್ಪ, ಸೆಮಿನಾರ್‌ನಲ್ಲಿ ಸಾಕಷ್ಟುಜನರು ಪಾಲ್ಗೊಂಡಿದ್ದರು. ನಾವು ಮಾತ್ರವಲ್ಲ, ಬಹಳಷ್ಟುಜನರು ಈತನಿಗೆ ಹಣ ನೀಡಿದವರಿದ್ದಾರೆ. ಕೋಟ್ಯಂತರ ರು. ಹಣವನ್ನು ಇಲ್ಲಿ ಹೂಡಿ ಕಳೆದುಕೊಂಡಿದ್ದಾರೆ. ಆದರೆ ಇತರರು ದೂರು ದಾಖಲು ಮಾಡಲು ಮುಂದೆ ಬರುತ್ತಿಲ್ಲ. ನಮಗೆ ನ್ಯಾಯ ದೊರಕಿಸಿಕೊಡಲಿ ಎಂದು ಮನವಿ ಮಾಡಿದರು.
ಕಮರಿಪೇಟೆ ಇನ್‌ಸ್ಪೆಕ್ಟರ್ ಶ್ಯಾಮರಾಜ ಸಜ್ಜನ, ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದೇವೆ. ಆರೋಪಿ ಚೇತನ ಪಾಟೀಲ್ ಎಂಬಾತನನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದ್ದು, ಆತ ತಾನು ಗೋವಾದಲ್ಲಿ ಇರುವುದಾಗಿ ಹೇಳಿದ್ದಾನೆ. ಆತನಿಗೂ ಕಂಪನಿಗೂ ಸಂಬಂಧವೇನು? ಆತ ಕಂಪನಿಯ ನೌಕರನೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.