Bengaluru: ಗಿಡಮೂಲಿಕೆ ಮಾರಾಟಗಾರರಿಂದ ಚಿಕಿತ್ಸೆ ಹೆಸರಲ್ಲಿ ವಂಚನೆ: ಮೂವರ ಬಂಧನ
ಆಯುರ್ವೇದ ಚಿಕಿತ್ಸೆ ನೆಪದಲ್ಲಿ ಸಾರ್ವಜನಿಕರಿಂದ ಹಣ ಪಡೆದು ಟೋಪಿ ಹಾಕುತ್ತಿದ್ದ ತಂದೆ-ಮಗ ಸೇರಿದಂತೆ ಒಂದೇ ಕುಟುಂಬದ ಮೂವರು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು (ಜ.04): ಆಯುರ್ವೇದ ಚಿಕಿತ್ಸೆ ನೆಪದಲ್ಲಿ ಸಾರ್ವಜನಿಕರಿಂದ ಹಣ ಪಡೆದು ಟೋಪಿ ಹಾಕುತ್ತಿದ್ದ ತಂದೆ-ಮಗ ಸೇರಿದಂತೆ ಒಂದೇ ಕುಟುಂಬದ ಮೂವರು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬೆಂಗಳೂರು ಗ್ರಾಮಾಂತರ ನೆಲಮಂಗಲ ತಾಲೂಕಿನ ಮೊಹಮ್ಮದ್ ಸಮೀನ್ ಅಲಿಯಾಸ್ ಡಾ. ಮಲ್ಲಿಕ್, ಆತನ ಪುತ್ರ ಶೈಫ್ ಆಲಿ ಹಾಗೂ ಸೋದರನ ಪುತ್ರ ಮೊಹಮ್ಮದ್ ರಹೀಸ್ ಬಂಧಿತರಾಗಿದ್ದು, ತಪ್ಪಿಸಿಕೊಂಡಿರುವ ಸಮೀನ್ ಸೋದರ ಸಂಬಂಧಿ ಫರ್ಹಾನ್ ಪತ್ತೆಗೆ ತನಿಖೆ ನಡೆದಿದೆ. ಆರೋಪಿಗಳಿಂದ 4 ಕಾರು, 3 ಬೈಕ್ ಹಾಗೂ .3.5 ಲಕ್ಷ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಶಾಂತಿನಗರದ ನಿವಾಸಿ ಉದ್ಯಮಿ ಪಂಕಜ್ ಠಾಕೂರ್ ಅವರಿಗೆ ಚಿಕಿತ್ಸೆ ನೆಪದಲ್ಲಿ 8 ಲಕ್ಷವನ್ನು ಮಲ್ಲಿಕ್ ತಂಡ ವಂಚಿಸಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ನೆಲಮಂಗಲ ಸಮೀಪ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಡಾ.ಮಲ್ಲಿಕ್ ಹೆಸರಲ್ಲಿ ಮೋಸದ ಬಲೆ: ರಾಜಸ್ಥಾನ ಮೂಲದ ಸಮೀನ್ ಕುಟುಂಬ, ರಸ್ತೆ ಬದಿ ಆಯುರ್ವೇದ ಗಿಡಮೂಲಿಕೆ ಔಷಧಿ ಮಾರಾಟ ಮಾಡುವುದಾಗಿ ದೇಶ ವ್ಯಾಪ್ತಿ ಸಂಚಾರ ನಡೆಸುತ್ತಿದ್ದ. ಅಲ್ಲೆಲ್ಲಿ ಬಿಡಾರ ಹಾಕಿಕೊಂಡು ಆರೋಪಿಗಳು ಔಷಧಿ ಮಾರಾಟ ಮಾಡುತ್ತಿದ್ದರು. ಅಂತೆಯೇ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಸೊಲ್ಲಾಪುರ ಮೂಲಕ ರಾಜ್ಯಕ್ಕೆ ಬಂದಿದ್ದ ಆರೋಪಿಗಳು, ನೆಲಮಂಗಲ ಸಮೀಪ ರಸ್ತೆ ಬದಿ ಬಿಡಾರ ಹೂಡಿದ್ದರು. ನಗರಕ್ಕೆ ಬಂದು ಜೈನ್ ದೇವಾಲಯಗಳ ಬಳಿ ನಿಲ್ಲುತ್ತಿದ್ದ ಆರೋಪಿಗಳು, ದೇವಾಲಯಕ್ಕೆ ಕುಂಟುತ್ತ ಬರುವ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ವಂಚನೆ ಕೃತ್ಯ ಎಸಗುತ್ತಿದ್ದರು. ಹಿರಿಯ ನಾಗರಿಕರಿಗೆ ಕುಶಲ ವಿಚಾರಿಸುವ ನೆಪದಲ್ಲಿ ಗಾಳ ಹಾಕುತ್ತಿದ್ದರು.
