Asianet Suvarna News Asianet Suvarna News

ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌: ಎಸ್‌ಡಿಪಿಐ ಮುಖಂಡ ಸೇರಿ ಮೂವರ ಬಂಧನ

ಬೆಂಗಳೂರು, ದ.ಕ, ಮೈಸೂರು ಸೇರಿ ರಾಜ್ಯದ 7 ಕಡೆ ದಾಳಿ, ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಬೆಂಗಳೂರಲ್ಲಿ ಬಂಧನ

Three Arrested Including SDPI Leader on Praveen Nettaru Murder Case grg
Author
First Published Nov 6, 2022, 6:26 AM IST

ಮಂಗಳೂರು/ಪುತ್ತೂರು/ಸುಳ್ಯ/ಮೈಸೂರು(ನ.06): ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ಮತ್ತು ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ನಂಟು ವಿಚಾರಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಶನಿವಾರ ರಾಜ್ಯದ ಏಳು ಕಡೆ ದಾಳಿ ನಡೆಸಿದ್ದು, ದ.ಕ.ಜಿಲ್ಲೆಯಲ್ಲಿ ಮೂವರನ್ನು ಬಂಧಿಸಿದೆ. ಬಂಧಿತ ಮೂವರೂ ಪ್ರವೀಣ್‌ ನೆಟ್ಟಾರು ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎಗೆ ಬೇಕಾದವರಾಗಿದ್ದಾರೆ. ಎನ್‌ಐಎ ತಂಡ ದಕ್ಷಿಣ ಕನ್ನಡ ಹಾಗೂ ಮೈಸೂರು, ಹುಬ್ಬಳ್ಳಿ, ಬೆಂಗಳೂರಿನಲ್ಲಿ ದಿಢೀರ್‌ ದಾಳಿ ನಡೆಸಿ ಕೆಲವರನ್ನು ವಿಚಾರಣೆ ನಡೆಸಿದೆ. ಈ ವೇಳೆ ಮೂವರನ್ನು ಬಂಧಿಸಿದೆ. ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಎಸ್‌ಡಿಪಿಐ ಸುಳ್ಯ ಕ್ಷೇತ್ರ ಸಮಿತಿ ಅಧ್ಯಕ್ಷ, ಗ್ರಾಪಂ ಎಸ್‌ಡಿಪಿಐ ಬೆಂಬಲಿತ ಸದಸ್ಯ ಇಕ್ಬಾಲ್‌ ಬೆಳ್ಳಾರೆ ಮತ್ತು ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಇಬ್ರಾಹಿಂ ನಾವೂರ್‌ ಬಂಧಿತರು.

ಶಾಫಿ ಬೆಳ್ಳಾರೆಯನ್ನು ಬೆಂಗಳೂರಲ್ಲಿ ಬಂಧಿಸಿದ್ದು, ಇದರ ಬೆನ್ನಲ್ಲೇ ಶನಿವಾರ ನಸುಕಿನ ಜಾವ ದಾಳಿ ನಡೆಸಿದ ಎನ್‌ಐಎ ತಂಡ ಶಾಫಿ ಸಹೋದರ ಇಕ್ಬಾಲ್‌ ಬೆಳ್ಳಾರೆ ಮತ್ತು ಇಬ್ರಾಹಿಂ ನಾವೂರುನನ್ನು ದಕ್ಷಿಣ ಕನ್ನಡದ ಸುಳ್ಯದಲ್ಲಿ ಬಂಧಿಸಿದೆ. ನಂತರ ಸುಳ್ಯದಲ್ಲಿ ಬಂಧಿತ ಆರೋಪಿಗಳನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಬಳಿಕ ಎನ್‌ಐಎ ತಂಡ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದೆ. ಕಾರ್ಯಾಚರಣೆ ವೇಳೆ ಡಿಜಿಟಲ್‌ ಸಾಕ್ಷ್ಯಗಳು, ದಾಖಲೆ ಪತ್ರಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ.

Praveen Nettaru Murder Case: ಹಂತಕರನ್ನು ಹುಡುಕಿಕೊಟ್ಟರೆ ಇನಾಮು: ಎನ್‌ಐಎ ಘೋಷಣೆ

ಬೆಳ್ಳಾರೆ ಸೋದರರು ಹಿಂದೆ ಪಿಎಫ್‌ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಜು.26ರಂದು ಪ್ರವೀಣ್‌ ನೆಟ್ಟಾರು ಹತ್ಯೆಬಳಿಕ ಶಾಫಿ ಬೆಳ್ಳಾರೆ ಮತ್ತು ಇಕ್ಬಾಲ್‌ ಬೆಳ್ಳಾರೆ ನಾಪತ್ತೆಯಾಗಿದ್ದರು. ಇನ್ನು ಇಬ್ರಾಹಿಂ ನಾವೂರು ಸುಳ್ಯದ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಪಿಎಫ್‌ಐ ಜತೆಗಿನ ನಂಟು ಆರೋಪದಲ್ಲಿ ಈತನನ್ನು ಎನ್‌ಐಎ ತಂಡ ಬಂಧಿಸಿದೆ. ಪಿಎಫ್‌ಐ ನಿಷೇಧಗೊಂಡ ಒಂದು ತಿಂಗಳ ಬಳಿಕ ಇದೀಗ ಎಸ್‌ಡಿಪಿಐ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ.
ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಎನ್‌ಐಎ ನಡೆಸುತ್ತಿರುವ 3ನೇ ಕಾರ್ಯಾಚರಣೆ ಇದಾಗಿದೆ. ಪ್ರವೀಣ್‌ ಹತ್ಯೆ ಪ್ರಕರಣದಲ್ಲಿ ಈವರೆಗೆ 12 ಮಂದಿಯನ್ನು ಬಂಧಿಸಿದಂತಾಗಿದ್ದು, ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಲಾಗಿದ್ದು, ಸುಳಿವು ಕೊಟ್ಟವರಿಗೆ ಬಹುಮಾನವನ್ನೂ ಘೋಷಿಸಲಾಗಿದೆ.

