ಹಣ ಹೊಂದಿಸಲು ವೃದ್ಧೆಯ ಮನೆಯಲ್ಲಿ ಕಳ್ಳತನ, ಈ ಹಿಂದೆ ಖಾಸಗಿ ಕಾಲೇಜಲ್ಲಿ ಹಣ ದುರುಪಯೋಗದಡಿ ಜೈಲು ಸೇರಿದ್ದ

ಬೆಂಗಳೂರು(ನ.06): ಜೂಜಾಟದ ಹುಚ್ಚಿಗೆ ಬಿದ್ದು ಇದ್ದ ಕೆಲಸವನ್ನು ಕಳೆದುಕೊಂಡು, ಕಳ್ಳತನಕ್ಕಿಳಿದಿದ್ದ ಖಾಸಗಿ ಕಾಲೇಜಿನ ಮಾಜಿ ಸಹಾಯಕ ಪ್ರಾಧ್ಯಾಪಕನೊಬ್ಬ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮಾದನಾಯಕನಹಳ್ಳಿ ಸಮೀಪದ ನಿವಾಸಿ ಸುರೇಶ್‌.ಎಸ್‌.ಪಾಟೀಲ್‌ ಬಂಧಿತನಾಗಿದ್ದು, ಆರೋಪಿಯಿಂದ 2.5 ಲಕ್ಷ ಮೌಲ್ಯದ 43.7 ಗ್ರಾಂ ಚಿನ್ನಾಭರಣ ಹಾಗೂ ಬೈಕ್‌ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಸಂಜಯ ನಗರ ಸಮೀಪ ಮನೆಗೆ ನುಗ್ಗಿ ವೃದ್ಧೆಯೊಬ್ಬರ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಕದ್ದು ದುಷ್ಕರ್ಮಿ ಪರಾರಿಯಾಗಿದ್ದ. ಈ ಬಗ್ಗೆ ತನಿಖೆ ನಡೆಸಿದ ಇನ್‌ಸ್ಪೆಕ್ಟರ್‌ ಗುರುಪ್ರಸಾದ್‌ ನೇತೃತ್ವದ ತಂಡ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೂಜಾಟ ತಂದ ಆಪತ್ತು:

ದಾವಣಗೆರೆ ಜಿಲ್ಲೆಯ ಸುರೇಶ್‌ ಎಸ್‌.ಪಾಟೀಲ್‌ ಪ್ರತಿಭಾವಂತ ಪದವೀಧರನಾಗಿದ್ದು, ಎರಡು ವರ್ಷಗಳ ಹಿಂದೆ ರಾಜಾಜಿನಗರ ಸಮೀಪ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಎಂಬಿಎ ಸಹಾಯಕ ಪ್ರಾಧ್ಯಾಪಕನಾಗಿದ್ದ. ಆದರೆ ಆನ್‌ಲೈನ್‌ನಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌, ಪುಟ್ಬಾಲ್‌ ಹೀಗೆ ವಿಪರೀತ ಜೂಜಾಟದ ಗೀಳಿಗೆ ಬಿದ್ದ ಆತ, 2021ರಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಪ್ರವೇಶ ಶುಲ್ಕದ ಹಣವನ್ನು ಬೆಟ್ಟಿಂಗ್‌ಗೆ ಕಟ್ಟಿಕಳೆದಿದ್ದ. ಈ ಹಣ ದುರ್ಬಳಕೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಕಾಲೇಜು ಆಡಳಿತ ಮಂಡಳಿ, ಆತನನ್ನು ಕೆಲಸದಿಂದ ವಜಾಗೊಳಿಸಿತು. ಅಲ್ಲದೆ ರಾಜಾಜಿ ನಗರ ಠಾಣೆಯಲ್ಲಿ ದೂರು ದಾಖಲಿಸಿ ಆತನನ್ನು ಜೈಲಿಗೆ ಕಳುಹಿಸಿತು. ಕೆಲ ದಿನಗಳ ತರುವಾಯ ಜಾಮೀನು ಪಡೆದು ಹೊರಬಂದ ಆತ, ಹೆಬ್ಬಾಳ ಸಮೀಪದ ಮತ್ತೊಂದು ಪ್ರತಿಷ್ಠಿತ ಖಾಸಗಿ ಕಾಲೇಜಿಗೆ ಸಹಾಯಕ ಪ್ರಾಧ್ಯಾಪಕನಾಗಿ ಸೇರಿದ. ಆದರೆ ಆ ಕಾಲೇಜಿನಲ್ಲಿ ಕೂಡಾ ಹಣವನ್ನು ಜೂಜಾಟಕ್ಕೆ ಬಳಸಿಕೊಂಡು ಕೆಲಸ ಕಳೆದುಕೊಂಡಿದ್ದ.

ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌: ಎಸ್‌ಡಿಪಿಐ ಮುಖಂಡ ಸೇರಿ ಮೂವರ ಬಂಧನ

ಬಹಳ ಬುದ್ಧಿವಂತನಾಗಿದ್ದರಿಂದ ಯಾವುದೇ ಕಾಲೇಜಿನಲ್ಲಿ ಆತ ಸುಲಭವಾಗಿ ಅಧ್ಯಾಪಕ ಹುದ್ದೆಗೆ ಆಯ್ಕೆಯಾಗುತ್ತಿದ್ದ. ಆದರೆ ಆತನ ಹಿನ್ನಲೆ ತಿಳಿದು ಯಾರೊಬ್ಬರೂ ಕೆಲಸ ಕೊಡಲಿಲ್ಲ. ಇದರಿಂದ ನಿರುದ್ಯೋಗಿಯಾದ ಸುರೇಶ್‌ ಹಣಕಾಸು ಸಂಕಷ್ಟಕ್ಕೆ ತುತ್ತಾದ. ಮತ್ತೊಂದೆಡೆ ಆನ್‌ಲೈನ್‌ ಬೆಟ್ಟಿಂಗ್‌ ವ್ಯಸನ ಬೇರೆ ಇತ್ತು. ಹೀಗಾಗಿ ಸುಲಭವಾಗಿ ಹಣ ಸಂಪಾದನೆಗೆ ಕೊನೆಗೆ ಅಡ್ಡ ಮಾರ್ಗ ತುಳಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕದ್ದ ಬೈಕ್‌ ಕಳ್ಳತನಕ್ಕೆ ಬಳಕೆ

ಪ್ರತಿ ದಿನ ಕಾಲೇಜಿಗೆ ತೆರಳುವಾಗ ಎಇಸಿಎಸ್‌ ಲೇಔಟ್‌ನಲ್ಲಿ ಏಕಾಂಗಿಯಾಗಿ ನೆಲೆಸಿರುವ 63 ವರ್ಷದ ವೃದ್ಧೆಯನ್ನು ಸುರೇಶ್‌ ಗಮನಿಸಿದ್ದ. ತಾನು ಕೆಲಸ ಕಳೆದುಕೊಂಡು ಕಾಲೇಜಿನ ಹೊರ ಬಿದ್ದ ದಿನ ಆತ, ಮನೆಗೆ ಮರಳುವಾಗ ಆ ವೃದ್ಧೆ ಪಾರ್ಕ್ ಬಳಿ ಕೈಯಲ್ಲಿ ಕೀ ಹಿಡಿದುಕೊಂಡು ನಿಂತಿದ್ದನನ್ನು ನೋಡಿ ಕಳ್ಳತನಕ್ಕೆ ಯೋಜಿಸಿದ್ದ. ಪಾರ್ಕ್ಗೆ ಕೀ ತೆಗೆದುಕೊಂಡು ಬಂದಿರುವುದರಿಂದ ಆ ವೃದ್ಧೆ ಒಬ್ಬರೇ ನೆಲೆಸಿದ್ದಾರೆ ಎಂದು ಊಹಿಸಿದ್ದ. ಅಂತೆಯೇ ಜಾಲಹಳ್ಳಿ ಬಳಿ ಬೈಕ್‌ ಕಳವು ಮಾಡಿ ಬಳಿಕ ಅದೇ ಬೈಕ್‌ ಬಳಸಿ ವೃದ್ಧೆ ಮನೆಗೆ ನುಗ್ಗಿ ಸರ ಕಳವು ಮಾಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.