ಗೋವಾದಲ್ಲಿ ತಲೆಮರಿಸಿಕೊಂಡಿದ್ದ ಕೊಲೆ ಆರೋಪಿಗಳ ಹೆಡೆಮುರಿ ಕಟ್ಟಿದ ಬೆಳಗಾವಿ ಪೊಲೀಸ್ರು..!
ರಣಕುಂಡಯೇ ಗ್ರಾಮದಲ್ಲಿ ಯುವಕನ ಹತ್ಯೆಗೈದಿದ್ದ ನಾಲ್ವರು ಅರೆಸ್ಟ್..!
ಗೋವಾದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು..!
20 ಸಾವಿರ ರೂ. ಸಾಲದ ಹಣ ಹಾಗೂ ಕಳ್ಳತನವಾದ ಮೊಬೈಲ್ ವಿಚಾರಕ್ಕೆ ಗಲಾಟೆ..!
ಮನೆಗೆ ನುಗ್ಗಿ ಕಾರಿನಲ್ಲಿ ಎತ್ತಾಕಿಕೊಂಡು ಹೋಗಿ ಕೊಲೆ..!
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ, (ಏ.05): ಏಪ್ರಿಲ್ 3ರಂದು ಬೆಳಗಾವಿ ತಾಲೂಕಿನ ರಣಕುಂಡಯೇ ಗ್ರಾಮದಲ್ಲಿ ಮನೆಗೆ ನುಗ್ಗಿ ಯುವಕನ ಬರ್ಬರ ಹತ್ಯೆ ಪ್ರಕರಣ ಸಂಬಂಧ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ರಣಕುಂಡಯೇ ಗ್ರಾಮದ ಪ್ರಮೋದ್ ಪಾಟೀಲ್, ಶ್ರೀಧರ್ ಪಾಟೀಲ್, ಮಹೇಂದ್ರ ಕಂಗ್ರಾಳಕರ್, ಬೂಮನಿ ಡೋಕ್ರೆ ಬಂಧಿತ ಆರೋಪಿಗಳು. ಏಪ್ರಿಲ್ 3ರಂದು ರಣಕುಂಡಯೇ ಗ್ರಾಮದಲ್ಲಿನ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಮನೆಯಲ್ಲಿ ಮಲಗಿದ್ದ ನಾಗೇಶ್ ಪಾಟೀಲ್ ಹಾಗೂ ಸಹೋದರ ಮೋಹನ್ ಪಾಟೀಲ್‌ನನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗಿ ಮಾರಣಾಂತಿಕ ಹಲ್ಲೆ ಮಾಡಿದ್ರು.
Belagavi Crime: ಕುಂದಾನಗರಿಯಲ್ಲಿ ಯುವಕನ ಬರ್ಬರ ಹತ್ಯೆ: ಸರಣಿ ಕೊಲೆಗಳಿಂದ ಬೆಚ್ಚಿ ಬಿದ್ದ ಜನ..!
ಮನೆಯಲ್ಲಿದ್ದ ತಾಯಿ ಮಂಗಲ್ ಪಾಟೀಲ್ ಬಿಡಿಸಲು ಯತ್ನಿಸಿದ್ದರೂ ಸಹ ಅವರನ್ನೂ ಸಹ ಎಳೆದಾಡಿ ಕ್ರೌರ್ಯ ಮೆರೆದಿದ್ದರು. ರಣಕುಂಡಯೇ ಗ್ರಾಮದಿಂದ ಕಾರಿನಲ್ಲಿ ನಾಗೇಶ್ ಪಾಟೀಲ್ ಸಹೋದರ ಮೋಹನ್ ಪಾಟೀಲ್ ಎತ್ತಾಕಿಕೊಂಡು ಹೋಗಿದ್ದ ದುಷ್ಕರ್ಮಿಗಳು ಜಾಂಬೋಟಿ ರಸ್ತೆಯ ಕುಸಮಳ್ಳಿ ಬಳಿ ಮುಖ್ಯ ರಸ್ತೆಯಿಂದ 500 ಮೀಟರ್ ಒಳಗೆ ಗದ್ದೆಯೊಳಗೆ ಕರೆದೊಯ್ದು ಮನಬಂದಂತೆ ಹಲ್ಲೆ ಮಾಡಿದ್ರು. ರಾಡ್‌ನಿಂದ ಹಲ್ಲೆ ಮಾಡಿದ ಹಿನ್ನೆಲೆ 30 ವರ್ಷದ ನಾಗೇಶ್ ಪಾಟೀಲ್ ಸಾವನ್ನಪ್ಪಿದ್ದ.
ಬಳಿಕ ಮನೆ ಎದುರು ನಾಗೇಶ್ ಪಾಟೀಲ್ ಹಾಗೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಹೋದರ ಮೋಹನ್ ಪಾಟೀಲ್ ಬಿಸಾಡಿ ಪರಾರಿಯಾಗಿದ್ರು. ಘಟನೆಯಲ್ಲಿ ಅಣ್ಣ ನಾಗೇಶ್ ಪಾಟೀಲ್ ಸಾವನ್ನಪ್ಪಿದ್ರೆ ತಮ್ಮ ಮೋಹನ್ ಪಾಟೀಲ್ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ಕೊಲೆಯಾದವನ ತಾಯಿ ನೀಡಿದ ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಗ್ರಾಮೀಣ ಠಾಣೆ ಸಿಪಿಐ ಸುನಿಲ್ ಕುಮಾರ್ ನಂದೇಶ್ವರ್ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಗೋವಾದಲ್ಲಿ ಅಡಗಿ ಕುಳಿತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಾಲ,ಮೊಬೈಲ್ ಫೋನ್ ವಿಚಾರಕ್ಕೆ ವೈಷಮ್ಯ..!