ನೆಲ್ಯಾಡಿಯಲ್ಲೂ ದಾಳಿ:

ಎನ್‌ಐಎ ಅಧಿಕಾರಿಗಳ ತಂಡ ನೆಲ್ಯಾಡಿ ಸಮೀಪದ ಶಾಂತಿಬೆಟ್ಟು ನಿವಾಸಿ ಸಾದಿಕ್‌ ಮನೆಗೂ ನಸುಕಿನ ಜಾವ ದಾಳಿ ನಡೆಸಿತ್ತಾದರೂ ಆತ ಮನೆಯಲ್ಲಿರಲಿಲ್ಲ ಎನ್ನಲಾಗಿದೆæ. ಹಿಂದೆ ನಡೆದಿದ್ದ ಶರತ್‌ ಮಡಿವಾಳ ಕೊಲೆ ಕೇಸಲ್ಲಿ ಸಾದಿಕ್‌ ಬಂಧನಕ್ಕೊಳಗಾಗಿ ನಂತರ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ.

ಮೈಸೂರಲ್ಲೂ ವಿಚಾರಣೆ:

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಿಷೇಧಿತ ಪಿಎಫ್‌ಐ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಮಂಡಿ ಮೊಹಲ್ಲಾದ ಸುಲೈಮಾನ್‌ ಎಂಬವರನ್ನೂ ಎನ್‌ಐಎ ಅಧಿಕಾರಿಗಳು ಶನಿವಾರ ಬೆಳಗ್ಗೆ ವಶಕ್ಕೆ ಪಡೆದು, ಅಜ್ಞಾನ ಸ್ಥಳದಲ್ಲಿ ಹಲವು ಗಂಟೆಗಳ ಕಾಲ ವಿಚಾರಣೆ ಮಾಡಿದ್ದರು. ಬಳಿಕ ಬಿಟ್ಟು ಕಳುಹಿಸಿದ್ದಾರೆ.

ಮಂಗಳೂರು: ಡಿಸಿ ಕಚೇರಿಯಲ್ಲಿ ಸರ್ಕಾರಿ ಕೆಲಸಕ್ಕೆ ಹಾಜರಾದ ದಿ. ಪ್ರವೀಣ್‌ ನೆಟ್ಟಾರು ಪತ್ನಿ

ಹುಬ್ಬಳ್ಳಿಯಲ್ಲೂ ಎಸ್‌ಡಿಪಿಐ ಮುಖಂಡನ ವಿಚಾರಣೆ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲೂ ದಾಳಿ ನಡೆಸಿದ ಎನ್‌ಐಎ ತಂಡ ಎಸ್‌ಡಿಪಿಐ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್‌ ನಾಲಬಂದ್‌ ಹಾಗೂ ಕುಟುಂಬದ ಸದಸ್ಯರನ್ನು ಶನಿವಾರ ವಿಚಾರಣೆಗೆ ಒಳಪಡಿಸಿ, ಒಂದಿಷ್ಟುಮಾಹಿತಿ ಸಂಗ್ರಹಿಸಿದೆ. ಹಳೇಹುಬ್ಬಳ್ಳಿಯಲ್ಲಿರುವ ಇಸ್ಮಾಯಿಲ್‌ ನಿವಾಸಕ್ಕೆ ಬೆಳಗ್ಗೆ 4.30ಕ್ಕೆ ತೆರಳಿದ ತಂಡ, 11 ಗಂಟೆ ವರೆಗೆ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದೆ. ಕಿರಿಯ ಪುತ್ರ ತಾಹಿರ್‌ ನಾಲಬಂದ್‌ ಕುರಿತು ವಿಚಾರಣೆ ನಡೆಸಿದ್ದಾರೆ. ಆತ ಬೆಳಗಾವಿಗೆ ತೆರಳಿದ್ದಾನೆಂದು ಕುಟುಂಬದವರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು, ನ.7ರಂದು ಬೆಂಗಳೂರಿನ ಎನ್‌ಐಎ ಕಚೇರಿಗೆ ಕುಟುಂಬ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್‌ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಸ್ಮಾಯಿಲ್‌ ಈ ಮೊದಲು ನಿಷೇಧಿತ ಪಿಎಫ್‌ಐ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದರು. ಇದೀಗ ಎಸ್‌ಡಿಪಿಐನಲ್ಲಿ ಗುರುತಿಸಿಕೊಂಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಇಸ್ಮಾಯಿಲ್‌, ಎನ್‌ಐಎ ಅಧಿಕಾರಿಗಳು ವಿಚಾರಣೆಗೆ ನಾವು ಸಹಕರಿಸಿದ್ದೇವೆ. ಅವರೂ ಸೌಜನ್ಯಪೂರ್ವಕವಾಗಿ ನಡೆಸಿಕೊಂಡರು. ನಮ್ಮ ಕಿರಿಯ ಮಗನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನ.7ರಂದು ಬೆಂಗಳೂರಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ವಿಚಾರಣೆಗೆ ಸಹಕಾರ ನೀಡುತ್ತೇವೆ ಎಂದರು.
 

Follow Us:
Download App:
  • android
  • ios