ಆಂಧ್ರದಿಂದ ರೈಲಿನಲ್ಲಿ ಡ್ರಗ್ಸ್ ತಂದು ಮಾರುತ್ತಿದ್ದ ಆರೋಪಿಗಳು
ಬೆಂಗಳೂರು(ಆ.04): ಆಂಧ್ರಪ್ರದೇಶದಿಂದ ರೈಲಿನಲ್ಲಿ ಡ್ರಗ್ಸ್ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ 1.6 ಕೋಟಿ ರು ಮೌಲ್ಯದ ಡ್ರಗ್ಸ್ ಅನ್ನು ಬೇಗೂರು ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.
ಮಂಗಳೂರಿನ ಬಂಟ್ವಾಳ ನಿವಾಸಿ ಅಶ್ಫಕ್ ಹಾಗೂ ಕೇರಳದ ಶಿರೋಜ್ ಬಂಧಿತನಾಗಿದ್ದು, ಆರೋಪಿಗಳಿಂದ 1.6 ಕೋಟಿ ರು ಮೌಲ್ಯದ 2 ಕೆಜಿ ಹ್ಯಾಶೀಶ್ ಆಯಿಲ್ ಜಪ್ತಿ ಮಾಡಲಾಗಿದೆ. ಬೇಗೂರು-ಕೊಪ್ಪ ರಸ್ತೆಯಲ್ಲಿರುವ ರೋಳಾ ಹೈಪರ್ ಮಾರ್ಕೆಟ್ ಪಕ್ಕದ ಖಾಲಿ ಜಾಗದಲ್ಲಿ ಡ್ರಗ್ಸ್ ಮಾರಾಟಕ್ಕೆ ಆರೋಪಿಗಳು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಪೆಡ್ಲರ್‌ಗಳನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಳಗಾವಿ: ಹೆಚ್ಚಾದ ನಕಲಿ ಪತ್ರಕರ್ತರ ಹಾವಳಿ, ಹಣಕ್ಕಾಗಿ ಧಮ್ಕಿ..!
ಪಿಜಿ ಮಾಲೀಕನಂತೆ ಪೋಸ್:
ನಾಲ್ಕು ತಿಂಗಳಿಂದ ಬಂಟ್ವಾಳ ತಾಲೂಕಿನ ಅಶ್ಫಕ್ ಹಾಗೂ ಕೇರಳದ ಶಿರೋಜ್ ಪರಿಚಿತರಾಗಿದ್ದು, ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗಿಳಿದಿದ್ದರು. ನಗರದಲ್ಲಿ ತಾನು ಪಿಜಿ ಮಾಲೀಕನಂತೆ ಅಶ್ಫಕ್ ಹಾಗೂ ಯೂಟ್ಯೂಬ್‌ನ ಕಲಾವಿದನಂತೆ ಶಿರೋಜ್ ತೋರಿಸಿಕೊಂಡಿದ್ದರು. ಆದರೆ ಗುಪ್ತವಾಗಿ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ರೈಲಿನಲ್ಲಿ ಹ್ಯಾಶೀಶ್ ಆಯಿಲ್ ತಂದು ನಗರದಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
