* ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಮಾಹಿತಿ* ಇನ್ನೋರ್ವ ಆರೋಪಿ ನಾಪತ್ತೆ, ಅಧಿಕ ದರಕ್ಕೆ ಮಾರಾಟ* ರೆಮ್‌ಡೆಸಿವರ್‌ ಇಂಜೆಕ್ಷನ್‌ನ 14 ವೈಲ್‌, 4 ಮೊಬೈಲ್‌ ಹಾಗೂ 2500 ನಗದು ವಶ 

ಗದಗ(ಮೇ.24): ಕಾಳ ಸಂತೆಯಲ್ಲಿ ರೆಮ್‌ಡೆಸಿವಿರ್‌ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸುವಲ್ಲಿ ಇಲ್ಲಿನ ಜಿಲ್ಲಾ ಸೈಬರ್‌ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಹ್ಮದ್‌ ಇಸ್ಮಾಯಿಲ್‌, ಫಿರೋಜ್‌ ಖಾನ್‌, ಜಿಮ್ಸ್‌ ಲ್ಯಾಬ್‌ ಟೆಕ್ನಿಷಿಯನ್‌ ಗವಿಸಿದ್ದಯ್ಯ ಹಿರೇಮಠ, ರಮೇಶ್‌ ಚವಟಗಿ ಎಂಬುವವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿ ಜ್ಯೋತಿ ಲಮಾಣಿ ಬಂಧನವಾಗಬೇಕಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌, ನಿಖರ ಮಾಹಿತಿ ಆಧರಿಸಿ ಕಾಳಸಂತೆಯಲ್ಲಿ ರೆಮ್‌ಡೆಸಿವರ್‌ ಮಾರಾಟ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ರಾಧಾಕೃಷ್ಣ ನಗರದಲ್ಲಿ ಈ ತಂಡದ ಸದಸ್ಯರು ಸುಮಾರು 30 ಸಾವಿರ ರು.ಗೆ ರೆಮ್‌ಡೆಸಿವರ್‌ ಚುಚ್ಚುಮದ್ದನ್ನು ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಲಾಗಿದೆ. 

ಕೊಟ್ಟೂರು: ಪೊಲೀಸರ ಮೇಲೆ ಹಲ್ಲೆ ಯತ್ನ, ಮೂವರ ಬಂಧನ

ಈ ತಂಡದಲ್ಲಿ ಜಿಮ್ಸ್‌ ಲ್ಯಾಬ್‌ ಟೆಕ್ನಿಶಿಯನ್‌ ಜೊತೆಯಲ್ಲಿ ನರ್ಸ್‌ಗಳು, ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸಹ ಸೇರಿದ್ದಾರೆ. ಆರೋಪಿಗಳಿಂದ ರೆಮ್‌ಡೆಸಿವರ್‌ ಇಂಜೆಕ್ಷನ್‌ನ 14 ವೈಲ್‌, 4 ಮೊಬೈಲ್‌ ಹಾಗೂ 2500 ನಗದು ವಶಪಡಿಸಿಕೊಳ್ಳಲಾಗಿದೆ. ಇವರು ಕೊರೋನಾ ಸೋಂಕಿತರಿಗೆಂದು ರೆಮ್ಡೆಸಿವರ್‌ ಇಂಜಕ್ಷನ್‌ ಪಡೆದು ಅವರಿಗೆ ನೀಡದೇ ಮಾರಾಟ ಮಾಡುತ್ತಿದ್ದರೆನ್ನಲಾಗಿದೆ. ಗದಗ ಗ್ರಾಮೀಣ ಸಿಪಿಐ ರವಿ ಕಪ್ಪತ್ತನವರ ತನಿಖೆ ಮುಂದುವರಿಸಲಿದ್ದಾರೆ ಎಂದು ಎಸ್ಪಿ ಹೇಳಿದರು.

ಮಹಾಮಾರಿ ಕೊರೋನಾ ಸೋಂಕಿತರಿಗೆ ನೀಡಲಾಗುವ ಜೀವ ರಕ್ಷಕ ರೆಮ್‌ಡಿಸಿವಿರ್‌ ಕಾಳಸಂತೆಯಲ್ಲಿ ಮಾರಾಟ ಮಾಡುವ ಕುರಿತು ಗಮನಕ್ಕೆ ಬಂದರೆ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ತಿಳಿಸಿದ್ದಾರೆ.