* ಕನ್ಸಲ್ಟೆಂಟ್ ಏಜೆನ್ಸಿ ನಡೆಸುತ್ತಿದ್ದ ಗೆಳೆಯರು* ಮಹಿಳಾ ಎಚ್‌ಆರ್‌ಗಳಿಂದ ಕರೆ ಮಾಡಿಸಿ ಕೆಲಸ ಕೊಡಿಸೋದಾಗಿ ಧೋಖಾ* ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು(ಜೂ.04): ಪ್ರತಿಷ್ಠಿತ ಕಂಪನಿಗಳಲ್ಲಿ ನೌಕರಿ ಆಸೆ ತೋರಿಸಿ ಉದ್ಯೋಗಾಂಕ್ಷಿಗಳಿಂದ ಹಣ ಸುಲಿಗೆ ಮಾಡಿ ವಂಚಿಸುತ್ತಿದ್ದ ಇಬ್ಬರು ಕಿಡಿಗೇಡಿಗಳನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜರಾಜೇಶ್ವರಿ ನಗರದ ಸಿ.ರಘು ಅಲಿಯಾಸ್ ನವನೀತ್ ಹಾಗೂ ಗಾಯಿತ್ರಿ ನಗರದ ಸಾಯಿಕಿರಣ್ ಬಂಧಿತರಾಗಿದ್ದು, ಆರೋಪಿಗಳಿಂದ 11 ಮೊಬೈಲ್, ಸಿಪಿಯು, ಲ್ಯಾಪ್‌ಟಾಪ್ ಹಾಗೂ .43 ಸಾವಿರ ನಗದು ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ತನ್ನ ಹೆಸರು ದುರ್ಬಳಕೆ ಮಾಡಿಕೊಂಡು ಕೆಲವರು ಜನರಿಗೆ ವಂಚಿಸುತ್ತಿದ್ದಾರೆ ಎಂದು ಅಲ್ಕಾನ್ ಕಂಪನಿ ದೂರು ನೀಡಿತು. ಅದರನ್ವಯ ಸಿಇಎನ್ ಠಾಣೆ ಇನ್‌ಸ್ಪೆಕ್ಟರ್ ಸಂತೋಷ್ ರಾಮ್ ನೇವೃತ್ವದ ತಂಡ ತನಿಖೆ ನಡೆಸಿದಾಗ ಆರೋಪಿಗಳ ವಂಚನೆ ಜಾಲ ಬಯಲಾಗಿದೆ.
KBC Lottery Fraud: ಲಾಟರಿ ಹೆಸರಲ್ಲಿ 100ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದ ಇಬ್ಬರ ಬಂಧನ
ಮಹಿಳಾ ಎಚ್‌ಆರ್‌ಗಳ ಮೂಲಕ ಗಾಳ:
ಹಲವು ದಿನಗಳಿಂದ ರಘು ಹಾಗೂ ಸಾಯಿಕಿರಣ್ ಸ್ನೇಹಿತರಾಗಿದ್ದರು. ಮೂರು ವರ್ಷಗಳಿಂದ ನಿರುದ್ಯೋಗಿಗಳಿಗೆ ಕಂಪನಿಗಳಲ್ಲಿ ಕೆಲಸ ಕೊಡಿಸುವ ಕನ್ಸಲ್ಟೆಂಟ್ ಏಜೆನ್ಸಿಯನ್ನು ನಡೆಸುತ್ತಿದ್ದರು. ಆನ್‌ಲೈನ್‌ನ ಜಾಬ್ ಪೋರ್ಟಲ್‌ಗಳಲ್ಲಿ ಉದ್ಯೋಗಾಂಕ್ಷಿಗಳ ಬಗ್ಗೆ ಹಣ ಕೊಟ್ಟು ಸ್ವವಿವರ ಸಂಗ್ರಹಿಸುತ್ತಿದ್ದ ಆರೋಪಿಗಳು, ಈ ಮಾಹಿತಿ ಮೂಲಕ ನಿರುದ್ಯೋಗಿಗಳಿಗೆ ಗಾಳ ಹಾಕುತ್ತಿದ್ದರು. ವಿವಿಧ ಕಂಪನಿಗಳ ಹೆಸರಿನಲ್ಲಿ ಕಚೇರಿ ತೆರೆದು ಎಚ್‌ಆರ್ ಕೆಲಸ ಖಾಲಿ ಇದೆ ಎಂದು ಜಾಬ್ ವೆಬ್‌ಸೈಟ್ ಪೋರ್ಟಲ್‌ಗಳಲ್ಲಿ ಜಾಹೀರಾತು ಪ್ರಕಟಿಸಿ ಕಚೇರಿಗೆ ಬರುವ ನಿರುದ್ಯೋಗಿಗಳ ಪೈಕಿ ಯುವತಿಯರನ್ನೇ ಮಾನವ ಸಂಪನ್ಮೂಲ ಹುದ್ದೆಗೆ ಆರೋಪಿಗಳು ನೇಮಿಸಿಕೊಳ್ಳುತ್ತಿದ್ದರು.
