Belagavi Crime: ಕುಂದಾನಗರಿಯಲ್ಲಿ ಯುವಕನ ಬರ್ಬರ ಹತ್ಯೆ: ಸರಣಿ ಕೊಲೆಗಳಿಂದ ಬೆಚ್ಚಿ ಬಿದ್ದ ಜನ..!
* 'ರಣಕುಂಡಯೇ'ನಲ್ಲಿ ರಕ್ತದೋಕುಳಿ, ತಡರಾತ್ರಿ ಮನೆಗೆ ನುಗ್ಗಿ ಯುವಕನ ಬರ್ಬರ ಕೊಲೆ
* ತಂದೆ ನೀಡಿದ್ದ ಸಾಲದ ಹಣ ವಾಪಸ್ ಕೇಳಿದ್ದೆ ತಪ್ಪಾಯ್ತಾ?
* ಬೆಳಗಾವಿ ಗ್ರಾಮೀಣ ಪ್ರದೇಶಲ್ಲಿ ಮುಂದುವರಿದ ದುಷ್ಕರ್ಮಿಗಳ ಅಟ್ಟಹಾಸ
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ(ಏ.03): ಮನೆಗೆ ನುಗ್ಗಿದ ದುಷ್ಕರ್ಮಿಗಳ ತಂಡ ಯುವಕನೊಬ್ಬನನ್ನ ಬರ್ಬರವಾಗಿ ಹತ್ಯೆ(Murder) ಮಾಡಿದ ಘಟನೆ ಬೆಳಗಾವಿ(Belagavi) ತಾಲೂಕಿನ ರಣಕುಂಡಯೇ ಗ್ರಾಮದಲ್ಲಿ ನಿನ್ನೆ ತಡರಾತ್ರಿ 1.30ರ ಸುಮಾರಿಗೆ ನಡೆದಿದೆ. ನಾಗರಾಜ ಪಾಟೀಲ್(30) ಎಂಬುವನೇ ಕೊಲೆಯಾದ ದುರ್ದೈವಿಯಾಗಿದ್ದಾನೆ.
ರಣಕುಂಡಯೇ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಮನೆಗೆ ನುಗ್ಗಿದ ದುಷ್ಕರ್ಮಿಗಳು(Miscreants) ನಾಗರಾಜ ಪಾಟೀಲ್‌ನನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕಾರಿನಲ್ಲಿ ಬಂದಿದ್ದ ಆರಕ್ಕೂ ಹೆಚ್ಚು ಜನರ ದುಷ್ಕರ್ಮಿಗಳ ತಂಡ ನಾಗರಾಜ ಪಾಟೀಲ ಹಾಗೂ ಆತನ ಸಹೋದರ ಮೋಹನ ಪಾಟೀಲ್‌ನನ್ನು ಕಾರಿನಲ್ಲಿ ಹೊತ್ತೊಯ್ದು ಅಣ್ಣನ ಹತ್ಯೆ ಮಾಡಿ ತಮ್ಮನ ಕಾಲು ಮುರಿದು ಮನೆ ಎದುರು ಬಿಸಾಡಿ ಪರಾರಿಯಾಗಿದ್ದಾರೆ. ಇಂದು(ಭಾನುವಾರ) ಬೆಳ್ಳಂಬೆಳಗ್ಗೆ ಬೆಳಗಾವಿ ತಾಲೂಕಿನ ರಣಕುಂಡಯೇ ಗ್ರಾಮದ ಜನರು ನಡು ರಸ್ತೆಯಲ್ಲೇ ಯುವಕನ(Deadbody) ಶವ ಬಿದ್ದಿದ್ದನ್ನ ಕಂಡು ಬೆಚ್ಚಿ ಬಿದ್ದಿದ್ದಾರೆ.
