ಮುಂಬೈ (ಫೆ.12): ಅತ್ಯಂತ ಜನಪ್ರಿಯವಾಗಿರುವ ಬಿಟ್‌ಕಾಯಿನ್‌ನಂತಹ ಖಾಸಗಿ ಕ್ರಿಪ್ಟೋಕರೆನ್ಸಿಗಳ ದರ ಸಾರ್ವಕಾಲಿಕ ಗರಿಷ್ಠಕ್ಕೆ ತಲುಪಿ ಹೂಡಿಕೆದಾರರ ಕಣ್ಣುಕುಕ್ಕುತ್ತಿರುವಾಗಲೇ, ಇಂಥ ಡಿಜಿಟಲ್‌ ಕರೆನ್ಸಿ ಬಳಸಿದರೆ ಭಾರೀ ದಂಡ ಹೇರುವಂಥ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಸರ್ಕಾರದ ಈ ಕ್ರಮವು ಸ್ವತಃ ಆರ್‌ಬಿಐನ ಪ್ರಸ್ತಾಪಿತ ಡಿಜಿಟಲ್‌ ಕರೆನ್ಸಿ ಬಿಡುಗಡೆಗೆ ವೇದಿಕೆ ಸಜ್ಜು ಮಾಡುವ ಯತ್ನ ಎನ್ನಲಾಗಿದೆ. ಹೀಗಾಗಿಯೇ ದೀರ್ಘಕಾಲೀನ ಪರಿಣಾಮಗಳನ್ನು ಹೊಂದಿರುವ ಈ ಮಸೂದೆಯನ್ನು ಸಂಸತ್ತಿನ ಇದೇ ಬಜೆಟ್‌ ಅಧಿವೇಶನದಲ್ಲೇ ಮಂಡಿಸಿ ಅಂಗೀಕಾರ ಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರ ಸಿದ್ಧಪಡಿಸಿರುವ ಕರಡು ಮಸೂದೆ ಅನ್ವಯ, ಯಾವುದೇ ವ್ಯಕ್ತಿ, ಸಂಸ್ಥೆ, ಹಣ ವರ್ಗಾವಣೆ ಸಂಸ್ಥೆಗಳು, ವ್ಯಾಪಾರಿಗಳು ಡಿಜಿಟಲ್‌ ಕರೆನ್ಸಿ ಬಳಕೆ ಮಾಡುವುದು ಅಪರಾಧ ಎನ್ನಿಸಿಕೊಳ್ಳಲಿದೆ. ಇಂಥ ಅಪಾರಾಧಕ್ಕೆ ಎಷ್ಟುದಂಡ ಮತ್ತು ಶಿಕ್ಷೆಯ ಪ್ರಮಾಣ ಏನು ಎಂಬ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಕೇಂದ್ರ ಸರ್ಕಾರ ನೇಮಿಸಿದ್ದ ಆಯೋಗವೊಂದು 2019ರಲ್ಲಿ ನೀಡಿದ ತನ್ನ ವರದಿಯಲ್ಲಿ ಖಾಸಗಿ ಡಿಜಿಟಲ್‌ ಕರೆನ್ಸಿ ಬಳಸುವವರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬೇಕು. ಅಲ್ಲದೆ ಬ್ಯಾಂಕ್‌ ನೋಟ್‌ ರೀತಿ ಕಾರ್ಯನಿರ್ವಹಿಸುವ ಅಧಿಕೃತ ಡಿಜಿಟಲ್‌ ಕರೆನ್ಸಿಯನ್ನು ರಿಸವ್‌ರ್‍ ಬ್ಯಾಂಕ್‌ ಮೂಲಕವೇ ಬಿಡುಗಡೆ ಮಾಡಬೇಕು ಎಂದು ಸಲಹೆ ಮಾಡಿತ್ತು. ಈ ಅಂಶಗಳನ್ನು ಕರಡು ವರದಿ ಒಳಗೊಂಡಿರಬಹುದು ಎನ್ನಲಾಗಿದೆ.

