ಬ್ಯಾಂಕ್‌ ಗ್ರಾಹಕರನ್ನು ಗುರಿಯಾಗಿಸಿಕೊಂಡು ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ತಮಿಳುನಾಡಿನ ತಂಡವೊಂದು ರಾಮಮೂರ್ತಿ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬ್ಯಾಂಕ್‌ ಗ್ರಾಹಕರನ್ನು ಗುರಿಯಾಗಿಸಿಕೊಂಡು ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ತಮಿಳುನಾಡಿನ ತಂಡವೊಂದು ರಾಮಮೂರ್ತಿ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ. ತಮಿಳುನಾಡಿನ ಚೆನ್ನೈನ ವಿದೇಶ್‌ ಅಲಿಯಾಸ್‌ ವಿಜೇಶ್‌, ಗೋಪಿ ಹಾಗೂ ಸುಂದರ ಅಲಿಯಾಸ್‌ ರಿಷಿ ಬಂಧಿತರಾಗಿದ್ದು, ಆರೋಪಿಗಳಿಂದ .3.6 ಲಕ್ಷ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಹೊರಮಾವು ನಿವಾಸಿ ಅಲ್ಬರ್ಚ್‌ ಜೋಸೆಫ್‌ ಅವರು ತಮ್ಮ ಮಗನೊಂದಿಗೆ ಮನೆ ಸಮೀಪದ ಎಸ್‌ಬಿಐ ಶಾಖೆಯಲ್ಲಿ ಹೋಗಿ .4 ಲಕ್ಷ ಡ್ರಾ ಮಾಡಿ ಮರಳುತ್ತಿದ್ದರು. ಆಗ ಮಾರ್ಗ ಮಧ್ಯೆ ಅವರ ಬೈಕ್‌ಗೆ 'ಡಿಕ್ಕಿ' ಹೊಡೆದು ಆರೋಪಿಗಳು ಹಣ ದೋಚಿದ್ದರು. ಈ ಬಗ್ಗೆ ತನಿಖೆ ನಡೆಸಿದ ರಾಮಮೂರ್ತಿ ನಗರದ ಇನ್‌ಸ್ಪೆಕ್ಟರ್‌ ಫ್ರಾನ್ಸಿಸ್ ನೇತೃತ್ವದ ತಂಡ, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೋಚಿದ ಹಣದಲ್ಲಿ ಮೋಜು ಮಸ್ತಿ:

ತಮಿಳುನಾಡಿನ ಈ ಮೂವರು ಆರೋಪಿಗಳು, ನಗರದ ಮಾರತ್ತಹಳ್ಳಿ ಬಳಿ ತಾತ್ಕಾಲಿಕ ಬಾಡಿಗೆಗೆ ರೂಂ ಪಡೆದು ನೆಲೆಸಿದ್ದರು. ಬ್ಯಾಂಕ್‌ಗಳ ಮುಂದೆ ಗ್ರಾಹಕರ ಸೋಗಿನಲ್ಲಿ ತೆರಳಿ, ಆ ಬ್ಯಾಂಕ್‌ಗಳಿಗೆ ಹಣ ಪಡೆಯಲು ಬರುವ ಗ್ರಾಹಕರ ಮೇಲೆ ನಿಗಾ ವಹಿಸುತ್ತಿದ್ದರು. ಆಗ ಹೆಚ್ಚಿನ ಮೊತ್ತದ ಹಣ ಪಡೆದು ಮರಳುವ ಗ್ರಾಹಕನನ್ನು ಹಿಂಬಾಲಿಸಿಕೊಂಡು ಹೋಗಿ ಮಾರ್ಗ ಮಧ್ಯೆ ಅಪಘಾತವಾಗಿದೆ, ಮೈ ಮೇಲೆ ಗಲೀಜು ಬಿದ್ದಿದೆ ಅಥವಾ ರಸ್ತೆಯಲ್ಲಿ ಹಣ ಬಿದ್ದಿದೆ ಎಂದು ಹೇಳಿ ಗ್ರಾಹಕರ ಗಮನ ಬೇರೆ ಸೆಳೆದು ಹಣ ದೋಚುತ್ತಿದ್ದರು. ದೋಚಿದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Chikkodi: ಫೋನ್‌ ಪೇ ಸ್ಕ್ರೀನ್ ಶಾಟ್ ತೋರಿಸಿ ಪಂಗನಾಮ ಹಾಕುತ್ತಿದ್ದ ಖದೀಮರ ಬಂಧನ