Bengaluru Crime: ಟೀ ಕುಡಿಯಲು ಹೋದಾಗ ಬೈಕ್ ಡಿಕ್ಕಿಯಲ್ಲಿದ್ದ 2.75 ಲಕ್ಷ ಕಳವು
ಮರಳಿ ಕೆಲಸಕ್ಕೆ ಹೋಗಲು ಟಿಕೆಟ್ ಬುಕ್ ಮಾಡಿದ್ದ ನಾಗರಾಜ್
ಕೊಲೆಯಾದ ನಾಗರಾಜ್ ಪಾಟೀಲ್ ಮರ್ಚೆಂಟ್ ನೆವಿಯಲ್ಲಿ ಕೆಲಸ ಮಾಡ್ತಿದ್ದನಂತೆ. ಬಳಿಕ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಗುಜರಾತ್‌ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದನಂತೆ. ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಊರಿಗೆ ವಾಪಸ್ ಆಗಿದ್ದ. ಮನೆಗೆ ದೊಡ್ಡ ಮಗನಾಗಿದ್ದ ನಾಗರಾಜ್ ಎಲ್ಲ ಜವಾಬ್ದಾರಿಯನ್ನ ತಾನೇ ನಿಭಾಯಿಸುತ್ತಿದ್ದನಂತೆ. ನಾಗರಾಜ್ ಪಾಟೀಲ್‌ಗೆ ಇಬ್ಬರು ತಮ್ಮಂದಿರಿದ್ದು ಮೋಹನ್ ಎಂಬಾತ ರಣಕುಂಡಯೇ ಗ್ರಾಮದಲ್ಲೇ ವಾಸವಿದ್ದ. ತಂದೆ ಇಲ್ಲದ ಈ ಮನೆಯಲ್ಲಿ ಮೂರು ಮಕ್ಕಳಿಗೆ ತಾಯಿಯೇ ಎಲ್ಲವೂ ಆಗಿದ್ದಳು. ನಾಗರಾಜ್ ಮತ್ತು ಓರ್ವ ತಮ್ಮ ಗುಜರಾತ್(Gujarat) ರಾಜ್ಯದಲ್ಲಿ ಕೆಲಸ ಮಾಡ್ತಿದ್ರೇ ಮೋಹನ್ ಮತ್ತು ತಾಯಿ ಗ್ರಾಮದಲ್ಲಿ ವಾಸವಿದ್ದರು.
ಇನ್ನು ವರ್ಷಕ್ಕೆ ಒಂದು ಬಾರಿ ಮಾತ್ರ ಇಬ್ಬರು ಅಣ್ತಮ್ಮಂದಿರು ಊರಿಗೆ ಬಂದೂ ಹೋಗುತ್ತಿದ್ದರು. ಹೀಗೆ ಈ ಸಾರಿ ನಾಗರಾಜ್ ಊರಿಗೆ ಬಂದಿದ್ದ ನಾಳೆ ವಾಪಸ್ ಗುಜರಾತ್‌ಗೆ ಕೆಲಸಕ್ಕೆ ಹೋಗಲು ಟಿಕೆಟ್ ಬುಕ್ ಸಹ ಮಾಡಿಕೊಂಡಿದ್ದನಂತೆ. ನಿನ್ನೆ ರಾತ್ರಿ ಊಟ ಮಾಡಿ ತಮ್ಮ ಮತ್ತು ತಾಯಿ ಒಟ್ಟಿಗೆ ಮಲಗಿದ್ದಾರೆ. ಮಧ್ಯರಾತ್ರಿ ಒಂದೂವರೆ ಗಂಟೆ ಸುಮಾರಿಗೆ ಆರಕ್ಕೂ ಅಧಿಕ ದುಷ್ಕರ್ಮಿಗಳ ತಂಡ ನಾಗರಾಜ್ ಮನೆ ಬಳಿ ಎಂಟ್ರಿಕೊಟ್ಟಿದೆ. ಹೊರಗಡೆ ನಿಲ್ಲಿಸಿದ್ದ ಬೈಕ್‌ಗಳನ್ನ ಒಡೆದು ಹಾಕಲು ಶುರು ಮಾಡಿದ್ದಾರೆ. ಈ ವೇಳೆ ಎಚ್ಚರಗೊಂಡ ಅಣ್ತಮ್ಮಂದಿರು ಕೂಡಲೇ ಬಾಗಿಲು ತಗೆದು ಹೊರ ಬಂದಿದ್ದಾರೆ. ಅವರು ಹೊರ ಬರ್ತಿದ್ದಂತೆ ಅಣ್ತಮ್ಮಂದಿರ ಮೇಲೆಯೂ ದುಷ್ಕರ್ಮಿಗಳು ಮುಗಿಬಿದ್ದಿದ್ದಾರೆ.