ಇನ್ನು ಕೊಲೆಯಾದ ನಾಗೇಶ್ ಪಾಟೀಲ್ ತಂದೆ ಮೃತಪಟ್ಟಿದ್ದು ಕೆಲ ವರ್ಷಗಳ ಹಿಂದೆ ಪ್ರಮೋದ್ ಪಾಟೀಲ್ ಕುಟುಂಬಕ್ಕೆ 20 ಸಾವಿರ ರೂಪಾಯಿ ಸಾಲ ನೀಡಿದ್ದರಂತೆ. ಈ ಸಾಲದ ಹಣ ವಾಪಸ್ ನೀಡುವಂತೆ ಪ್ರಮೋದ್ ಪಾಟೀಲ್ ಮನೆಗೆ ತೆರಳಿ ನಾಗೇಶ್ ಪಾಟೀಲ್ ಗಲಾಟೆ ಮಾಡಿದ್ದ. ಅಷ್ಟೇ ಅಲ್ಲದೇ ಕೆಲ ತಿಂಗಳ ಹಿಂದೆ ಕೊಲೆಯಾದ ನಾಗೇಶ್ ಪಾಟೀಲ್ ಮೊಬೈಲ್ ಫೋನ್ ಕಳೆದು ಹೋಗಿತ್ತು. ಇದನ್ನು ಆರೋಪಿ ಪ್ರಮೋದ್ ಪಾಟೀಲ್ ನೇ ಕಳ್ಳತನ ಮಾಡಿರಬಹುದು ಅಂತಾ ಅನುಮಾನ ವ್ಯಕ್ತಪಡಿಸಿದ್ದನಂತೆ. ಇದೇ ವಿಚಾರಕ್ಕೆ ಕೊಲೆಯಾದ ನಾಗೇಶ್ ಪಾಟೀಲ್ ಹಾಗೂ ಆರೋಪಿ ಪ್ರಮೋದ್ ಪಾಟೀಲ್ ಮಧ್ಯೆ ಆಗಾಗ ಗಲಾಟೆ ಆಗ್ತಿತ್ತು. ಏಪ್ರಿಲ್ 3ರ ರಾತ್ರಿ 1 ಗಂಟೆಗೆ ಇದೇ ದ್ವೇಷವಿಟ್ಟುಕೊಂಡು ತನ್ನ ಐವರು ಸ್ನೇಹಿತರ ಜೊತೆ ಪ್ರಮೋದ್ ಪಾಟೀಲ್ ನಾಗೇಶ್ ಮನೆಗೆ ನುಗ್ಗಿದ್ದ. ಮನೆಯಲ್ಲಿ ಮಲಗಿದ್ದ ನಾಗೇಶ್ ಆತನ ಸಹೋದರ ಮೋಹನ್ ನನ್ನು ಬಲವಂತವಾಗಿ ಕಾರಿನಲ್ಲಿ ಎತ್ತಾಕಿಕೊಂಡು ಹೋಗಿದ್ರು. ಈ ವೇಳೆ ಬಿಡಿಸಲು ಬಂದಂತಹ ತಾಯಿ ಮಂಗಲ್ ಪಾಟೀಲ್ ಮೇಲೂ ಹಲ್ಲೆ ಮಾಡಿ ಪರಾರಿಯಾಗಿದ್ರು.
ಗೋವಾದಲ್ಲಿ ತಲೆಮರಿಸಿಕೊಂಡಿದ್ದ ಹಂತಕರು..!
ಇನ್ನು ರಣಕುಂಡಯೇ ಗ್ರಾಮದ ಮುಖ್ಯ ರಸ್ತೆಯಲ್ಲೇ ನಾಗೇಶ್ ಪಾಟೀಲ್ ಮೃತದೇಹ ಬಿದ್ದಿದ್ದನ್ನು ಕಂಡು ರಣಕುಂಡಯೇ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬೆಳಗಾವಿ ಗ್ರಾಮೀಣ ಠಾಣೆ ಸಿಪಿಐ ಸುನಿಲ್ ಕುಮಾರ್ ನಂದೇಶ್ವರ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿ ಕೊಲೆಯಾದ ನಾಗೇಶ್ ಪಾಟೀಲ್ ತಾಯಿ ಬಳಿ ಮಾಹಿತಿ ಪಡೆದ್ರು. ಬಳಿಕ ಆರೋಪಿಗಳ ಪತ್ತೆಗೆ ಬಲೆ ಬೀಸಿದಾಗ ಆರೋಪಿಗಳು ಗೋವಾದಲ್ಲಿ ಇರೋದು ಗೊತ್ತಾಗಿದೆ. ಗೋವಾಗೆ ತೆರಳಿದ ಪೊಲೀಸರು ಪ್ರಮುಖ ಆರೋಪಿ ಪ್ರಮೋದ್ ಪಾಟೀಲ್ ಸೇರಿ ನಾಲ್ವರನ್ನು ಬಂಧಿಸಿದ್ದು ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದ್ದಾರೆ.
ಒಟ್ಟಾರೆ ಮಾತುಕತೆ ಮೂಲಕ ಬಗೆಹರಿಯಬೇಕಿದ್ದ ಜಗಳ ವಿಕೋಪಕ್ಕೆ ತೆರಳಿ ಕೊಲೆಯಲ್ಲಿ ಅಂತ್ಯವಾಗಿದ್ದು ದುರಂತವೇ ಸರಿ. ಮನೆಗೆ ನುಗ್ಗಿ ಕ್ರೌರ್ಯ ಮೆರೆದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂಬುದು ಗ್ರಾಮಸ್ಥರ ಆಗ್ರಹ