ಇತ್ತೀಚೆಗೆ ಜೋಸೆಫ್‌ ಅವರು ತಮ್ಮ ಮಗನೊಂದಿಗೆ ಮನೆ ಸಮೀಪದ ಎಸ್‌ಬಿಐ ಶಾಖೆಯಲ್ಲಿ ತೆರಳಿ 4 ಲಕ್ಷ ಡ್ರಾ ಮಾಡಿ ಬೈಕ್‌ನಲ್ಲಿ ಮರಳುತ್ತಿದ್ದರು. ಮಾರ್ಗ ಮಧ್ಯೆ ಮತ್ತೆ ಹಣ ಪಡೆಯುವ ಸಲುವಾಗಿ ಎಟಿಎಂ ಬಳಿಗೆ ತೆರಳಿದ್ದರು. ಆಗ ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಹಣ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಜೋಸೆಫ್‌ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಮೂವರ ಅಸ್ಪಷ್ಟ ಚಹರೆ ಪತ್ತೆಯಾಯಿತು. ಈ ಸುಳಿವು ಆಧರಿಸಿ ಕಾರ್ಯಾಚರಣೆ ಮುಂದುವರೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು. ಈ ತಂಡದ ಬಂಧನದಿಂದ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫುಟ್‌ಪಾತ್‌ ಅತಿಕ್ರಮಿಸಿದ್ದ ವ್ಯಾಪಾರಿಗಳ ಬಂಧನ

ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡು ಬೀದಿ ವ್ಯಾಪಾರ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರನ್ನು ಬಂಧಿಸಿ ಬಳಿಕ ಜಾಮೀನು ಮೇರೆಗೆ ರಾಜಾಜಿ ನಗರ ಸಂಚಾರ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ವಿಜಯ ನಗರ ಅಂಬೇಡ್ಕರ್‌ ಲೇಔಟ್‌ ನಿವಾಸಿ ನೌಶದ್‌ ಹಾಗೂ ಮೈಸೂರು ರಸ್ತೆ ಹೊಸ ಗುಡ್ಡದಹಳ್ಳಿ ನಿವಾಸಿ ಮಹಮ್ಮದ್‌ ಸೈಫ್‌ ಉಲ್ಲಾ ಆರೋಪಿತರಾಗಿದ್ದು, ಉತ್ತರ ವಿಭಾಗದ ಡಿಸಿಪಿ ಎದುರು ಆರೋಪಿಗಳನ್ನು ಹಾಜರುಪಡಿಸಿ ಮುಚ್ಚಳಿಕೆ ಬರೆಸಿಕೊಂಡು ಪೊಲೀಸರು ಜಾಮೀನು ಮಂಜೂರು ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ರಾಜಾಜಿ ನಗರದ ಪಾದಚಾರಿ ಮಾರ್ಗದಲ್ಲಿ ನೌಶದ್‌ ಗ್ಯಾರೇಜ್‌ ಮತ್ತು ಸೈಫ್‌ ತಳ್ಳುವ ಗಾಡಿ ಇಟ್ಟುಕೊಂಡು ಪಾದಚಾರಿಗಳ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿದ್ದರು. ಪಾದಚಾರಿ ಮಾರ್ಗ ತೆರವುಗೊಳಿಸುವಂತೆ ಅವರಿಗೆ ಎಚ್ಚರಿಕೆ ಕೊಟ್ಟರೂ ಪದೇ ಪದೆ ತಪ್ಪು ಮಾಡುತ್ತಿದ್ದರು. ಹೀಗಾಗಿ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು: 1.6 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ, ಇಬ್ಬರ ಬಂಧನ