ಅಕೌಂಟಲ್ಲಿದ್ದ 9 ಕೋಟಿ ಮಂಗಮಾಯ, ಸಿಸಿಬಿ ಅಧಿಕಾರಿಗಳಿಗೆ ಅಯೋಮಯ..! ...

ನಿಷೇಧ ಏಕೆ?:  ಬಿಟ್‌ಕಾಯಿನ್‌ನಂತಹ ಖಾಸಗಿ ಡಿಜಿಟಲ್‌ ಕರೆನ್ಸಿಗಳು ಗ್ರಾಹಕರ ದತ್ತಾಂಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಹಾಗೂ ಅವುಗಳಿಂದ ಹಣಕಾಸು ವ್ಯವಸ್ಥೆಗೆ ಸಂಭಾವ್ಯ ಅಪಾಯವಿದೆ ಎಂಬ ಆರೋಪವಿದೆ. ಜೊತೆಗೆ ಇಂಥ ಹಣ ಸಂಗ್ರಹದ ಮೇಲೆ ಆರ್‌ಬಿಗೆ ಯಾವುದೇ ಹಿಡಿತ ಇರುವುದಿಲ್ಲ. ಅವುಗಳ ಲೆಕ್ಕವೂ ಸಿಗುವುದಿಲ್ಲ. ಕಪ್ಪುಹಣ ಇಡಲು ಇವು ದೊಡ್ಡ ಮಾರ್ಗ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಯಾವುದೇ ಅಡೆತಡೆ ಇಲ್ಲದೇ ಹಣ ವರ್ಗಾವಣೆ ಸಾಧ್ಯ. ಹೀಗಾಗಿ ಇಂಥ ಖಾಸಗಿ ಡಿಜಿಟಲ್‌ ಕರೆÜನ್ಸಿ ನಿಷೇಧಕ್ಕೆ ಸರ್ಕಾರ ಮುಂದಾಗಿದೆ.

ಭಾರತದಲ್ಲಿ ಎಷ್ಟಿದೆ?:  ಇತ್ತೀಚಿನ ಅಧಿಕೃತ ಮಾಹಿತಿಗಳ ಪ್ರಕಾರ ಭಾರತದಲ್ಲಿ ಅಂದಾಜು 70 ಲಕ್ಷ ಜನ 100 ಕೋಟಿ ಡಾಲರ್‌ಗೂ ಹೆಚ್ಚು (7300 ಕೋಟಿ ರು.) ಮೌಲ್ಯದ ಕ್ರಿಪ್ಟೋಕರೆನ್ಸಿ ಹೊಂದಿದ್ದಾರೆ. ಕಳೆದೊಂದು ವರ್ಷದಲ್ಲಿ ಇವುಗಳ ಮೇಲಿನ ಹೂಡಿಕೆ ಮೌಲ್ಯ ಶೇ.700ರಷ್ಟುಹೆಚ್ಚಾಗಿದೆ.

ಆರ್‌ಬಿಐನಿಂದ ಕ್ರಿಪ್ಟೋಕರೆನ್ಸಿ?

ಸರ್ಕಾರ ಈ ಕ್ರಮ ಕೈಗೊಳ್ಳುತ್ತಿರುವುದು ಶೀಘ್ರವೇ ಭಾರತದಲ್ಲಿ ಆರ್‌ಬಿಐ ಮೂಲಕ ಅಧಿಕೃತವಾಗಿ ಡಿಜಿಟಲ್‌ ಕರೆನ್ಸಿ ಬಿಡುಗಡೆ ಮಾಡುವುದಕ್ಕೆ ಎಂದು ಹೇಳಲಾಗುತ್ತಿದೆ. ಖಾಸಗಿ ಡಿಜಿಟಲ್‌ ಕರೆನ್ಸಿ ನಿಷೇಧಿಸಿ, ಸರ್ಕಾರಿ ಡಿಜಿಟಲ್‌ ಕರೆನ್ಸಿ ತರಲು ಸರ್ಕಾರ ಈ ಮಸೂದೆ ರೂಪಿಸಿದೆ ಎನ್ನಲಾಗಿದೆ.