ಆನಂತರ ತಾವು ಹೇಳಿದಂತೆ ಕರೆ ಮಾಡಿ ಹಣವನ್ನು ನೀಡಿದ ಖಾತೆಗಳಿಗೆ ಹಾಕಿಸುವಂತೆ ಎಚ್‌ಆರ್‌ಗಳಿಗೆ ಸಾಯಿ ಹಾಗೂ ರಘು ಸೂಚಿಸುತ್ತಿದ್ದರು. ಕೆಲಸಕ್ಕೆ ಮೊದಲು ಅರ್ಜಿ ಶುಲ್ಕವೆಂದು .250 ಪಡೆಯುತ್ತಿದ್ದರು. ನಂತರ ಹಣ ನೀಡಿದವರಿಗೆ ಪುನಃ ಕರೆ ಮಾಡಿ ನೀವು ಮೊದಲ ಸುತ್ತು ಸಂದರ್ಶನಕ್ಕೆ ಆಯ್ಕೆಯಾಗಿದ್ದೀರಿ ಎಂದು ನಂಬಿಸಿ ಸಂದರ್ಶನ ಶುಲ್ಕವೆಂದು .2500 ವಸೂಲಿ ಮಾಡುತ್ತಿದ್ದರು. ಆಗ ಸಂದರ್ಶನ ನಡೆಸುವಂತೆ ನಾಟಕವಾಡಿ 2ನೇ ಸುತ್ತಿನ ಸಂದರ್ಶನಕ್ಕೆ ಆಯ್ಕೆಯಾಗಿದ್ದೀರಿ ಎಂದು ಹೇಳಿ ಮತ್ತೆ .7500 ಸಾವಿರ ವಸೂಲಿ ಮಾಡುತ್ತಿದ್ದರು. ಹೀಗೆ ಹಣ ಪೀಕಿದ ಬಳಿಕ ನಿರುದ್ಯೋಗಿಗಳಿಗೆ ಕೊನೆಗೆ ಏನೇನೂ ಸಬೂಬು ಹೇಳಿ ಕೆಲಸ ಕೊಡಿಸದೆ ಮೋಸ ಮಾಡುತ್ತಿದ್ದರು. ಇತ್ತ ಎಚ್‌ಆರ್ ಆಗಿ ನೇಮಕಗೊಂಡಿದ್ದ ಯುವತಿಯರಿಗೂ ಸಹ ಸಂಬಳ ಕೊಡದೆ ಟೋಪಿ ಹಾಕುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
Online ವಂಚನೆ, Virtual ಜಗತ್ತಿನ ಬಣ್ಣದ ಮಾತಿಗೆ ಮರಳಾಗೋ ಮುನ್ನ ಇರಲಿ ಎಚ್ಚರ!
ವಂಚನೆ ಕೇಸಲ್ಲಿ ಜೈಲಿಗೆ ಹೋಗಿದ್ದ ಆರೋಪಿ
ಅಲ್ಕಾನ್ ಲ್ಯಾಬೊರೆಟೋರಿಸ್ ಇಂಡಿಯಾ ಪ್ರೈ ಎಂಬ ಕಂಪನಿಯ ಹೆಸರನ್ನು ಬಳಸಿಕೊಂಡು 2021ರ ಡಿಸೆಂಬರ್ 23ರಿಂದ 29 ವರೆಗೆ ಯುವಕರಿಗೆ ವಂಚಿಸಿದ್ದರು. ಅಲ್ಕಾನ್ ಕಂಪನಿಯ ಎಚ್‌ಆರ್ ಹೆಸರಿನಲ್ಲಿ ನಿರುದ್ಯೋಗಿಗಳಿಗೆ ಕರೆ ಮಾಡಿಸಿ ಆ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇವೆಂದು ಆಫರ್ ಕೊಟ್ಟಿದ್ದರು. ಇದಕ್ಕಾಗಿ ಆ ಕಂಪನಿಯ ಹೆಸರಿನಲ್ಲಿ ನಕಲಿ ಇ-ಮೇಲ್ ಸೃಷ್ಟಿಸಿ ಹಾಗೂ ಲೋಗೋವನ್ನು ಪ್ರೊಫೈಲ್‌ನಲ್ಲಿ ಬಳಸಿಕೊಂಡಿದ್ದರು. ತಮ್ಮ ಕಂಪನಿ ಹೆಸರು ದುರ್ಬಳಕೆ ಬಗ್ಗೆ ಫೆ.23ರಂದು ಸಿಇಎನ್ ಠಾಣೆಗೆ ಅಲ್ಕಾನ್ ಕಂಪನಿ ಅಧಿಕಾರಿಗಳು ದೂರು ನೀಡಿದ್ದರು. ಅದರಂತೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿ ವಿಚಾರಿಸಿದಾಗ ವಂಚನೆ ಕೃತ್ಯಗಳು ಪತ್ತೆಯಾಗಿವೆ.
ಎರಡು ವರ್ಷದ ಹಿಂದೆ ಇದೇ ರೀತಿಯ ವಂಚನೆ ಪ್ರಕರಣದಲ್ಲಿ ಸಾಯಿಕೃಷ್ಣನನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಅಟ್ಟಿದ್ದರು. ಬಳಿಕ ಜಾಮೀನು ಪಡೆದು ಹೊರಬಂದ ಆತ ಮತ್ತೆ ತನ್ನ ಚಾಳಿ ಮುಂದುವರೆಸಿದ್ದ. ಈ ಆರೋಪಿಗಳ ಮೇಲೆ ಬ್ಯಾಡರಹಳ್ಳಿ, ಅನ್ನಪೂರ್ಣೇಶ್ವರಿ ನಗರ, ಸುಬ್ರಹ್ಮಣ್ಯ ನಗರ ಹಾಗೂ ಬಸವೇಶ್ವರ ನಗರ ಠಾಣೆಗಳಲ್ಲಿ ದಾಖಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
