ಬೆಳಗಾವಿ: ಹಣ ದೋಚಿ ಪರಾರಿ, 26 ಗಂಟೆಗಳಲ್ಲಿ ವಿದೇಶಿ ವಂಚಕರ ಗ್ಯಾಂಗ್ ಬಂಧನ
ಪ್ರಕರಣ ಬೇಧಿಸಿ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗೆ ಶ್ಲಾಘನೆ ವ್ಯಕ್ತಪಡಿಸಿದ ನಗರ ಪೊಲೀಸ್ ಆಯುಕ್ತರು ಹಾಗೂ ಉಪಾಯುಕ್ತರು
ಬೆಳಗಾವಿ(ಅ.25): ಅಂಗಡಿ ಕೆಸಲಗಾರರ ಗಮನ ಬೇರೆ ಕಡೆ ಸೆಳೆದು ಹಣ ದೋಚಿಕೊಂಡು ಪರಾರಿಯಾಗಿದ್ದ ವಿದೇಶಿ ನಾಲ್ವರು ವಂಚಕರನ್ನು ಘಟನೆ ನಡೆದ ಕೇವಲ 26 ಗಂಟೆಗಳಲ್ಲಿ ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ₹50 ಸಾವಿರ ನಗದು, 7 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರ ಸೇರಿದಂತೆ ಒಟ್ಟು ₹14 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ಇರಾನ್ ಮೂಲದ ಬಹ್ಮನ್ ಅಬ್ದೊಲ್ಹೊಸೇನ್ ಬಿನೈಝ್ (36), ಹಬೀಬ್ ಹಸನ್ ಮೊಘೋಲ್ (60), ಸಹೀದಾ ಘೋಲಮ್ ಕರಿಮ್ಇಝಾದ್ (20) ಹಾಗೂ ಕರಿಮ್‌ಅಹ್ಮದ ದಾವಲೋ ಬಂಧಿತ ಆರೋಪಿಗಳು.
ಆಗಿದ್ದೇನು?:
ಅ.20 ರಂದು ಸಂಜೆ 6 ಗಂಟೆ ಸುಮಾರಿಗೆ ನಗರದ ದೇಶಪಾಂಡೆ ಗಲ್ಲಿಯಲ್ಲಿರುವ ಶಗುಣ ಟ್ರೇಡರ್ಸ್ (ಡ್ರೈಫ್ರೂಟ್ಸ್ ಅಂಗಡಿ)ಯಲ್ಲಿ ಗ್ರಾಹಕರಾಗಿ ಬಂದಿದ್ದಾರೆ. ಅಂಗಡಿಯಲ್ಲಿ ವಿವಿಧ ವಸ್ತುಗಳನ್ನು ಖರೀದಿಸುತ್ತಿರುವಂತೆ ನಾಟಕ ಮಾಡಿ ಕೆಲಸಗಾರರ ಗಮನವನ್ನು ಬೇರೆಡೆಗೆ ಸೆಳೆದಿದ್ದಾರೆ. ಈ ವೇಳೆ ಅಂಡಿಯಲ್ಲಿದ್ದ ₹50 ಸಾವಿರ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಕುರಿತು ಅಂಗಡಿ ಮಾಲೀಕರು ನಗರದ ಖಡೇಬಜಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಭಾರತೀಯ ಸೇನೆಗೆ ಸೇರಿಸುವುದಾಗಿ 150 ಯುವಕರಿಗೆ 1 ಕೋಟಿ ವಂಚಿಸಿದ ಶಿವರಾಜ್ ವಟಗಲ್
ಅಂಗಡಿಯಲ್ಲಿ ಹಣ ದೋಚಿಕೊಂಡು ಹೋಗಿರುವ ಕುರಿತು ಅಂಗಡಿ ಮಾಲೀಕ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ವಂಚಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಮೊದಲಿಗೆ ಶಗುಣ ಟ್ರೇಡರ್ಸ್ (ಡ್ರೈಫ್ರೂಟ್ಸ್ ಅಂಗಡಿ)ಗೆ ತೆರಳಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಅಂಗಡಿಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸುಳಿವು ನೀಡಿದೆ. ವಂಚಕರ ಹಣ ದೋಚಿಕೊಂಡು ಬಾಡಿಗೆ ಆಟೋದಲ್ಲಿ ತೆರಳಿದ್ದು, ಈ ಆಟೋದ ನಂಬರ್ ಪತ್ತೆ ಹಚ್ಚಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆತ ಅವರನ್ನು ಬಿಟ್ಟುಬಂದಿರುವ ಜಾಗದ ಕುರಿತು ಮಾಹಿತಿ ನೀಡಿದ್ದಾನೆ.
