ಬೆಂಗಳೂರು(ಜ.30): ಹಣ ದುಪ್ಪಟ್ಟು ಸಿಗುವುದೆಂಬ ಆಸೆಗೆ ಬಿದ್ದು ಬ್ಯಾಂಕ್‌ ಆಫ್‌ ಬರೋಡಾಕ್ಕೆ ಸೇರಿದ 1 ಕೋಟಿ ದುರ್ಬಳಕೆ ಮಾಡಿದ ಆರೋಪದ ಮೇರೆಗೆ ಬ್ಯಾಂಕ್‌ ಮ್ಯಾನೇಜರ್‌ ಸೇರಿ ನಾಲ್ವರು ಆರೋಪಿಗಳನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿರುವ ಬ್ಯಾಂಕ್‌ ಆಫ್‌ ಬರೋಡಾ ಶಾಖೆಯ ಮ್ಯಾನೇಜರ್‌ ಅರುಣ್‌ ವೀರಮಲ್ಲ, ಕಮೀಷನ್‌ ಏಜೆಂಟ್‌ ಬಸವರಾಜ್‌, ಬ್ಯಾಂಕ್‌ ಸಹಾಯಕ ರಾಮಕೃಷ್ಣ ಹಾಗೂ ಖಾಸಗಿ ವ್ಯಕ್ತಿ ಇಮ್ತಿಯಾಜ್‌ ಬಂಧಿತರು.
ಸಿದ್ದಯ್ಯ ರಸ್ತೆಯಲ್ಲಿ ಬ್ಯಾಂಕ್‌ ಆಫ್‌ ಬರೋಡಾದ ಕರೆನ್ಸಿ ಚೆಸ್ಟ್‌ (ನಿಧಿ) ಶಾಖೆ ಇದೆ. ಜ.12ರಂದು ಬ್ಯಾಂಕ್‌ ಮ್ಯಾನೇಜರ್‌ ಅರುಣ್‌ ವೀರಮಲ್ಲಯ್ಯ ತಮ್ಮ ಬ್ಯಾಂಕ್‌ ಶಾಖೆಯ ಕಾರ್ಯ ಚಟುವಟಿಕೆಗಳಿಗಾಗಿ ಸಿದ್ದಯ್ಯ ರಸ್ತೆಯಲ್ಲಿರುವ ಕರೆನ್ಸಿ ಚೆಸ್ಟ್‌ ಶಾಖೆಗೆ ಹೋಗಿ 1 ಕೋಟಿ ನೀಡುವಂತೆ ಮನವಿ ಸಲ್ಲಿಸಿದ್ದರು. ಅದರಂತೆ 1 ಕೋಟಿಯನ್ನು ಅರುಣ್‌ಗೆ ನೀಡಲಾಗಿತ್ತು. ಆದರೆ ಈ ಹಣವನ್ನು ಅರುಣ್‌ ಬ್ಯಾಂಕ್‌ಗೆ ಜಮೆ ಮಾಡಿರಲಿಲ್ಲ.

ಬದಲಿಗೆ ಮತ್ತೊಬ್ಬ ಆರೋಪಿ ಬ್ಯಾಂಕ್‌ನ ಸಹಾಯಕ ರಾಮಕೃಷ್ಣ ಜತೆ ಹೊರಟು ಹೋಗಿದ್ದರು. ಸಂಜೆ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕಿ ರಮ್ಯಾ ಶೆಟ್ಟಿಗೆ ಕರೆ ಮಾಡಿದ ಅರುಣ್‌, ‘ನಾನು ಶಾಖೆಗೆ 1 ಕೋಟಿ ತೆಗೆದುಕೊಂಡು ಬರುತ್ತಿದ್ದೇನೆ. ಹಾಗಾಗಿ ಜಮೆ ಮಾಡಿದ ಹಾಗೆ ನಗದು ನಮೂದಿಸಿ ಪಾಸ್‌ ಮಾಡುವಂತೆ ಸೂಚಿಸಿದ್ದರು. ಇದರಿಂದ ಅನುಮಾನಗೊಂಡ ರಮ್ಯಾ, ಈ ವಿಚಾರವನ್ನು ಬ್ಯಾಂಕ್‌ ಆಫ್‌ ಬರೋಡಾ ಬೆಂಗಳೂರು ದಕ್ಷಿಣ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ರಿತೇಶ್‌ ಕುಮಾರ್‌ ಗಮನಕ್ಕೆ ತಂದಿದ್ದರು.