ತಲ್ವಾರ್, ಮಚ್ಚು, ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಬಿಡಿಸಲು ಬಂದ ನಾಗರಾಜ್ ತಾಯಿ ಮೇಲೆಯೂ ಹಲ್ಲೆ ಮಾಡಿ, ಸೀರೆ ಹರಿದು ಎಳೆದಾಡಿದ್ದಾರೆ. ಇದಾದ ಬಳಿಕ ಗದ್ದಲ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ದುಷ್ಟರು ಇಬ್ಬರು ಅಣ್ತಮ್ಮಂದಿರನ್ನ ಕಾರಿನಲ್ಲಿ ಕೂರಿಸಿಕೊಂಡು ಊರ ಹೊರಗೆ ಹೋಗಿ ನಾಗರಾಜ್‌ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ರೇ ಸಹೋದರ ಮೋಹನ್ ಕಾಲು ಮುರಿದು ಇಬ್ಬರನ್ನೂ ತಂದು ಮನೆಯ ಮುಂದೆ ಎಸೆದು ಎಸ್ಕೇಪ್ ಆಗಿದ್ದಾರೆ.
ಇನ್ನು ಬೆಳ್ಳಂಬೆಳಗ್ಗೆ ರಸ್ತೆಯಲ್ಲಿ ಶವ ಬಿದ್ದಿರುವುದನ್ನ ಕಂಡ ಗ್ರಾಮಸ್ಥರು ಕೂಡಲೇ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರಿಗೆ(Police) ಸುದ್ದಿ ಮುಟ್ಟಿಸಿದ್ದರು. ಮೋಹನ್ ಮತ್ತು ಆತನ ತಾಯಿಗೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೂ ಸ್ಥಳಕ್ಕೆ ಬಂದ ಗ್ರಾಮೀಣ ಠಾಣೆ ಸಿಪಿಐ ಸುನಿಲಕುಮಾರ್ ನಂದೇಶ್ವರ ಪರಿಶೀಲನೆ ನಡೆಸಿ ಕೂಡಲೇ ಯುವಕನ ಮೃತದೇಹ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಇತ್ತ ನಾಗರಾಜ್ ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಸಂಬಂಧಿಕರು ಮತ್ತು ಅಜ್ಜಿ ಮನೆಗೆ ಬಂದಿದ್ದು, ಮದುವೆ ವಯಸ್ಸಿಗೆ ಬಂದ ನಾಗರಾಜ್‌ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸಾಲ ನೀಡಿದ ಹಣ ವಾಪಸ್ ಕೇಳಿದ್ದಕ್ಕೆ ಹತ್ಯೆ?
ಇತ್ತ ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ(Investigation) ಶುರು ಮಾಡಿದ್ದಾರೆ ಈ ವೇಳೆ ರಣಕುಂಡಯೇ ಗ್ರಾಮದ ಕೆಲ ಯುವಕರ ಮೇಲೆ ಅನುಮಾನ ಬಂದಿದ್ದು ಒಂದು ಟೀಮ್ ಮಾಡಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ವೈಯಕ್ತಿಕ ಕಾರಣಕ್ಕೆ ಅಥವಾ ಹಣಕಾಸಿನ ವಿಚಾರಕ್ಕೆ ಇಲ್ಲ ಹುಡುಗಿ ವಿಚಾರಕ್ಕೆ ಈ ಕೊಲೆಯಾಗಿರಬಹುದು ಎಂಬ ಮೂರು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಗಂಡ, ಮಕ್ಕಳೆದುರು ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರಗೈದ ದುಷ್ಕರ್ಮಿಗಳು!
ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ರವೀಂದ್ರ ಗಡಾದಿ ಶವ ಬಿಸಾಕಿದ ಸ್ಥಳ ಪರಿಶೀಲನೆ ನಡೆಸಿದರು. ಇದರ ಜತೆಗೆ ಸಂಬಂಧಿಕರಿಂದಲೂ ಮಾಹಿತಿಯನ್ನ ಪಡೆದುಕೊಂಡಿದ್ದು ಆರೋಪಿಗಳ ಬಗ್ಗೆ ಗೊತ್ತಾಗಿದ್ದು ಇದೇ ಗ್ರಾಮದ ಯುವಕರ ಕೃತ್ಯ ಎಸಗಿದ್ದು ಆದಷ್ಟು ಬೇಗ ಆರೋಪಿಗಳನ್ನ ಬಂಧಿಸುವುದಾಗಿ ಹೇಳಿದ್ದಾರೆ. ಅವರ ತಾಯಿ ಹೇಳುವ ಪ್ರಕಾರ ನಾಗರಾಜ ಹಾಗೂ ಮೋಹನ್‌ನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಹೊಡೆದು ಬಳಿಕ ಮನೆಯ ಮುಂದೆ ತಂದು ಎಸೆದಿದ್ದಾರೆ. ಆರೋಪಿಗಳು ಅದೇ ಊರಿನವರಿದ್ದು ಅವರ ಪತ್ತೆಗೆ ಬಲೆ ಬೀಸಲಾಗಿದೆ. ಎಂಟು ವರ್ಷದ ಹಿಂದೆ ಕೊಲೆಯಾದ ನಾಗರಾಜ್ ತಂದೆ ಓರ್ವನಿಗೆ 20 ಸಾವಿರ ರೂಪಾಯಿ ಸಾಲ ನೀಡಿದ್ದರಂತೆ. ಅದನ್ನ ವಾಪಸ್ ಕೇಳಲು ನಾಗರಾಜ ಹೋದ ವೇಳೆ ಗಲಾಟೆಯಾದ ಮಾಹಿತಿ ಇದ್ದು ತನಿಖೆ ಮುಂದುವರಿಸಿದ್ದಾಗಿ ತಿಳಿಸಿದ್ದಾರೆ.
ಸದ್ಯ ಪ್ರತ್ಯೇಕ ತಂಡ ಮಾಡಿಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಹತ್ಯೆ ಮಾಡಿದ ಆರೋಪಿಗಳು ಗೋವಾದಲ್ಲಿ ತಲೆ ಮರೆಸಿಕೊಂಡ ಬಗ್ಗೆ ಮಾಹಿತಿ ಇದ್ದು ಶೋಧ ಕಾರ್ಯ ನಡೆಸಲಾಗುತ್ತಿದೆ. ಅದೇನೆ ಇರಲಿ ಮನೆಯಲ್ಲಿ ಮಲಗಿದ್ದವರನ್ನ ತಡರಾತ್ರಿ ಎಬ್ಬಿಸಿ ಎತ್ತಾಕ್ಕೊಂಡು ಹೋಗಿ ಹತ್ಯೆ ಮಾಡಿ ಮತ್ತೆ ಶವ ಮನೆ ಮುಂದೆ ಬಿಸಾಡಿ ಹೋಗ್ತಾರೆ ಅಂದ್ರೇ ಬೆಳಗಾವಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಅಂತಾ ಜನ ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಮತ್ತು ಯಾರು ಕೃತ್ಯ ಎಸಗಿದ್ದಾರೆ ಎಂಬ ಬಗ್ಗೆ ತನಿಖೆ ಬಳಿಕವಷ್ಟೇ ಗೊತ್ತಾಗಲಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ಕ್ರೌರ್ಯ ಮೆರೆಯುತ್ತಿರುವ ದುಷ್ಕರ್ಮಿಗಳಿಗೆ ಬೆಳಗಾವಿ ಪೊಲೀಸರು ತಕ್ಕ ಪಾಠ ಕಲಿಸಲಿ ಎಂಬುದು ಸಾರ್ವಜನಿಕರ ಒತ್ತಾಯ.