ಹಳಿಯಾಳ: ಸಾರ್ವಜನಿಕರು ಕಳೆದುಕೊಂಡ ಮೊಬೈಲ್‌ಗಳನ್ನು ಪತ್ತೆ ಹಚ್ಚಿದ ಪೊಲೀಸರು
ಕಾಲಲ್ಲಿ ಕೀವು ತುಂಬಿದೆ ಎಂದು 8 ಲಕ್ಷ ವಂಚನೆ: ‘ನನಗೆ ಡಾ. ಮಲ್ಲಿಕ್ ಎಂಬ ಆಯುರ್ವೇದಿಕ್ ವೈದ್ಯರು ಪರಿಚಯಸ್ಥರು. ನಮ್ಮ ತಂದೆ-ತಾಯಿ ಅವರಿಗೆ ಮಂಡಿನೋವಿಗೆ ಅವರಲ್ಲೇ ಚಿಕಿತ್ಸೆ ಕೊಡಿಸಿದೆ. ಒಳ್ಳೆಯ ವೈದ್ಯರು. ನೀವು ಅವರನ್ನು ಸಂಪರ್ಕಿಕಿಸಿ’ ಎಂದು ಹೇಳಿ ಸಮೀನ್ ಮೊಬೈಲ್ ಸಂಖ್ಯೆಯನ್ನು ಆತನ ಮಗ ಹಾಗೂ ಸಂಬಂಧಿಗಳು ಕೊಡುತ್ತಿದ್ದರು. ಹೀಗೆ ತಮ್ಮ ಬಲೆಗೆ ಬಿದ್ದವರಿಗೆ ಚಿಕಿತ್ಸೆ ನೆಪದಲ್ಲಿ ಹಣ ಪಡೆದು ಯಾವುದೇ ಆರೈಕೆ ಮಾಡದೆ ವಂಚಿಸುತ್ತಿದ್ದರು. ಅದೇ ರೀತಿಯ ಶಾಂತಿನಗರದ ಪ್ರಶಾಂತ್ ಠಾಕೂರ್ ಅವರ ತಾಯಿಗೆ ದೇವಾಲಯ ಬಳಿ ಆರೋಪಿಗಳ ಪರಿಚಯವಾಗಿದೆ. ಆಗ ‘ನಿಮ್ಮ ಕಾಲಿನಲ್ಲಿ ಕೀವು ತುಂಬಿದೆ. ಅದನ್ನು ತೆಗೆಯಲು .4 ಸಾವಿರ ಕೊಡಬೇಕು’ ಎಂದು ಸಮೀನ್ ಹೇಳಿದ್ದ. ಕೊನೆಗೆ ಠಾಕೂರ್ ಅವರಿಂದ ಚಿಕಿತ್ಸೆ ವೆಚ್ಚ ಎಂದು .8.08 ಲಕ್ಷ ವಸೂಲಿ ಮಾಡಿದ್ದರು. ಈ ಹಣ ಸಂದಾಯವಾದ ಬಳಿಕ ಯಾವುದೇ ಚಿಕಿತ್ಸೆ ನೀಡದೆ ಠಾಕೂರ್ ಅವರಿಗೆ ಮಲ್ಲಿಕ್ ತಂಡ ವಂಚಿಸಿತ್ತು ಎಂದು ಪೊಲೀಸರು ಹೇಳಿದ್ದಾರೆ.
2 ತಿಂಗಳ ಕಂದಮ್ಮನನ್ನು ಆಸ್ಪತ್ರೆಯ 3ನೇ ಮಹಡಿಯಿಂದ ಎಸೆದು ಕೊಂದ ಹೆತ್ತ ತಾಯಿ..!
ಬೈಕ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ: ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯ ನಗರದ ಶಾಮಣ್ಣ ಗಾರ್ಡನ್ ನಿವಾಸಿ ಸಲ್ಮಾನ್ ಪಾಷಾ (24) ಬಂಧಿತ. ಆರೋಪಿಯಿಂದ 2.63 ಲಕ್ಷ ಮೌಲ್ಯದ ಒಂದು ಪ್ಯಾಸೆಂಜರ್ ಆಟೋರಿಕ್ಷಾ ಹಾಗೂ ವಿವಿಧ ಕಂಪನಿಗಳ ನಾಲ್ಕು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ಮನೆ ಎದುರು ನಿಲುಗಡೆ ಮಾಡಿದ್ದ ಆಟೋರಿಕ್ಷಾ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.