ಕಮಿಷನ್ ಆಸೆ ತೋರಿಸಿ ಮೋಸ: ನೀವೂ ಚೈನ್‌ಲಿಂಕಲ್ಲಿ ಹೂಡಿಕೆ ಮಾಡಿದ್ರಾ ?

ದರೋಡೆ ಕಥೆ ಹೆಣೆದ:

ಸಂಜೆ ಸ್ವತಃ ಬ್ಯಾಂಕ್‌ಗೆ ಕರೆ ಮಾಡಿದ ಅರುಣ್‌, ಬ್ಯಾಂಕ್‌ಗೆ ಜಮೆ ಮಾಡಲೆಂದು ಕರೆನ್ಸಿ ಚೆಸ್ಟ್‌ನಿಂದ .1 ಕೋಟಿ ತರುತ್ತಿದ್ದಾಗ ಹಣ ದರೋಡೆ ಆಗಿದೆ. ಚಿಕ್ಕಜಾಲ ಪೊಲೀಸ್‌ ಠಾಣೆಯಲ್ಲಿ ದೂರು ನೀಡುತ್ತಿರುವುದಾಗಿ ತಿಳಿಸಿದ್ದ. ಅರುಣ್‌ ಗೊಂದಲದ ಹೇಳಿಕೆ ಕೇಳಿ ಅನುಮಾನಗೊಂಡ ರಿತೇಶ್‌ ಈ ಕುರಿತು ಯಲಹಂಕ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ವಿಚಾರಣೆ ವೇಳೆ ಸತ್ಯ ಬಯಲು

ಪೊಲೀಸರು ಅರುಣ್‌ ಹಾಗೂ ರಾಮಕೃಷ್ಣನನ್ನು ಕರೆಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿತ್ತು. ಮಧ್ಯವರ್ತಿ ಬಸವರಾಜ್‌ ಮೂಲಕ ಅರುಣ್‌ಗೆ ಆರೋಪಿ ಇಮ್ತಿಯಾಜ್‌ ಪರಿಚಯವಾಗಿತ್ತು. 1 ಕೋಟಿ ನೀಡಿದರೆ ಕೆಲವೇ ಗಂಟೆಗಳಲ್ಲಿ ದುಪ್ಪಟ್ಟು ಹಣ ನೀಡುವುದಾಗಿ ಇಮ್ತಿಯಾಜ್‌ ಆಮಿಷವೊಡ್ಡಿದ್ದ. ಈತನ ಮಾತನನ್ನು ನಂಬಿದ ಅರುಣ್‌ ಕಡಿಮೆ ಅವಧಿಯಲ್ಲಿ ಲಕ್ಷಾಂತರ ರುಪಾಯಿ ಗಳಿಸಬಹುದು ಆರೋಪಿಗೆ ಹಣ ನೀಡಿದ್ದ. ಆದರೆ, ಆರೋಪಿ ಇಮ್ತಿಯಾಜ್‌ ಹಣ ಹಿಂತಿರುಗಿಸದೆ ಮೋಸ ಮಾಡಿದಾಗ ದರೋಡೆ ಕಥೆ ಕಟ್ಟಿದ್ದ ವಿಷಯ ಗೊತ್ತಾಯಿತು ಎಂದು ಪೊಲೀಸರು ತಿಳಿಸಿದರು.