ಆಟೋ ಚಾಲಕ ಮಾಹಿತಿ ಆಧರಿಸಿ ವಂಚಕರು ಇಳಿದುಕೊಂಡ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ. ಅಲ್ಲಿನ ಸಿಸಿಟಿವಿಯಲ್ಲಿ ನಾಲ್ಕು ಜನರು ಬೇರೆ ಆಟೋ ಹತ್ತಿ ಹೋಗಿರುವ ದೃಶ್ಯ ಸೆರೆಯಾಗಿದೆ. ಈ ದೃಶ್ಯದ ಆಧಾರ ಮೇಲೆ 2ನೇ ಆಟೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಮಯದಲ್ಲಿ ಆತ, ಅವರನ್ನು ಬಿಟ್ಟು ಬಂದಿರುವ ಜಾಗದ ಕುರಿತು ಮಾಹಿತಿ ನೀಡಿದ್ದಾನೆ. ನಂತರ ಕಾರ್ಯ ಪ್ರವೃತ್ತರಾದ ಪೊಲೀಸರು 2ನೇ ಆಟೋದಿಂದ ಇಳಿದ ಜಾಗವನ್ನು ಪರಿಶೀಲನೆ ನಡೆಸಿದ್ದು, ಅಲ್ಲಿಯೂ ಅವರ ಚಲನವಲನ ಹಾಗೂ ದೆಹಲಿ ನೋಂದಣಿ ಹೊಂದಿರುವ ಕಾರನಲ್ಲಿ ಪ್ರಯಾಣ ಬೆಳೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಈ ಮಾಹಿತಿ ಆಧರಿಸಿ ಬೆಳಗಾವಿಯಿಂದ ಹೊರಗೆ ಹೋಗುವ ರಸ್ತೆಗಳಲ್ಲಿನ ಎಲ್ಲ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿ ಸಮಯದಲ್ಲಿ ಹಿರೇಬಾಗೇವಾಡಿ ಟೋಲ್ ನಾಕಾ ಮೂಲಕ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿನ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಹಾವೇರಿಯತ್ತ ಪ್ರಯಾಣಿಸುತ್ತಿರುವ ಬಗ್ಗೆ ಸುಳಿವು ಸಿಕ್ಕಿದೆ.
ಹಾವೇರಿಯತ್ತ ಪ್ರಯಾಣ ಬೆಳೆಸಿದ ಪೊಲೀಸರಿಗೆ ಅಚ್ಚರಿ ಕಾದಿದ್ದು, ಹಾವೇರಿಯಲ್ಲಿಯೂ ಕಳ್ಳತನಕ್ಕೆ ಯತ್ನ ನಡೆಸಿದ ವಂಚಕ ಗ್ಯಾಂಗ್, ಮುಂದೆ ಪ್ರಯಾಣ ಬೆಳೆಸದೇ ಮರಳಿ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಪೊಲೀಸ್ ತಂಡ ತಕ್ಷಣ ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಹುಬ್ಬಳ್ಳಿ ಪೊಲೀಸರು ನಾಲ್ಕು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವರ್ಕ್ ಫ್ರಂ ಹೋಂ ಕೆಲಸ ನೋಡೋರು ಈ ಸುದ್ದಿ ಓದ್ಲೇಬೇಕು..!
ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಮಯದಲ್ಲಿ ಇರಾನ್ ದಿಂದ ಭಾರತಕ್ಕೆ ಆಗಮಿಸುವ ಕುರಿತು ಪಡೆದ ವಿಸಾ ಅವಧಿಯೂ ಮುಕ್ತಾಯವಾಗಿದೆ. ಜತೆಗೆ ಹೈದ್ರಾಬಾದ್, ಗೋವಾದಲ್ಲಿ ಅಪರಾಧಿಕ ಕೃತ್ಯ ಎಸಗಿರುವುದು ಹಾಗೂ ಹಾವೇರಿಯಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಕುರಿತು ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಂಚಕರ ಗ್ಯಾಂಗ್ ಪತ್ತೆ ಹಚ್ಚುವಲ್ಲಿ ಖಡೇಬಜಾರ ಎಸಿಪಿ ಅರುಣ ಕೊಳೂರ್, ಪೊಲೀಸ್ ಇನಸ್ಪೆಕ್ಟರ್ ಡಿ.ಪಿ.ನಿಂಬಾಳಕರ, ಪಿಎಸೈ ಆನಂದ ಆದಗೊಂಡ ಹಾಗೂ ಸಿಬ್ಬಂದಿ ಎ.ಬಿ.ಶೆಟ್ಟಿ, ಬಿ.ಎಸ್ರು.ದ್ರಾಪೂರ, ಎಂ.ವಿ.ಅರಳಗುಂಡಿ, ವಿ.ವೈ. ಗುಡಿಮೇತ್ರಿ, ಜಿ.ಪಿ.ಅಂಬಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಪ್ರಕರಣ ಬೇಧಿಸಿ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತರು ಹಾಗೂ ಉಪಾಯುಕ್ತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.